ಆಮೆ ಗತಿಯಲ್ಲಿ ಸಾಗಿದ ಬೈಲಹೊಂಗಲ ಎಂ.ಕೆ. ಹುಬ್ಬಳ್ಳಿ ರಸ್ತೆ ಕಾಮಗಾರಿ, ಹದಗೆಟ್ಟ ರಸ್ತೆಗೆ ಹಿಡಿಶಾಪ ಹಾಕಿದ ಸಾರ್ವಜನಿಕರು, ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಣ್ತೆರೆಯೋದ್ಯಾವಾಗ?
ವರದಿ -ಉಮೇಶ ಗೌರಿ, ಯರಡಾಲ
ಬೈಲಹೊಂಗಲ ರಸ್ತೆಯ ಮಧ್ಯೆ ಗುಂಡಿಯೋ, ಗುಂಡಿಗಳ ಮಧ್ಯೆ ರಸ್ತೆಯೋ! ಒಂದೂ ತಿಳಿಯದಂತ ಸ್ಥಿತಿ ಬೈಲಹೊಂಗಲದಿಂದ ಎಂ.ಕೆ. ಹುಬ್ಬಳ್ಳಿಗೆ ಪ್ರಯಾಣಿಸುವ ಪ್ರಯಾಣಿಕರಲ್ಲ್ಲಿ ನಿರ್ಮಾಣವಾಗಿದೆ.
ಇದು ಕಿತ್ತೂರು ಮತಕ್ಷೇತ್ರದ ಬೈಲಹೊಂಗಲ-ಎಂ.ಕೆ.ಹುಬ್ಬಳ್ಳಿ ರಸ್ತೆಯ ಪರಿಸ್ಥಿತಿ ಈ ರಸ್ತೆಯಲ್ಲಿ ನೀವು ಒಂದು ಸಲ ಓಡಾಡಿದರೆ ಸಾಕು ಇಲ್ಲಿನ ಸಂಚಾರ ಅದೆಷ್ಟು ದುಸ್ತರ ಮತ್ತು ಕಷ್ಟ ಎಂಬುದು ಅರಿವಿಗೆ ಬರುತ್ತದೆ. ರಾಜ್ಯ ಮುಖ್ಯ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಬಂದು ಸೇರುವ ಪ್ರಮುಖ ರಸ್ತೆ ಇದಾಗಿದ್ದು. ಅಲ್ಲದೆ ಬೈಲಹೊಂಗಲ, ಸವದತ್ತಿ, ಮುನವಳ್ಳಿ ಹಾಗು ಸಂಪಗಾವಿ ಹಿರೆಬಾಗೇವಾಡಿ ಬೆಳಗಾವಿ ಸೇರಿದಂತೆ ಹಲವು ಪ್ರಮುಖ ಪಟ್ಟಣಗಳಿಗೆ ಮತ್ತು ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ.
ದಿನನಿತ್ಯ ಈ ರಸ್ತೆಯ ಮೂಲಕವೇ ಸುಮಾರು ಸಾವಿರಾರು ಜನ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ತಾಲೂಕಿನ ಅನೇಕ ಗ್ರಾಮಗಳಿಂದ ಕುರಗುಂದ ಹಾಲು ಮತ್ತು ಹಾಲಿನ ಉತ್ತನ್ನಗಳ ಕಾರ್ಖಾನೆಗಳಿಗೆ ತೆರಳುವ ಕಾರ್ಮಿಕರಿಗೆ ಈ ರಸ್ತೆಯಲ್ಲಿ ಸಂಚರಿಸುವ ಅನಿವಾರ್ಯತೆ ಇದ್ದು ನಿತ್ಯ ಇವರು ಪಡುವ ಸಂಕಟ ಹೇಳತೀರದು.
ಅಷ್ಟೆ ಅಲ್ಲದೆ ಈ ರಸ್ತೆಯ ಮುಖಾಂತರ ಬೈಲಹೊಂಗಲ ಸರಕಾರಿ ಅಸ್ಪತ್ರೆ ಹೋಗಬೇಕಾಗುವುದರಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ಬರುವ ವಯೋವೃದ್ಧರು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ತೆರಳುವುದು ಹಾಗೂ ಶಾಲಾ ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳು ಹದಗೆಟ್ಟ ಈ ರಸ್ತೆಯಿಂದಾಗಿ ಈ ರಸ್ತೆ ದುರಸ್ತಿ ಮಾಡದ ಜನಪ್ರತಿನಿಧಿಗಳಿಗೆ ನಿತ್ಯ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಸುಮಾರು ಎರಡ್ಮೂರು ವರ್ಷಗಳಿಂದ ಹಾಳಾದ ರಸ್ತೆಯನ್ನು ಈ ವರ್ಷ ಲೋಕೋಪೋಯೋಗಿ ಇಲಾಖೆಯಿಂದ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೂ 10 ಕೋಟಿ ಅನುದಾನದಲ್ಲಿ ಸುಮಾರು 10 ಕೀಮಿ ರಸ್ತೆ ನಿರ್ಮಾಣ ಕಾರ್ಯ ಹಂತದಲ್ಲಿದ್ದು ಸುಮಾರು ಎರಡ್ಮೂರು ತಿಂಗಳು ಕಳೆದರು ಕಾಮಾಗಾರಿ ಮಾತ್ರ ಆಮೆ ಗತಿಯಲ್ಲಿ ಸಾಗಿದೆ. ಇದರಿಂದ ರಸ್ತೆಯಲ್ಲಿ ಪ್ರಯಾಣಿಸುವ ಪ್ರಾಯಾಣಿಕರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುವಂತಾಗಿದೆ.
ಇತ್ತೀಚೆಗೆ ರಾಜ್ಯದೆಲ್ಲೆಡೆ ಸುರಿದ ಮಳೆಯಿಂದಾಗಿ ಈ ರಸ್ತೆ ಸಂಪೂರ್ಣ ಹಾಳಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯುದ್ದಕ್ಕೂ ಹಾಕಲಾದ ಡಾಂಬರು ಕಿತ್ತು ತೆಗೆದಿದ್ದಾರೆ ಬಹುತೇಕ ರಸ್ತೆಯುದ್ದ ಅಲ್ಲಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿದ್ದು ಬೈಕ್ ಸವಾರರು ಹಾಗೂ ಟ್ರ್ಯಾಕ್ಟ್‍ರ ಸವಾರರು ನಿತ್ಯ ಭಯದಿಂದಲೇ ಈ ರಸ್ತೆಯಲ್ಲಿ ಓಡಾಡುವಂತಾಗಿದೆ.
ಇದೇ ರಸ್ತೆಯಲ್ಲಿ ನಿತ್ಯ ಓಡಾಡುವ ಶಾಸಕರು ಸೇರಿದಂತೆ ಇತರೆ ಜನಪ್ರತಿನಿಧಿಗಳು ಕೂಡ ಇದೂವರೆಗೆ ಯಾವುದೇ ಜನಪ್ರತಿನಿಧಿಯೂ ಕೂಡ ಈ ರಸ್ತೆ ಸುಧಾರಣೆ ಮಾಡುವ ಗೋಜಿಗೆ ಹೋಗದಿರುವುದು ಕ್ಷೇತ್ರದ ಬಗ್ಗೆ ಅವರಿಗಿರುವ ಕಾಳಜಿಯನ್ನು ಎತ್ತಿ ತೋರುತ್ತಿದೆ.
ಈ ರಸ್ತೆಯಲ್ಲಿ ಪ್ರತಿ ಗಂಟೆಗೆ ಸುಮಾರು 40 ರಿಂದ 50 ವಿವಿಧ ತರಹದ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ನಿತ್ಯ ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ಓಡಾಡುವ ಅನಿವಾರ್ಯತೆ ಇದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಈ ಕ್ಷೇತ್ರದ ಜನಪ್ರತಿನಿಧಿಗಳು ಈ ರಸ್ತೆಯನ್ನು ಬೇಗನೆ ಸುಧಾರಿಸುವಲ್ಲಿ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
—————–_—————-_
ಆದಷ್ಟು ಬೇಗನೆ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಹೇಳಿದ್ದೇನೆ.
-ಮಹಾಂತೇಶ ದೊಡ್ಡಗೌಡರ, ಶಾಸಕರು ಕಿತ್ತೂರು
——————————
ಗುತ್ತಿಗೆ ಹಿಡಿದ ಗಯತ್ತಿಗೆದಾರರಿಗೆ ಮಳೆಗಾಲ ಮುಗಿಯುವವರೆಗೆ ರಸ್ತೆ ನಿರ್ವಹಣೆ ಮಾಡಲು ತಿಳಿಸಲಾಗುವುದು ಮತ್ತು ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು
. – ಸಂಜೀವಕುಮಾರ ಹಲಕಾಯಿ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಬೆಳಗಾವಿ.
————————–
ನನ್ನ ಅವಧಿಯಲ್ಲಿ ಈ ರಸ್ತೆ ಸುಧಾರಣೆಗೆ ವಿಶೇಷ ಕಾಳಜಿ ವಹಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈಗ ರಸ್ತೆ ಸಂಪೂರ್ಣ ಹಾಳಾಗಿದ್ದು ಈಗಿನ ಶಾಸಕರು ಮತ್ತು ಅಧಿಕಾರಿಗಳು ಅತೀ ಶೀರ್ಘದಲ್ಲಿ ರಸ್ತೆ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಗಮನಹರಿಸಿಬೇಕು.
ಡಿ.ಬಿ. ಇನಾಮದಾರ, ಮಾಜಿ ಸಚಿವರು, ಕಿತ್ತೂರು.