
ಲಲಿತ ಪ್ರಬಂಧ
ಪಂಚಮಿ ಹಬ್ಬ ಉಳಿದಾವ ದಿನ ನಾಕ…..
“ಪಂಚಮಿ ಹಬ್ಬ ಉಳಿದಾವ ದಿನ ನಾಕ ಅಣ್ಣ ಬರಲಿಲ್ಲ ಯಾಕೊ ಕರಿಲಾಕ…..” ಅನ್ನೊ ಈ ಜನಪದ ಹಾಡನ್ನ ಉತ್ತರ ಕರ್ನಾಟಕದ ಹೆಣ್ಣು ಮಕ್ಕಳು ನೆನಪಿಸಿಕೊಳ್ಳದೆ ಇರುವ ಪಂಚಮಿನ ಇಲ್ಲ ಅಂದ್ರೆ ತಪ್ಪಾಗಿಲ್ಲಿಕ್ಕಿಲ್ಲ…. ಅದಕ ನೋಡ್ರಿ ನಾನು ನೆನಪಿಸಿಕೊಳ್ಳುವದರ ಜೋಡಿ ನಿಮಗೂ ನೆನಪಿಸಾಕ ಹತ್ತಿನಿ.ಪಂಚಮಿ ಹಬ್ಬಕ್ಕೂ ಈ ಹೆಣ್ಣು ಮಕ್ಕಳಿಗೂ ಈ ಅವಿನಾಭಾವ ಸಂಬಂಧ ಯಾವಾಗ ಶುರು ಆಗ್ತದ ಅಂತ ಯೋಚನೆ ಮಾಡಿದರೆ…, ಮದುವಿಯಾಗಿ ಗಂಡನ ಮನಿಗಿ ಹೊದಾಗಿಂದ ಅಂತ ಗೊತ್ತಾಕೈತಿ.
ಗಂಡನಮನಿಯಿಂದ ತವರ ಮನಿಗೆ ಬರಾಕ, ನಾಲ್ಕಾರು ದಿನ ತವರವರ ಪ್ರೀತಿ ಕಕ್ಕಲಾತಿಯೊಳಗ ಗಂಡನಮನಿ ಭವಣಿ ಎಲ್ಲ ಮರತು ಮತ್ತ ಫ್ರೇಶ್ ಆಗಿ ಗಂಡನ ಮನಿನ ಲೇಸು ಅಂದುಕೊಂಡು, ಕೊಬ್ಬರಿ, ಖುಬಸ ಎಗ್ಗಳಗೆ ಉಂಡಿ ಚಕ್ಕಲಿ ಕಟಗೊಂಡು, ಕಣ್ಣೀರ ಒರಸಗೊತ ಹೋಗು ಹೆಣ್ಣು ಮಗಳು, ತಮ್ಮ ಜೋಡಿ ತವರ ಹೆಮ್ಮೆ ಹೊತಗೊಂಡು ಹೊಗುದು ಒಂದು ಕಾಲ ಇತ್ತು.
ಶ್ರಾವಣ ಕರಕೊಂಡು ಬರವ ಮೊದಲ ಹಬ್ಬ ನಾಗರ ಪಂಚಮಿ
ನಾಗಪ್ಪಗ ಹಾಲೇರೆಯೊದ ಸಂಭ್ರಮ.
ಈ ಹಬ್ಬದ್ದು ವೈಜ್ಞಾನಿಕ ಹಿನ್ನೆಲೆ ನೋಡಿದರ ,ನಮ್ಮ ಸಂಸ್ಕೃತಿಯ ಹಬ್ಬಗಳೊಳಗ ಪ್ರಕೃತಿಯನ್ನ ಎಷ್ಟು ಆರಾಧಿಸ್ತಿವಿ ಅನ್ನೊದು ತಿಳಿತದ. ಗಿಡಾ ಮರ ಪಶು ಪ್ರಾಣಿ ಪಕ್ಷಿ, ಆಮಿ,ಚೇಳು,ಹಾವು ಹಲ್ಲಿ,ಕ್ರಿಮಿ ಕೀಟ.ಈ ಜೀವ ಸರಪಳಿಯ ಪ್ರತಿಯೊಂದು ಜೀವಿಯು ಹ್ಯಾಂಗ ಒಂದಕ್ಕೊಂದು ಅವಲಂಬನಾ ಆಗ್ಯಾವು ಅನ್ನುವುದು ತಿಳಿಕೊಂಡ ನಮ್ಮ ಹಿರಿಯರು ಅವುಗಳಿಗೆ ಕೃತಜ್ಞತೆ ತೊರಸು ಸಲುವಾಗಿ ಈ ಹಬ್ಬಗಳನ್ನ ಮಾಡ್ಯರ.
ಪಂಚಮಿದು ಎನ್ ವಿಶೇಷ ಅಂದ್ರ….,ಆಷಾಡದೊಳಗ ಹೊಲದೊಳಗ ಬೀಜ ಬಿತ್ತನೆ ಆಗಿರತದ. ಇಲಿಗಳು ಬೀಜ ಮೊಳಕಿ ಬರೋದಕಿಂತ ಮೊದಲ ಹೊಲದ ತುಂಬಾ ಓಡ್ಯಾಡಿ ಕಾಳು ತಿಂದು ರೈತರಿಗೆ ಉಪಟಳ ಕೊಡತಾವು. ಇಲಿಗಳ ಈ ಉಪಟಳ ತಡಿಯುವಲ್ಲಿ ಹಾವುಗಳು ರೈತನಿಗೆ ಸಹಾಯ ಮಾಡ್ತಾವು.ಆ ಉಪಕಾರ ಸ್ಥರಣೆಗೊಸ್ಕರ ಈ ಹಬ್ಬ ಆಚರಣೆಗೆ
ಬಂದದ. ಸಿರಿಧಾನ್ಯಗಳಾದ ನೆವಣಿ, ಸಜ್ಯಿ.ಏಳ್ಳುಷಗಳಿಂದ ಉಂಡಿ ಮಾಡಿ ನಾಗಪ್ಪಗ ನೈವೇದ್ಯ ಹಿಡಿತಾರ.
ನಾವು ಸಣ್ಣವರಿದ್ದಾಗ ಪಂಚಮಿ ಅಂದ್ರ ಮನಿಯೊಳಗ ಅದೆಷ್ಟ ಸಂಭ್ರಮ ಅಂದ್ರ ಅಮಾಸಿಕಿಂತ ನಾಲ್ಕೈದು ದಿವಸ ಮೊದಲ ಎಲ್ಲಾರ ಮನಿಯೊಳಗೂ ಜ್ವಾಳದ ಎಳ್ಳು ಹುರಿಯೊ ಘಮ್ ವಾಸನಿ ಮತ್ತು ಉಂಡಿ ಮಾಡಾಕ ಬೆಲ್ಲದ ಪಾಕದ ವಾಸನಿ ಬರುತಿತ್ತು. ಸಾಲಿಬಿಟ್ಟ ಬರುದಕ ಅವ್ವ ಒಲಿಮುಂದ ಅಳ್ಳ ಹುರಾಕತ್ತಿದರ ಅದನ್ನ ನೋಡುತ್ತಾ ಹೋಗಿ ಒಲಿಮುಂದ ಕುಂದರುದ ಒಂದ ಖುಷಿ. ಖಾದ ಬುಟ್ಟಿಯೊಳಗ ಮುಟಗಿಯಷ್ಟು ಉಕ್ಕರಿಸಿದ ಜ್ವಾಳಾ ಹಾಕಿದರ ಅವು ಚಟಪಟ ಅಂತ ಸಿಡ್ಯಾಕ ಹತ್ತಿದರು , ಬುಟ್ಟಿಯಿಂದ ಸಿಡದ ಹೋಗದಂಗ ಅದರ ಮ್ಯಾಲೆ ಅರವಿ ಮುಚ್ಚಿ ,ಚಟಪಟ ಸದ್ದು ನಿಂತಮ್ಯಾಗ ಅರವಿ ತಗದರ ಬೆಳ್ಳಗೆ ಮಲ್ಲಿಗೆ ಹೂವಿನಂಗ ಅರಳುವ ಅರಳನ್ನ ನೊಡುದ ಒಂದು ಸೊಜಿಗ. ಅವ್ವನ ಕಡೆ ಬೈಯಿಸಗೊಂತ ಬಿಸಿ ಅರಳ ತಿನ್ನು ಮಜಾನೆ ಬ್ಯಾರೆ.
ನವಣಿ ತಂಬಿಟ,ಎಳ್ಳಿನ ಉಂಡಿ, ಸಜ್ಜಿ ಉಂಡಿ, ಗೋಧಿ ಉಂಡಿ, ಶೇಂಗಾ ಉಂಡಿ,ಅಂಟಿನಉಂಡಿ, ರವಾ ಉಂಡಿ, ಚುರಮರಿಉಂಡಿ, ಬೇಸನ ಉಂಡಿ ,ಹೆಸರ ಉಂಡಿ, ಹೀಂಗ ನಾನಾ ತರದ ಉಂಡಿ ಕಟ್ಟಿ ,ತಾವಲ್ದ ಆದ ಬಾಜುಕಿನವರಿಗೆ, ಬೀಗರು ಬಿಜ್ರೂರೂಗೆ, ನೀಡಿಸಕೊಳ್ಳಾಕ ಬರೊರಿಗೆ ಹೀಂಗ ಎಲ್ಲರಿಗೂ ಹಂಚಿ ತಿನ್ನುವ ಹಬ್ಬ ಇದು. ಉತ್ತರ ಕರ್ನಾಟಕದೊಳಗ ಬಂಧುಬಳಗಕ್ಕೆಲ್ಲ ಖೋಬ್ರಿ ಕುಬಸ ಕೊಡುದು ಒಂದು ಪ್ರದ್ದತಿ ಐತಿ. ಈ ಹಬ್ಬದ್ದು ಇನ್ನೊಂದು ವಿಶೇಷ ಅಂದ್ರ ಜೊಕಾಲಿ ಆಡುದು.

ಮನಿಗೊಂದು, ಓಣಿಗೊಂದು ಅಂತ ದೊಡ್ಡ ದೊಡ್ಡ ಗಿಡಮರಗಳಿಗೆ ಜೋಕಾಲಿ ಕಟ್ಟುತ್ತಿದ್ದರು. ಜೊಕಾಲಿ
ಆಡುದು ಒಂದ ಸಂಭ್ರಮನ. ಕುಂತಾಡುದು, ನಿಂತು ಆಡುದು, ಜೊಡಿಲೆ ಆಡುದು, ಜಿದ್ದ ಕಟ್ಟಿ ಆಡುದು. ಹೀಂಗಹೆಣ್ಣು ಗಂಡು ಅಂತ ಬೇದಭಾವ ಇಲ್ಲದ ಎಲ್ಲರೂ ಆಡತಿದ್ದರು.
ಆದರ ಈಗ ನಾವು ಹೆಂಗ ಹೆಂಗ
ಆಧುನಿಕರಣಕ್ಕ ಒಳಗಾಗಿವೊ ಹಂಗಂಗ ನಮ್ಮ ಸಂಸ್ಕೃತಿಕ ಆಚರಣೆಗಳು ಬದಲಾಗಾಕ ಹತ್ಯಾವ.
ಇವತ್ತಿನ ಮಕ್ಕಳಿಗೆ ಹಬ್ಬದ ಉತ್ಸಾಹ ಇಲ್ಲ.ಮನೆಗಳೊಳಗ ಆ ವಾತಾವರಣ ಇಲ್ಲ. ರೊಕ್ಕ ಕೊಟ್ಟರ ಎಲ್ಲಾ ತಯಾರಿನ ಸಿಗ್ತಾವ. ಮನಿಯೊಳಗ ಶ್ರಮ ಪಟ್ಟು ಮಾಡುವಷ್ಟು ಸಮಯ ಇಲ್ಲದಾಂಗ ಆಗೆದ. ಅಣ್ಣ ಹಬ್ಬಕ ಕರಿಯಾಕ ಬಂದ್ರೂ ಹೋಗದಂಗ ಆಗೇದ…
ಯಾಕಂದ್ರ…. ಆಫೀಸ್ ನ್ಯಾಗ ರಜಾಇಲ್ಲ…,ಮಕ್ಕಳ ಸಾಲಿ ಸೂಟಿಯಿಲ್ಲ…ತವರಮನಿಗೆ ಹೊದರ ನಮ್ಮ ಮನಿಯೊಳಗ ಹಬ್ಬಾ ಮಾಡವರ್ಯರರೂ….,ಯಜಮಾನರಿಗೆ ಊಟದ ತ್ರಾಸ ಆಕ್ಕದ….,
ಈ ಹತ್ತು ಹಲವು ಕಾರಣಗಳೊಳಗೂ
ಮನಸ್ಸು ತವರಿನ ಹಂಬಲವನ್ನ ಬಿಡುದಿಲ್ಲ

–ಡಾ. ನಿರ್ಮಲಾ ಬಟ್ಟಲ
ಬಾಳ ಚಂದ ಲೇಖನ ಡಾ ನಿರ್ಮಲಾ