ನಿಜಭಕ್ತಿ ನೀಲಾಂಬಿಕೆ

ನಿಜಭಕ್ತಿ ನೀಲಾಂಬಿಕೆ

ಶತಮಾನಗಳಿಂದ ಸಮಾಜವು ಹೆಣ್ಣೆಂದರೆ ‘ಸಂಸಾರ ಬಂಧನದ ಭವಪಾಶ ‘ ಎಂದು ಬಗೆದಿತ್ತು.ಧರ್ಮಶಾಸ್ತ್ರಗಳು ಅವಳಿಗೆ ನಿಯಮ ನಿರ್ಬಂಧಗಳ ಶೃಂಖಲೆಯನ್ನು ತೊಡಸಿದ್ದವು.ಹೆಣ್ಣಿನ ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ, ನೈತಿಕ ಅವಕಾಶಗಳನ್ನೆಲ್ಲ ಕಿತ್ತುಕೊಂಡಿದ್ದವು.ಅವಳು ಇಂತಹ ಉಸಿರುಗಟ್ಟುವ ವಾತಾವರಣದಲ್ಲಿ ಇದ್ದಾಗಲೆ ಅವಳನ್ನು ಅಸ್ಪೃಶ್ಯತೆಯ ಸಂಕೋಲೆಯಿಂದ ಬಿಡಿಸಲು ಬಂದವರು ಶಿವಶರಣರು.

ಸರ್ವಸಮಾನತೆಯ ಸಮಾಜವನ್ನು ನಿರ್ಮಿಸಲು ಬಯಸಿದ ಶರಣರು ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ಪೂರ್ವಾಗ್ರಹ ಪೀಡಿತ ದೃಷ್ಟಿಕೋನವನ್ನು ಸರಿಪಡಿಸಿದರು. ಸ್ತ್ರೀ ಸಮಾಜವನ್ನು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕಟ್ಟ ಬಯಸಿದ ಶರಣರು ಆಕೆಗೆ ಪ್ರಾಪಂಚಿಕ ಮತ್ತು ಪಾರಮಾರ್ಥಿಕ ಎರಡು ನೆಲೆಗಳಲ್ಲಿಯು ಸಮಾನ ಅವಕಾಶಗಳೊಂದಿಗೆ ಬದುಕಲು ಅನುವು ಮಾಡಿಕೊಟ್ಟರು. ಪರಿಣಾಮವಾಗಿ ಶಿವಶರಣೆಯರು ಸಂಸಾರದ ಸತ್ಯವನ್ನು ಅರಿತು ಸಂಸಾರದಲ್ಲಿದ್ದುಕೊಂಡೆ ಭಕ್ತಿ ಮಾರ್ಗದಲ್ಲಿ ನಡೆದರು.

ಸಂಸಾರವೆಂಬುದು ಆಧ್ಯಾತ್ಮಕ್ಕೆ ಬಾಧಕವಲ್ಲ, ಪ್ರೇರಕ, ಪೋಷಕ ಎಂಬುದನ್ನು ಸಾಬೀತು ಪಡಿಸಿದರು. ತಮ್ಮ ಪತಿಯ ಕಾಯಕ ಎಂಬ ಹಣತೆಯಲ್ಲಿ ಎಣ್ಣೆಯಾಗಿ, ಬತ್ತಿಯಾಗಿ ತಮ್ಮನ್ನು ಸುಟ್ಟುಕೊಂಡು ತಮ್ಮ ಪತಿಯ ಬದುಕಿನ ಮಾರ್ಗ ಜ್ಯೋತಿ ಆದರು .ಆ ಶರಣೆಯರಂತೆಯೇ ಸಾಮಾಜಿಕ ಸುಧಾರಣೆಯ, ಧಾರ್ಮಿಕ ಜಾಗೃತಿಯ ಮಹಾಮಣಿಹ ಹೊತ್ತ ಬಸವಣ್ಣನಿಗೆ ಹಿನ್ನೆಲೆ ಮುನ್ನೆಲೆಯಾಗಿ ದುಡಿದು ಅವನ ಜೀವನ ಸಾಧನೆಯಲ್ಲಿ ಸಾರ್ಥಕ್ಯವನ್ನು ಪಡೆದವಳು “ಶಿವಶರಣೆ ನಿಜಭಕ್ತಿ ನೀಲಾಂಬಿಕೆ”.
ನೀಲಮ್ಮ, ನೀಲಾಂಬಿಕೆ,ನೀಲಲೋಚನೆ ,ನೀಲಗಂಗಾ ಎಂದು ಕರೆಯಿಸಿಕೊಂಡ ನೀಲಾಂಬಿಕೆ ಬಸವಣ್ಣನವರ ಎರಡನೆಯ ಪತ್ನಿ. ಈಕೆ ಕಲ್ಯಾಣದ ಕಲಚೂರಿ ಅರಸ ಬಿಜ್ಜಳದೇವನ ಸಾಕುತಂಗಿ. ಬಿಜ್ಜಳನ ತಂದೆ ಮಂಗಳವಾಡದ ಮಾಂಡಲಿಕ ಪೆರ್ಮಾಡಿ ಹಾಗೂ ನೀಲಾಂಬಿಕೆಯ ತಂದೆ ಮಂಗಳವಾಡದ ದಣ್ಣಾಯಕ ಸಿದ್ಧರಸರು ಆಪ್ತ ಸ್ನೇಹಿತರು. ಪೆರ್ಮಾಡಿ ಸಾಯುವ ಸಂಧರ್ಭದಲ್ಲಿ ಬಿಜ್ಜಳನ ಪೋಷಣೆ, ರಕ್ಷಣೆಯ ಜವಾಬ್ದಾರಿಯನ್ನು ಸಿದ್ಧರಸನಿಗೆ ಒಪ್ಪಿಸುತ್ತಾನೆ. ಪೆರ್ಮಾಡಿಯ ಪತ್ನಿಯು ಪತಿಯೊಂದಿಗೆ ಸಹಗಮನ ಹೊಂದುತ್ತಾಳೆ. ಆಗ ಸಿದ್ಧರಸ – ಪದ್ಮಗಂಧಿ ಯರು ಬಿಜ್ಜಳನನ್ನು ತಮ್ಮ ಮಗನಂತೆಯೇ ಸಲಹುತ್ತಾರೆ. ಪದ್ಮಗಂಧಿ – ಸಿದ್ಧರಸ ಮರಣ ಹೊಂದಿದಾಗ ಬಿಜ್ಜಳ ನೀಲಲೋಚನೆಯನ್ನು ತನ್ನೊಂದಿಗೆ ಅರಮನೆಗೆ ಕರೆತರುತ್ತಾನೆ. ಮಂಗಳವಾಡದಿಂದ ಕಲ್ಯಾಣಕ್ಕೆ ಬಂದು ನೆಲಸಿದಾಗ ಬಿಜ್ಜಳನು ತಂಗಿ ನೀಲಲೋಚನೆಯನ್ನು ತನ್ನ ಜೊತೆಗೆ ಕರೆತರುತ್ತಾನೆ. ಆಕೆ ಬಿಜ್ಜಳನ ಅರಮನೆಯಲ್ಲಿ ಸಂಗೀತ, ಸಾಹಿತ್ಯದ ಅಭ್ಯಾಸ ಮಾಡುತ್ತಾಳೆ.
ಇದೆ ವೇಳೆಗೆ ತನ್ನ ಸೋದರ ಮಾವ ಬಲದೇವನ ಮಗಳು ಗಂಗಾಬಿಕೆಯನ್ನು ಮದುವೆಯಾದ ಬಸವಣ್ಣ ಕಲ್ಯಾಣದಲ್ಲಿ ಕರಣಿಕ ಕಾಯಕವನ್ನು ಕೈಕೊಂಡು ಕಲ್ಯಾಣದಲ್ಲಿಯೇ ನೆಲಸುತ್ತಾನೆ.

ಒಂದು ಸಲ ಬಸವಣ್ಣ ಬಿಜ್ಜಳನ ಓಲಗದಲ್ಲಿಯ ಲಿಪಿಯನ್ನು ಓದಿ ಸಿಂಹಾಸನದ ಕೆಳಗಿದ್ದ ಅರವತ್ತನಾಲ್ಕು ಕೋಟಿ ಧನವನ್ನು ಕಂಡುಹಿಡಿಯುತ್ತಾನೆ. ಇದರಿಂದ ಸಂತೋಷಗೊಂಡ ಬಿಜ್ಜಳ ತನ್ನ ಸಾಕುತಂಗಿ ನೀಲಲೋಚನೆಯನ್ನು ಬಸವಣ್ಣನವರಿಗೆ ವಿವಾಹ ಮಾಡಿಕೊಡುತ್ತಾನೆ.
ವಿನಯ ವಿದ್ಯಾವಂತಳಾಗಿದ್ದ ನೀಲಾಂಬಿಕೆ ಬಸವಣ್ಣನವರ ಭಕ್ತಿ, ಆತ್ಮಶಕ್ತಿ, ಮೃದುಹೃದಯಕ್ಕೆ ಮಾರುಹೋಗಿ ಸಂಪೂರ್ಣವಾಗಿ ತನ್ನನ್ನು ಬಸವಣ್ಣನವರಿಗೆ ಅರ್ಪಿಸಿಕೊಳ್ಳುತ್ತಾಳೆ. ಅನುಭವಿ ನೀಲಮ್ಮ ಬಸವಣ್ಣನವರನ್ನು ಕೇವಲ ಪತಿಯೆಂದು ಭಾವಿಸದೆ ಅವರನ್ನು ಗುರುವೆಂದು, ದೇವರೆಂದು ಭಾವಿಸುತ್ತಾಳೆ. ಅವರ ಪ್ರತಿಯೊಂದು ಕಾರ್ಯದ ಹಿಂದೆ ಕೈಜೋಡಿಸಿ ನಿಲ್ಲುತ್ತಾಳೆ. ಈಕೆ ಬಸವಣ್ಣನವರ ಮಾರ್ಗದರ್ಶನದಲ್ಲಿ ಶರಣ ಸಮುದಾಯಕ್ಕೆ ಆದರ್ಶ ಶರಣೆಯಾಗಿ ತೋರುತ್ತಾಳೆ .ಶರಣ ಸಮುದಾಯ ಅವಳನ್ನು ಕೊಂಡಾಡಿದರೆ ನಿರಹಂಕಾರಿ ನೀಲಮ್ಮ ಅದಕ್ಕೆಲ್ಲ ಬಸವಣ್ಣನೆ ಕಾರಣ ಎನ್ನುತ್ತಾಳೆ.ಎಲ್ಲವನ್ನೂ ಬಸವಣ್ಣನಲ್ಲಿಯೆ ಕಾಣುತ್ತಾಳೆ.
ಎನಗೆ ಲಿಂಗವು ನೀವೆ ಬಸವಯ್ಯಾ
ಎನಗೆ ಸಂಗವು ನೀವೆ ಬಸವಯ್ಯಾ
ಎನಗೆ ಪ್ರಾಣವು ನೀವೆ ಬಸವಯ್ಯಾ
ಎನಗೆ ಪ್ರಸಾದವು ನೀವೆ ಬಸವಯ್ಯಾ
ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ
ಎನಗೆ ಸಂಗಯ್ಯನು ನೀವೆ ಬಸವಯ್ಯಾ
( ವಚನ ಸಂಪುಟ-೫,ವಚನ ಸಂಖ್ಯೆ-೭೪೭,ಪುಟ-೨೪೪)
” ಬಸವಣ್ಣನಿಂದ ವಿವರವ ಪಡೆದು ವಿಚಾರಪತ್ನಿಯಾದೆನಯ್ಯಾ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನೀಲಾಂಬಿಕೆ ಬಸವಣ್ಣನ ಬದುಕಿನಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾಳೆ.
ಬಸವಣ್ಣನ ಸಹಧರ್ಮಿಣಿಯಾಗಿ ಬಂದ ತಕ್ಷಣ ನೀಲಮ್ಮ ಬಸವಣ್ಣನವರ ಮಹಾಮನೆಗೆ ನಿತ್ಯವೂ ಆಗಮಿಸುವ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮರಿಗೆ ಇಚ್ಛಾಭೋಜನ ಮಾಡಿಸುವ ಜವಾಬ್ದಾರಿ ವಹಿಸಿಕೊಳ್ಳುತ್ತಾಳೆ. ಬೇಡಿದವರಿಗೆ ಬೇಡಿದ ಪ್ರಸಾದ ಎಡೆಮಾಡಲು ಸದಾ ಸಿದ್ಧವಿರುತ್ತಿದ್ದ ನೀಲಮ್ಮ ಇಡೀ ಮಹಾಮನೆಯನ್ನು ಸದ್ದುಗದ್ದಲ ಇಲ್ಲದಂತೆ ನೋಡಿಕೊಳ್ಳುತ್ತಾಳೆ. ನೀಲಾಂಬಿಕೆ ಮಹಾಮನೆಯ ಜವಾಬ್ದಾರಿ ಹೊತ್ತು ನಿರ್ವಹಿಸಿದ್ದನ್ನು ಆಕೆಯ ವಚನ ತಿಳಿಸುತ್ತದೆ.
ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
ಮಾಡುವ ಮಾಟವಳಿಯಿತ್ತು ಬಸವಾ
ಇಂದಿಗೆ ಊಟವಳಿಯಿತ್ತು ಬಸವಾ
ಇಂದಿಗೆ ಅವರ ಸಂಗವಳಿದು
ನಿರಾಲಂಬಮೂರ್ತಿಯ ಇರವು ಕಾಣಿಸಿತಯ್ಯಾ ಬಸವಾ
ಸಂಗಯ್ಯಾ ಬಸವನ ರೂಪು ಎನ್ನಲ್ಲಿ ಅಡಗಲು
(ವಚನ ಸಂಪುಟ-೫,ವಚನ ಸಂಖ್ಯೆ-೮೩೪,ಪುಟ-೨೬೪)
ಸಹನಶೀಲತೆ ,ಶಾಂತಸ್ವಭಾವ,ಉದಾರ ಮನೋಭಾವ, ಅಂತಃಕರಣ ತುಂಬಿದ ಹೃದಯದ ನೀಲಮ್ಮ ಮಹಾಮನೆಗೆ ಬಂದವರಿಗೆಲ್ಲ ಮಾತೃ ವಾತ್ಸಲ್ಯದಿಂದ ಪ್ರಸಾದ ಸೇವೆಗೈಯುತ್ತಾಳೆ. ಅವಳ ಘನವ್ಯಕ್ತಿತ್ವದಿಂದ ಮಹಾಮನೆಗೆ ಬಂದವರೆಲ್ಲ ಆಕೆಗೆ ಶಿರಬಾಗಿ ನಮಿಸುತ್ತಾರೆ. ನೀಲಮ್ಮನ ಖ್ಯಾತಿ ನಾಡಿಗೆಲ್ಲ ಪಸರಿಸುತ್ತದೆ. ನೀಲಾಂಬಿಕೆಯ ಖ್ಯಾತಿಯನ್ನು ತಿಳಿದು ಆಕೆಗೆ ಸಹಾಯ ಮಾಡಲು ನಾಡಿನ ಮೂಲೆಮೂಲೆಗಳಿಂದ ನೂರಾರು ಶಿವಶರಣೆಯರು ಆಕೆಯ ದಾಸೋಹದ ಮಹಾಮನೆಗೆ ಆಗಮಿಸುತ್ತಾರೆ. ಇವರೆಲ್ಲರ ಸಹಾಯದಿಂದ ಬಸವಣ್ಣನ ಮನೆಯನ್ನು ನೀಲಮ್ಮ ದಾಸೋಹದ ಮನೆಯನ್ನಾಗಿಸುತ್ತಾಳೆ. ನಾಡಿನ ವಿವಿಧ ಪ್ರದೇಶಗಳಿಂದ ಬಂದ ಸಮಾಜದ ಜನರಿಗೆ ಬಸವಣ್ಣನ ಮನೆ ಸಮಾನ ಗೌರವ, ದಾಸೋಹ ಕೇಂದ್ರವಾಗಿ ಬೆಳಗಿಸಿದ ಸಾಧನೆಯ ಹಿಂದೆ ನೀಲಾಂಬಿಕೆಯ ಪಾತ್ರ ಅಮೂಲ್ಯವಾದದ್ದು.
ಪತಿಸೇವೆ, ಜಂಗಮ ದಾಸೋಹ, ಲಿಂಗಾರ್ಚನೆಗಳಲ್ಲಿ ತನುಮನಗಳನರ್ಪಿಸಿದ ನೀಲಾಂಬಿಕೆಗೆ ಜನಿಸಿದ ಎಕಮಾತ್ರ ಪುತ್ರ ಬಾಲಸಂಗಯ್ಯ ಚಿಕ್ಕವಯಸ್ಸಿನಲ್ಲೇ ಲಿಂಗೈಕ್ಯನಾಗುತ್ತಾನೆ.ಆಗ ಜ್ಞಾನನಿಧಿಯಾದ ನೀಲಮ್ಮ ಮಗನ ಮರಣದಿಂದ ದುಃಖ ತಪ್ತಳಾಗಿ ಕುಳಿತುಕೊಳ್ಳಲಿಲ್ಲ. ಎಲ್ಲವೂ ಶಿವನಿಚ್ಛೆ ಎಂದರಿತು ಸುಖದುಃಖಗಳ ತಾಕಲಾಟಕ್ಕೆ ಈಡಾಗದೆ ಕಾಯಕನಿರತಳಾಗುತ್ತಾಳೆ. ಮಗನ ಮರಣದ ದುಃಖವನ್ನು ಶರಣರ ದಾಸೋಹದಲ್ಲಿ ಮರೆಯುತ್ತಾಳೆ. ಮಹಾಮನೆಯ ಶರಣರಿಗೆಲ್ಲ ತನ್ನ ಮಾತೃವಾತ್ಸಲ್ಯವನ್ನು ಧಾರೆಯೆರೆಯುತ್ತಾಳೆ. ವೀರವೀರಾಗಿಣಿ ಅಕ್ಕಮಹಾದೇವಿ, ಶರಣೆ ಗುಡ್ಡಾಪುರ ದಾನಮ್ಮ ಮುಂತಾದ ಹಿರಿಯ ಶರಣೆಯರೆಲ್ಲ ನೀಲಮ್ಮನ ತಾಯಿ ಹೃದಯದ ಸವಿಯನ್ನು ಉಂಡವರೆ. ಅದಕ್ಕಾಗಿಯೇ ಅಕ್ಕಮಹಾದೇವಿ ತನ್ನ ವಚನದಲ್ಲಿ ತನ್ನನ್ನು ” ಅವ್ವ ನೀಲವ್ವನ ಮೋಹದ ಮಗಳು “ಎಂದು ಕರೆದುಕೊಳ್ಳುತ್ತಾಳೆ.
ಶರಣ ಸಂಸ್ಕೃತಿಯು ತಂದ ಲಿಂಗ ಸಮಾನತೆಯಿಂದ ಜಾಗೃತಿಗೊಂಡ ಶರಣೆಯರು ಹೆಣ್ಣನ್ನು ನಿಕೃಷ್ಟವಾಗಿ ಕಾಣುವುದನ್ನು ಪ್ರಶ್ನಿಸತೊಡಗಿದರು. ಇಬ್ಬರಲ್ಲಿರುವ ಚೈತನ್ಯ ಶಕ್ತಿ ಒಂದೆ ಎಂದು ಸಾರಿದರು. ಇದೇ ಭಾವನೆಯನ್ನು ನೀಲಮ್ಮನು ತಾಳಿದ್ದಳು. ಅದನ್ನು ತನ್ನ ವಚನದಲ್ಲಿ ಹೇಳುತ್ತಾಳೆ.
ಆಡಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ
ನುಡಿಯಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ
ನಾನು ಹೆಣ್ಣಲ್ಲದ ಕಾರಣ,ನಾನು ಇರಪರ ನಾಸ್ತಿಯಾದವಳಯ್ಯಾ
ನಾನು ಉಭಯದ ಸಂಗವ ಕಂಡು ಕಾಣದಂತಿದ್ದೆನಯ್ಯಾ
ಸಂಗಯ್ಯ ಬಸವ ಬಯಲ ಕಂಡ ಕಾರಣ
(ವಚನ ಸಂಪುಟ-೫,ವಚನ ಸಂಖ್ಯೆ- ೭೩೪,ಪುಟ- ೨೩೯)
ಇಲ್ಲಿ ನೀಲಮ್ಮ ದೈಹಿಕ ವ್ಯತ್ಯಾಸಕ್ಕೆ ಪ್ರಾಮುಖ್ಯತೆ ಕೊಡುವುದನ್ನು ನಿರಾಕರಿಸುತ್ತಾಳೆ. ನಾನು ಹೆಣ್ಣಾಗಿ ಆಡಲಿಲ್ಲ, ನುಡಿಯಲಿಲ್ಲ ಎನ್ನುವ ನೀಲಾಂಬಿಕೆ ಉಭಯರಲ್ಲಿರುವುದು ಒಂದೆ ಚೈತನ್ಯ .ನಾನು ಆ ಚೈತನ್ಯದ ಸ್ವರೂಪ ಕಂಡವಳು ಎನ್ನುತ್ತಾಳೆ. ಪತಿ,ಪತ್ನಿಯರಿಬ್ಬರು ಅಧಿಕಾರ ಚಲಾಯಿಸುವದನ್ನು ,ದಾಸತ್ವದಿಂದ ಬಾಳುವದನ್ನು ನೀಲಾಂಬಿಕೆ ಒಪ್ಪುವುದಿಲ್ಲ. ಅದಕ್ಕಾಗಿಯೇ
ಮಡದಿ ಎನ್ನಲಾಗದು ಬಸವಂಗೆ ಎನ್ನನು
ಪುರುಷನೆನಲಾಗದು ಬಸವನ ಎನಗೆ
ಉಭಯದ ಕುಳವ ಹರಿದು ಬಸವಂಗೆ ಶಿಶಿವಾದೆನು
ಬಸವನೆನ್ನ ಶಿಶುವಾದನು
ಪ್ರಮಥರು ಪುರಾತರು ಸಾಕ್ಷಿಯಾಗಿ
ಸಂಗಯ್ಯನಿಕ್ಕಿದ ದಿವ್ಯವ ಮೀರದೆ ಬಸವನೊಳಗಾನಡಗಿದೆ
(ವಚನ ಸಂಪುಟ- ೫,ವಚನ ಸಂಖ್ಯೆ- ೮೧೭,ಪುಟ-೨೬೦)
ಬಸವಣ್ಣನಿಗೆ ನಾನು ಸೇವಕಿಯು ಅಲ್ಲ.ಆತ ನನಗೆ ಒಡೆಯನು ಅಲ್ಲ.ನಾನು ಆತನ ರಕ್ಷಕಿ, ಆತ ನನ್ನ ರಕ್ಷಕ ಎನ್ನುತ್ತಾಳೆ. ಪರಂಪರೆಯಿಂದ ಬಂದ ಅಧಿಕಾರಶಾಹಿ ದಾಸತ್ವದ ಕಲ್ಪನೆಯನ್ನು ಒಡೆದು ಹಾಕಿ ವಾತ್ಸಲ್ಯಭರಿತ ಭಾವನೆಗಳನ್ನು ನೀಲಾಂಬಿಕೆ ಬಿತ್ತುತ್ತಾಳೆ.
ಕಲ್ಯಾಣದ ಕ್ರಾಂತಿಯಿಂದ ಮನನೊಂದ ಬಸವಣ್ಣ ಕೂಡಲಸಂಗಮದತ್ತ ತೆರಳುತ್ತಾನೆ. ಪತಿಯೇ ಜೀವನದ ಸರ್ವಸ್ವ, ಲಿಂಗ, ಜಂಗಮ ಎಂದು ಬಾಳಿದ ನೀಲಾಂಬಿಕೆ ಬಸವಣ್ಣ ತನಗೆ ಹೇಳದೆ ಹೊದದಕ್ಕೆ ದುಃಖ ಭರಿತಳಾಗುತ್ತಾಳೆ. ಮಧ್ಯದಲ್ಲಿ ಪತ್ನಿಯರ ನೆನಪಾಗಿ ಬಸವಣ್ಣ ಹಡಪದ ಅಪ್ಪಣ್ಣನವರ ಮೂಲಕ ಗಂಗಾಬಿಕೆ, ನೀಲಾಂಬಿಕೆಯರನ್ನು ಕರೆತರಲು ಕಳಿಸುತ್ತಾನೆ. ಅಪ್ಪಣ್ಣ ಬಂದು ನೀಲಾಂಬಿಕೆಗೆ ಸಂದೇಶವನ್ನು ತಿಳಿಸುತ್ತಾನೆ. ಆಗ ತನ್ನ ಇಷ್ಟಲಿಂಗದಲ್ಲಿಯೆ ಪತಿಯನ್ನು ಕಂಡ ನೀಲಮ್ಮ ” ಬಸವನ ರೂಪು ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕೆ ಅಪ್ಪಣ್ಣಾ “ ಎಂದು ಅಪ್ಪಣ್ಣನಿಗೆ ಮಾರುತ್ತರಿಸುತ್ತಾಳೆ.

ಬಸವಣ್ಣನೆ ತನ್ನ ಲಿಂಗದೊಳಗಿರುವಾಗ ಸಂಗಯ್ಯನ ಸಾನಿಧ್ಯದ ಆಸೆ ತನಗಿಲ್ಲ ಎಂಬ ಆಕೆಯ ವಚನದಲ್ಲಿ ಆಕೆಯ ಪತಿಭಕ್ತಿ ವ್ಯಕ್ತವಾಗುತ್ತದೆ. ನಂತರ ಲಿಂಗಾರ್ಚನೆಗೆ ಕುಳಿತ ಆಕೆ ತನ್ನ ಇಷ್ಟಲಿಂಗವನ್ನು ಕುರಿತು
ನೋಡು ನೋಡು ನೋಡು ಲಿಂಗವೇ,ನೋಡು ಬಸವಯ್ಯನಾಟವಾ
ಅಲ್ಲಿಗೆ ಎನ್ನನ್ನು ಬರಹೇಳಿದರಂತೆ,ಇಲ್ಲಿ ತಾವಿಲ್ಲವೇ ಸಂಗಯ್ಯನು
ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವು ಬಲ್ಲ ಮಹಾತ್ಮರಿಗಿದು ಗುಣವೇ?
ಎಂದು ಪ್ರಶ್ನಿಸುತ್ತಾಳೆ.

ಇಲ್ಲಿ ನೀಲಾಂಬಿಕೆಯ ಕಿಚ್ಚು ,ಆತ್ಮಶಕ್ತಿ ಕಾಣುತ್ತದೆ.ಮೃದುಹೃದಯದ ಬಸವಣ್ಣ ಭಾವಪರವಶನಾಗಿ ಕೂಡಲಸಂಗಮಕ್ಕೆ ತೆರಳಿದರೆ, ಧೀರ ನೀಲಾಂಬಿಕೆ ತನ್ನ ಕರಸ್ಥಲದ ಲಿಂಗದಲ್ಲಿಯೆ ಪತಿಯನ್ನು, ಸಂಗಯ್ಯನನ್ನು ಕಾಣುತ್ತಾಳೆ.ವಿಚಾರ ಪತ್ನಿಯಾದ ಮಾತೃಹೃದಯದ ನೀಲಾಂಬಿಕೆ ಬಸವಣ್ಣ ಬಿಟ್ಟು ಹೋದ ಶರಣ ಪಡೆಯ ರಕ್ಷಣೆಯ ಜವಾಬ್ದಾರಿ ಹೊರುತ್ತಾಳೆ. ಕೊನೆಗೆ ಇಚ್ಛಾಮರಣಿಯಾದ ನೀಲಾಂಬಿಕೆ
ಎಲೆ ಅಯ್ಯಾ ಬಸವಾ ಕರಸ್ಥಲ ಬಯಲಾಯಿತ್ತೆನಗೆ
ಕರಸ್ಥಲ ಮನಸ್ಥಲವಾಯಿತ್ತು ಬಸವಾ
ಸಂಗಯ್ಯಾ ಬಸವ ಹೋದನತ್ತ
ನಾನಡಗಿದೆನಯ್ಯಾ ನಿಮ್ಮಲಿತ್ತ
(ವಚನ ಸಂಪುಟ-೫,ವಚನ ಸಂಖ್ಯೆ-೭೫೫,ಪುಟ-೨೪೬)
ಎಂದು ಹೇಳುತ್ತಾ ತನ್ನ ಕರಸ್ಥಲದ ಇಷ್ಟಲಿಂದಲ್ಲಿಯೆ ಐಕ್ಯಳಾಗುತ್ತಾಳೆ.ಅಪ್ಪಣ್ಣ ನೀಲಮ್ಮ ಇಷ್ಟಲಿಂಗದಲ್ಲಿಯೆ ಬಯಲಾದ ವಿಷಯವನ್ನು ಬಸವಣ್ಣನಿಗೆ ತಿಳಿಸಿದಾಗ ಆಕೆ ಬಯಲಾದ ಪರಿಯನ್ನು ತಿಳಿಸು ಎನ್ನುತ್ತಾನೆ. ಅಪ್ಪಣ್ಣ ಲಿಂಗಪೂಜೆ ಮಾಡುತ್ತಾ ಇಷ್ಟಲಿಂಗದಲ್ಲಿಯೆ ಬಯಲಾದಾಗ ಬಸವಣ್ಣ ಸಹ ಕೂಡಲಸಂಗಮದಲ್ಲಿಯೆ ಬಯಲಾಗುತ್ತಾನೆ. ತಂಗಡಗಿಯಲ್ಲಿ ನೀಲಾಂಬಿಕೆಯ ಸಮಾಧಿ ಇದೆ.
ಬಸವಣ್ಣನ ಆದರ್ಶ ಪತ್ನಿಯಾಗಿ, ವಿಚಾರ ಪತ್ನಿಯಾಗಿ ಬದುಕಿದ ನೀಲಾಂಬಿಕೆ ವಚನಕಾರ್ತಿಯು ಆಗಿದ್ದಳು. ತನ್ನ ಮಗ ಬಾಲಸಂಗಯ್ಯನ ನೆನಪಿನಿಂದ ಸಂಗಯ್ಯ ಎಂಬ ಅಂಕಿತದಲ್ಲಿ ಸುಮಾರು ೧೨೬ (ಉಪಲಬ್ಧ) ವಚನಗಳನ್ನು ರಚಿಸಿದ್ದಾಳೆ.ಜೊತೆಗೆ ಒಂದು ಪ್ರಸಾದ ಸಂಪಾದನೆ ,ಕಾಲಜ್ಞಾನವನ್ನು ಬರೆದಿದ್ದಾಳೆ.

ಸಂಗೀತ ಅಭ್ಯಾಸ ಮಾಡಿದ್ದ ಈಕೆ ಬಸವಣ್ಣನ ವಚನಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡುತ್ತಿದ್ದಳು. ಇಕೆಯ ಕುರಿತು ಅನೇಕರು ಗೀತಸ್ತೊತ್ರ, ಹಾಡು ರಚನೆ ಮಾಡಿದ್ದಾರೆ.ನೀಲಮ್ಮನ ಸ್ತೊತ್ರ, ನೀಲಾಂಬಿಕಾ ಪಂಚವಿಶಂತಿ, ನೀಲಮ್ಮನ ತ್ರಿಪದಿ, ನೀಲಮ್ಮನ ಸಾಂಗತ್ಯ ಇವು ನೀಲಮ್ಮನ ಕುರಿತು ರಚನೆಗೊಂಡ ಗ್ರಂಥಗಳು.
ನೀಲಾಂಬಿಕೆ ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಪೂರಕವಾಗಿ ನಿಂತು ಅವರ ದಾಸೋಹ ಕಾಯಕಕ್ಕೆ ಸಮರ್ಪಣಾ ಮನೋಭಾವದಿಂದ ಸಹಕಾರಿಯಾಗುತ್ತಾಳೆ.ತನ್ನ ಸತ್ಯಶುದ್ಧ ನಡೆಯಿಂದ ಎಲ್ಲರ ಮೆಚ್ಚುಗೆಗೆ ಗೌರವಕ್ಕೆ ಪಾತ್ರಳಾಗುತ್ತಾಳೆ. ಮಹಾಮನೆಯ ಅನ್ನದಾಸೋಹದ ಅನ್ನಪೂರ್ಣೆಯಾಗಿ ನಿಲ್ಲುತ್ತಾಳೆ. ಮಹಾಮನೆಯ ಅತಿಥಿಗಳಿಗೆ ಅಂತಃಕರಣೆಯಿಂದ ಪ್ರಸಾದವನ್ನು ಅರ್ಪಿಸಿದ್ದರಿಂದ ಶರಣ ಶರಣೆಯರೆಲ್ಲ ಆಕೆಯನ್ನು ” ನಿಜಭಕ್ತಿ ನೀಲಾಂಬಿಕೆ “ ಎಂಬ ಗೌರವಿಸುತ್ತಾರೆ.

-ಡಾ.ರಾಜೇಶ್ವರಿ ವೀ.ಶೀಲವಂತ
ಕನ್ನಡ ಉಪನ್ಯಾಸಕರು
ಬೀಳಗಿ

One thought on “ನಿಜಭಕ್ತಿ ನೀಲಾಂಬಿಕೆ

Comments are closed.

Don`t copy text!