ನನ್ನ ಕವನ
ಅಜೀರ್ಣವಾದಾಗ ಡೇಗೊಂದು
ಹೊರಹಾಕಿ ನಿರಾಳವಾದಂತೆ
ನೀರಲ್ಲಿ ನೆನೆದ ಸ್ಪಂಜಿನಿಂದ
ನೀರ ಹನಿ ತೊಟ್ಟಿಕ್ಕುವಂತೆ
ನನ್ನ ಕವನ….
ಭಾವೋನ್ಮಾದ ತಾಳದೇ ಹೃದಯ
ಭಾವನೆಗಳ ಹರಿದು ಎಸೆದಂತೆ
ಬಿರುಗಾಳಿಗೆ ಮರದ ಎಲೆಗಳು
ಗಾಳಿಗೆ ತೂರಿದಂತೆ
ನನ್ನ ಕವನ….
ದುಖಃ ತಪ್ತ ಮನದ ಭಾವಗಳು
ಪದಗಳಾಗಿ ಉರುಳಿದಂತೆ
ಆಳವಾದ ಸಾಗರದ ಮೇಲೆ
ಹಾಯಿ ಹಡಗು ತೇಲಿದಂತೆ
ನನ್ನ ಕವನ….
ಪ್ರಖರವಾದ ಬಿಸಿಲ ಕುಡಿದು
ಮಸೂರ ಉಗುಳಿದ ಕಿರಣದಂತೆ
ಅಂತರಂಗದ ಮೌನ ಮುರಿದು
ಹರಿಯುವಾಗ ಧುಮುಕುವ ಭಾವಗಳ ಅಭಿವ್ಯಕ್ತಿ ನನ್ನ ಕವನ…
–ಪ್ರೊ. ರಾಜನಂದಾ ಘಾರ್ಗಿ
ಬೆಳಗಾವಿ