ಶ್ರೀ ವಿಜಯ ಮಹಾಂತರ ಕರುಣ,,,,,
ಇಳೆಗೆ ಅವತರಿಸಿದ ಗುರು ಬಸವರೂಪ
ಚೆನ್ನಬಸವನ ಜ್ಞಾನ, ಮಡಿವಾಳಯ್ಯನ ನಿಷ್ಠೆ
ಅಜಗಣ್ಣನ ಭಕ್ತಿ,ಚೌಡಯ್ಯನ ನೇರ ನಡೆ
ಸಿದ್ಧರಾಮಯ್ಯನ ವೈರಾಗ್ಯ ಮುಪ್ಪರಿಗೊಂಡ ಜಂಗಮಜ್ಯೋತಿ
ಇಳಕಲ್ಲೆಂಬ ಪ್ರಣತೆಯಲ್ಲಿ ಜ್ಞಾನರಸವೆಂಬ ತೈಲವನೆರೆದು ಬಸವತತ್ವದ ವಿಚಾರ ಕ್ರಾಂತಿಯ ಬತ್ತಿ ಹಚ್ಚಿ
ಪ್ರಜ್ವಲಿಸುತಿರ್ದಿತಯ್ಯ ಮಹಾಂತ ಜ್ಯೋತಿ
ದುಷ್ಟ ಚಟಗಳನು ಜೋಳಿಗೆಗೆ ಹಾಕಿಸಿ
ಸಂತಸದ ಪಾಲನ್ನು ಭಕ್ತರ ಬಾಳಿಗಿರಿಸಿ
ಬದುಕು ಹಸನಾಗಿಸುತಿಹುದು ಮಹಾಂತ ಜೋಳಿಗೆ
ಕಾಯಕ ಜೀವಿಗಳೆಂದರೆ ಪ್ರೀತಿ, ಬಸವ ತತ್ವನಿಷ್ಠರ ಕಂಡರೆ ತೋರುವ ಕರುಣೆ ಅಂತಃಕರಣದ ಒರತಿ
ಮಾತೃ ಹೃದಯದ ವಾತ್ಸಲ್ಯ ಮೂರುತಿ
ಇಂತಪ್ಪ ಚಿದ್ಘನ ಬೆಳಕಿನೈಸಿರಿಯಲ್ಲಿ ತೇಲುತಿಹ ನಮ್ಮ ತನುವೇ ಪಾವನ, ನೆಲೆಸಿಹ ತಾಣವೇ ಪುಣ್ಯ ಕ್ಷೇತ್ರ ನಾವೇ ಧನ್ಯ ಧನ್ಯ ಮಹಾಂತ ಪ್ರಭುವೇ.
–ಸುನಿತಾ ಶರಣಪ್ಪ ಅಂಗಡಿ ಇಲಕಲ್ಲ