ನಮ್ಮೂರ ಜಾತ್ರೆ 

ನಮ್ಮೂರ ಜಾತ್ರೆ

ಶ್ರಾವಣದ ಸ್ವಾಮಾರ
ನಮ್ಮೂರ ಜಾತ್ರೆಯಲಿ
ರಂಗು ರಂಗಿನ ತೇರು .
ನಾಟಕ ತಾಲೀಮು
ಕುಣಿತ ಕುಡಿತ ಜೋರು .
ಒಳಗೆ ಬಸವ ಭಾವದ ಪೂಜೆ.
ಹೊರಗೆ ನಗಾರಿ ಮಜಲು
ಕಾವಿಗಳ ಸಾರೋಟಿಗೆ
ಕುಂಭ ಮೆರವಣಿಗೆ.
ಪುಷ್ಪ ವೃಷ್ಟಿ ಹಾರ ತುರಾಯಿ
ಕುಡಿಯಲು ನೀರಿಲ್ಲ .
ಪಾದ ಪೂಜೆ ಹಣೆ ನಮನ .
ಮಠಕ್ಕೆ ಬಳಿದರು ಬಣ್ಣ ಸುಣ್ಣ
ಊರೆಲ್ಲ ಹೋಳಿಗೆ ಹುಗ್ಗಿ ಅನ್ನ
ಗೊತ್ತಿಲ್ಲದೇ ಹಾಕಿದರು
ಬಡವರ ಮನೆ ಕನ್ನ.
ದೊಡ್ಡವರಿಗೆ ಒಳ ಪಂಕ್ತಿ
ಸಣ್ಣವರಿಗೆ ಹೊರ ಪಂಕ್ತಿ.
ಸರ್ವರಿಗೂ ಸಮ ಬಾಳು
ಸರ್ವರಿಗೂ ಸಮ ಪಾಲು.
ಸಂಜೆ ಕಡಬಿನ ಕಾಳಗ
ತೇರಿಗೆ ಬಿದ್ದ ಬಾಳೆ ತೆಂಗಿಗೆ
ನೂಕು ನುಗ್ಗಲು.
ಏರಿದರು ವೇದಿಕೆ ಕಾವಿ ಖಾದಿ
ಪೊಲೀಸರು ಮಗ್ಗುಲು .
ಮೈಕಾಸುರರ ಕಿರುಚಾಟ
ಬೆದರಿದವು ಕತ್ತೆಗಳು.
ಕತ್ತಲು ಕವಿಯಿತು
ಗೌಡರ ಗದ್ದಲ ತಬಲಾ ಸದ್ದು
ಚಿಮಣಾಳ ಕ್ಯಾಬರೆ ನೃತ್ಯ ಮದ್ದು
ಕುಣಿದು ಕುಪ್ಪಳಿಸಿದರು
ಮಹಿಳೆಯರು ಮಕ್ಕಳು ಮುದುಕರು
ಪಡ್ಡೆ ಹುಡುಗರ ಪೋಲಿ ಗತ್ತು.
ಮಾಡಿ ಮುಗಿಸಿದೆವು ನಮ್ಮೂರ ಜಾತ್ರೆ .

ಡಾ.ಶಶಿಕಾಂತ.ಪಟ್ಟಣ.ಪೂನಾ

Don`t copy text!