ನಿನ್ನ ನೆರಳು
(ಮಕ್ಕಳ ಕತೆ)
ಒಂದೂರಿನಲ್ಲಿ ಶಂಕರೆಪ್ಪನೆಂಬ ಯಜಮಾನನಿದ್ದ. ಅವನಿಗೆ ಹೆಂಡಿರು ಮಕ್ಕಳೂ ಯಾರೂ ಇರಲಿಲ್ಲ. ಆತನಿಗೆ ಒಂದು ಒಳ್ಳೆಯ ಅಭ್ಯಾಸವಿತ್ತು – ಅದು ” ದಿನವೂ ಶಿವಪೂಜೆ ಮಾಡುವುದು”.
ದಿನವೂ ನಸುಕಿನ ಜಾವ ಏಳುವುದು. ಊರ ಮುಂದಿನ ಹೂಬಳ್ಳಿಗೆ ಹೋಗುವುದು. ಅರಳುವ ಸುಂದರ ಹೂ ಎಲೆ ಆಯ್ದು ಮನೆಗೆ ತರುವುದು. ಮುಂಜಾವಿನ ಸುಪ್ರಭಾತದಲ್ಲಿ ಸ್ನಾನ ಮಾಡಿ ಶಿವ ಪೂಜೆ ಮಾಡುವುದು.ಶಿವಗೆ ಬಗೆ ಬಗೆ
ನಿಮಿರಿದ ಹೂಗಳನ್ನು ಎಲೆಗಳನ್ನೂ ಏರಿಸಿ ಭಕ್ತಿಯಿಂದ ನಮಿಸುವುದು ಅಂದರೆ ಪಂಚ ಪ್ರಾಣವಾಗುತ್ತಿತ್ತು.
ಆದರೆ ಅದಾವದೋ…ಜನ್ಮದ ಶಾಪ ಎಂಬಂತೆ ಶಂಕರಪ್ಪ ದುಡಿಯದ ಆಲಸಿಯಾಗಿದ್ದ. ಹೊಲ ಇದ್ದರೂ ಒಂದು ದಿನವೂ ಹೊಲಕ್ಕೆ ಹೋಗದೇ ಲಾವಣಿ ಕೊಟ್ಟು ಕೈ ತೊಳೆದುಕೊಂಡು ಓಣಿ ಓಣಿ ಅಲೆಯುತ್ತಿದ್ದ. ಹೀಗೆ ಅಲೆಯುತ್ತಿರುವಾಗ ಶಂಕರಪ್ಪನಿಗೆ ದುಷ್ಟ ಗೆಳೆಯರ ಸಹವಾಸವಾಯಿತು. ಆ ಗೆಳೆಯರೋ…ಕಟ್ಟಿಯ ಮ್ಯಾಲ ಕುತಗೊಂಡು ಪಗಟಂಗ ಓದುವ ಗೆಳೆಯರಾಗಿದ್ದರು. ಮನೆಯ ಮುಂದೆ ದುಡಿಯುವ , ಕಲಿತ ಹೆಣ್ಣು ಮಕ್ಕಳು ಮತ್ತು ಉದ್ಯೋಗಸ್ಥ ಮಹಿಳೆಯರು ಹಾದು ಹೋದರೆ ; ಈ ಪುಂಡರು ಅವರನ್ನು ನೋಡಿ ” ಥೂ ” ಎಂದು ಉಗುಳಿ ಮೈ ಉರಿ ಕಡಿಮೆ ಮಾಡಿಕೊಳ್ಳುತ್ತಿದ್ದರು.
ಒಂದು ಸಾರೆ ಶ್ಯಾಸ ” ಶಂಕ್ರಾ….ಶಂಕ್ರಾ….ನೋಡು ಇದನಟ್ಟು ಸೇದು ” ಎಂದು ಸಿಗರೇಟು ಕೊಟ್ಟನು. ಶಂಕರ ಅದರಲ್ಲಿ ಪಿ.ಎಚ.ಡಿ ಮಾಡಿ ಬಿಟ್ಟ. ಶಂಕರಪ್ಪನಿಗೆ ಸೇದಬೇಡ ಕುಡಿಯಬೇಡ ಎನ್ನಲು ಮನೆಯಲ್ಲಿ ಯಾರೂ ಇರಲಿಲ್ಲ ಆತ ಕಣ್ಣಿ ಬಿಚ್ಚಿದ ಗೂಳಿಯಾಗಿದ್ದ. ಕುಡಿದು ಕುಡಿದು ಸೇದಿ ಸೇದಿ ದೇಹ ಕೃಶವಾಗಿ ಕೇವಲ ಎಲುಬು ತೊಗಲು ನಿಂತುಕೊಂಡನು. ವರ್ಷದ ಲಾವಣಿ ದುಡ್ಡು ನಾಲ್ಕೇ ದಿನದಲ್ಲಿ ತೀರಿಹೋಯಿತು.ಹೊಟ್ಟೆಗೆ ಬಟ್ಟೆಗೆ ಅಷ್ಟೇ ಏಕೆ ಒಂದು ಸಿಗರೇಟಿಗೂ ಗತಿ ಇಲ್ಲದಾಯಿತು.ಓಣಿಯಲ್ಲಿ ಈತನಿಗೆ ಯಾರೂ ಒಂದು ಪೈಸೆಯನ್ನು ಕೊಡದಾದರು.
ಶಂಕರಪ್ಪ ಹಸಿವೆಯಿಂದ ನರಳತೊಡಗಿದ.ಕೈಕಾಲುಗಳಲ್ಲಿ ಶಕ್ತಿ ಉಡುಗಿ ನೆಲಕ್ಕೆ ಹೊಟ್ಟೆ ಹಚ್ಚಿ ಮಲಗಿದ. ಈಗ ಅವನಿಗೆ ಕುಡಿತದ ನಸೆಯಾಗಲಿ ಸಿಗರೇಟಿನ ಅಮುಲಾಗಲಿ ಇರಲಿಲ್ಲ. ಗೆಳೆಯರೂ ದೂರಾಗಿದ್ದರು. ಒಬ್ಬರ ಸುಳಿವೂ ಈಗ ಇರಲಿಲ್ಲ. ಆತನ ಮನಸ್ಸು ಹಿಂದಕ್ಕೆ ಓಡಿತು. ” ನಾನು ಅದೆಷ್ಟೋ ಶಿವಪೂಜೆ ಮಾಡಿದರೂ ಶಿವ ಕರುಣೆದೋರಲಿಲ್ಲವಲ್ಲಾ.ನನಗೆ ಈಗ ಗುಟುಕು ಗಂಜಿಗೂ ಗತಿ ಇಲ್ಲದಾಯಿತಲ್ಲಾ.” ಎಂದೆಲ್ಲ ಯೋಚಿಸುತ್ತಿದ್ದ ಅವನಿಗೆ – ಅಶರೀರವಾಣಿಯೊಂದು ಕೇಳಿತು :” ತಮ್ಮಾ, ನೀನೇನೋ…..ಶಿವನನ್ನು ಭಕ್ತಿಯಿಂದ ಪೂಜಿಸಿರುವೆ. ನೀನಿರುವ ತಾಣ ಭೂಮಿ. ಅಲ್ಲಿ ನೀನು ಎಲ್ಲೇ ಹೆಜ್ಜೆ ಇಡು.ಅಲ್ಲಿ ಅವೇ ಹೆಜ್ಜೆಗಳು ಇನಿತು ತಪ್ಪಿಲ್ಲದೇ ನಿನ್ನವುಗಳೇ ಮೂಡುತ್ತವೆ. ಬೇರೆ ಯಾರ ಹೆಜ್ಜೆಗಳೂ ಅವುಗಳಾಗಿರುವುದಿಲ್ಲ. ಅಲ್ಲದೇ ಭೂಮಿಯ ಮೇಲೆ ಇರುವ ಪ್ರತಿಯೊಂದು ವಸ್ತುವೂ ತನ್ನದೇ ನೆರಳ ಬಿಡುತ್ತವೆ. ಅದು ಅವುಗಳ ಸ್ವಭಾವ. ನೆರಳಿಲ್ಲದ ವಸ್ತುಗಳೇ ಅಲ್ಲಿ ಇಲ್ಲ. ವಸ್ತುಗಳುಗೆ ನೆರಳಿಲ್ಲದಿದ್ದರೆ ಅವುಗಳುಗೆ ಅಲ್ಲಿ ಅಸ್ತಿತ್ವವೇ ಇಲ್ಲ. ನೆರಳು ಬಿಡುವುದು ವಸ್ತುವಿನ ಧರ್ಮವಾಗಿದೆ. ಅದರಂತೆ ನಿನಗೂ ನೆರಳು ಇದೆ. ನಿನ್ನ ನೆರಳು ಸ್ವಭಾವತಃ ಒಳ್ಳೆಯದಾಗಿದ್ದರೆ ನಿನ್ನ ನೆರಳೂ ನಿನ್ನ ಹಾಗೇ ಸ್ವಭಾವತಃ ಒಳ್ಳೆಯದಾಗೇ ಮೂಡುತ್ತದೆ. ನಿನಗೂ ನಿನ್ನ ಹೆಜ್ಜೆಗಳಿವೆ. ನಿನ್ನ ಒಳ್ಳೆಯ ಕರ್ಮದ ಹೆಜ್ಜೆಗಳು ನಿನಗೆ ಸುಖ ಶಾಂತಿ ಕೀರ್ತಿಯ ನೆರಳನ್ನು ಬಿಟ್ಟು ನಿನಗೆ ಸುಖ ಕೊಡುತ್ತದೆ. ಅದೇ ನೀನು ಕುಕರ್ಮದ ಹೆಜ್ಜೆಗಳನಿಟ್ಟರೆ .ನಿನ್ನದು ಕರಿನೆರಳು ಬಿಡುತ್ತದೆ. ಅದಕ್ಕೆ ತಮ್ಮಾ… ಸುಖವೋ …ದುಃಖವೋ…..ಆಯ್ಕೆ ನಿನ್ನದು. ಇಲ್ಲಿ ಯಾವ ಅಗೋಚರ ಶಕ್ತಿಯ ಕೈವಾಡವೂ ಇಲ್ಲ. ಎಲ್ಲವೂ ನಿನ್ನಲ್ಲೇ ಅಡಗಿದ ಖಣಿ ನೀನು..” ಎಂದು ಹೇಳಿ ಮೌನವಾಯಿತು. ಶಂಕರಪ್ಪನಿಗೆ ತನ್ನ ತಪ್ಪಿನ ಅರಿವು ಹೊಳೆಯುತ್ತಿದ್ದಂತೆ ಕಣ್ಣುಗಳು ಅವಲವಿಕೆಯಿಂದ ಹೊಳೆದವು. ಮರು ದಿನ ಆತ ಹೊಲದಲ್ಲಿ ಕೆಲಸದಲ್ಲಿ ತೊಡಗಿಕೊಂಡಿದ್ದ.
–ಯಮುನಾ .ಕಂಬಾರ
ರಾಮದುರ್ಗ