ಗಣೇಶ ಸರ್ವಧರ್ಮಗಳ ಸಮನ್ವಯದ ದ್ಯೋತಕ
ಭಾರತ ದೇಶ ಭವ್ಯ ಸಂಸ್ಕೃತಿ ಪರಂಪರೆಯ ನಾಡು.ಹಬ್ಬ-ಹರಿದಿನಗಳ ತವರೂರು.ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿ ಬೆಳೆದು ಬಂದಿದೆ.ದೇವರು, ಧರ್ಮ, ತತ್ವಜ್ಞಾನ, ಆಧ್ಯಾತ್ಮ, ಅನುಭಾವಗಳ ಅಭೂತಪೂರ್ವ ಜ್ಞಾನದ ಗಣಿಯಾಗಿರುವ ನಮ್ಮ ನಾಡಿನಲ್ಲಿ ಧಾರ್ಮಿಕ ಆಚರಣೆಗಳು ಪುರಾತನ ಕಾಲದಿಂದ ಬೆಳೆದು ಬಂದಿದ್ದು ತಮ್ಮದೇ ಆದ ಧಾರ್ಮಿಕ ಹಿನ್ನೆಲೆಯ ಮಹತ್ವವನ್ನು ಹೊಂದಿವೆ.ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಪ್ರತಿಯೊಬ್ಬರೂ ಆಚರಿಸುವ ಸಾರ್ವತ್ರಿಕ ಹಬ್ಬವಾಗಿ ಬೆಳೆದು ಬಂದಿದೆ.
ಪ್ರಸ್ತುತ ಶರವೇಗದ ಬದುಕಿನಲ್ಲಿ ಹಬ್ಬಗಳ ಆಚರಣೆ,ಅದರ ಮಹತ್ವ, ಸಂಭ್ರಮ ಕಣ್ಮರೆಯಾಗುತ್ತಿದೆ.ಭಕ್ತಿ-ಶ್ರದ್ದೆಗಳಿಗಿಂತ ಆಡಂಬರದ ತೋರಿಕೆಯ ಭಕ್ತಿ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಹಬ್ಬದ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ತಿಳಿಯುವುದು ಅತಿ ಅವಶ್ಯವಾಗಿದೆ.
ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಗಣೇಶ ಚತುರ್ಥಿಯನ್ನು ಸರ್ವರೂ ಸಂಭ್ರಮದಿಂದ ಆಚರಿಸಲಾಗುತ್ತದೆ.ಇಂದು ಗಣೇಶನನ್ನು ಪೂಜಿಸದವರಿಲ್ಲ ಹಾಗೂ ಗಣೇಶನ ಗುಡಿಯಿಲ್ಲದ ಊರಿಲ್ಲವೆಂಬಂತಾಗಿದೆ.ಗಣೇಶ ಒಬ್ಬ ಜಾತ್ಯತೀತ ಮತ್ತು ಸರ್ವಧರ್ಮಗಳ ಸಮನ್ವಯದ ದ್ಯೋತಕವಾಗಿ ಆಚರಣೆ ಬೆಳೆದು ಬಂದಿದೆ.ಅಲ್ಲದೆ “ವಿದ್ಯಾರಂಭೆ……ವಿಘ್ನಸ್ತಶ್ಯ ನ ಜಾಯತೆ” ಎಂಬ ಶ್ಲೋಕಾನುಸಾರ ವಿದ್ಯಾರಂಭ ದಲ್ಲಿಯೂ, ವಿವಾಹ, ಗೃಹ ಪ್ರವೇಶ, ವ್ಯವಹಾರ ಇತ್ಯಾದಿ ಎಲ್ಲ ಶುಭ ಕಾರ್ಯಗಳಲ್ಲಿಯೂ ವಿಘ್ನನಿವಾರಕ ಹಾಗೂ ಗಣನಾಯಕ ( ಅಂದರೆ ಈತನನ್ನು ಪೂಜಿಸಿದರೆ ಸಮಸ್ತಗಣಗಳನ್ನು ಪೂಜಿಸಿದಂತೆ ) ಮತ್ತು ಅಗ್ರಪೂಜಕ (ಎಲ್ಲಾ ಶುಭ ಕಾರ್ಯಗಳಲ್ಲಿಯೂ ಇವನಿಗೆ ಪ್ರಥಮ ಪೂಜೆ) ಹಾಗೂ ವರಸಿದ್ದಿ, ಬುದ್ಧಿ,ಮಂಗಳ ಪ್ರದಾಯಕ, ಅರ್ಥಾತ್ ಬಹುಗುಣ ಸಂಪನ್ನ ದೇವರಾಗಿ ರುವುದರಿಂದ ಒಟ್ಟಾರೆ ಈ ಎಲ್ಲ ಗುಣಗಳಿಂದಾಗಿ ಇಂದು ದೇಶ – ವಿದೇಶಗಳಲ್ಲಿ ಮನೆ – ಮನಗಳಲ್ಲಿ ತುಂಬಿಕೊಂಡಿದ್ದಾನೆ.
ಗಣೇಶ ಗೌರಿಯ ಸೃಷ್ಟಿ.ಮಾನಸಪುತ್ರನೆಂಬುದನ್ನು ಅವನಿಗಿರುವ ಪಾರ್ವತಿ/ ಉಮಾಸುತ,ಗೌರೀತನಯ ಎಂಬೆಲ್ಲ ಹೆಸರುಗಳಿವೆ. ಅಂದು ಮಣ್ಣಿನ ವಿಗ್ರಹದ ಗಣೇಶನನ್ನೆ ತಂದು ಪೂಜಿಸುವ ಪದ್ಧತಿ ಹೆಚ್ಚು ಪುಷ್ಠಿಕರಿಸುತ್ತದೆ.ಗಣೇಶನ ಹುಟ್ಟು ಹಾಗೂ ಏಕದಂತನಾದ ಬಗ್ಗೆ ಪೌರಾಣಿಕ ಹಿನ್ನೆಲೆ ನಮಗೆಲ್ಲ ತಿಳಿದ ವಿಷಯವೇ ಆಗಿದೆ.
ಉತ್ಸವ ಎಂದರೆ ಎತ್ತರಕ್ಕೇರುವುದು ಎಂದರ್ಥ.ಅಂದರೆ ನಾವು ಜೀವನದಲ್ಲಿ ಲೌಕಿಕ ಮತ್ತು ಆಧ್ಯಾತ್ಮಿಕವಾಗಿ ಮೇಲಕ್ಕೇರುವ ಗುರಿಯನ್ನಿಟ್ಟುಕೊಂಡು ಉತ್ಸವಗಳನ್ನು ಆಚರಿಸುವುದು ಒಳಿತಲ್ಲವೇ? ದೇವನಾಗರಿ ಲಿಪಿಯಲ್ಲಿ ಓಂ ಎಂದು ಬರೆದರೆ 🕉️ ಅದು ಶ್ರೀ ಗಣೇಶನಂತೆಯೇ ಇರುತ್ತದೆ.ಗಣೇಶನಿಗೆ ಇಪ್ಪತ್ತೊಂದು ಮೋದಕಗಳನ್ನು ಅರ್ಪಿಸುವುದು ಸಹ ಅರ್ಥಪೂರ್ಣವಾದ ಆಚರಣೆ. ಆ ಇಪ್ಪತ್ತೊಂದು ಮೋದಕಗಳೆಂದರೆ
೫ ಜ್ಞಾನೇಂದ್ರಿಯಗಳು
೫ ಕರ್ಮೇಂದ್ರಿಯಗಳು
೫ ಪ್ರಾಣಗಳು
೫ ಭೂತಗಳು – ಪಂಚಭೂತಗಳು
ಮನಸ್ಸು – ಚಿತ್ತ ಅಂತಃಕರಣ ಅಥವಾ ಸ್ಮರಣೆ
ಒಟ್ಟು ಇಪ್ಪತ್ತೊಂದು ಆಗುತ್ತವೆ.ಕಾರಣ ಗಣೇಶನಿಗೆ ಯಾವ ರೂಪದಲ್ಲಿ ಪ್ರಸಾದವನ್ನು ಅರ್ಪಿಸಿದರೂ ನಮ್ಮನ್ನು ನಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡಂತೆ.
ಇನ್ನು ಗಣೇಶೋತ್ಸವದ ಸಂದರ್ಭದಲ್ಲಿ ಲೋಕಮಾನ್ಯ ಶ್ರೀ ಬಾಲಗಂಗಾಧರ ತಿಲಕ್ ರವರನ್ನು ಸ್ಮರಿಸಬೇಕು.ಕಾರಣ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರ ಸಂಘಟನೆಗಾಗಿ ಗಣೇಶ ಎಂಬ ಈ ದೈವವನ್ನು ೧೮೯೩ ರಲ್ಲಿ ಪುಣೆಯ ಶನಿವಾರಪೇಟೆಯಲ್ಲಿ ಸಾರ್ವಜನಿಕರ ವೇದಿಕೆಗೆ ಕರೆತರುವುದರ ಮೂಲಕ ಪ್ರಪ್ರಥಮವಾಗಿ ಜನಸಮುದಾಯಕ್ಕೆ ಪರಿಚಯಿಸಿದ ಮಹಾ ಚೇತನ. ಇದರಿಂದಾಗಿ ಇಂದು ಗಣೇಶೋತ್ಸವಗಳು ಅತಿ ವಿಜೃಂಭಣೆಯಿಂದ ನಡೆಯುತ್ತಿವೆ.ಹೀಗಾಗಿ ಈ ಗಣೇಶ ಸಾರ್ವತ್ರಿಕ ಪೂಜಕನಲ್ಲದೆ ಭಾರತ ಸ್ವಾತಂತ್ರ್ಯದ ರೂವಾರಿಯೂ ಹೌದು.ಇಂಥ ದೇವರ ಸ್ಮರಣೆ,ಆರಾಧನೆ, ಸಂಕೀರ್ತನೆ, ಉತ್ಸವಗಳು ಇತ್ಯಾದಿ ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುವ ಉದ್ದೇಶ.ಇದರಿಂದ ಆತ ಸಂತೃಪ್ತನಾಗಿ ಜನತೆಗೆ, ದೇಶಕ್ಕೆ ಬರುವ ವಿಘ್ನ,ಕಷ್ಟ,ನಷ್ಟ, ದುಃಖ ಇತ್ಯಾದಿಗಳನ್ನು ನಿವಾರಿಸಿ ಸುಖ, ಶಾಂತಿ ನೆಮ್ಮದಿ ನೀಡುವನು.ಹಾಗೆಯೇ ಈ ಪ್ರಕ್ರಿಯೆಗಳಿಂದ ಜನರಲ್ಲಿ ಆಸ್ತಿಕತೆ ಉಳಿದು ಬೆಳೆದು ಸುಸಂಸ್ಕೃತರಾಗಿ,ಜನಸಮುದಾಯದಲ್ಲಿ ಪ್ರೀತಿ, ವಾತ್ಸಲ್ಯ, ಸಹಕಾರ, ಸಹಬಾಳ್ವೆ,ಭಾತೃತ್ವ ಐಕ್ಯಮತ್ಯೆ ನೆಲೆಸಲಿ ಹಾಗೂ ಭಾರತದ ಸಂಸ್ಕೃತಿ ಚಿರಾಯುವಾಗಲಿ ಎಂಬುದಾಗಿದೆ.
ಆದರೆ ಇಂದು ಗಣೇಶೋತ್ಸವಗಳು ಪಡ್ಡೆ ಹುಡುಗರ ಮೋಜಿನ ಆಟವಾಗಿದೆ.ಹಬ್ಬ ಬಂತೆಂದರೆ ಗುಂಪು ಕಟ್ಟಿಕೊಂಡು ಬಲವಂತವಾಗಿ ಹಣ ಸಂಗ್ರಹಿಸಿ ಎಲ್ಲೆಂದರಲ್ಲಿ ಪ್ರತಿಷ್ಟಾಪಿಸುವುದು, ಅಸಂಬದ್ಧವಾದ ಹಾಡುಗಳನ್ನು ಮೈಕಾಸುರನ ಮೂಲಕ ಕಿರುಚಿಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ವೇದಿಕೆಯಲ್ಲಿ ಸಿನಿಮಾ ಆರ್ಕೆಸ್ಟ್ರಾ, ಮೆರವಣಿಗೆಗಳು, ಕಿವಿಗಡಚಿಕ್ಕುವ ಹೆಚ್ಚಿನ ಶಬ್ದದ ಪಟಾಕಿಗಳನ್ನು ಸಿಡಿಸಿ ಕುಣಿದು ಕುಪ್ಪಳಿಸುವುದಾಗಿದೆ.ಇದರ ಫಲ ಶಬ್ದಮಾಲಿನ್ಯ ಜೊತೆಗೆ ರೋಗಿಗಳಿಗೆ, ವೃದ್ಧರಿಗೆ,ಓದುವವರಿಗೆ ತೊಂದರೆ. ಸಂಚಾರದ ಸಮಸ್ಯೆ, ವ್ಯಾಪಾರಿಗಳಿಗೆ ವ್ಯವಹಾರದ ಸಮಸ್ಯೆ,ಈ ಎಲ್ಲಾ ಸಮಸ್ಯೆಗಳನ್ನು ನಿಯಂತ್ರಿಸುವುದು ಪೋಲಿಸ್ ಇಲಾಖೆಗೊಂದು ಅತಿದೊಡ್ಡ ಸಮಸ್ಯೆ.ಹೀಗೆ ಶ್ರದ್ಧಾ ಭಕ್ತಿಯಿಂದ ಶಾಂತಿಯುತವಾಗಿ ನಡೆಯಬೇಕಾದ ಆಚರಣೆಗಳು ಸಮಸ್ಯೆಗಳ ನೆರಳಿನಲ್ಲಿ ನಡೆಯುತ್ತಿವೆ.ಇನ್ನಾದರೂ ಅರಿತು ಆಚರಿಸಬೇಕಿದೆ.ವರಕವಿ ಬೇಂದ್ರೆಯವರು ಹೇಳುವಂತೆ ” ಹೊರಗಿನ ದೇವರೇಕೆ,ಒಳದೈವಕ್ಕೆ ಕಿವಿಗೊಡು” ಎಂದಿದ್ದಾರೆ.ಕಲ್ಲುಗಳನ್ನು ಪೂಜಿಸಿ ಕಲ್ಲೇ ಆಗಬಾರದು, ಹೊರತಾಗಿ ಕಲ್ಲಿನೊಳಗಿರುವ ಚೈತನ್ಯವನ್ನರಿಯಬೇಕು. ಆಡಂಬರದ ಆಚರಣೆಗೆ ಪುಣ್ಯ ಕ್ಷೇತ್ರಗಳಿಗೆ ತೋರಿಕೆಗಾಗಿ ಹೋಗುವವರ ಬಗ್ಗೆ ಸೂಫಿ ಸಂತರಾದ ಶ್ರೀ ಅಬೂಯಾಜಿದ್ ರವರು ಸಾಧಕರ ಯಾತ್ರೆ ಯಾವ ರೀತಿ ಇರಬೇಕೆಂಬುದನ್ನು ಈ ರೀತಿ ಹೇಳಿದ್ದಾರೆ.
” ತೀರ್ಥಯಾತ್ರೆಗೆ ಮೊದಲನೆಯ ಸಲ ಹೋದಾಗ
ಗುಡಿ ಕಂಡಿತೇ,ಹೊರತು ದೇವರು ಕಾಣಲಿಲ್ಲ
ಎರಡನೆಯ ಸಲ ಹೋದಾಗ,ಗುಡಿಯೂ
ಕಂಡಿತು,ದೇವರೂ ಕಂಡನು. ಆದರೆ
ಮೂರನೆಯ ಸಲ ಹೋದಾಗ
ದೇವರು ಕಂಡನೇ ಹೊರತು ಗುಡಿ ಕಾಣಲಿಲ್ಲ”.
ಎಂತಹ ಉದಾತ್ತವಾದ ಮಾತು.ಹಾಗಾಗಿ ಅವರವರ ಸಾಧನೆಯ ಬದುಕಿನಲ್ಲಿ ಎಲ್ಲರೂ ಆದಷ್ಟು ಬೇಗನೆ ದೇವರನ್ನು ಕಾಣುವಂತಾಗಲಿ.ಎಂಬ ಶುಭ ಹಾರೈಕೆಗಳೊಂದಿಗೆಇಂದಿನ ಈ ಜ್ಞಾನದ ಜ್ಯೋತಿ ಕವಿ ಕೆ. ಎಸ್.ನರಸಿಂಹಸ್ವಾಮಿಯವರ ಮಾತಿನಂತೆ
ದೀಪವೂ ನಿನ್ನದೇ
ಗಾಳಿಯೂ ನಿನ್ನದೇ
ಆರದಿರಲೀ ಬದುಕು
ಈ ಜ್ಞಾನದ ಜ್ಯೋತಿ ಎಲ್ಲರ ಮನೆ-ಮನಗಳೆರಡನ್ನೂ ಬೆಳಗಲಿ. ವಿಘ್ನನಿವಾರಕನ ಅನುಗ್ರಹಕ್ಕೆ ಪಾತ್ರರಾಗೋಣ.
ಸರ್ವರಿಗೂ ಗೌರಿ – ಗಣೇಶ ಹಬ್ಬದ ಶುಭಾಶಯಗಳು ಸರ್ವರಿಗೂ ಸನ್ಮಂಗಳವಾಗಲಿ.
–ಶ್ರೀಮತಿ ರೇಖಾ ಪಾಟೀಲ
ಉಪನ್ಯಾಸಕರು
ರಾಯಚೂರು