ಹೋಗಿ ಬಾರಯ್ಯ ರಂಗ ಸರದಾರ

 

ಮಸ್ಕಾರ, 

ಹೋಗಿ ಬಾರಯ್ಯ ರಂಗ ಸರದಾರ

ಕಳೆದೆರಡು ವರುಷಗಳಿಂದ ಗೆಳೆಯ ಗುಡಿಹಳ್ಳಿ ನಾಗರಾಜ ಹಾಸಿಗೆ ಹಿಡಿದಿದ್ದ. ತನಗೆ ಅಮರಿಕೊಂಡ ಜಡ್ಡು ನೆಟ್ಟಗಾಗದ ಕಾಡುಚಿಂತೆ ಅವನನ್ನು ಹರಿಗಡಿಯದೇ ಕಾಡುತಿತ್ತು. ವಾರಕೊಮ್ಮೆ ನನಗೆ ಫೋನ್ ಮಾಡಿ ತನಗಾಗುತ್ತಿರುವ ಮನೋದೈಹಿಕ ಬಾಧೆಗಳು, ಅವುಗಳ ನಿವಾರಣೆ ವಿಧಾನಗಳ ಕುರಿತು ಕೊಂಚ ಭುಗಿಲಾಗುತ್ತಿದ್ದ.

“ನಾನು ಆರಾಮಾಗ್ತೀನೇನಪ” ಅಂತ ಆತ ಕೇಳುವುದು ವಾಡಿಕೆಯಾಗಿ ಹೋಗಿತ್ತು. ಆರೋಗ್ಯ ಇಲಾಖೆಯ ನನ್ನ ಪ್ಯಾರಾ ಮೆಡಿಕಲ್ ಪ್ರೊಫೆಷನ್ ಅನುಭವದ ಹಿನ್ನೆಲೆಯಲ್ಲಿ ಅವನಿಗೆ ನನ್ನಿಂದ ಸೂಕ್ತ ಆಪ್ತ ಸಮಾಲೋಚನೆ ಸಿಗುತ್ತದೆಂಬ ಅಪಾರ ಆತ್ಮವಿಶ್ವಾಸ ಅವನದು. ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ತೀರ ಇತ್ತೀಚಿಗೆ ಹಸುಗೂಸಿನಂತೆ ಪೂರ್ತಿ ಮೆತ್ತಗಾಗಿದ್ದ. ಅದರಲ್ಲೂ ಎರಡು ವಾರಗಳ ಈಚೆಗಂತೂ ಅವನ ಸ್ಥಿತಿ ಘನಗಂಭೀರವಾಗಿತ್ತು.

ಗಂಟಿ ಚೌಡಿಯಂತೆ ಗಂಟುಬಿದ್ದ ಯಕೃತ್ತಿನ ಕ್ಯಾನ್ಸರ್ ನಾಲ್ಕನೇ ಹಂತ ದಾಟಿ ಮುನ್ನಡೆದಿತ್ತು. ಬೆಂಗಳೂರಿನ ಮಲ್ಯ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಯ ಎಲ್ಲ ಚಿಕಿತ್ಸೆಗಳು ಮುಗಿದಿದ್ದವು. ಅದೇನೋ ಆರುಲಕ್ಷ ರುಪಾಯಿಯ ಒಂದು ಇಂಜೆಕ್ಷನ್ ನೀಡಿದರೆ ವಾರವೊಪ್ಪತ್ತು ಸಾವಿನ ಅವಧಿ ಮುಂದೂಡಬಹುದೆಂಬ ಅತ್ಯಾಧುನಿಕ ವೈದ್ಯಕೀಯ ಸಲಹೆಗಳು ನಿರುಪಯುಕ್ತ ಅನಿಸಿದವು. ಅವನ ಪ್ರಾಣಕ್ಕಂಟಿದ ಕ್ಯಾನ್ಸರ್ ಕಾಯಿಲೆಯ ಸುಳಿವು ಅವನ ಕಿವಿಬಳಿ ಸುಳಿಯದಂತೆ ನೋಡಿಕೊಳ್ಳಲಾಗಿತ್ತು.

ಗುಡಿಹಳ್ಳಿ ತನ್ನ ವಿಶ್ರಾಂತ ಜೀವನದಲ್ಲಿ ಹೊರಡಿಸುತ್ತಿದ್ದ *ರಂಗನೇಪಥ್ಯ* ನಿಯತಕಾಲಿಕದ ಮೂಲಕ ಹೆಚ್ಚು ಜೀವಂತವಾಗಿರುತ್ತಿದ್ದ. ಅಷ್ಟಕ್ಕೂ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ತಾನು ಕಷ್ಟಪಟ್ಟು ಕಟ್ಟಿಸಿದ್ದ ಮನೆಗೆ ‘ನೇಪಥ್ಯ’ ಎಂದೇ ಹೆಸರಿಟ್ಟಿದ್ದ.

ಆಗಾಗ ನನ್ನಿಂದ ಲೇಖನಗಳನ್ನು ಬರೆಯಿಸಿ ತನ್ನ ‘ನೇಪಥ್ಯ’ ಮಾಸಿಕದಲ್ಲಿ ಪ್ರಕಟಿಸುತ್ತಿದ್ದ. ಕಳೆದ ಜೂನ್ ಸಂಚಿಕೆಗೆ ತನ್ನಿಂದಲೇ ತನ್ನ ಸಂಪಾದಕೀಯ ಟೈಪ್ ಮಾಡಲಾಗುತ್ತಿಲ್ಲ. ನೀನೇ ಅದನ್ನು ಟೈಪ್ ಮಾಡಿ ಉಷಾ ಗ್ರಾಫಿಕ್ ಧನಂಜಯಗೆ ಕಳಿಸು ಅಂತ ಒಂದಿನ ಕ್ಷೀಣ ಸ್ವರದಲ್ಲಿ ಅಲವತ್ತುಗೊಂಡ. ಅದನ್ನವನು ಕಚಿಬಿಚಿಯಾಗಿ ಬರೆದು ಮಗನಿಂದ ನನ್ನ ವಾಟ್ಸ್ಯಾಪ್ಗೆ ಕಳಿಸಿದ್ದ.

ಟೈಪಿಸಲಾಗದ ಅವನು ತನ್ನ ಕೈಯಿಂದ ಬರೆದ ಸಂಪಾದಕೀಯದ ಕೊನೆಯ ಅಕ್ಷರಗಳನ್ನು ಅದೇಕೋ ನನಗೆ ಜತನವಾಗಿಡಬೇಕೆನಿಸಿತು. ಸಣ್ಣಪತ್ರಿಕೆಗಳು ಅದರಲ್ಲೂ ತನ್ನ ರಂಗನೇಪಥ್ಯದ ಸಂಕಟಗಳನ್ನು ತೋಡಿಕೊಂಡಿದ್ದ. ಸಂಪಾದಕೀಯದ ಕೊನೆಗೆ “*ಮುಂದಿನ ದಿನಗಳು ಹೇಗೆ*” ಎಂಬ ಕಡೆಯ ವಾಕ್ಯದ ಅವನ ಕಡೆಯ ಅಕ್ಷರಗಳವು. ಅದಾದ ಕೆಲ ದಿನಗಳಲ್ಲಿ ನನಗೆ ಫೋನ್ ಮಾಡಿದ. ಮತ್ತದೇ ಸೊರಗಿದ ಸ್ವರದಲ್ಲಿ ನೇಪಥ್ಯದ ಪೂರ್ಣ ಜವಾಬ್ದಾರಿ ನೀನೇ ನೋಡಿಕೋ. ಈ ಬಾರಿ ನೀನೇ ಸಂಪಾದಕೀಯ ಬರಿ. ಅದಕ್ಕೆ ನಿನ್ನ ಹೆಸರೂ ಇರಲಿ ಅಂದ.

ಅವನು ಸೆರಗೊಡ್ಡಿದಂತೆ ಫೋನಲ್ಲಿ ಮಾತಾಡುವುದು ಕೇಳಿಯೇ ನನ್ನ ಅಂತಃಕರಣ ಕರಗಿ ನೀರಾಯಿತು. ನಾನು ತಾಬಡ ತೋಬಡ ಅನ್ನುವಂತೆ ಸಂಪಾದಕೀಯ ಬರೆಯಲು ಕುಂತರೆ ಅದರ ಹಿಂದಿನ ತಿಂಗಳು ಅವನೇ ಬರೆದ ಸಂಪಾದಕೀಯದ ”ಮುಂದಿನ ದಿನಗಳು ಹೇಗೆಂಬ” ಆ ಸಾಲು ಎಡಬಿಡದೇ ನನ್ನನ್ನು ಕಾಡತೊಡಗಿತು. ಅದೇ ಸಾಲಿನ ಜಾಡು ಹಿಡಿದು ಭಾರದ ಮನಸಿನಿಂದ, ಥೇಟ್ ಅವನೇ ಬರೆದಂತೆ ಅವನ ಹೆಸರಲ್ಲೇ ರಂಗನೇಪಥ್ಯದ ಸಂಪಾದಕೀಯ ಬರೆದು ಕಳಿಸಿದೆ. ದುರಿತಕಾಲದ ಅವನ ದುಸ್ತರ ದಿನಗಳ ಯಮಯಾತನೆಗಳು ಅವನನ್ನು ಘೋರವಾಗಿ ಕಾಡಿದ್ದವು. ಹೇಳಲಾಗದ ಹೇಳದಿರಲಾಗದ ತೊಳಲಾಟವದು.

ಧಾರವಾಡದ ಮಿತ್ರ ಗಣೇಶ ಜೋಷಿ ಸಿದ್ಧಮಾಡಿ ಕಳಿಸಿದ ‘ಅಭಿನಯ ಭಾರತಿ’ ಕುರಿತ ಲೇಖನ, ಹೊರೆಯಾಲ ದೊರೆಸ್ವಾಮಿ ಲೇಖನ, ಅದರಂಗಿ ಲೇಖನ, ಜತೆಗೆ ನನ್ನದೊಂದು ಅಗ್ರ ಲೇಖನ. ಹೀಗೆ ಜುಲೈ ಸಂಚಿಕೆ ತುಂಬುವಷ್ಟು ಸಾಹಿತ್ಯ ದೊರಕಿತು. ಪುಟಗಳ ಹೊಂದಾಣಿಕೆಯಲ್ಲಿ ಹೊರೆಯಾಲರ ಲೇಖನ ಆಗಸ್ಟ್‌ ಸಂಚಿಕೆಗೆ ಮುಂದೂಡುವುದಾಗಿ ರುದ್ರೇಶ ಮತ್ತು ಮುದ್ರಣದ ಉಸ್ತುವಾರಿ ವಹಿಸಿಕೊಂಡಿದ್ದ ಧನಂಜಯರಿಂದ ತಿಳಿದು ಬಂತು.

ರಂಗನೇಪಥ್ಯದ ಜುಲೈ (೨೦೨೧) ಸಂಚಿಕೆ ಪ್ರಕಟವಾಗಿ ನಾಗಣ್ಣನ ಕೈ ಸೇರಿ ಅತ್ಯಂತ ಖುಷಿಪಟ್ಟು ನನಗೆ ಫೋನಾಯಿಸಿದ. “ಥ್ಯಾಂಕ್ಸ್ ಮಲ್ಲಣ್ಣ” ಅಂತ ಚುಟುಕಾಗಿ ಮಾತಾಡಿದ. ಯಾಕೆಂದರೆ ಸಂಚಿಕೆಯಲ್ಲಿ ಅವನಿಗೆ ಪ್ರಿಯವಾದ “ವರ್ತಮಾನದ ವೃತ್ತಿ ರಂಗಭೂಮಿಯ ಸಾಂಸ್ಕೃತಿಕ ಬಿಕ್ಕಟ್ಟುಗಳು” ಎಂಬ ನನ್ನ ಅಗ್ರ ಲೇಖನವಿತ್ತು. ಅದರ ಮೇಲೆ ಕಣ್ಣಾಡಿಸಿ ಒಳಗೊಳಗೆ ಖುಷಿಪಟ್ಟಂತಿತ್ತು.

ಅಷ್ಟೊತ್ತಿಗಾಗಲೇ ಓದಲಾಗದ ಅರೆ ಪ್ರಜ್ಞೆಯ ಹಂತ ತಲುಪಿದ್ದ. ಆದರೆ ಮಾತುಗಳು ನಿಂತಿರಲಿಲ್ಲ. ಹಾಗೆ ಮಾತಾಡುವಾಗಲೂ ತಾನು ಮೊದಲಿನಂತೆ ಆರಾಮಾಗ್ತೀನಾ ? ಅಂತ ದೈನ್ಯತೆ ತುಂಬಿಕೊಂಡು ಕೇಳುವುದನ್ನು ಮರೆಯಲಿಲ್ಲ. ನನಗೇಕೋ ಸಮಜಾಯಿಷಿಯ ಯಾವ ಮಾತು ಹೇಳಬೇಕೆಂದು ಹೊಳೆಯಲಿಲ್ಲ. ದದ್ರ್ ಬದ್ರ ಬಿದ್ದಂಗಾತು.‌ ಅಂಥದರಲ್ಲೂ ಮರುಕ ಮರೆತು ಎಂದಿನಂತೆ ಅವನಿಗೆ ಧೈರ್ಯ ತುಂಬುವ ಮಾತುಗಳನ್ನೇ ಹೇಳಿದೆ. ಪ್ರಾಯಶಃ ಅವು ಅನುಭೂತಿಯ ಮಾತುಗಳೆಂಬುದು ಅವನಿಗೂ ಸಂದೇಹ ಬಂದಿರಬಹುದು.

ಹೌದು ನಾವಿಬ್ಬರೂ ಏಕವಚನದ ಗೆಳೆಯರು. ಅವನನ್ನು ನಾನು ನಾಗಣ್ಣ ಅಂತಲೇ ಕರೀತಿದ್ದೆ. ಅವನು ನನಗೆ ಮಲ್ಲಣ್ಣ ಅಂತಿದ್ದ. ಬಿಸಿಲನಾಡು ಬಳ್ಳಾರಿ ಜಿಲ್ಲೆ ಹರಪನಹಳ್ಳಿಯ ಕೆರೆಗುಡಿಹಳ್ಳಿ ನಾಗಣ್ಣನ ಹುಟ್ಟೂರು. ಚಿಕ್ರಪ್ಪ ಗಂಗಮ್ಮ ಅಪ್ಪ ಅಮ್ಮ. ಈತನೇ ಮನೆಗೆ ಹಿರೀಮಗ. ಒಬ್ಬ ತಮ್ಮ ನಾಲ್ಕು ಮಂದಿ ತಂಗಿಯರು. ಧಾರವಾಡದಲ್ಲಿ ಎಪ್ಪತ್ತರ ದಶಕದ ಇಂಗ್ಲಿಷ್ ಎಂ.ಎ. ಪಾಸು ಮಾಡಿದ್ದ.

ನಮ್ಮಿಬ್ಬರದೂ ಅಜಮಾಸು ಮೂವತ್ತೈದು ವರ್ಷಗಳಷ್ಟು ಹಳತಾದ ದೋಸ್ತಿ. ಇಬ್ಬರಿಗೂ ರಂಗಭೂಮಿ ಸೋಬತಿ. ಬಂಡಾಯ ಸಾಹಿತ್ಯ ಸಂಘಟನೆ ಮತ್ತು ರಂಗಭೂಮಿ ಅಂದ್ರೆ ಪಂಚಪ್ರಾಣ. ಅದರಲ್ಲೂ ವೃತ್ತಿರಂಗಭೂಮಿ ನಮ್ಮಿಬ್ಬರ ಸಮಾನ ಪ್ರೀತಿಯ ವಿಷಯ. ವೃತ್ತಿರಂಗದ ತಿರುಪಿನ ತೇರೆಳೆಯುವ ಉಮೇದು. ಅವನಿಗೆ ವೃತ್ತಿರಂಗದ ಅಭಿನಯ ಪರಂಪರೆ ಕುರಿತು ಅಗಾಧ ಪ್ರೀತಿ.

ಅಂತೆಯೇ ಅಭಿನೇತ್ರಿಯರ ಆತ್ಮಕಥನಗಳು ಅವನಿಂದ ಅಧಿಕವಾಗಿ ಅವತರಿಸಿದವು. ಅಲ್ಲಲ್ಲಿ ಅವಕ್ಕೆ ಗಂಧ ಕಸ್ತೂರಿ ಲೇಪನದ ಚಿದ್ವಿಲಾಸಗಳು. ಅದೇನೇ ಇರ್ಲಿ, ಚಾರಿತ್ರಿಕವಾಗಿ ಅವಜ್ಞೆಗೊಳಗಾದ ವೃತ್ತಿರಂಗಭೂಮಿಯ ದಾಖಲೆ ಅವನಿಗೆ ಕರತಲಾಮಲಕ ಎನಿಸಿತ್ತು. ಕಂಪನಿ ನಾಟಕಗಳೆಂದರೆ ನಾಗಣ್ಣನಿಗೆ ನಿತಾಂತ ಪ್ರೀತಿ. ಒಮ್ಮೊಮ್ಮೆಕಣ್ಮುಚ್ಚಿ ಟೋಕ್ ಸರ್ಟಿಫಿಕೇಟ್ ಕೊಡುವಷ್ಟು.

ವೃತ್ತಿರಂಗ ಪ್ರಾಕಾರ (form) ಕುರಿತು ವಿಶ್ಲೇಷಣಾತ್ಮಕ ವಿಚಾರಗಳ ಪ್ರತಿಪಾದನೆ ನನ್ನ ಫೆವರಿಟ್ ಟಾಪಿಕ್. ಹಾಗೇನೇ ನಾನು ಪರಿಚಯಿಸುವ ವ್ಯಕ್ತಿಚಿತ್ರಣಗಳ ಬರಹಕ್ಕೆ ಚಿತ್ರಕಶಕ್ತಿ ಇರುವುದನ್ನು ಆತ ಗುರುತಿಸಿದ್ದ. ಅವಕ್ಕೆ ಅವನ ಅಂತರಂಗದ ಮೆಚ್ಚುಗೆ ಇರ್ತಿತ್ತು. ಎಲ್ಲೂ ಬಾಯಿಬಿಟ್ಟು ಹೇಳುತ್ತಿರಲಿಲ್ಲ. ಆದರೆ ಎಲ್. ಬಿ. ಕೆ. ಆಲ್ದಾಳ ಕವಿಗಳ ಬಗ್ಗೆ ಪ್ರಜಾವಾಣಿಗೆ ನಾನು ಬರೆದ ಸುದೀರ್ಘ ಲೇಖನ ಓದಿ ಮೆಚ್ಚುಗೆ ತೋರಿದ್ದ. ಮಲ್ಲಣ್ಣಾ ನಿನ್ನಹಾಗೆ ವ್ಯಕ್ತಿಚಿತ್ರ ಚಿತ್ರಿಸುವುದು ಪತ್ರಕರ್ತರಾದ ನಮಿಗೆ ಸಾಧ್ಯವಿಲ್ಲ ಅಂದಿದ್ದ. ಅದಾದ ಮೇಲೆ ನನ್ನ ಬರಹದ ಬಗ್ಗೆ ಬಹಿರಂಗ ಮೆಚ್ಚುಗೆ ಮಾತುಗಳು ಅವನಿಂದ ಹರಿಗಡಿಯದೇ ಬರತೊಡಗಿದವು. ಅಂತೆಯೇ ನಾನು ರಂಗನೇಪಥ್ಯಕ್ಕೆ ಪ್ರತೀ ತಿಂಗಳು ಲೇಖನ ಬರೆಯಬೇಕೆಂಬುದು ಅವನ ಸತೀ ಭಾವದ ತೀವ್ರ ಬಯಕೆ.

ನಾವಿಬ್ಬರೂ ಲೆಕ್ಕವಿಲ್ಲದಷ್ಟು ಬಾರಿ ವೃತ್ತಿ ರಂಗಭೂಮಿ ಕುರಿತು ತಾರಕಕ್ಕೇರಿದ ಸಂವಾದ ಮಾಡಿದ್ದೇವೆ. ಕಂಪನಿ ನಾಟಕಗಳ ಮಹತ್ವದ ಪರಂಪರೆ ಬಗ್ಗೆ ‘ಮದ್ಯರಾತ್ರಿ’ಗಳವರೆಗೆ ಚರ್ಚೆಮಾಡುತ್ತಲೇ ಹಿರಿಹಿರಿ ಹಿಗ್ಗಿ ಹೀರೆಕಾಯಿಗಳಾಗಿ ಸಣ್ಣಪುಟ್ಟ ಕಾರಣಕ್ಕೆ ಜಗಳಗಂಟರಾಗುತ್ತಿದ್ದೆವು. ನಾವೆಷ್ಟೇ ಜಗಳವಾಡಿದರೂ ರಂಗಕಾರಣಕ್ಕೆ ಒಂದಾಗುತ್ತಿದ್ದೆವು. ನೀನು ಕಲಾವಿದೆಯರ ಬಗ್ಗೆಯೇ ಹೆಚ್ಚು ಬರಿತೀಯಾ ಅಂತ ನನ್ನ ಬಾಯಿಂದ ಮಾತು ಉದುರುತ್ತಲೇ ಗಂಡಸರ ಬಗ್ಗೆ ಬರೆಯಲು ನೀನಿದಿಯಲ್ಲ ಅಂತಿದ್ದ.

ವೃತ್ತಿಕಲಾವಿದರ ನಿಧನದ ವಾರ್ತೆಗೆ ಕಾದು ಕುಂತವರಂತೆ ಹುಡುಕಿ ಹುಡುಕಿ ಬರೀತಿದ್ದ. ವೃತ್ತಿರಂಗದ ಬಗ್ಗೆ ಬರೆಯುವ ಪೇಟೆಂಟ್ ಪ್ರೀತಿ ಪಡಕೊಂಡಿದ್ದ‌. ಗುಬ್ಬಿವೀರಣ್ಣ ಪ್ರಶಸ್ತಿಯು ಅದು ಆರಂಭಿಕ ಕಾಲಕ್ಕೆ ಆಧುನಿಕ ರಂಗಭೂಮಿಯತ್ತ ತಿರುಗುತ್ತಿದ್ದಂತೆ ಎಚ್ಚರಗೊಂಡೆವು. ಅದನ್ನು ವೃತ್ತಿರಂಗಭೂಮಿಗೇ ಸುಸ್ಥಿರವಾಗಿಸಿದ ಸೂಕ್ಷ್ಮ ಜಾಣ್ಮೆಅವನದು. ಶ್ರೀರಂಗರ ಹೆಸರಲ್ಲಿ ಆಧುನಿಕ ರಂಗಭೂಮಿಗೆ ಪ್ರಶಸ್ತಿ ಸ್ಥಾಪಿಸಲು ಪತ್ರಿಕೆಗಳಿಗೆ ನಾನಾಗ ಬರೆದೆ.

ಸರಕಾರದ ಮತ್ತು ಸಣ್ಣಪುಟ್ಟ ಸಂಘಸಂಸ್ಥೆಗಳು ಕೊಡಮಾಡುವ ಪ್ರಶಸ್ತಿಗಳು ವೃತ್ತಿರಂಗ ಕಲಾವಿದರಿಗೆ ದೊರಕಿಸುವಲ್ಲಿ ಬೆಂಗಳೂರಿನ ಕಲ್ಚರಲ್ ಪಾಲಿಟಿಕ್ಸ್ ಹಿಮ್ಮೆಟ್ಟಿಸುವುದನ್ನು ಅರಿತಿದ್ದ. ಇಪ್ಪತ್ತು ವರ್ಷಗಳ ಹಿಂದೆ ನಾನು ನಾಟಕ ಅಕಾಡೆಮಿ ಸದಸ್ಯನಾಗಿದ್ದಾಗ ನಾಗಣ್ಣನಿಗೆ ಅಕಾಡೆಮಿ ಪ್ರಶಸ್ತಿ ಕೊಡಿಸಿದ ಖುಷಿಯ ಅವಕಾಶ ನನ್ನದು. ಅದಾದ ಮೇಲೆ ಪತ್ರಿಕೋದ್ಯಮ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಬಂತು.

ಪ್ರಾಥಮಿಕ ಅವಧಿಯಲ್ಲಿ ಸಂಗಾತಿ ಕೆ. ನಾಗರತ್ನಮ್ಮ ಆತ್ಮಕಥನ (ಅವನ ನಿರೂಪಣೆ) ಸುಧಾ ಸಾಪ್ತಾಹಿಕದಲ್ಲಿ ಪ್ರಕಟಿಸಿದ. ಅಂದಿನ ಕನ್ನಡ ವಿ. ವಿ. ಕುಲಪತಿ ಪ್ರೊ. ಎಂ.ಎಂ.ಕಲಬುರ್ಗಿ ಸೇರಿದಂತೆ, ಸದರಿ ಸಂಕಥನ ಅನೇಕ ಮಂದಿ ಹಿರಿಯ ಸಾಹಿತಿ, ಸಂಸ್ಕೃತಿ ಚಿಂತಕರ ಗಮನ ಸೆಳೆಯುವಲ್ಲಿ ಸಕ್ಸಸ್ ಆಗಿದ್ದ. ಪ್ರಾಯಶಃ ಧಾರಾವಾಹಿಯಾಗಿ ಪ್ರಕಟಗೊಂಡ ರಂಗನಟಿಯೊಬ್ಬಳ ಪ್ರಥಮ ಆತ್ಮಕಥನ ಅದಾಗಿತ್ತು.

ಹಾಗೆ ನೋಡಿದರೆ ಅವನು ರಂಗಕಲಾವಿದರ ಚರಿತ್ರೆಕಾರ. ಹಳೇಮೈಸೂರು, ನಮ್ಮ ಹೈದರಾಬಾದ್ ಕರ್ನಾಟಕದ ವೃತ್ತಿ ರಂಗಭೂಮಿ ಕಲಾವಿದರ ಜೀವನ ಚರಿತ್ರೆಗಳನ್ನು ಜತನ ಮಾಡುವಲ್ಲಿ ಶ್ಯಾಣೇ ಇದ್ದ. ಆಧುನಿಕ ರಂಗಭೂಮಿ ಕುರಿತೂ ದಿವಿನಾದ ಆಸಕ್ತಿಯಿತ್ತು. ಪ್ರಜಾವಾಣಿ ಅವನ ಬೆನ್ನಹಿಂದಿನ ಬೆಳಕಿನಂತಿತ್ತು. ಹಾಗಂತ ಅನೇಕರಿಗೆ ಅನಿಸುತ್ತಿತ್ತು.

ಕೆಲವುಕಾಲ ರಾಜ್ಯಮಟ್ಟದ ಪತ್ರಕರ್ತರ ಸಂಘದ ‌ಸಾರಥ್ಯ ವಹಿಸಿದ್ದ. ಕಾಲು ಶತಮಾನದಷ್ಟು ಕಾಲ ಪ್ರಜಾವಾಣಿ ಪತ್ರಿಕೆಯಲ್ಲಿ ದುಡಿದ. ಚಿತ್ರದುರ್ಗದ ವರದಿಗಾರನಾಗಿದ್ದಾಗ ರಾಜ್ಯಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ ಏರ್ಪಡಿಸುವಲ್ಲಿ ಗುಡಿಹಳ್ಳಿಯ ಪಾತ್ರ ಪ್ರಮುಖವಾಗಿತ್ತು. ಒಂದು ಬಾರಿ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕನಾಗಿದ್ದ. ಬಂಡಾಯ ಸಾಹಿತ್ಯ ಸಂಘಟನೆಗೆ ದಶಕ ತುಂಬಿದ ಸಂದರ್ಭದಲ್ಲಿ ಸಂಗಾತಿ ಸಿ. ಎಂ. ಮಹಾದೇವರಾವ್ ಜತೆಗೂಡಿ ಮಹತ್ವದ ಪುಸ್ತಕ ಸಂಪಾದಿಸಿದರು.

ಅದೇ ಸುಮಾರಿಗೆ ಡಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಪ್ರಥಮ ಸಮ್ಮೇಳನ ಹಾಗೂ ಕಂಚಿಕೇರಿ ಕೊಟ್ರಬಸಪ್ಪನವರ ಜಯಲಕ್ಷ್ಮಿ ನಾಟ್ಯಸಂಘದ ವಜ್ರಮಹೋತ್ಸವ ಜರುಗಿದವು. ಅವುಗಳ ಕುರಿತು ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಅವನು ಅಗ್ರಲೇಖನಗಳನ್ನು ಪ್ರಕಟಿಸಿದ್ದ. ಪ್ರಜಾವಾಣಿಯಿಂದ ನಿವೃತ್ತಿಯಾದ ಮೇಲೂ ಅದರ ಬಾಂಧವ್ಯ ಉಳಿಸಿಕೊಂಡಿದ್ದ. ವೃತ್ತಿರಂಗಭೂಮಿ ಕುರಿತು ಬರೆಯುವ ಅಪೂರ್ವ ಪ್ರೀತಿ ಹೊಂದಿದ್ದ. ಅಲ್ಲಿ ಸಾಧ್ಯವಾಗದಿದ್ದಲ್ಲಿ ಬೇರೊಂದು ಪತ್ರಿಕೆಯಲ್ಲಿ ಪ್ರಕಟಿಸಿದಾಗಲೇ ಅವನಿಗೆ ಸಂದರ್ಭೋಚಿತ ಸಮಾಧಾನ.

ಬದುಕಿನ ಕಟ್ಟ ಕಡೆಯ ದಿನಗಳಲ್ಲಿ ಸಮತೋಲನದ ಮಾನಸಿಕ ಸ್ವಾಸ್ಥ್ಯ ಕಳಕೊಂಡಂತಾಗಿತ್ತು. ಬಹುತೇಕ ಬಿಗಡಾಯಿಸಿದ ಆರೋಗ್ಯ ಸ್ಥಿತಿಯೇ ಕಾರಣವಿದ್ದೀತು. ಪ್ರಗತಿಪರ ಧೋರಣೆಯ ಅದರಲ್ಲೂ ಎಡಪಂಥೀಯ ನಿಲುವುಗಳಿಂದ ದೂರ ಸರಿದಂತೆ ಕಾಣುತ್ತಿತ್ತು. ಅದೇನೇ ಇರಲಿ ರಂಗಭೂಮಿಯ ಅಂಗೈಯೊಳಗಿನ ರೊಟ್ಟಿಯನ್ನು ಕಾಗೆ ಬಂದು ಕಸ್ಗೊಂಡು ಹೋದಂಗಾತು. ರಂಗಪಯಣದ ಹಾದಿಯು ಬಲುದೂರ. ಹೋಗಿ ಬಾರಯ್ಯ ರಂಗ ಸರದಾರ. ನಿನಗೆ ಅಂತಿಮ ನಮಸ್ಕಾರ.

 


– ಮಲ್ಲಿಕಾರ್ಜುನ ಕಡಕೋಳ
9341010712

Don`t copy text!