ಸಾಕ್ಷಿ

ಸಾಕ್ಷಿ

(ಕತೆ)

ಶಂಕರಪ್ಪ ಮಾಸ್ತರ ಎಡಗೈಯಲ್ಲಿಗಣಿತ ಪುಸ್ತಕ ಬಲಗೈಯಲ್ಲಿ ಉದ್ದವಾದ ಲೆಕ್ಕಿ ಬಡಿಗಿ ಹಿಡಿದು ಏಳನೇಯ ವರ್ಗದ ಮಕ್ಕಳಿಗೆ ಗಣಿತ ಪಾಠ ಮಾಡುತ್ತಿದ್ದರು ಕುರ್ಚಿ ಬಿಟ್ಟು ಟೇಬಲ ದಾಟಿ ಮಕ್ಕಳ ಡೆಸ್ಕಿನ ಮುಂದೆ ನಿಂತುಕೊಂಡ ಅವರು ಮಗುಕೇಂದ್ರಿತ ಶಿಕ್ಷಣದ ಅನುಷ್ಟಾನದಲ್ಲಿದ್ದರು. ಪಾಠವೊಂದು ಮುಗಿದ ಮೇಲೆ ತಾನೆಷ್ಟು ಮಕ್ಕಳಿಗೆ ಸ್ಪಂದಿಸಿದೆ ಎಂದು ತಮ್ಮನ್ನು ತಾವು ಅವಲೋಕಿಸಿಕ್ಕೊಳುವ ಶಂಕರಪ್ಪ ಮಾಸ್ತರ ಮಕ್ಕಳ ನೆಚ್ಚಿನ ಶಿಕ್ಷಕರಾಗಲು ಹೊರಟಿದ್ದರು.
ಅಂದು ಅವರು ಬೀಜಗಣಿತದ ಪಾಠ ಬೋಧನೆಯಲ್ಲಿದ್ದರು.
2a2+ b= 10 ಇದರಲ್ಲಿ a ದ ಬೆಲೆ 2 ಆದಾಗ b ದ ಬೆಲೆ ಎಷ್ಟು ಎಂಬ ಲೆಕ್ಕವನ್ನು ಬಿಡಿಸಲು ನಿಂತುಕೊಂಡಿದ್ದರು.
ಶಂಕರೆಪ್ಪ ಮಾಸ್ತರು ಕೈಯಲ್ಲಿಯ ಬಡಗಿಯನ್ನು ಟೇಬಲ್ಲಿನ ಮೇಲಿಟ್ಟು ಪುಸ್ತಕದ ಕೈಯನ್ನು ಹಿಂದೆ ಇಟ್ಟು ಆ ಕೈಗೆ ಬಲಗೈಯನ್ನೂ ಸೇರಿಸಿ ಹಾಗೆ ಅಡ್ಡಾಡುತ್ತಾ ಹಿಂದಿನ ಬೆಂಚಿನಲ್ಲಿಯ ತಿಮ್ಮನತ್ತ ಬಂದರು. ತಿಮ್ಮಗುಮ್ಮನೇ ಗೋಣು ಸ್ವಲ್ಪು ಬಗ್ಗಿಸಿ ಗುರುಗಳ ಹಾವ ಭಾವದಲ್ಲಿ ಮುಳುಗಿದ್ದನು. ಅವರು ಮಕ್ಕಳನ್ನು ಕೇಂದ್ರವಾಗಿಸಿಕೊಂಡು ಅವರ ಅಗತ್ಯ ಕಾಳಜಿಗಳಲ್ಲಿ ಒಂದಾದ ಅವರ ಭಾವ ಮಾತುಗಳು ತಿಮ್ಮನಿಗೆ ರುಚಿಸಲಿಲ್ಲವೋ..‌…!!!?? ಏನೋ ಎಂಬಂತೆ ಉಂಡಾಡಿ ತಿಮ್ಮನ ಕಣ್ಣುಗಳ ಚಲನೆ ನಗುವು ಹರಿದಾಡುತ್ತಿದ್ದವು.
ಮಾಸ್ತರು ತಿಮ್ಮನ ಪಕ್ಕ ನಿಂತುಕೊಂಡು :” ತಿಮ್ಮ ಈ ಸಮೀಕರಣದಲ್ಲಿ b ದ ಬೆಲೆ ಏನು…? ಕೇಳಿದರು
ತಿಮ್ಮ ” ಹ…….ಹ…….ಹ…….!!!! ” ಎಂದು ನಗಾಡಿದನು.
“ಲೇ……ನಗು ಯ್ಯಾಕ …….!!??” ಗುರುಗಳ ಪ್ರಶ್ನೆಯಲ್ಲಿ ಗದರಿಕೆಯಿತ್ತು.
ತಿಮ್ಮ ಕುಳಿತುಕೊಂಡೇ ಮತ್ತೆ ನಗುತ್ತಾ ಗೋಡೆಯ ಕಡೆಗೆ ಸರಿಯುತ್ತಾ
“ನನಗೆ ಗೊತ್ತಿಲ್ಲ…….!!??”
ಎಂದು ಮತ್ತೆ ನಗಾಡತೊಡಗಿದನು.
ಗುರುಗಳು” ಕತ್ತೆ ” ಎಂದು ಬೈಯುತ್ತಾ
ಪಾಠದ ಕಡೆ ಲಕ್ಷ್ಯಕೊಡು ಮೊದಲು ಎಂದು ಮಾತಿನ ಏಟುಕೊಟ್ಟು ಬೋರ್ಡಿನ ಕಡೆ ಸಾಗಿ ಹೋದರು.
ಹಿಂದಿನ ಬೆಂಚಿನಲ್ಲಿ ತಿಮ್ಮನ ಹಿಂದೆ ಕುಳಿತ ಗುಂಡ ತಿಮ್ಮನ ಬೆನ್ನ ಮೇಲೆ ಮೆಲ್ಲನೆ ಬೆರಳಾಡಿಸಿದ.ತಿಮ್ಮನಿಗೆ ಕಟ್ಟಾಡಿಸಿದಂತಾಗಿ ಹೊಳ್ಳಿ ನೋಡಿದ.
ಗುಂಡ ಕಣ್ಣು ಅರಳುಸಿ ” ಕತ್ತೆ” ಎಂದು ಪುನರುಚ್ಚರಿಸಿದ.
ತಿಮ್ಮನಿಗೆ ಅವಮಾನವಾದಂತಾಗಿ ಅವನ ಮುಖ ಕಪ್ಪಿಟ್ಟಿತು.ಅಲ್ಲದೇ ಅವನ ಮೈಯಲ್ಲಿ ಕತ್ತೆಗೆ ಪ್ರತಿಯಾಗಿ ರೋಷವೊಂದು ಸಂಚಯವಾಗತೊಡಗಿತು.
ಗುರುಗಳು ಬೋರ್ಡಿನ ಪಕ್ಕನಿಂತು a =2 ಆದಾಗ b ದ ಬೆಲೆ 2 ಎಂಬುದನ್ನು ಸಮೀಕರಣವನ್ನು ಬಿಡಿಸಿ b ದ ಬೆಲೆ ಕಂಡು ಹಿಡಿದು ಅದನ್ನು ಮೂಲ ಸಮೀಕರಣದಲ್ಲಿ ಹಾಕಿ ಸಮರ್ಥಿಸಿ ತೋರಿಸಿದರು.
ಟೇಬಲ್ಲಿನ ಮೇಲೆ ಕಡುವನ್ನು ಇಟ್ಟು ಕೈ ಜಾಡಿಸುತ್ತಾ ತಿಮ್ಮನನ್ನು ನೋಡುತ್ತಾ “ಪಾಠವನ್ನು ಲಕ್ಢ್ಯಗೊಟ್ಟು ನೋಡಬೇಕು , ತಿಳುದುಕೊಳ್ಳಬೇಕು” ಎಂದು ಕಣ್ಣು ಕೆಂಪಗೆ ಮಾಡಿದರು.

ತಿಮ್ಮ ಅವರ ಕಣ್ಣ ಬೆಂಕಿಯಲ್ಲಿ ಬೆಂದು ಹೋದನೇ……!!??

ಅಂದು ಮೂರರ ಸಮಯ ಮಕ್ಕಳು ಊಟ ಮಾಡಿ ಆಟ ಆಡಿ ಒಳಗೆ ಬಂದು ಕುಳಿತುಕೊಂಡಿದ್ದರು.ಹೊರಗೆ ಶರದೃತುವಿನ ಬಿಸಿಲು ಎಲ್ಲೆಡೆ ಪ್ರಖರವಾಗಿ ಬಿದ್ದುಕೊಂಡಿತ್ತು. ಕೆಲವು ಮಕ್ಕಳು ಬೋರೆ ಹಣ್ಣುಗಳನ್ನು ಹಂಚಿಕೊಂಡು ತಿನ್ನುತ್ತಿದ್ದವು ಕೆಲವು ಹುಣಸೆ ಕಾಯಿ ಕೊಡಗವನ್ನು ಮುರಿಯುತ್ತಿದ್ದವು.
ತಿಮ್ಮ ಮತ್ತು ಗುಂಡರು ಮಾತ್ರ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುವುದು ನಗುವುದು ಮಾಡುತ್ತಿದ್ದರು.
ಒಮ್ಮೆಲೇ ಕ್ಲಾಸಿನ ಹಿರೇಮಣಿ ” ತಮಾಮ ಊಟ ಜಾವ “ಎಂದು ಆಜ್ನೆವಿಧಿಸಿದನು.ಎಲ್ಲ ಮಕ್ಕಳೂ ಗುರುಗಳು ಬಂದರೆಂದು ಎದ್ದು ನಿಂತರು.
ಮತ್ತೆ ಹಿರೇಮಣಿ
” ನಮಸ್ತೇ ಏಕ ದೋ…ನಮಸ್ತೇ ಏಕದೂ, ತಮಾಮ ಬೈಟ ಜಾವ ” ಎಂದು ಹೇಳಿ ಗುರುಗಳಿಗೆ ನಮಸ್ತೆ ಹೇಳಿ ಕುಳಿತುಕೊಂಡರು. “ನಮಸ್ತೆ ” ಎಂದು ಗುರುಗಳು ಪ್ರತಿಯಾಗಿ ಹೇಳುತ್ತಾ
ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಅವರ ತೊಡೆಗೆ ಮುಳ್ಳು ಚುಚ್ಚಿಕೊಂಡು ಅವರು ” ಆಂ….ಎಂದು ಆಕ್ರಂದುಸಿದರು . ಕೂಡಲೇ ಎದ್ದು ನಿಂತುಕೊಂಡು ಎಲ್ಲ ಮಕ್ಕಳತ್ತ ಕಣ್ಭಾಡಿಸತೊಡಗಿದರು.ಇದು ಯಾರ ” ಕಿತಬಿ “ಎಂದು ಮಕ್ಕಳ ಮುಖ ಓದುತ್ತಾ ಬಂದ ಶಂಕರೆಪ್ಪ ಮಾಸ್ತರ ಪ್ರಶ್ನೆಗೆ ತಿಮ್ಮ ಗುಂಡರ ಮುಖದಲ್ಲಿ ಉತ್ತರ ಸಿಕ್ಕಿತ್ತು ಅವರ ನಡುಗುವ ಕೈಕಾಲುಗಳು ಸಾಕ್ಷಿಯಾಗಿದ್ದವು.


ಯಮುನಾ.ಕಂಬಾರ
ರಾಮದುರ್ಗ

Don`t copy text!