ಮಹಾಕಾವ್ಯ ನನ್ನವ್ವ..

(ವಿಶ್ವ ಹಿರಿಯರ ದಿನಾಚರಣೆ)

ಮಹಾಕಾವ್ಯ ನನ್ನವ್ವ..

ಅವ್ವ ಅವ್ವ ನೆನೆಯುತ್ತ ಅವಳನ್ನು ಶಾಂತವಾಗಿ ರೋದಿಸುತ್ತಿದೆ ಮನ ಗಳಿಗೆಗೊಮ್ಮೆ ನೆನಪಿಸಿ ಆರ್ದ್ರ ಗೊಳ್ಳುತ್ತಿದೆ ತನ
ಹಬ್ಬ-ಹರಿದಿನಗಳ ಸುಗ್ಗಿ
ನೂರಾರು ಕರ್ತವ್ಯಗಳ ಹೊರೆ ಹತ್ತೆಂಟು ಜವಾಬ್ದಾರಿ
ಕೌಟುಂಬಿಕ ಕೆಲಸ ದಾರೆ
ಮನ ಒಮ್ಮೆಮ್ಮೆ ಗಲಿಬಿಲಿ ಸುನಾಮಿ
ಕೆಲಸದ ಹೊರೆಯಿಂದ ರೋಸಿ
ಹೇಗೆ ನಿಭಾಯಿಸಲಿ ಇವೆಲ್ಲವ
ಸಾವಿರ ಪ್ರಶ್ನೆಗಳು
ಉತ್ತರವೆಂಬಂತೆ
ಅವ್ವನ ಮಾತುಗಳು
ರಿಂಗಣಿಸುತ್ತವೆ ಕಿವಿಯಲ್ಲಿ
ಹೆಜ್ಜೆಹೆಜ್ಜೆಗೆ. .
ಮಾಡುವ ಕರ್ತವ್ಯದಲ್ಲಿ ಸಮಾಧಾನವಿರಲಿ ಮಗಳೇ
ಮುಗಿಸು ಒಂದೊಂದೇ ಕೆಲಸ ಜೊತೆಗಿರಲಿ ತಾಳ್ಮೆ
ಗುರುಹಿರಿಯರಲ್ಲಿ ಗೌರವ ಭಕ್ತಿ ಮರೆಯಬೇಡ
ಹಬ್ಬ-ಹರಿದಿನಗಳ
ರೀತಿನೀತಿಗಳು ಸಂಪ್ರದಾಯಗಳ ಕಡೆಗಣಿಸಬೇಡ
ಇಡು ತುಸು ಸಮಯ ಅವುಗಳಿಗೆoದೆ..
ಒಳ್ಳೆ ಕಂಠಸಿರಿ ನಿನ್ನದು
ತೊರೆಯಬೇಡ ಹಾಡುವುದ
ವಾಗ್ಝರಿ ದೈವದತ್ತ ನಿನಗೊಲಿದ ಕಲೆ
ಪತಿಸೇವೆ ಮಿಗಿಲಾದದ್ದು ಎಲ್ಲಕ್ಕಿಂತ
ಪಾಲಿಸು ಅನವರತ
ಹೆಜ್ಜೆಹೆಜ್ಜೆಗೂ ಕಿವಿಮಾತುಗಳ ಪ್ರತಿಧ್ವನಿ ..
ಜೀವನ ಪಾಠದ ಗುರುಮಾತೆ
ಕಷ್ಟವೆಂದರೆ ಓಡಿ ಬರುತ್ತಿದ್ದ ಅವ್ವ
ನನ್ನ ಕುಟುಂಬ
ತನ್ನ ಎದೆಗವಚಿ ರಕ್ಷಣೆ ನೀಡಿದ ಅವ್ವ
ಇದೀಗ ಅಸಹಾಯಕತೆ ವೃದ್ಧಾಪ್ಯ ರೋಗ-ರುಜಿನಗಳ ಸುಳಿಯಲ್ಲಿ. .
ಬರಲಾರಳು ನನ್ನೆಡೆಗೆ ಹೋಗಲಾಗುತ್ತಿಲ್ಲ ನನಗೂ ಅವಳಡೆಗೆ
ಸರಿ ಇಲ್ಲ ಅವಳ ಊಟ ತಿಂಡಿ ನಿದ್ರೆ ಆಹಾರ-ವಿಹಾರ
ಮಾತುಕತೆ
ಯಾಕೋ …
ಮನಸು ಕಸಿವಿಸಿ ಸೊಗಸಿಲ್ಲ ಎಲ್ಲೂ
ಅವ್ವನ ಅನಾರೋಗ್ಯ ನೆನೆದು . ..
ಅವ್ವ ಕೊಟ್ಟ ಸೀರೆ ಉಟ್ಟು ಅವಳ ಭಾವ ಧರಿಸಿದ ಅನುಭೂತಿ
ಅವಳು ಕೊಟ್ಟ ಒಡವೆ ಧರಿಸಿ ನೇವರಿಸಿ ಅವಳ
ಸ್ಪರ್ಶದ ಸಂಭ್ರಮ
ಬೆಲೆಕಟ್ಟಲಾಗದ ತಮ್ಮಂದಿರ ಸೊಸೆಯಂದಿರ ಮೊಮ್ಮಕ್ಕಳ ಸೇವೆ
ಕಾಳಜಿ ಪ್ರೀತಿ ಕಕ್ಕುಲತೆ..
ಸದಾ ಅವರ ಬೆನ್ನಿಗಿರಲಿ
ಆ ಹಿರಿಯಳ ಆಶೀರ್ವಾದ
ಮೇಲೆ ನನ್ನದೊಂದು
.. ಏನಂತ ಬರೆಯಲಿ
ಎಷ್ಟಂತ ಹೇಳಲಿ
ಬರೆಯಲಾಗದ
ಮುಗಿಸಲಾಗದ
ಕೇಳಲಾಗದ
ಮಹಾಕಾವ್ಯ
ನಮ್ಮವ್ವ. ..

ಪ್ರೊ ವಿಜಯಲಕ್ಷ್ಮಿ ಪುಟ್ಟಿ
ಬೆಳಗಾವಿ

Don`t copy text!