ಮಸ್ಕಿ : ಸೋಮವಾರ ರಾತ್ರಿ ಸುರಿದ ಮಳೆಗೆ ಪಟ್ಟಣದ ಕೆಲ ವಾರ್ಡಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದ್ದು ಜನರು ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ.
ಮಸ್ಕಿ ಪಟ್ಟಣ ಸೇರಿದಂತೆ ಸುತ್ತಮೂತ್ತಲಿನ ಗ್ರಾಮಗಳಲ್ಲಿ ಮಳೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ವಾರ್ಡ ನಂ.2 ಸೋಮನಾಥ ನಗರದಲ್ಲಿ ಮಳೆಯಿಂದಾಗಿ ಜಲಾವೃತ್ತಗೊಂಡಿದ್ದು ಕೆರೆಯಂತೆ ಕಾಣತೊಡಗಿದೆ. ಅಲ್ಲಿನ ನಿವಾಸಿಗಳು ಮನೆಯಿಂದ ಹೊರಬರದೆ ಮನೆಯಲ್ಲಿ ಕಾಲ ಕಳೆಯುವಂತಾಗಿದೆ.
ವಾಲ್ಮೀಕಿ ನಗರ, ಬಸವೇಶ್ವರ ನಗರದಲ್ಲಿರುವ ಬಿಜೆಪಿ, ಕಾಂಗ್ರೆಸ್ ಕಚೇರಿ ಹಾಗೂ ತಹಸೀಲ್ ಕಚೇರಿ ಮುಂಬಾಗದಲ್ಲಿ ಅತಿ ಹೆಚ್ಚು ಮಳೆಯ ನೀರು ಸಂಗ್ರಹವಾಗಿದ್ದು ಜನರು ತಿರುಗಾಡಲು ಬಾರದಂತಾಗಿದೆ. ಉದ್ಯಾನವನದಲ್ಲಿ ನೀರು ನುಗ್ಗಿದೆ.
ಗಾಂಧಿ ನಗರ, ರಾಮಕೃಷ್ಣ ಕಾಲೋನಿಯ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವದು ಕಂಡು ಬಂದಿತು. ಮುಖ್ಯ ಬಜಾರ, ಕನಕವೃತ್ತ, ಅಂಚೆ ಕಚೇರಿಯ ಮುಂಬಾಗದಲ್ಲಿ ಮಳೆ ನೀರಿನ ಜತೆಗೆ ಚರಂಡಿ ನೀರು ಕೊಚ್ಚಿಕೊಂಡು ರಸ್ತೆಗುಂಟ ಹರಿಯುತ್ತಿದ್ದು ಕಸದ ರಾಶಿ ಬಿದ್ದಿದೆ.
ಮಂಗಳವಾರ ಪುರಸಭೆಯ ಸಿಬ್ಬಂದಿ ರಸ್ತೆ ಸ್ವಚ್ಚತೆಯ ಕಾರ್ಯದಲ್ಲಿ ನಿರತರಾಗಿದ್ದರು. ಪರಾಪೂರ ರಸ್ತೆಯ ಹೊಲಗಳಳ್ಲಿ ನಿರ್ಮಿಸಿದ್ದ ಚೆಕ್ ಡ್ಯಾಂಗಳು ತುಂಬಿ ನೀರು ಹರಿಯತೊಡಗಿದೆ. ಮಸ್ಕಿ ಹಳ್ಳದಲ್ಲಿ ಹೆಚ್ಚಿನ ನೀರು ಹರಿಬಿಡಲಾಗಿದೆ.