ಮಾಹಿತಿ ಸಂಗ್ರಹ : ಅಕ್ಕಿ ಮುತ್ತುರಾಜ್ ಇಳಕಲ್
ಶಿಕ್ಷಣ ,ಆರೋಗ್ಯ ಸೇರಿದಂತೆ ಐದು ದಶಕಗಳಷ್ಟು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ತೋಂಟದಾರ್ಯ ಮಠದ ಶ್ರೀ ಡಾ.ಸಿದ್ದಲಿಂಗ ಸ್ವಾಮೀಜಿಯವರ ಸಂಸ್ಮರಣಾ ದಿನವಿದು. ಅಕ್ಟೋಬರ್. 20 , 2018ರಂದು ಈ ಲೋಕವನ್ನಗಲಿದ ಸ್ವಾಮೀಜಿ ಅವರು 76 ವರ್ಷ ಈ ಲೋಕದಲ್ಲಿ ನಡೆದಾಡಿದ್ದರು.
ಶ್ರೀಗಳು ಹಲವಾರು ದಶಕಗಳಿಂದ ಅನ್ನದಾಸೋಹ ನಡೆಸಿಕೊಂಡು ಬಡ ಮಕ್ಕಳ ಶ್ರೇಯೋಭಿವೃದ್ದಿಗೆ ಹೆಸರಾಗಿದ್ದರು. ತಾವು ಪೀಠಾಧಿಪತಿಗಳಾದ ನಂತರ ಗದಗ, ಹಾವೇರಿ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದರು. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು, ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣ ಶಾಖೆಗಳನ್ನು ಪ್ರಾರಂಭಿಸಿದ್ದರು.
ಶ್ರೀಗಳು ಸಮಾಜದಲ್ಲಿದ್ದ ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆ, ಮೇಲು-ಕೀಳು, ಮಹಿಳೆಯರು-ಪುರುಷರು ಎಂಬ ಬೇಧಭಾವಗಳ ವಿರುದ್ಧ ನಿರಂತರ ಹೋರಾಟ ನಡೆಸಿದ್ದರು. ಸಮಾಜದಲ್ಲಿ ಸಮಾನತೆ, ಭಾತೃತ್ವ, ಸಾಮಾಜಿಕ ನ್ಯಾಯಕ್ಕಾಗಿ ಶ್ರೀಗಳು ಯಾವಾಗಲು ಮುಂಚೂಣಿಯಲ್ಲಿರುತ್ತಿದ್ದರು. ದಿವಂಗತ ಅಟಲ್ ಬಿಹಾರಿ ವಾಜಪೇಯವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಶ್ರೀಗಳಿಗೆ ಸಂದಿದ್ದವು. ಅಪಾರ ಪುಸ್ತಕ ಪ್ರಿಯರಾಗಿದ್ದ ಇವರು ಪುಸ್ತಕಗಳ ಸ್ವಾಮೀಜಿ ಎಂದೇ ಪ್ರಸಿದ್ಧರಾಗಿದ್ದರು.
ಸ್ವಾಮೀಜಿಯವರ ನೇತೃತ್ವದಲ್ಲಿ ಮಠದಲ್ಲಿ
ಪ್ರತಿವಾರ ಆಯೋಜಿಸಲಾಗುತ್ತಿದ್ದ ಶಿವಾನುಭವ ಕಾರ್ಯಕ್ರಮ ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ, ಕೃಷಿ, ಗ್ರಾಮೀಣ, ಮಾನವಶಾಸ್ತ್ರದ ವಿಷಯಗಳ ಕುರಿತಾದ ಚರ್ಚೆಗಳಿಗೆ ಪ್ರಸಿದ್ಧವಾಗಿದ್ದವು.
ರಥೋತ್ಸವದ ಸಂದರ್ಭದಲ್ಲಿ ಸಾಹಿತ್ಯ, ಸಂಗೀತ, ಲಲಿತಕಲೆಗಳ ಅಭೂತಪೂರ್ವ ಸಂಗಮವಾಗಿ ಶ್ರೀಮಠ ಕಂಗೊಳಿಸುತ್ತಿತ್ತು. ವಿವಿಧ ಜಿಲ್ಲೆ, ನೆರೆಯ ರಾಜ್ಯಗಳಿಂದಲೂ ಸಾಹಿತಿಗಳು, ಕಲಾವಿದರು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದರು. ತೋಂಟದಾರ್ಯ ಜಾತ್ರೆಯನ್ನು ಧಾರ್ಮಿಕ ಕಾರ್ಯಕ್ರಮಗಳ ಚೌಕಟ್ಟಿನಿಂದ ಹೊರತಂದು, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಸ್ಪರ್ಶವನ್ನು ತೋಂಟದ ಶ್ರೀಗಳು ನೀಡಿದ್ದರು. ನಾಗರ ಪಂಚಮಿಯಂದು ಹುತ್ತಕ್ಕೆ ಹಾಲೆರೆಯುವ ಬದಲು ಬಡಮಕ್ಕಳಿಗೆ ಹಾಲುಣಿಸುವುದು, ಪವಾಡ ಬಯಲು ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ಜನಮಾನಸದಲ್ಲಿ ಶ್ರೀಗಳು ವೈಚಾರಿಕ ಕ್ರಾಂತಿ ಮೂಡಲು ಶ್ರಮಿಸಿದ್ದರು.
ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸಾಂವಿಧಾನಿಕ ಮಾನ್ಯತೆ ಕೊಡುವಂತೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ, ನಂಜುಡಪ್ಪ ವರದಿ ಅನುಷ್ಠಾನಗೊಳಿಸುವಂತೆ, ಬೆಳಗಾವಿ ಗಡಿ ಸಮಸ್ಯೆ ಪರಿಹಾರಕ್ಕಾಗಿ, ಪೋಸ್ಕೊ ವಿರುದ್ಧದ ಗಟ್ಟಿಯಾದ ಹೋರಾಟ ಹಾಗೂ ಕಪ್ಪತಗುಡ್ಡಕ್ಕೆ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ತೋಂಟದ ಶ್ರೀಗಳ ನೇತೃತ್ವದಲ್ಲಿ ಪಟ್ಟುಬಿಡದೆ ನಡೆಸಿದ ನಿರಂತರ ಹೋರಾಟ ಮುಂತಾದವುಗಳಿಂದ ಸಹಾ ಶ್ರೀಗಳು ಜನಮಾನಸದಲ್ಲಿ ಅಚ್ಚಳಿಯದೆ ನಿಂತಿದ್ದಾರೆ.
ಈ ಮಹಾನ್ ಚೇತನಕ್ಕೆ ಶರಣು ಶರಣಾರ್ಥಿ