ಶ್ರಾವಣ
ಶ್ರಾವಣ ಬಂದೈತಿ ನೆನಪಾಗೈತಿ
ನನ್ನ ತವರೂರು, ಧಾರಾಕಾರ ಸುರಿಯುತಿದ್ದ ಧಾರವಾಡ
ಕಣ್ಣಂಚಲಿ ನೀರ ಜಿನಗತೈತಿ
ಅವ್ವನ ಪಿರುತಿ ಮನ ತೊಯಸತೈತಿ//
ನನ್ನೂರು ನನಗ ಚೆಂದ
ಅದರ ಹಸಿರು ನೋಡಲಂದ
ಶ್ರಾವಣ ಸಂಭ್ರಮ ಊರಲೆಲ್ಲ
ಆದ್ಯಾತ್ಮಿಕ ಪ್ರವಚನ ಎಲ್ಲೆಡೆ
ಮನಸಿಗೆ ಉಲ್ಲಾಸ ಹೊಸತನ//
ಅತ್ತಿಗೆ ತೋರತಾಳ ಅವ್ವನ ಪ್ರೀತಿ
ಅಣ್ಣ ಬರತಾನ ಕರಿಯಾಕ ಪಂಚಮಿ
ಹಬ್ಬಕ ಬಾಗಿನ ಕೊಡೋದಕ್ಕ
ಮೊದಲ ಹುಮ್ಮಸ್ಸು ಇಲ್ಲವಾದರು
ತವರಂದರ ಮನ ಅರಳತೈತಿ//
ಪಕ್ಕದ ಮನೆ ಚಿಗವ್ವ, ಎದುರು ಮನೆ ಅತ್ತೆವ್ವ ಕಾಯತಿರತಾರ
ಗೆಳತಿಯರೆಲ್ಲ ನಕ್ಕು ನಲಿವ
ಹಳೆಯ ನೆನಪು ಕೆದಕುವ ಹರಟೆಗಾಗಿ ತವರು ಮನೆಗೆ ಮನ ತವಕಸತೈತಿ//
ಅವ್ವ ಕೊಟ್ಟ ಟೋಪಶರಗ ಸೀರಿ
ಗೊಂಡೆಸರ ಹಾಕ್ಕೊಂಡ
ಉಳವಿಬಸಪ್ಪನ ಜಾತ್ರೆಲಿ ತಿನ್ನೊ
ಮಿರ್ಚಿ ಮಂಡಕ್ಕಿ ರುಚಿನರುಚಿ
ಎಲ್ಲಾ ಮರೆತು ಮನ ಹಾರಾಡತೈತಿ//
ಕರೋನಾ ಹಬ್ಬಕ ಮಬ್ಬ ತಂದೈತಿ
ಸೊಗಸಿಲ್ಲ ಮನಸಿಗೆ ಹುರುಪಿಲ್ಲ
ಎಲ್ಲದೈವಕ ಭಕ್ತಿಯಿಂದ ನಮಿಸೇವ
ಆರೋಗ್ಯ ಸಂಪತ್ತು ವರವ ಬೆಡೇವ
ನೆನೆ ನೆನೆದು ಎದೆತುಂಬಿ ಶರಣೆಂದೇವ//
–ಶಾರದ ಕೌದಿ