ಬಾಡದಿರಲಿ ʻಗೋರಿ ಮೇಲಿನ ಹೂʼ

ಪುಸ್ತಕ ಪರಿಚಯ

ಬಾಡದಿರಲಿ ʻಗೋರಿ ಮೇಲಿನ ಹೂʼ

ಕವಿ- ಅಭಿಷೇಕ್ ಬಳೆ

ಪುಸ್ತಕ ಪರಿಚಯಿಸುವವರು- ಮಂಡಲಗಿರಿ ಪ್ರಸನ್ನ

ಬಹುತ್ವ ಭಾರತ ಸಮಾಜದ ಪರಿಕಲ್ಪನೆಯಲ್ಲಿ ಸುಗಂಧ ಮತ್ತು ಸೌಂದರ್ಯ ಇರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸಾಮರಸ್ಯವೆ ಇದರ ʻಖುಷ್ಬೂ!ʼ ಆದರೆ ವರ್ತಮಾನದ ಸಂದರ್ಭದಲ್ಲಿ ಇವರೆಡು ದಬ್ಬಾಳಿಕೆ ಮತ್ತು ದೌರ್ಜನ್ಯದ ಗುಪ್ತಗಾಮಿನಿಯಾಗಿವೆ.

ಕಾವ್ಯ ಇಂತಹ ಹಲವು ವಿಷಯಗಳಿಗೆ ಮುಖಾಮುಖಿಯಾಗಿರುವುದನ್ನು ದಶಕಗಳಿಂದ ನೋಡುತ್ತಿದ್ದೇವೆ. ಹೊಸ ಪೀಳಿಗೆಯ ಯುವಜನಾಂಗದಲ್ಲಿ ಈ ಚಿಂತನೆಗಳ ಹುಡುಕಾಟ, ಕಾಡಾಟ ಎಷ್ಟು ಜನರಲ್ಲಿದೆ, ಅದೂ ಯುವ ಬರಹಗಾರ ಇದಕ್ಕೆ ತೆರೆದುಕೊಂಡದ್ದೆಷ್ಟು? ಇಂತಹವು ತುಂಬಾ ಕುತೂಹಲದ ಪ್ರಶ್ನೆಗಳು.
ಯುವಕವಿ ಅಭಿಷೇಕ್ ಬಳೆ ಅವರ ಗಜಲ್ ಕಾವ್ಯ, ಅದರಲ್ಲೂ ಅವರ ಚೊಚ್ಚಲ ಗಜಲ್‌ ಸಂಕಲನ ʻಗೋರಿ ಮೇಲಿನ ಹೂʼ ಈ ನಿಟ್ಟಿನಲ್ಲಿ ಗಮನಾರ್ಹ ಕೃತಿ. ಬಳೆ ಈ ವರೆಗೆ ಮೂರು ಕೃತಿಗಳನ್ನು ತಂದಿದ್ದಾರೆ. ಆ ಪೈಕಿ ಇದು ಚೊಚ್ಚಲ ಗಜಲ್‌ ಸಂಕಲನ. ಅರವತ್ತೊಂದು ಗಜಲ್‌ಗಳು ಈ ಸಂಕಲನದಲ್ಲಿವೆ, ಆ ಪೈಕಿ ಕೆಲ ಗಜಲ್‌ ಗಳು ವರ್ತಮಾನದ ಬಹುಮುಖ್ಯ ಸಂಗತಿಗಳನ್ನು ಹೇಳುವ ಕಾರಣದಿಂದಾಗಿ ಚಿಂತನಾರ್ಹ. ವಿಭಿನ್ನ ಪ್ರಯತ್ನ ಹಾಗೂ ಸಂಗತಿಗಳ ಮೂಲಕ ಬಳೆ ಗಜಲ್‌ ಮೂಲಕ ತಮ್ಮ ಸುತ್ತಲಿನ ಸಮಾಜ ನೋಡುವ, ಮಿಡಿಯುವ ಪ್ರಯತ್ನ ಮಾಡಿದ್ದಾರೆ. ಈ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2019 ನೇ ಸಾಲಿನ ಶ್ರೀಮತಿ ಪಂಪಮ್ಮ ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ ಲಭಿಸಿರುವುದು ಮತ್ತೊಂದು ಪ್ರಮುಖ ಸಂಗತಿ.

ʻಬಾಯಿದ್ದು ಮಾತನಾಡದಿರುವವರಿಗೆ ದನಿಯಾಗಬೇಕಿದೆ ಗಜಲ್
ಜೀವವಿದ್ದು ಉಸಿರಾಡದಿರುವವರಿಗೆ ದನಿಯಾಗಬೇಕಿದೆ ಗಜಲ್ʼ (ಗಜಲ್-19) 

– ಎನ್ನುತ್ತಲೆ ತಮ್ಮ ಗಜಲ್‌ ಯಾನ ಆರಂಭಿಸಿ, ಆ ಕುರಿತು ಗಂಭಿರ ನಿಲುವು ಪ್ರಕಟಿಸುತ್ತಾರಾದರೂ ಎಲ್ಲ ಗಜಲ್‌ ಗಳಲ್ಲಿ ಒಂದೆ ಭಾವವಿಲ್ಲ. ಸಾಮಾಜಿಕ ಕಳಕಳಿಯ ಗಜಲ್‌ಗಳ ಜೊತೆ, ವಯೋಸಹಜ ಆಕರ್ಷಣೆಯಾದ ಪ್ರೀತಿ, ಪ್ರೇಮದಂತಹ ವಿಷಯಗಳೂ ಅವರ ಕೆಲ ಗಜಲ್‌ಗಳಲ್ಲಿ ಇಣುಕಿವೆ.

ʻಸಂಜೆ ಗಾಳಿ ಮೆಲ್ಲ ಬೀಸುತ್ತಿರು ನನ್ನವಳು ಬರುವವಳಿದ್ದಾಳೆ
ನಡೆವ ನೆಲವೆ ಮೃದುವಾಗುತ್ತಿರು ನನ್ನವಳು ಬರುವವಳಿದ್ದಾಳೆʼ (ಗಜಲ್-50) 

– ಎಂದು ಗಾಳಿಯೊಂದಿಗೆ ಪಿಸುಗುಟ್ಟುತ್ತಾರೆ ಕವಿ ಅಭಿಷೇಕ್‌ ಬಳೆ.

ಗಜಲ್ ಸುಕೋಮಲ ಕಾವ್ಯ. ಪ್ರೀತಿ, ಪ್ರೇಮ, ಪ್ರಣಯ, ವಿರಹ, ಹಾತೊರೆಯುವಿಕೆ…ಇಂತಹ ವಿಷಯಗಳಿಗಷ್ಟೇ ಮೀಸಲಾಗದೆ ಇತರೆ ಹತ್ತಾರು ವಿಷಯಗಳ ಕುರಿತು ಇಂದು ಗಜಲ್ ಕವಿಗಳು ಬರೆಯಲು ಆರಂಭಗೊಂಡದ್ದು ಶಾಂತರಸ ಮತ್ತು ಜಂಬಣ್ಣ ಅಮರಚಿಂತರ ಕಾಲದಿಂದ. ಅದು ಈಗ ಹಲವು ಗಡಿ ಮೀರಿ ಬೆಳೆದಿದೆ. ಶಾಂತರಸ, ಜಂಬಣ್ಣ ಅಮರಚಿಂತರು ಪ್ರೀತಿ, ಪ್ರೇಮದ ಕೋಲ್ಮಿಂಚಿನ ಗಜಲ್‌ ಜೊತೆಗೆ ಪ್ರಾದೇಶಿಕ ಅಸಮಾನತೆ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆಯೂ ದನಿಯೆತ್ತಿದವರು.

ನಾನು ಗಮನಿಸಿದಂತೆ ಜಂಬಣ್ಣ ಅಮರಚಿಂತರು ಒಂದು ಹೆಜ್ಜೆ ಮುಂದೆ ಹೋಗಿ ರಾಜಕೀಯ, ಸಾಮಾಜಿಕ ನ್ಯಾಯ, ಮತ್ತಿತರ ವಿಷಯಗಳ ಬಗ್ಗೆ ತಮ್ಮ ಗಜಲ್‌ಗಳಲ್ಲಿ ನಾಯಕರನ್ನು, ವ್ಯವಸ್ಥೆಯನ್ನು, ಪ್ರಭುತ್ವವನ್ನು ಲೇವಡಿ ಮಾಡಿದವರು, ಪ್ರಶ್ನಿಸಿದವರು. ಇಂತಹ ಹಲವು ಕವಿಗಳ ನೆಲಮೂಲದಿಂದಲೆ ಬಂದ ಯುವಕವಿ ಅಭಿಷೇಕ ಬಳೆ. ಆದರೆ, ಅವರ ಲೇಖನಿಗೆ ಇನ್ನಷ್ಟು ಹೊಳಪು ಸಿಗಬೇಕಿದೆ.

ʻತುತ್ತು ಕೂಳಿಗಾಗಿ ದಿನ ನಿತ್ಯ ಹತ್ತೂರು ಅಲೆಯುವವರು ನಾವು
ಗೇಣು ಬಟ್ಟೆಗಾಗಿ ಬಲು ದೂರ ನಡೆಯುವವರು ನಾವುʼ (ಗಜಲ್-25) 

– ಎನ್ನುವ ಸಾಲುಗಳು ದಿನವೂ ಕೂಲಿ ಮಾಡಿ ಬದುಕು ನಡೆಸುವ, ಗುಳೆ ಹೋಗಿ ದೂರದ ಮುಂಬೈ- ಬೆಂಗಳೂರಿನಂತಹ ಮಾಯಾನಗರಿಯಲ್ಲಿ ಹೆಣಗಾಡಿ ಬದುಕು ಕಟ್ಟಿಕೊಳ್ಳುವವರ ಆತ್ಮನಿವೇದನೆಯಂತಿದೆ.

ʻಗಲ್ಲಿ ಗಲ್ಲಿಗಳ ನಡುವೆ ಧರ್ಮದ ಗಡಿಯ ಹಾಕಲಾಗುತಿದೆ ಈಗೀಗ
ಪರರಿಗೆ ಪ್ರವೇಶ ನಿಷೇಧವೆಂದು ಜಾತಿ ಝೇಂಡಾ ಹೇಳುತಿದೆ ಈಗೀಗʼ (ಗಜಲ್-40) 

– ಈ ಗಜಲ್‌ ಧರ್ಮದ ಅಫೀಮು ತಿಂದವರ ಕಥೆಯಂತಿದ್ದರೆ, ಮತ್ತೊಂದು ಗಜಲ್‌ ನಲ್ಲಿ ತನ್ನ ಜನರ ತಳಮಳವನು ಭರವಸೆಗೆ ಕಾದವರ ಪ್ರಶ್ನೆಯಂತೆ ಸಣ್ಣನೆಯ ದನಿಯಾಗಿಸಿ,  ದುಡಿದು ತಿನ್ನುವ ಸಮುದಾಯದ ಕರುಳಿನ ಕರುಣಾಜನಕ ಕಥೆ ಹೇಳುವುದರ ಜೊತೆಗೆ, ಸಾಮಾಜಿಕವಾಗಿ ನೊಂದವರ, ಅವರ ಮಿಡಿತ ಏನೆಂದು ಹೇಳುವ ಸಾಲುಗಳು, ಹಸಿವು, ಬಡತನ, ದೌರ್ಜನ್ಯ, ದಿನನಿತ್ಯದ ಬದುಕಿಗೆ ಪರದಾಡುವವರ ಕಣ್ಣೀರಾಗಿ ಕಾಣುತ್ತವೆ. ಇತರೆ ಕೆಲ ಗಜಲ್‌ನಲ್ಲಿ ಇಂತಹುದೆ ಭಾವ ಪ್ರಕಟವಾಗಿ ಕವಿ ಸಮಾಜದಲ್ಲಿ ಅಸಮಾನತೆ ಕುರಿತ ವಿಷಣ್ಣ ಭಾವನೆಯನ್ನು ಅಭಿವ್ಯಕ್ತಗೊಳಿಸುವ ಪ್ರಯತ್ನ ಮಾಡಿದಂತಿದೆ. ಜೊತೆಗೆ ವರ್ತಮಾನದ ಬದುಕು, ಧರ್ಮ, ಜಾತಿಯಂತಹ ವಿಷಯ, ಸಮಾಜದಲ್ಲಿ ಸೃಷ್ಟಿಸುತ್ತಿರುವ ಅನೈತಿಕ ಘಟನೆಗಳಿಗೂ ಒತ್ತು ನೀಡುವ ಬಳೆ:

ʻಚಿಮಣಿ ಬೆಳಕಿನಲ್ಲಿ ಅದೆಷ್ಟು ಕತ್ತಲ ರಾತ್ರಿಗಳ ಕಳೆದರು ನನ್ನ ಜನ
ಭರವಸೆಯು ಬೆಳಕಾಗಿ ಬರುವುದೆಂದು ದಿನವ ದೂಡಿದರು ನನ್ನ ಜನʼ (ಗಜಲ್-51)
….
ʻಧರ್ಮ ಜೋಲಿ ಹೊಡೆಯಲಿ ಬಿಡು ದೇವರು ನನ್ನಂತಾಗುತ್ತಾನೆ ಮಧುಶಾಲೆಯಲ್ಲಿ ಸಾಕಿ
ಮದಿರೆ ಅಮಲಿಗಿಂತ ಧರ್ಮದ ಅಮಲು ಅಪಾಯಕಾರಿ ಜಗದಲ್ಲಿ ಸಾಕಿ‌ʼ (ಗಜಲ್-30) 

– ಜಾತಿ, ಧರ್ಮ, ಅಸಮಾನತೆ, ಅನೈತಿಕತೆ ಕುರಿತು ಸಂಕಟಪಡುವ ಕವಿ ಪ್ರೀತಿಯ ರಸಾನುಭವ ಹಂಚಿಕೊಳ್ಳುವಲ್ಲಿ ಹಿಂದೆ ಬೀಳಲಾರರು.
….
ʻಪ್ರೀತಿ ತುಂಬಿದ ಹೃದಯವ ಭಾರವಾಗಿಸಿ ಹೊರಟೆ
ಬದುಕ ಬನದ ನಗುವ ಹೂಗಳ ಬಾಡಿಸಿ ಹೊರಟೆʼ (ಗಜಲ್‌-33)

– ಸಖಿ, ಗೆಳತಿ, ಹುಡುಗಿ ಅನ್ನುವ ರದೀಫ್ಗಳ ಮೂಲಕ ಅನೇಕ ಗಜಲ್‌ಗಳಲ್ಲಿ ವಯೋಸಹಜ ಒಲವಿನ ರಸ ಉಕ್ಕಿಸಿದ್ದಾರೆ:

ʻನಿನ್ನ ಪ್ರೀತಿಸುವ ವಿಷಯ ತಿಳಿಯಿತಂತೆ ಪ್ರೇಮದ ಶುಭಾರಂಭ ಮಾಡಿ ಬಿಡೋಣ ಗೆಳತಿ
ಒಲಿದ ಜೀವಗಳು ಒಂದಾಗುವ ಖುಷಿಗೆ ಬಾಯಿ ಸಿಹಿ ಮಾಡೋಣ ಗೆಳತಿ (ಗಜಲ್‌-3) –

ಈ ಗಜಲ್‌ ನಲ್ಲಿ ರಾಯಚೂರು ಪರಿಸರದ ಕೃಷಿ ವಿವಿ, ಖಡಕ್‌ ರೊಟ್ಟಿ, ತೀನ್‌ ಕಂದೀಲ್‌, ಕಲ್ಲಾನೆ, ಮಂತ್ರಾಲಯದ ದೈವ, ರಾಯಚೂರು ಕೋಟೆ, ಸಾಂಕೇತಿಕವಾಗಿ ಬರುವ ಮೂಲಕ ಪ್ರೀತಿಗೆ ವಿಶಿಷ್ಟ ರೂಪಕ, ಪ್ರತಿಮೆ ಕೊಡಲು ಪ್ರಯತ್ನ ಮಾಡಿದ್ದಾರೆ. ಆದರೆ ಕೆಲವೆಡೆ ವಾಚ್ಯವೆನಿಸುವ ರೀತಿಯಲ್ಲಿ ಗಜಲ್‌ ಮುಗಿದಂತೆ ಕಾಣುತ್ತದೆ.

ʻಬದುಕ ಮೇಲೆ ನನಗೆ ಆಸೆ ಇರುವುದು ನಿನ್ನ ಪ್ರೀತಿಸುವುದರಿಂದ
ಬದುಕ ಬರಿದಾಗಿಸುವ ಹುನ್ನಾರ ನಡೆಸಿದ್ದು ತಿಳಿಯದೆ ಹುಡುಗಿʼ (ಗಜಲ್‌-4)

– ಎನ್ನುವಲ್ಲಿ ಪ್ರೀತಿ ಮತ್ತು ಆಸಕ್ತಿ ಮೇಳೈಸಿದ ಗೆಳತಿಯ ಒಲವು ಅದರ ಜೊತೆಗೆ ಬದುಕು ಬರಿದಾಗಿಸಬಲ್ಲ ಈ ಪ್ರೀತಿಯೆಂಬ ವ್ಯಾಮೋಹದ ಹುನ್ನಾರವೂ ಕವಿಯ ಮೂಲಕವೆ ಪ್ರಕಟಗೊಂಡಿದ್ದು ಆತನ ಸುಪ್ತಭಾವಕ್ಕೆ ಪ್ರೀತಿಯ ಬಿಸಿಯೂ ತಟ್ಟುತ್ತದೆ.

ʻಹದವಾಗಿ ಎದೆಯಲ್ಲಿ ಪ್ರೇಮದ ಸಸಿ ನಾಟಿದೆ ಹುಡುಗಿ
ನಾಜೂಕಾಗಿ ಒಲವೆಂಬ ನೀರ ಹನಿಸಬಾರದೆ ಹುಡುಗಿʼ (ಗಜಲ್‌-17)

– ಎನ್ನುವ ಮುದನೀಡುವ ಶೇರ್‌ ಗಳ ಸಾಲುಗಳಿವೆ.

ಬಳೆ ಅವರ ಸಾಮಾಜಿಕ ಸಾಮರಸ್ಯದ ಗಜಲ್‌ಗಳ ಕೆಲ ಸಾಲುಗಳನ್ನು ನೋಡುವುದಾದರೆ:

ʻರಹೀಮನು ಗಣೇಶನಿಗೆ ಬಣ್ಣ ಬಳಿಯು ಗಣಪನ ಶರೀಫನ ಕುಲ ಒಂದೆ
ಮಂದಿರ ಮಸೀದಿ ಕಟ್ಟುವ ನೆಲ ಒಂದೆʼ (ಗಜಲ್‌-18) 

– ಈ ಗಜಲ್‌ ಭಾವ ಚೆನ್ನಾಗಿದೆ, ಆದರೆ ಗಜಲ್‌ ರಚನಾಬಂಧ ಇನ್ನಷ್ಟು ಗಟ್ಟಿಯಾಗಬೇಕಿತ್ತು. ಈ ಶೇರ್‌ಗಳಲ್ಲದೆ:

ʻಎಷ್ಟೊಂದು ಹೂಗಳು ನಾನು ನಡೆದು ಬರುವ ದಾರಿಯಲಿ ಗೆಳೆಯʼ (ಗಜಲ್‌-10)

ʻಹಿಂದೂ ಬಿತ್ತಿದರೂ ಮುಸ್ಲಿಂ ಬಿತ್ತಿದರೂ ಭೂತಾಯಿ ಕೊಡುವ ಬೆಳೆಯೊಂದೆ ಗೆಳೆಯʼ (ಗಜಲ್‌-22)

ʻಧರ್ಮವು ನಂಬಿಕೆ ಬೆಳಸಲಿ ಕುರುಡು ನಂಬಿಕೆಯನ್ನಲ್ಲ ಸಾಕಿʼ (ಗಜಲ್‌- 43)

ʻಪ್ರೀತಿ ಸಾವು ಹೇಳಿ ಕೇಳಿ ಸಂಭವಿಸುವುದಿಲ್ಲ ಸಾಕಿʼ (ಗಜಲ್‌-31) 

– ಮೊದಲಾದ ಸಾಲುಗಳು ಖುಷಿ ನೀಡುತ್ತವೆ. ಶಾಂತರಸರನ್ನು ಕುರಿತು ಬರೆದ ಗಜಲ್ ಇನ್ನಷ್ಟು ಸಶಕ್ತವಾಗಬೇಕಿತ್ತು. ಇಲ್ಲಿನ ಎಲ್ಲ ಗಜಲ್‌ಗಳು ಅತ್ಯುತ್ತಮವಾದದ್ದೆಂದು ಹೇಳಲಾಗದು. ಆದರೆ ಪ್ರಮುಖ ಅಂಶವೆಂದರೆ, ಎಳವೆಯಲ್ಲೆ ಕಾವ್ಯದ ಗುಂಗು ಹಿಡಿಸಿಕೊಂಡಿರುವ ಅಭಿಷೇಕ್‌ ಬಳೆ ಗಜಲ್‌ ಯಾನ ಈಗಷ್ಟೇ ಪ್ರಾರಂಭವಾಗಿದ್ದು ಅವರಿನ್ನೂ ಬಹುದೂರ ಸಾಗಬೇಕಿದೆ. ಹುಡುಗತನ, ತುಂಟತನ, ವಯೋಸಹಜ ಆಕರ್ಷಣೆ ಜೊತೆಗೆ ಸಾಮಾಜಿಕ ಕಳಕಳಿಯನ್ನು ಪ್ರಕಟಿಸುವ ಗುಣಹೊಂದಿರುವ ಬಳೆ ಇಲ್ಲಿನ ಅನೇಕ ಗಜಲ್‌ಗಳಲ್ಲಿ ಬೇಕಾದ ಛಂದೋಬದ್ಧ ನಿಯಮ ಕಂಡುಕೊಂಡು ಗೆದ್ದಿದ್ದಾರೆ. ರದೀಫ್‌ ಸಹಿತ ಮತ್ತು ರದೀಫ್‌ ರಹಿತ, ಎರಡೂ ಗಜಲ್‌ಗಳನ್ನು ಇಲ್ಲಿ ನೀಡಿದ್ದು ಭಾಷೆಯ ಮೇಲೆ ಗ್ರಹಿಕೆ ಹಾಗೂ ಇನ್ನಷ್ಟು ಲಯ, ಹಿಡಿತ, ಸೂಕ್ತ ಪ್ರತಿಮೆ, ರೂಪಕಗಳ ಬಳಕೆ, ಕಲೆಗಾರಿಕೆಗೆ ಕುರಿತು ಗಮನಹರಿಸಿದಲ್ಲಿ ಬಳೆ ಅವರಿಂದ ಹೊಸ ಬಗೆಯ ಗಟ್ಟಿ ಗಜಲ್‌ ನಿರೀಕ್ಷಿಸಬಹುದು.
ಗೋರಿ ಮೇಲಿನ ಹೂ ನಮ್ಮ ಪ್ರೀತಿ, ಗೌರವದ ಸಂಕೇತ ಮಾತ್ರವಲ್ಲ…. ಕೆಲವೊಮ್ಮೆ ಅದು ಸತ್ತ ವ್ಯಕ್ತಿಯ ಚೈತನ್ಯದ ಕುರುಹೂ ಕೂಡ ಆಗಬಹುದು.
……

Don`t copy text!