ಹಾಲು ಕುಡಿಯುವ ಹಬ್ಬ
ನಾವು ಚಿಕ್ಕಂದಿನಿಂದ ಎಲ್ಲ ಹಬ್ಬಗಳನ್ನು ಸಡಗರ ಸಂಬ್ರಮದಿಂದ ಅಷ್ಟೆ ಭಕ್ತಿಯಿಂದ ಆಚರಿಸುತ್ತ ಬಂದವರು. ಹೆಚ್ಚಾಗಿ ಎಲ್ಲ ಹಬ್ಬಗಳು ಹೆಣ್ಣುಮಕ್ಕಳ ಕೇಂದ್ರಿತವಾಗಿಯೇ ಇರುತ್ತವೆ. ಒಂದೊಂದು ಹಬ್ಬವೂ ಒಂದೊಂದು ವಿಶೇಷತೆಯನ್ನು ಹೊಂದಿವೆ. ಹಾಗೆಯೆ ಎಲ್ಲ ಹಬ್ಬಕ್ಕೂ ಒಂದೊಂದು ಪೌರಾಣಿಕ ಕಥೆಗಳಿವೆ. ನಾವೆಲ್ಲರೂ ಅವುಗಳನ್ನು ಪಾರಂಪರಿಕವಾಗಿ ಒಪ್ಪಕೊಂಡು ಮುಂದಿನ ಪೀಳಿಗೆಗೂ ಬೆಳೆಸುತ್ತ ಹೋಗುತ್ತಿದ್ದೆವೆ.
ನಾನು ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಿದ್ದರಿಂದ ಎಲ್ಲ ಹಬ್ಬಗಳನ್ನು ಆಚರಿದಸುತ್ತಿದ್ದೆವು.
ಮದುವೆಯಾಗಿ ಇಲಕಲ್ಲಿಗೆ ಬಂದಮೇಲೆ ನನ್ನ ಜೀವನ ಶೈಲಿ ಬದಲಾಯಿತು. ನಮ್ಮ ಇಲಕಲ್ಲಿನ ವಿಜಯಮಹಾಂತೇಶ ಮಠದ ಪೂಜ್ಯರಾದ ಪರಮಪೂಜ್ಯ ಡಾ|| ಮಹಾಂತಪ್ಪನವರು ಬಸವಾದಿ ಶರಣರ ವಾಣಿಯಂತೆ “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬ ಮಾತಿನಂತೆ ಸ್ಥಾವರ ಪೂಜೆಯನ್ನು ಒಪ್ಪದವರು.
ಅದಕ್ಕಾಗಿ ನಮ್ಮ ಅತ್ತೆಯವರು ನಮಗೆ ಯಾವುದೇ ಲಕ್ಷ್ಮಿ ಪೂಜೆ ಅಥವಾ ಗೌರಿಪೂಜೆಯನ್ನು ಮಾಡಿಸಲಿಲ್ಲ. ನಮ್ಮ ಪೂಜ್ಯರ ಮಾತುಗಳ ಜೊತೆಗೆ ವಚನಗಳನ್ನು ಕೇಳುತ್ತ ಮನಸ್ಸು ಪ್ರಬುದ್ಧವಾಯಿತು. ನಡೆ ನುಡಿ ಶುದ್ಧವಿರದೆ ಜೊತೆಗೆ ನಮ್ಮನ್ನು ನಾವು ಅರಿಯದೆ ಮಾಡುವ ಪೂಜೆ ವ್ಯರ್ಥ ಅನಿಸಿತು. ಸತ್ಯ ಶುದ್ಧ ಕಾಯಕ, ನಿತ್ಯಲಿಂಗಾರ್ಚಣೆಯ ಮೂಲಕ ಜೀವನದಲ್ಲಿ ಏನಾದರೂ ಸಾಧಿಸಬಹುದು. ಹೊರತಾಗಿ ಪೂಜೆ ಪುನಸ್ಕಾರದಿಂದಲ್ಲ ಎಂಬುದು ಮನವರಿಕೆಯಾಯಿತು.
ಹಾಲು ಕುಡಿಯದ ಹಾವಿಗೆ ಹಾಲೆರೆದರೇನು ಫಲ ಎನ್ನುವಂತೆ, ನಮ್ಮ ಪೂಜ್ಯರು ಪೌಷ್ಟಿಕ, ಪರಿಪೂರ್ಣ ಆಹಾರವಾದ ಹಾಲನ್ನು ವ್ಯರ್ಥಮಾಡದೆ ಬಡಮಕ್ಕಳಿಗೆ ಹಂಚಿ ಹಬ್ಬವನ್ನು ಅರ್ಥಪೂರ್ಣಗೊಳಿಸುವಂತೆ “ಹಾಲುಕುಡಿಯುವ ಹಬ್ಬ” ಎಂದು ಘೊಸಿಸಿ ಇಂದು ಪ್ರತಿ ಶಾಲೆಯ ಮಕ್ಕಳಿಗೆ ಮತ್ತು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲನ್ನು ಹಂಚುವುದರ ಮೂಲಕ “ಹಾಲುಕುಡಿಯುವ ಹಬ್ಬ” ವನ್ನು ಸರ್ಥಕಗೊಳಿಸಿದ್ದಾರೆ.
ಮೂಢನಂಬಿಕೆಯಿಂದ ಕೂಡಿದ ಎಷ್ಟೊ ಆಚರಣೆಗಳನ್ನು ಪೂಜ್ಯರು ವಿರೋಧಿಸಿದ್ದಾರೆ. ಅವರ ಆಣತಿಯಂತೆ ಅವರ ಭಕ್ತರೆಲ್ಲರೂ ಅವರ ವೈಚಾರಿಕ ಮಾತುಗಳನ್ನು ಗೌರವದಿಂದ ಒಪ್ಪಿಕೊಂಡು ಅವರ ಮಾರ್ಗದರ್ಶನದಲ್ಲಿ ಸಂತೃಪ್ತಿಯಿಂದ ಬದುಕುತ್ತಿದ್ದೆವೆ. ಆಹಾರವಾಗಬೇಕಿದ್ದ ಹಾಲನ್ನು ವ್ಯರ್ಥಮಾಡಬೇಡಿ.
–ಸವಿತಾ. ಮಾಟೂರ. ಇಲಕಲ್ಲ.