ಜೋಕಾಲಿ ಆಡೋಣ

ಜೋಕಾಲಿ ಆಡೋಣ

ವಾರೀಗಿ ಗೆಳತ್ಯಾರು ಬೇಗನೇ ಬನ್ನಿರೇ
ಜೋಕಾಲಿ ಆಡೋಣ ಎಲ್ಲಾರೂ ಬನ್ನಿರೇ..

ನಾಗರಪಂಚಮಿ ಬಂದೈತಿ ನಲಿಯೂತ
ನಾಗಪ್ಪಗ ಹಾಲನು ಎರೆಯೋಣ ಬನ್ನಿರೇ
ನಾಗರ ಹೆಡಿಹಾಂಗ ಆಡೋಣ ಕುಣಿಯೂತ
ಛಂದದ ಹಾಡೊಂದು ಹಾಡೋಣ ಬನ್ನಿರೇ..

ರೇಶಿಮಿ ಲಂಗವ ಜರತಾರಿ ರವಿಕೆಯ
ಖುಷಿಯಿಂದ ಧರಿಸಿ ನೀವೂ ಬನ್ನಿರೇ
ಮುತ್ತಿನ ಸರವೊಂದ ಕೊರಳಲ್ಲಿ ಧರಿಸಿ
ಹೆರಳಿಗೆ ಮುತ್ತಿನ ಗೊಂಡೆಯ ಕಟ್ಟಿರೇ..

ಹೂವಿನ ಮಾಲೆಯ ಚಂದದಿ ಮುಡಿದು
ಚಿಕ್ಕೀಯ ಬಳೆಗಳ ಕೈ ತುಂಬ ತೊಟ್ಟು
ಬೆರಳಿಗೊಂದು ಹರಳಿನುಂಗುರ ಇಟ್ಟು
ಝೋಕಾಗಿ ಜೋಕಾಲಿ ಆಡೋಣ ನಾವು..

ಕಾಲ್ಗೆಜ್ಜೆ ಕುಣಿಸೂತ ಬಾಲೇರು ಬನ್ನಿರೇ
ಜೋಕಾಲಿ ಜೀಕೂತ ನಲಿಯೋಣ ಬನ್ನಿರೇ..

ಹಮೀದಾಬೇಗಂ ದೇಸಾಯಿ ಸಂಕೇಶ್ವರ. 

Don`t copy text!