ಗಜಲ್
ಕನಸಿಗೆ ರೆಕ್ಕೆಗಳ ಅಂಟಿಸಿ ಕಳಿಸಿರುವೆ ಅವನ ಹುಡುಕಲು
ಕಾಡಿನ ತುಂಬ ಮಿಂಚುಹುಳು ಬಿಟ್ಟಿರುವೆ ಅವನ ಹುಡುಕಲು
ಒಲವಿನ ಮಂಜಲಿ ನೆನೆದು ನಡುಗುವ ತನು ಬಯಸಿದೆ ಕಾವು
ನೆನೆವ ಹುಚ್ಚು ಮನಕೆ ಮದಿರೆ ಕುಡಿಸಿರುವೆ ಅವನ ಹುಡುಕಲು
ಸಪ್ತಪದಿಯ ಹೆಜ್ಜೆ ಗುರುತುಗಳು ಎಲ್ಲಿ ಮಾಯವಾದವು
ತೇಲಾಡುವ ಮೋಡಗಳಿಗೆ ಹೇಳಿರುವೆ ಅವನ ಹುಡುಕಲು
ಮೂರು ಗಂಟಿನ ಸಂಬಂಧ ಸಡಿಲವಾಗಿದೆಂಬ ಭ್ರಮೆ
ಸೂತ್ರ ಕಟ್ಟಿ ಪತಂಗವ ಹಾರಿಸಿರುವೆ ಅವನ ಹುಡುಕಲು
ಬಿಕ್ಕುವ ಹೃದಯಕೆ ಒಳ”ಪ್ರಭೆ”ಯು ಸಮಾಧಾನಿಸ ಬೇಕು
ಪ್ರೀತಿಯ ಸಾಲು ದೀಪಗಳ ಹಚ್ಚಿರುವೆ ಇವನ ಹುಡುಕಲು
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ