ತಾಯಿಯ ಸಾವಿನ ಸೂತಕದಲ್ಲಿ ಪದವಿ ಪರಿಕ್ಷೆ ಬರೆದ ಯುವತಿ
e-ಸುದ್ದಿ ಲಿಂಗಸುಗೂರು
ಮನೆಯಲ್ಲಿ ತಾಯಿ ಮೃತಪಟ್ಟಿದ್ದರು ಎದೆಯಲ್ಲಿ ದುಃಖ ಮಡುಗಟ್ಟಿದ್ದರೂ, ವಿದ್ಯಾರ್ಥಿನಿಯೋರ್ವಳು ಪರೀಕ್ಷೆ ಬರೆದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅಮ್ಮನ ಸಾವಿನ ನೋವಲ್ಲೂ ವಿದ್ಯಾರ್ಥಿನಿಯೋರ್ವಳು ಲಿಂಗಸುಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ಮೂರನೇ ಸೆಮಿಸ್ಟರ್ ನ ಜನರಿಕ್ ಎಲೆಕ್ವಿನ್ ವಿಷಯದ ಪರೀಕ್ಷೆ ಬರೆದಿದ್ದಾಳೆ.
ಪರೀಕ್ಷಾ ಕೊಠಡಿಯಿಂದ ಹೊರಬುತ್ತಿದ್ದಂತೆ ಮನದಲ್ಲಿ ಅದುಮಿಟ್ಟುಕೊಂಡಿದ್ದ ದುಃಖದ ಕಟ್ಟೆಯೊಡೆದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.
ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದ ವಿದ್ಯಾರ್ಥಿನಿ ಬಸಲಿಂಗಮ್ಮ ಪದವಿ ಪರೀಕ್ಷೆ ಬರೆದ ವಿದ್ಯಾರ್ಥಿನಿ. ಭಾನುವಾರ ಭೀಮನ ಅಮಾವಾಸ್ಯೆಯಂದು ಮಧ್ಯಾಹ್ನ ತಾಯಿ ಚೆನ್ನಮ್ಮ ಪೂಜಾರಿ (45) ಕಡಿಮೆ ರಕ್ತದೊತ್ತಡ(Low BP)ದಿಂದ ಸಾವನ್ನಪ್ಪಿದ್ದರು. ಶಿಕ್ಷಣದಿಂದ ಸುಂದರ ಬದುಕು ನಿರ್ಮಾಣ ಸಾಧ್ಯ ಎಂಬ ನಂಬಿಕೆಯಿಂದ ತಾಯಿ ಮೃತಪಟ್ಟಿದ್ದರೂ ಶಿಕ್ಷಣದ ಹಂಬಲದಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಬಸಲಿಂಗಮ್ಮ ಎದೆಗುಂದದೆ ಪರೀಕ್ಷೆ ಬರೆದಿರುವುದು ಉಪನ್ಯಾಸಕರು ಹಾಗೂ ಇತರ ವಿದ್ಯಾರ್ಥಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಪಾಲಕರು, ಸಂಬಂಧಿಗಳ ಮನವೊಲಿಕೆ, ಶೈಕ್ಷಣಿಕವಾಗಿ ಮುಂದುವರೆಯುವ ಒತ್ತಾಸೆ ಸೂತಕದಲ್ಲೂ ಪರೀಕ್ಷೆ ಬರೆಯಲು ಬರಬೇಕಾಯ್ತು ಎಂದು ವಿದ್ಯಾರ್ಥಿನಿ ಹೇಳಿದಳು. ಪರೀಕ್ಷೆ ಬರೆದ ಬಳಿಕ ಬಸಲಿಂಗಮ್ಮ ಪೂಜಾರಿ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ತೆರಳಿದರು.