ಚಮತ್ಕಾರಿ ಚಾಕ್ಲೇಟು

ನಾನು ಓದಿದ ಪುಸ್ತಕ- ಪುಸ್ತಕ ಪರಿಚಯ

ಚಮತ್ಕಾರಿ ಚಾಕ್ಲೇಟು
— (ಮಕ್ಕಳ ಕಥೆಗಳು)

ಕೃತಿ ಕರ್ತೃ:- ಸೋಮು ಕುದುರಿಹಾಳ

ಮಕ್ಕಳ ಮನಸನ್ನು ಚಮತ್ಕಾರದಿಂದ ನಿಮ್ಮೆಡೆಗೆ‌ ಸೆಳೆದುಕೊಳ್ಳಬೇಕೇ? ಅವರು ಪುಸ್ತಕ ಓದುವ ಹವ್ಯಾಸವಿಲ್ಲದೆ, ಓದಿನಿಂದ ವಿಮುಖರಾಗಿದ್ದಾರೆಯೇ? ಮಕ್ಕಳ ಕಥೆಗಳ ಬಗ್ಗೆ ಆಸಕ್ತಿ, ಕುತೂಹಲ ಇಲ್ಲದೆ ಬೇಸರಪಡುತ್ತಿದ್ದಾರೆಯೇ? ಹಾಗಾದರೆ ಇಲ್ಲಿ ನೋಡಿ, ಇಲ್ಲೊಂದು ಮಕ್ಕಳ ಕಥಾ ಸಂಕಲನವಿದೆ. ಒಟ್ಟು 18 ಕಥೆಗಳನ್ನೊಳಗೊಂಡ ಕೃತಿ, 18 ವಯಸ್ಸಿನ ಮಕ್ಕಳ ಮನಸ್ಸನ್ನೂ ಆಕರ್ಷಿಸಿ ಮೌಲ್ಯಗಳ ಸಾಕ್ಷಾತ್ಕಾರದ ಜೊತೆಗೆ, ಮನೋರಂಜನೆಯನ್ನೂ ಕೊಡುವಂತಹ ಕಥಾ ಸಂಕಲನ. ಕುತೂಹಲಭರಿತ ಕಥಾವಸ್ತುಗಳುಳ್ಳ ಸಂಕಲನ ಇಲ್ಲೊಂದಿದೆ. ಅದ್ಯಾವುದಪ್ಪ ಇಂಥ ಚಮತ್ಕಾರವನ್ನು ಸೃಷ್ಟಿ ಮಾಡಿದ ಕೃತಿ ಅಂದಿರಾ! ಇದೇ ನೋಡಿ; ಆತ್ಮೀಯ ಸೃಜನಶೀಲ, ಪ್ರತಿಭಾನ್ವಿತ ಸಾಹಿತಿ ಶಿಕ್ಷಕರಾದಂತಹ
ಶ್ರೀ ಸೋಮು ಕುದುರಿಹಾಳ ಅವರ ಚೊಚ್ಚಲ ಮಕ್ಕಳ ಕಥಾ ಸಂಕಲನ “ಚಮತ್ಕಾರಿ ಚಾಕ್ಲೇಟು“. ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕಾಗಿ ಅನೇಕ ಚಮತ್ಕಾರಯುತ ಯೋಜನೆಗಳನ್ನು ಹಾಕಿಕೊಳ್ಳುತ್ತ ಅದರಲ್ಲಿ ಯಶಸ್ಸನ್ನು ಗಳಿಸಿ ಮಕ್ಕಳ ಮನಸನ್ನು ತಮ್ಮೆಡೆಗೆ ವಾಲಿಸಿಕೊಂಡ ಕ್ರಿಯಾಶಲ ಶಿಕ್ಷಕರು, ಆ ಮಕ್ಕಳೊಂದಿಗೆ ಒಡನಾಡುತ್ತಲೇ ಅವರಿಗಾಗಿಯೇ ರಚಿಸಿದ ಕಥೆಗಳ ಕೂಡುಕಟ್ಟು ಈ “ಚಮತ್ಕಾರಿ ಚಾಕ್ಲೇಟು”. ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಯೂ ಲಭಿಸಿದ್ದು ಕೃತಿಯ ಮೌಲ್ಯವನ್ನು ಎತ್ತಿ ಹಿಡಿದಿದ್ದು ಕೃತಿಕಾರರ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ….

(ಕತೆಗಾರ-ಸೋಮು ಕುದುರಿಹಾಳ)
ಬಾಲ ಸಾಹಿತ್ಯದಲ್ಲಿ ವಿಶೇಷ ಹೆಸರನ್ನು ಸಂಪಾದಿಸಿದ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕ್ರತರಾದ ಆನಂದ ಪಾಟೀಲರ ಅರ್ಥಪೂರ್ಣ ಮುನ್ನುಡಿಯನ್ನು ಹೊಂದಿದ ಕೃತಿ.. ಚಾಕ್ಲೇಟ್ ನ ಸಿಹಿಯನ್ನು ಓದುಗರಿಗೆ ನೀಡುತ್ತದೆ. ಇಂತಹ ಸಿಹಿಯಾದ ಚಾಕ್ಲೇಟನ್ನು ನಾನು ಸವಿದಷ್ಟು ತಮಗೆ ಹಂಚಲು ಪ್ರಯತ್ನಿಸುತ್ತೇನೆ. ತಾವು ಈ ಬರಹದ ಜೊತೆಗೆ ಪುಸ್ತಕವನ್ನೂ ಓದಿ ಪೂರ್ಣಪ್ರಮಾಣದ ಚಾಕ್ಲೇಟಿನ ರುಚಿಯನ್ನು ಅನುಭವಿಸಿ ಚಕಿತರಾಗಿರಿ.

ತಂತ್ರಜ್ಞಾನ ಎನ್ನುವುದು ಈಗ ದೇಶದ ಕೊನೇ ಹಳ್ಳಿಯ, ಕೊನೇ ಮನೆಯ ಕಟ್ಟಕಡೆಯ ವ್ಯಕ್ತಿಗೂ ತಲುಪಿರುವುದು ತಮಗೆಲ್ಲ ತಿಳಿದಿರುವ ಸತ್ಯ. ಅಂತೆಯೇ ಈ ಡಾಟಾ ಎನ್ನುವುದಕ್ಕೆ ಅಡಿಟ್ ಆದ ಕಾಗಕ್ಕ ಗುಬ್ಬಕ್ಕನ ಕಥೆ ಅತ್ಯಂತ ರೋಮಾಂಚನಕಾರಿಯಾಗಿದ್ದು, ಪಕ್ಷಿಗಳೂ ಸಹ ಈಗಿನ ತಂತ್ರಜ್ಞಾನ ಯುಗಕ್ಕೆ ಅಪ್ಡೇಟೆಡ್ ಆಗ್ತಿವೆ, ಎಂಬುದನ್ನು ಕೃತಿಕಾರರು “ಅಪ್ಡೇಟೆಡ್ ಕಾಗಕ್ಕ ಗುಬ್ಬಕ್ಕ” ಕಥೆಯ ಮೂಲಕ ಓದುಗನನ್ನು ಚಕಿತಗೊಳಿಸುತ್ತಾರೆ.

ಅನಾದಿ ಕಾಲದಿಂದಲೂ ಅಹಂಕಾರ ಎನ್ನುವುದು ಮಾನವನ ಸ್ವತ್ತಾಗಿದೆ. ನಾನೇ ಹೆಚ್ಚು ಇತರರು ನನಗಿಂತ ಕನಿಷ್ಟರು ಎಂಬ ಜಗಳ‌ ದೇವತೆಗಳಲ್ಲೂ ನಡೆದುದನ್ನು ನಾವು ಕೇಳಿದ್ದೇವೆ, ಓದಿಯೂ ತಿಳಿದುಕೊಂಡಿದ್ದೇವೆ. ಇದನ್ನು ಹೇಳ ಹೊರಟರೆ ಅದು ಮಕ್ಕಳ ಕಥೆಯಾಗುತ್ತದೆಯೇ? ಇಲ್ಲ ಅಲ್ವಾ… ಅದಕ್ಕೆ ನಮ್ಮ ಮಕ್ಕಳ ಮನಸನ್ನು ಅರಿತ ಸಾಹಿತಿಗಳಾದ ಸೋಮು ಕುದುರಿಹಾಳ ಅವರು, ಮಕ್ಕಳು ಬಳಸುವಂತಹ ಜ್ಯಾಮಿತಿ ಪೆಟ್ಟಿಗೆಯಲ್ಲಿನ ವಸ್ತುಗಳ ನಡುವೆ ಹೆಚ್ಚು ಕಡಿಮೆಯ ವಾಗ್ವಾದ ಸೃಷ್ಟಿಸಿ; ಕೊನಗೆ ತಮ್ಮ ಅಹಂಕಾರ ಮುರಿದುಕೊಂಡು ನಾವೆಲ್ಲರೂ ಒಂದೆ, ಎಲ್ಲರೂ ಆಯಾ ಸಂದರ್ಭಕ್ಕೆ ಉಪಯೋಗಿಸಲ್ಪಡುವವರು ಎಂದು ಸಂಧಾನಕ್ಕೆ ಬರುವಂತಹ ಕಥೆ “ಯಾರು ಹೆಚ್ಚು”. ಈ ಕಥೆ ಮಕ್ಕಳನ್ನು ತುಂಬಾ ಆಕರ್ಷಿಸುತ್ತದೆ.

ಕೇವಲ ಪುಸ್ತಕ ಓದು, ಅದರಿಂದ ಬರುವ ಶೈಕ್ಷಣಿಕ ಜ್ಞಾನ ಅಷ್ಟೇ ಮುಖ್ಯವಲ್ಲ. ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು, ಸಹಾಯ ಮತ್ತು ಸಹಕಾರ ಮನೋಬುದ್ಧಿಯನ್ನು ಬೆಳೆಸಿಕೊಳ್ಳಬೇಕು. ಇಂತಹ ಮನೋಭಾವವನ್ನು ಹೊಂದಿದ ತಿಮ್ಮ, ಓದಿನಲ್ಲಿ ಹಿಂದಿದ್ದರೂ ಪರೋಪಕಾರಿಯಾಗಿ ತನ್ನ ಬದುಕನ್ನು ಸದುಪಯೋಗಪಡಿಸಿಕೊಳ್ಳುವ ಕಥೆ “ತಿಮ್ಮನ ಸಾಲ” ಅಮೋಘವಾಗಿದೆ. ಆದರ್ಶವೂ ಆಗಿದೆ.

ಪ್ರತಿಭೆ ಎನ್ನುವುದು ಮಕ್ಕಳಲ್ಲಿ ಸುಪ್ತವಾಗಿ ಅಡಗಿರುತ್ತದೆ. ಅದನ್ನು ಹೊರಹಾಕುವಲ್ಲಿ ಪ್ರಯತ್ನಿಸುವ ಮಕ್ಕಳಿಗೆ ಒಂದು ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕಾದ ಕರ್ತವ್ಯ ಸುತ್ತಲಿನ ಸಮಾಜದ ಎಲ್ಲ ಗುರು ಹಿರಿಯರದ್ದು ಎನ್ನುವುದನ್ನೇ ಆಧಾರವಾಗಿಟ್ಟುಕೊಂಡು; ಹೇಗೆ ಒಂದು ಕಥೆ ಕಟ್ಟಬಹುದು ಎಂಬುದು ಸೋಮು ಅವರ “ಚಮತ್ಕಾರಿ ಚಾಕ್ಲೇಟು” ಓದಿದರೆ ನಮಗೆ ತಿಳಿದುಬಿಡುತ್ತದೆ. ಕೇವಲ ಒಂದು ಸಾಮಾನ್ಯ ಚಾಕ್ಲೇಟು ಹುಡುಗನ ಮನೋಬಲವನ್ನು ಹೆಚ್ಚಿಸುವಲ್ಲಿ ಅದ್ಭುತವಾದ ಚಮತ್ಕಾರವನ್ನು ಮಾಡಿ ಓಟದ ಸ್ಪರ್ಧೆಯಲ್ಲಿ ಗೆಲ್ಲುವಂತೆ ಮಾಡಿದ ಕಥೆ. ಈ ಕಥೆಯನ್ನು ವರ್ಣಿಸಲು ಪದಗಳೇ ಇಲ್ಲವೆನಿಸುತ್ತದೆ. ನಿಜಕ್ಕೂ ರೋಮಾಂಚನಕಾರಿ ಅನುಭವ ನೀಡುವ ಕಥೆ ಅದ್ಭುತವಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ, ಸ್ವಾಂತಂತ್ರ್ಯ ಪಡೆಯುವ ಕಿಚ್ಚು ಎಷ್ಟರ ಮಟ್ಟಿಗೆ ಚಿಕ್ಕ ವಯಸ್ಸಿನವರಲ್ಲಿಯೂ ಇತ್ತು ಎನ್ನುವುದನ್ನು ನಾವು ಹುಬ್ಬಳ್ಳಿಯ ಹುತಾತ್ಮ ಬಾಲಕ ನಾರಾಯಣನ ವೀರ ಕಥೆ ಕೇಳಿದರೆ ತಿಳಿಯುತ್ತದೆ. ಅಂತಹುದೇ‌ ವೀರ ಬಾಲಕನ ಮೈ ನವಿರೇಳಿಸುವಂತಹ ದೇಶಭಕ್ತಿಯ ಕಥೆಯನ್ನು ಕೃತಿಕಾರರು “ಅನಾಮಧೇಯ ದೇಶಭಕ್ತ” ಕಥೆಯಲ್ಲಿ ಅದ್ಭುತವಾಗಿ ಬರೆದಿದ್ದಾರೆ. ಕಥೆ ಓದಿ ಮುಗಿಸುವ ಹೊತ್ತಿಗೆ ಗದ್ಗದಿತರಾಗಿಬೀಡುತ್ತೇವೆ. ಇಂತಹ ಅನೇಕ ಅನಾಮಧೇಯ ದೇಶಭಕ್ತರ ಪರಿಚಯವನ್ನು ಕೃತಿಕಾರರು ಮಾಡುತ್ತಿರುವುದು ಶ್ಲಾಘನೀಯವೆನಿಸುತ್ತದೆ.

ಪ್ರತಿನಿತ್ಯ ಹೊಸ ಸುದ್ದಿಯನ್ನು ಕೇಳಲೇ ಬೇಕೆಂಬ ಸಾವ್ಕಾರ ಸಿದ್ದಪ್ಪನಿಗೆ, ಚೆನ್ನ ಎಂಬ ಯುವಕ ಬೆವರಿಳಸಿದ ಕಥೆ ಮಕ್ಕಳನ್ನು ಆಕರ್ಷಿಸುತ್ತದೆ. ಮುಂದೇನು ಎಂಬ ಕುತೂಹಲವನ್ನು ಕೃತಿಕಾರರು ಕಥಾಂತ್ಯದವರೆಗೂ ಕಾಯ್ದಿರಿಸಿ ಮಕ್ಕಳ ಮನಸನ್ನು ಗೆದ್ದಿದ್ದಾರೆ. ಕೃತಿಕಾರರು; ಊರಿನ ಹೆಸರಿಗೆ(ವಿಚಿತ್ರಾಪುರ) ತಕ್ಕಂತೆ ಸಾವ್ಕಾರ ಸಿದ್ದಪ್ಪನ ವ್ಯಕ್ತಿತ್ವವನ್ನು ವಿಚಿತ್ರವಾಗಿರಿಸಿರುವುದು ಗಮನಿಸಬೇಕಾದ ಅಂಶ…

ಮಕ್ಕಳ ಮನಸು ಯಾವತ್ತಿಗೂ, ಬೆಟ್ಟ-ಗುಡ್ಡ, ಕಾಡು, ಪ್ರಾಣಿ – ಪಕ್ಷಿಗಳ ಸುತ್ತ ಸುತ್ತುತ್ತಿರುತ್ತದೆ‌. ಮಕ್ಕಳ ಈ ಮನಸನ್ನು ಶಿಕ್ಷಕರಾಗಿ ಸಹಜವಾಗಿಯೇ ಅರಿತ ಸ್ನೇಹಿತ ಸೋಮು ಅವರು “ಗೂಢಾಚಾರಿ ನರಿ” ಎಂಬ ಪ್ರಾಣಿಗಳ ಕುರಿತಾದ ಕಥೆ ಬರೆಯುತ್ತಾ ಮಾನವನ ಸಣ್ಣತನವನ್ನೂ, ಮನುಷ್ಯ ಯಾವತ್ತಿಗೂ ತನ್ನ ಕುಟಿಲ ಬುದ್ಧಿಯನ್ನು ಬಿಡುವುದಿಲ್ಲ ಕಡೆಗೆ ಅನ್ಯೋನ್ಯವಾಗಿದ್ದ ಕಾಡು ಪ್ರಾಣಿಗಳ ನಡುವೆಯೂ ತನ್ನ ಶಕುನಿ ಬುದ್ಧಿಯನ್ನು ತೋರಿ ಜಗಳಕ್ಕೆ ದಾರಿ ಮಾಡಿಕೊಟ್ಟಿದ್ದನ್ನು ಮಾರ್ಮಿವಾಗಿ ತಿಳಿಸಿ ಮಕ್ಕಳಿಗೆ ಮೌಲ್ಯಯುತ ಬದುಕಿನ ದಾರಿಯನ್ನು ತೋರಿಸಿದ್ದಾರೆ.

ಅಂತೆಯೇ ಕೃತಿಕಾರರು ಸಂಗ ದೋಷದಿಂದ ಹೇಗೆ ಒಳ್ಳೆಯತನ ಕೆಡುಕು ಬುದ್ಧಿಗೆ ತಿರುಗುತ್ತದೆ. ಚಟುವಟಿಕೆಯಿಂದಿರುವವರು ಹೇಗೆ ಸೋಮಾರಿಗಳಾಗಿ ಬದಲಾಗುತ್ತಾರೆಂಬುದನ್ನು ಉತ್ತಮವಾಗಿ‌ “ಸಂಗ ದೋಷ” ಕಥೆಯಲ್ಲಿ ನಿರೂಪಿಸಿದ್ದಾರೆ.

ಕಾಡಜ್ಜನ ಕಾಡು ಕಥೆಯಲ್ಲಿ, ಮರಗಳ ಸಂಭಾಷಣೆ, ಅವುಗಳನ್ನು ಕಡಿಯ ಹೊರಟ ಕಾಡಜ್ಜನಿಗೆ ಕಡಿಯದಿರಲು ಬೇಡುವ ಪರಿ… ಇದನ್ನೆಲ್ಲ ಕಂಡ ಕಾಡಜ್ಜ ತನ್ನ ಗುಡಿಸಲಿನ ಬಿದಿರು ಗಳಗಳನ್ನೇ ಮಾರಿ ಬದುಕು ಸಾಗಿಸಲು ಹೊರಟ ಪರಿ… ಮಾದರಿಯಾಗಿದೆ. ಪ್ರಸ್ತುತ ಮಕ್ಕಳಿಗೆ ಇಂತಹ ಕಥೆಗಳನ್ನು ಹೇಳುವುದು ಅವಶ್ಯಕವೂ ಆಗಿದೆ.

ವ್ಯಾಪಾರದ ಸಮಯದಲ್ಲಿ ಆದ ತಪ್ಪು ತಿಳುವಳಿಕೆಯನ್ನು ಸರಿಪಡಿಸುವಲ್ಲಿ ರೋಸಿ ನಾಮಾಂಕಿತ ಬಾಲಕಿ ತೋರಿದ ಜಾಣ್ಮೆ ಮಕ್ಕಳಿಗೆ ಇಷ್ಟವಾಗುತ್ತದೆ. ಅಲ್ಲದೆ ಪ್ರಾಮಾಣಿಕತೆ ಇದ್ದರೆ ನ್ಯಾಯ‌ ನಮ್ಮ ಕಡೆಯೇ ಇರುತ್ತದೆ ಎಂದು ಸಾರುವ ಕಥೆ ವಿಶೇಷ ಕಲ್ಪನೆಯೊಂದಿಗೆ ಮೂಡಿಬಂದಿದೆ.

ಜನರಲ್ಲಿ ಇರುವ ಮೂಢ ನಂಬಿಕೆಗಳನ್ನು ತೆಗೆಯಲು ಹುಟ್ಟಿಕೊಂಡ ಕಥೆಗಳು, “ಕಾಲಜ್ಞಾನಿ” ಮತ್ತು “ರಾಮಣ್ಣನ ಬಾಳೆತೋಟ”. ಕೆಲವೊಮ್ಮೆ ಕಾಕತಾಳೀಯವಾಗಿ ನಡೆಯುವ ಘಟನೆಗಳನ್ನು ವೈಜ್ಞಾನಿಕ ಭಾವದಿಂದ ಯೋಚಿಸದ ಮಾನವರು ಮೌಢ್ಯಕ್ಕೆ ಬಲಿಯಾಗುತ್ತಾನೆ. ಅಂತಹ ವಿಷಯ ವಸ್ತುವನ್ನು ಆಯ್ದು ಮಕ್ಕಳ ಮನಸಿಗೆ‌ ಹಿಡಿಸುವಂತಹ ಸನ್ನಿವೇಶಗಳನ್ನು ಹೆಣೆದು ಅತ್ಯುತ್ತಮವಾಗಿ‌ ನೀರೂಪಿತವಾದ‌ ಕಥೆಗಳು ಇಷ್ಟವಾಗುತ್ತವೆ.

ಅತಿಯಾಗಿ ಚೆಲ್ಲಾಟವಾಡಿ ತನ್ನ ಬಳಗವನ್ನೆಲ್ಲ ತೋಳಗಳ ಬಾಯಿಗೆ ಆಹಾರವಾಗಿಸ ಹೊರಟ ಟಗರಿನ ಕಥೆ, ತನ್ನ ರಾಜ ಧರ್ಮವನ್ನು ಮರೆತ ಸಿಂಹದ ಕಥೆ‌ ಉತ್ತಮವಾಗಿದ್ದು ಕುತೂಹಲದ ಕಥೆಗಳೆನಿಸುತ್ತವೆ.

ಒಳ್ಳೆಯ ಮನಸ್ಸಿದ್ದರೆ ಒಳ್ಳೆಯದೇ ಆಗುತ್ತದೆ, ಮತ್ತು ದುರುಳ‌ ಆಲೋಚನೆ ಮನಸಲ್ಲಿ ಹೊಕ್ಕರೆ ತಕ್ಷಣವೇ ಅದರ ಪರಿಣಾಮ ವ್ಯತಿರಿಕ್ತವಾಗಿರುತ್ತದೆ ಎಂಬುದನ್ನು ರಾಜ ಮತ್ತು ಅಜ್ಜಿಯನ್ನು ಬಳಸಿಕೊಂಡು ಕೃತಿಕಾರರು ಮಕ್ಕಳ ಮೇಲೆ ಪರಿಣಾಮ ಬೀರುವಂತೆ “ಮನಸ್ಸಿನಂತೆ ಫಲ” ಕಥೆಯಲ್ಲಿ ಸೊಗಸಾಗಿ ಅರ್ಥೈಸಿದ್ದಾರೆ.

ಮಗುವಿನ ಬಾಲಭಾಷೆ, ತೊದಲ್ನುಡಿ ಎಷ್ಟು ಹಿತ ಎನಿಸುತ್ತದೆ ಎಂಬುದನ್ನು “ಮಾಮ.. ಗಿಲಿಮಇ ಎಲ್ಲಿ” ಕಥೆಯಲ್ಲಿ ಸೊಗಸಾಗಿ ಚಿತ್ರಿಸಿದ್ದು ಖುಷಿ ಕೊಡುತ್ತದೆ.

ಹೀಗೆ ಕೃತಿಯ ಅಷ್ಟೂ ಕಥೆಗಳು ವಿಭಿನ್ನವಾಗಿದ್ದು ಮಕ್ಕಳಿಗೆ ಮನೋರಂಜನೆಯ ಜೊತೆಗೆ ಮೌಲ್ಯವನ್ನು ತಿಳಿಸುವಲ್ಲಿ ಗೆದ್ದಿವೆ. ಕೃತಿಯನ್ನು ಓದಲು ಪ್ರಾರಂಭಿಸಿದರೆ ಮನಸು ಚಂಚಲವಾಗದೆ ಒಂದೇ ಓದಿನಲ್ಲಿ, ಇಡೀ ಕೃತಿಯನ್ನು ಓದಿ ಮುಗಿಸಿ ಬಿಡುವಷ್ಟು ಕಥೆಗಳು ನಮ್ಮನ್ನು ಕಟ್ಟಿ ಹಿಡಿಯುತ್ತವೆ. ಕಥೆಗಳ ನಿರೂಪಣಾ ಶೈಲಿ, ಕಥೆ ಕಟ್ಟುವ ಬಗೆ, ಪಾತ್ರಗಳ ಸಂಭಾಷಣೆ ತುಂಬಾ ಉತ್ತಮವಾಗಿದ್ದು, ಉತ್ತಮ ಮಕ್ಕಳ ಕಥಾ ಸಂಕಲನವಾಗಿದೆ ಎಂಬುದು ಸಂತೋಷದ ವಿಷಯ. ಹೀಗೆ ಶಿಕ್ಷಕ ಮಿತ್ರ ಸೋಮು ಕುದರಿಹಾಳ ಅವದಿಂದ ಮತ್ತಷ್ಟು ಮಕ್ಕಳ ಸಾಹಿತ್ಯದ ರಚನೆಗಳು ಮಕ್ಕಳ ಮತ್ತು ಸಾಹಿತ್ಯಾಸಕ್ತರ ಓದಿಗೆ‌ಸಿಗಲೆಂಬ ಆಶಯದೊಂದಿಗೆ ನನ್ನ ಅನಿಸಿಕೆಗೆ ವಿರಾಮ ನೀಡುತ್ತೇನೆ.

– ವರದೇಂದ್ರ ಕೆ ಮಸ್ಕಿ
9945253030

ಪುಸ್ತಕಕ್ಕಾಗಿ ಸಂಪರ್ಕಿಸಿ
– ಸೋಮು ಕುದರಿಹಾಳ
9035981798

Don`t copy text!