ಚೆನ್ನಯ್ಯನ ಮನೆಯ ದಾಸನ ಮಗನು

 

ಚೆನ್ನಯ್ಯನ ಮನೆಯ ದಾಸನ ಮಗನು

ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ
ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗಮದೇವ ಸಾಕ್ಷಿಯಾಗಿ.

-ವಿಶ್ವಗುರು ಬಸವಣ್ಣನವರು

ಭಾವಾರ್ಥ

ಅಬ್ಬಾ ಎಂಥಹಾ ದಿಟ್ಟ ನಿಲುವು ಬಸವಣ್ಣನವರದ್ದು,.
ಅವರ ಘನತರ ವ್ಯಕ್ತಿತ್ವದ ಹಿಂದಿರುವ ಸರಳತೆಗೆ ಸಾಕ್ಷಿಯಾದಂತಿದೆ ಈ ವಚನ,..

*#ಚೆನ್ನಯ್ಯನ ಮನೆಯ ದಾಸನ ಮಗನು*

ಮಾದರ ಚೆನ್ನಯ್ಯ
12ನೆಯ ಶತಮಾನದ ಶಿವಶರಣ ಹಾಗೂ ವಚನಕಾರ. ಬಸವಣ್ಣನವರ ಸಮಕಾಲೀನ. ಬಸವಣ್ಣ, ಚೆನ್ನಬಸವಣ್ಣ ಮೊದಲಾದ ವಚನಕಾರರು ಈತನನ್ನು ಸ್ಮರಿಸಿದ್ದಾರೆ. ಬಸವಣ್ಣ ಈತನನ್ನು ತಮ್ಮ ವಚನಗಳಲ್ಲಿ ಅತಿ ಪೂಜ್ಯಭಾವದಿಂದ ಕೊಂಡಾಡಿದ್ದಾರೆ.

ಶಿವಶರಣರಾದ ಚೆನ್ನಯ್ಯನ ಭಕ್ತಿಗೆ ಮಾರು ಹೋದ ಶಿವನು, ಚೆನ್ನಯ್ಯನ ಮನೆಗೆ ಬಂದು ಬಲುಪ್ರೀತಿಯಿಂದ
ಅಂಬಲಿ ಸವಿಯುತ್ತಿದ್ದನೆಂಬ ಪ್ರತೀತಿ ಇದೆ,.

ಇನ್ನೊಬ್ಬ
ಶಿವಶರಣ ಡೋಹರ ಕಕ್ಕಯ್ಯ”

ಇವರ ಕಾಯಕ
ಚರ್ಮ ಹದ ಮಾಡುವುದು’
ಇವರು ಬಸವಣ್ಣನೇ ಮೊದಲಾದ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತರಾಗಿ.
ಲಿಂಗದೀಕ್ಷೆಯನ್ನು ಹೊಂದಿ ತಮ್ಮ ಆಚಾರ ವಿಚಾರ ಸಂಪನ್ನತೆಯಿಂದ ವೀರ ಮಹೇಶ್ವರನೆಂಬ ಎಗ್ಗಳಿಕೆಗೆ ಪಾತ್ರರಾದವರು. ಬಸವಣ್ಣನವರು ಕೂಡ ಕಕ್ಕಯ್ಯನ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು.
ಕಕ್ಕಯ್ಯನ ಪ್ರಸಾದಕ್ಕಾಗಿ ಹಾತೊರೆದವರು ಅಣ್ಣ ಬಸವಣ್ಣನವರು,.

ಇಂತಹಾ ಶಿವಶರಣರ ಮನೆಯ ಸೇವಾ ನಿರತ
‘ಚೆನ್ನಯ್ಯನ ಮನೆಯ ದಾಸನ ಮಗನು,
‘ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇಬ್ಬರೂ ಹೊಲದಲ್ಲಿ ಸಗಣಿಯ ಬೆರಣಿಗೆ ಹೋದಾಗ ಸಂಗವ ಮಾಡಿ’
ಚೆನ್ನಯ್ಯನ ಮನೆಯ ಭಕ್ತಿ ವಾರ್ತೆಯನ್ನು ಈತನು ಹೇಳಿ ವಾದಿಸಿದರೆ,
ಕಕ್ಕಯ್ಯನ ಮನೆಯ
ತತ್ವ ನಿಷ್ಠೆಯ ವಾರ್ತೆಯನ್ನು ಆಕೆಯು ಹೇಳಿ ವಾದಿಸುತ್ತಿರಲು,
ಇವರಿಬ್ಬರ ವೈಚಾರಿಕ ಅನುಭಾವದ ನುಡಿಗಳ
ಕೇಳಿ ಇದರಿಂದ
ಎನ್ನೊಳಗೆ ಜಾಗ್ರತ ಪ್ರಜ್ಞೆಯು ಹುಟ್ಟಿತು,.
ಎನ್ನೊಳಗೆ ಅರಿವು ಮೂಡಿತು, ಎಂದು ಕೂಡಲ ಸಂಗಮದೇವರ ಸಾಕ್ಷಿಯಾಗಿ
ಶರಣರಾದ ಚೆನ್ನಯ್ಯ ಮತ್ತು ಕಕ್ಕಯ್ಯ ಇವರಿಬ್ಬರ ಮನೆಯ ಮಗನು ನಾನು ಎಂದಿದ್ದಾರೆ ಜಗಜ್ಯೋತಿ ಬಸವಣ್ಣನವರು,.

ಲೋಕೇಶ್ ಎನ್ ಮಾನ್ವಿ

Don`t copy text!