ಹಸಿರು ಶಾಲಿನ ಬೀಜಗಳು ಮತ್ತು ರಾಜಕೀಯದ ಮಾಗಿ ಉಳುಮೆ
ಇನ್ನೇನು ಮುರ್ನಾಲ್ಕು ತಿಂಗಳಲ್ಲಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಜರುಗುವುದು ಖಾತರಿ. ಅತ್ಲಾಗೆ ಮುಂದಕ್ಕೆ ದೀಡು ವರ್ಷದಲ್ಲಿ ವಿಧಾನಸಭೆ ಚುನಾವಣೆಗಳು. ಅಂತೆಯೇ ಮಧ್ಯಮಾವಸ್ಥೆಯ ಅನೇಕ ರಾಜಕಾರಣಿಗಳಿಗೆ ತಾ.ಪಂ. ಮತ್ತು ಜಿ.ಪಂ. ಚುನಾವಣೆಯ ಕನಸುಗಳು. ಆದರೆ ಚಿಂತನಶೀಲ ಕನಸುಗಳು ರಚನಾತ್ಮಕ ಸಮಾಜಕ್ಕೆ ತಳಹದಿ. ತಳಮಟ್ಟದ ಈ ಚುನಾವಣೆಗಳು ಪಕ್ಷ ರಾಜಕಾರಣಕ್ಕಿಂತ ಸ್ಥಳೀಯ ಅಗತ್ಯಗಳ ತುರ್ತು ಸಂವೇದನೆಗಳನ್ನು ಹೊಂದಿರ್ತವೆ. ಲೋಕಲ್ ಬಾಡೀಸ್ ಚುನಾವಣೆಗಳು ಮುಂದಿನ ಎಮ್ಮೆಲ್ಲೆ ಚುನಾವಣೆಗಳಿಗೆ ದಿಕ್ಸೂಚಿಯೆಂಬ ಸಹಜ ನಂಬುಗೆ. ಅದೊಂದು ಬಗೆಯ ಬಡಬಡಿಕೆ ಕೂಡಾ.
ಸೋಜಿಗವೆಂದರೆ ವಿಧಾನಸಭೆ ಚುನಾವಣೆಗಳು ಲೋಕಸಭೆ ಚುನಾವಣೆಗೆ ದಿಕ್ಸೂಚಿಯೆಂದೇನಲ್ಲ. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಒಂದಷ್ಟು ಜನಪರ ಆಡಳಿತ ನೀಡುತ್ತಿದ್ದ ವರ್ಷವೊಪ್ಪತ್ತಿನಲ್ಲೇ ಜರುಗಿದ ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಪಡೆಯುತ್ತದೆ. ಹೀಗೆ ಬಹಳಷ್ಟು ಬಾರಿ ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳು ಆಯ್ಕೆಯಾದ ನಿದರ್ಶನಗಳಿವೆ. ಅದು ಪ್ರಜಾಸತ್ತಾತ್ಮಕ ಜನತಂತ್ರದ ಸೊಬಗು. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇಪಕ್ಷದ ಸರಕಾರ ಇದ್ದಾಗೇನು ಕಲ್ಯಾಣರಾಜ್ಯದ ಕನಸುಗಳು ಅಡರಾಶಿ ಈಡೇರಿದ, ಸುಸ್ಥಿರ ಬದುಕಿನ ನೆನಪಂತೂ ಸ್ವಾತಂತ್ರ್ಯೋತ್ತರ ಭರತವರ್ಷಕ್ಕಿಲ್ಲ. ಈ ಮಾತಿಗೆ ಎಲ್ಲಪಕ್ಷದ ಸರಕಾರಗಳು ಹೊರತಲ್ಲ.
ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳು ಜನಾದೇಶ ಪಡೆದು ರಾಜ್ಯಗಳ ಹಿತ ಕಾಪಾಡುತ್ತಿರುವ ನಿದರ್ಶನಗಳು ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿವೆ. ಹಾಗೆ ನೋಡಿದರೆ ಕೆಲಮಟ್ಟಿಗೆ ಕೇರಳದ ಎಡಪಂಥೀಯ ಸರಕಾರವೂ ಪ್ರಾದೇಶಿಕ ನೆಲೆಗಟ್ಟಿನದೇ. ಕೇಂದ್ರ ಮತ್ತು ರಾಜ್ಯದ ನಡುವಿನ ಮಧುರ ಬಾಂಧವ್ಯದಷ್ಟೇ ಪ್ರಾದೇಶಿಕ ಹಿತಾಸಕ್ತಿಯ ಬಾಂಧವ್ಯ ಅಕ್ಷರಶಃ ಅಲ್ಲಗಳೆಯಲಾಗದು.
(ಫ್ರೋ.ಸಿ.ನರಸಿಂಹಪ್ಪ)
ಮತ್ತೊಂದೆಡೆ ಇದು ದೇಶಭಕ್ತಿ ಮತ್ತು ಪ್ರದೇಶಭಕ್ತಿ ಎರಡೂ ಏಕಕಾಲಕ್ಕೆ ನೆಲೆ ಕಂಡುಕೊಳ್ಳುವ ಆನುಷಂಗಿಕ ಫಲ. ಅಂದರೆ ರಾಷ್ಟ್ರ ಮತ್ತು ರಾಜ್ಯದ ಚುಕ್ಕಾಣಿ ಒಂದೇಪಕ್ಷದ ಕೈಯಲ್ಲಿರಬೇಕೆಂಬ ಏಕ ಶಿಲಾಕೃತಿ ಮನಸ್ಥಿತಿಯ ರಾಜಕಾರಣವಲ್ಲ. ಒಂದು ರಾಷ್ಟ್ರ ಹಲವು ಸಂಸ್ಕೃತಿಗಳೇ ಬಹುತ್ವ ಭಾರತದ ಏಕತೆ. ಜನರು ಆಯ್ಕೆ ಮಾಡಿಕೊಳ್ಳುವ ರಾಜ್ಯ ಮತ್ತು ರಾಷ್ಟ್ರದ ನೆಮ್ಮದಿಗಳ ಹುಡುಕಾಟ. ಅದು ಸಂವಿಧಾನದ ಆಶಯವು ಹೌದು. ರಾಜ್ಯಗಳ ಹಿತ ಮತ್ತು ರಾಜಕೀಯ ಸುಸ್ಥಿರತೆ ಕಾಪಾಡಲು ಪ್ರಾದೇಶಿಕ ಪಕ್ಷಗಳೇ ವಾಸಿ. ಆಗಾಗ ಮಂತ್ರಿ, ಮುಖ್ಯಮಂತ್ರಿಗಳ ಆಯ್ಕೆ, ಪದಚ್ಯುತಿಗಳೆಂಬ ಹೈಕಮಾಂಡ್ ಕಿಟಿಕಿಟಿ ಇರಲ್ಲ.
ನಿಜವಾದ ರಾಷ್ಟ್ರೀಯತೆಯೆಂದರೆ ಕನ್ನಡದ ರಾಷ್ಟ್ರೀಯತೆಯಂತಹ ಅನೇಕ ಅಸ್ಮಿತೆಗಳ ಬಹುಳಪ್ರಜ್ಞೆ. ಇಂತಹ ಬಹುಮುಖಿ ಪ್ರಭುತ್ವದಿಂದ ಭಾರತದ ಸಮಗ್ರ ಅಭ್ಯುದಯ ಸಾಧ್ಯ. ಬಹುತ್ವವಿರೋಧಿ ರಾಜಕೀಯ ಪ್ರಜ್ಞೆಗೆ ತಕ್ಕ ಉತ್ತರದಂತೆ ದಕ್ಷಿಣದ ರಾಜ್ಯಗಳ ಜನಾದೇಶ. ಅದು ಪ್ರಾದೇಶಿಕ ರಾಜಕೀಯ ಪ್ಯಾರಾಮೀಟರ್. ಅಷ್ಟಕ್ಕೂ ಕರ್ನಾಟಕದಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯ ಜನರ ಹುಕುಮು ನಿಚ್ಚಳವಾಗಿರಲಿಲ್ಲ. ಮುಂಬರುವ ಚುನಾವಣೆಗಳ ಸ್ಥಳೀಯ ಸರ್ಕಾರದ ಆಯ್ಕೆಯ ನೀಲನಕ್ಷೆ ಸೃಷ್ಟಿವುದು ಕಷ್ಟಸಾಧ್ಯ. ಈ ಲೇಖನ ಬರೆಯುವಾಗ ಆಡಳಿತಪಕ್ಷ ಪರವಾದ ಮೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ.
ಜನಪರ ಸಮಾಜ ವಿಜ್ಞಾನಿಗಳು ಮತ್ತು ರಾಜಕೀಯ ವಿಶ್ಲೇಷಕರಿಂದ ರಾಷ್ಟ್ರ ಮತ್ತು ರಾಜ್ಯಮಟ್ಟದ ಆಳುವ ಪಕ್ಷಗಳ ದುರಾಡಳಿತ ಕುರಿತು ವಸ್ತುನಿಷ್ಠ ಮತ್ತು ಕಟುವಿಮರ್ಶೆಗಳು ಬರುತ್ತವೆಂದು ಇಟ್ಟುಕೊಳ್ಳೋಣ. ಅಂತಹ ಸಂದರ್ಭಗಳ ದುರ್ವಿನಿಯೋಗ ಮತ್ತು ಅಪಾರ್ಥದ ಬಳಕೆಗಳೇ ಅಧಿಕ. ಆ ಮೂಲಕ ಸಾಮಾನ್ಯ ಮತದಾರರ ಸೂಕ್ತ ಆಯ್ಕೆಯ ಅವಕಾಶಗಳನ್ನೇ ಅಪಹರಿಸಲಾಗುತ್ತದೆ. ಉಲ್ಲೇಖಿತ ವಸ್ತುನಿಷ್ಠ ರಾಜಕೀಯ ವಿಶ್ಲೇಷಣೆಗಳನ್ನು ಆಳುವಪಕ್ಷಗಳು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಕಣ್ತೆರೆಸುವ ಅಂತಹ ಕಟು ವಿಮರ್ಶೆಗಳಿಂದ ಎಚ್ಚೆತ್ತು ಜನಪರ ಆಡಳಿತಕ್ಕೆ ತೆರಳಬೇಕು.
ದುರಂತ ಮತ್ತು ವ್ಯತಿರಿಕ್ತವಾದ ಮಹತ್ವದ ಸಂಗತಿಯೇನು ಗೊತ್ತೆ.? ಆಡಳಿತ ಸರಕಾರಗಳ ಪ್ರಭುತ್ವ ವಿರುದ್ಧದ ಆರೋಗ್ಯಕರ ಟೀಕೆಗಳನ್ನು ವಿರೋಧಪಕ್ಷಗಳ ಪರ ಮತ್ತು ಅವು ತಮ್ಮ ಮೆಚ್ಚುಗೆಯೆಂಬ ತಪ್ಪು ತಿಳಿವಳಿಕೆಗಳ ಸೃಷ್ಟಿ. ಅಂತಹ ರಾಜಕೀಯ ಸನ್ನಿವೇಶಗಳ ಭ್ರಮಾಧೀನ ವಾತಾವರಣವನ್ನು ಆಯಾ ಕಾಲದಲ್ಲಿ ಪಕ್ಷಗಳು ನಿರ್ಮಾಣಗೊಳಿಸುತ್ತಾ ಬಂದಿರುವುದು ಹೊಸದೇನಲ್ಲ. ಒಟ್ಟಿನಲ್ಲಿ ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯೆ ನೀಡುವುದು ಒಂದು ಬಗೆಯ ಸಾಂಕ್ರಾಮಿಕ ರೋಗವಾಗುತ್ತಿದೆ. ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೂ ತಾಜಾತನದ ಚೈತನ್ಯ ಕಳಕೊಳ್ಳುತ್ತಿವೆ.
ರೈತರು, ಕಡುಬಡವರು, ಅಲ್ಪಸಂಖ್ಯಾತರು, ಹಿಂದುಳಿದವರು, ಸಮಷ್ಟಿಯ ಕಟ್ಟೆಕಡೆಯ ವ್ಯಕ್ತಿಯ ಉದ್ದಾರದ ಮಾತಾಡುವ ರಾಷ್ಟ್ರೀಯ ಪಕ್ಷದ ಅಜೆಂಡಾಗಳಿಂದ ಗಮನಾರ್ಹ ಫಲಿತವ್ಯಗಳೇನಿಲ್ಲ. ಹಾಗೆಯೇ ಧರ್ಮ ಮತ್ತು ಕೋಮುನಿಷ್ಠೆಯ ಪಕ್ಷಗಳ ಅಜೆಂಡಾಗಳಿಂದ ಯಾವುದೇ ಮಹತ್ವದ ಜನಪರ ಬದಲಾವಣೆಗಳು ದೊರಕಿಲ್ಲ. ಹೀಗಿರುವಾಗ ರಾಷ್ಟ್ರೀಯ ಪಕ್ಷಗಳು ಚುನಾವಣೆಗಳ ಮೇಲೆ ಬೀರುವ ಪ್ರಭಾವಕ್ಕೆ ಅರ್ಥವಿಲ್ಲ. ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಎಲ್ಲ ಚುನಾವಣೆ ಗೆಲ್ಲುವ ಉಮೇದು. ಆಯಾಕ್ಷೇತ್ರದ ಎಮ್ಮೆಲ್ಲೆ ಆದವರಿಗೆ ಮುಂದಿನ ಚುನಾವಣೆಗೆ ತನ್ನಸ್ಥಾನ ಭದ್ರವಾಗಿಟ್ಟುಕೊಳ್ಳುವ ಅನಿವಾರ್ಯತೆ. ಅದಕ್ಕಾಗಿ ಏನೆಲ್ಲಾ ಕಸರತ್ತುಗಳ ಸುರಿಮಳೆ.
ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭದಲ್ಲಿ ಎಂಬತ್ತರ ದಶಕ ಮಹತ್ತರ ಕಾಲಘಟ್ಟ. ಅದು ಪ್ರಗತಿಪರ ಚಳವಳಿಗಳ ಜನಸಂಸ್ಕೃತಿ ಚಿಂತನೆಯ ಸ್ಥಿತ್ಯಂತರದಕಾಲ. ರಾಜಕೀಯ ಹಾಗೂ ಸಾಮಾಜಿಕ ದ್ರುವೀಕರಣದ ಸಂಕ್ರಮಣ ಕಾಲ. ಅವತ್ತಿನ ಕಾಂಗ್ರೆಸ್ ದುರಾಡಳಿತದ ವಿರುದ್ದ ಜನಶಕ್ತಿ ಸಿಡಿದೆದ್ದ ಪರ್ವಕಾಲ. ದಮನಕ್ಕೆ ತುತ್ತಾದ ಎಲ್ಲವರ್ಗಗಳು ಒಂದಾಗಿ ಐಕ್ಯತೆಯ ಹೋರಾಟದ ಭೂಮಿಕೆ ರೂಪಿಸಿದ ಚಳವಳಿಗಳ ಐತಿಹಾಸಿಕ ದಶಕ.
ಹಾಗೆ ನೋಡಿದರೆ ಅಂದಿಗಿಂತ ಇಂದಿನದು ಅಕ್ಷರಶಃ ದುರಿತಕಾಲ. ಆದರೆ ಇಂದಿನ ಬಹುತೇಕ ಚಳವಳಿ, ಹೋರಾಟಗಳು ಕಸುವು ಕಳಕೊಂಡಿವೆ. ಅದು ಕೆಲವರಿಗೆ ಕಸುಬಾಗಿದೆ. ವರ್ತಮಾನದ ಬಹುತೇಕ ಹೋರಾಟಗಳು ಜನರ ವಿಶ್ವಾಸ ಮತ್ತು ಸಂವೇದನೆಯ ಸೂಕ್ಷ್ಮತೆಯನ್ನು ಕಳಕೊಂಡಿವೆ. ಎಂಬತ್ತರ ದಶಕದ ರೈತ ಚಳವಳಿ, ದಲಿತ ಚಳವಳಿ, ಭಾಷಾ ಚಳವಳಿ, ಬಂಡಾಯ ಸಾಹಿತ್ಯ ಚಳವಳಿಗಳು ಇವತ್ತಿಗೂ ರೋಮಾಂಚನದ ನೆನಪು ತರಿಸುತ್ತವೆ.
ಪ್ರಸಕ್ತ ಚಳವಳಿಗಳೆಂದು ಹೇಳಲಾಗುವ ಅವು ನಿಜ ಚಳವಳಿಯ ತೀವ್ರತೆ ಮಾತ್ರವಲ್ಲ ಅದರ ಮೂಲ ಅಸ್ಮಿತೆಯನ್ನೇ ಕಳೆದುಕೊಂಡಿವೆ. ಸಮುದಾಯ ಪ್ರಜ್ಞೆಯ ಮುಖ್ಯಧಾರೆಯಿಂದ ಅವು ವ್ಯಕ್ತಿಗತ ನೆಲೆಗೆ ಶಿಫ್ಟಾಗಿವೆ. ಸಮಷ್ಟಿ ಪ್ರಜ್ಞೆಯ ಜೀವಶಕ್ತಿ ಉಳಕೊಂಡಿಲ್ಲ. ರೈತ ಚಳವಳಿಗಳ ಸಾಂಸ್ಕೃತಿಕ ಮತ್ತು ಗ್ರಾಮ ಸ್ವರಾಜ್ಯದ ಸಮತೆಯ ನೆಲೆಗಳ ಕೊಂಡಿ ಕಳಚಿಕೊಂಡಿವೆ. ಅಂತೆಯೇ ಅವು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸನ್ನಿಹಿತಗೊಂಡಿದೆ. ಕರ್ನಾಟಕದ ಜನ ಚಳವಳಿಗಳ ಸ್ಥಗಿತ ಸ್ಥಿತಿಗೆ ಜಾಗತೀಕರಣದ ಪಾತ್ರ ಹಿರಿದಾದುದು.
(ಡಾ.ಪ್ರಕಾಶ ಕಮ್ಮರಡಿ)
ಎಚ್. ಎಸ್. ರುದ್ರಪ್ಪ ಮತ್ತು ಪ್ರೊ. ನಂಜುಂಡಸ್ವಾಮಿ ಅವರು ಕಟ್ಟಿ ಬೆಳೆಸಿದ ಅಖಂಡ ಕರ್ನಾಟಕ ಮಟ್ಟದ ರೈತಚಳವಳಿ ಅಂದು ಚುನಾವಣಾ ರಾಜಕೀಯಕ್ಕೆ ದುಮುಕಿದಾಗ ಬಲಾಡ್ಯ ಬಲವೇನು ದೊರಕಿರಲಿಲ್ಲ. ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ದೊರಕಿತ್ತು. ಆ ಮೂಲಕ ಪ್ರಗತಿಪರ ಚಳವಳಿಗಳು ಆಳುವ ಸರ್ಕಾರಗಳನ್ನು ಹದ್ದುಬಸ್ತಿನಲ್ಲಿಡುವ ಎಚ್ಚರದ ಶಕ್ತಿಕೇಂದ್ರಗಳಾಬೇಕೆಂಬ “ಮೆಸೆಜ್” ಕೊಟ್ಟಂತಿತ್ತು. ಇದೊಂದು ಬಗೆಯ ರೈತ ಚಳವಳಿ ಮೀಮಾಂಸೆಯು ಹೌದು.
ಜಾಗತೀಕರಣದ ಪರಿಣಾಮವಾಗಿ ಎಲ್ಲ ಕ್ಷೇತ್ರಗಳಲ್ಲೂ ವ್ಯಕ್ತಿಕೇಂದ್ರಿತ ಮತ್ತು ಸ್ವಾರ್ಥಪರ ಬದುಕಿಗೆ ಇಂಬು ದೊರಕಿದೆ. ಮನುಷ್ಯ ಸಂಬಂಧಗಳು ಛಿದ್ರಗೊಂಡಿವೆ. ಅವಿಭಜಿತ ಕುಟುಂಬಗಳ ಜೀವಪ್ರೀತಿ, ಮಾನವೀಯ ಸಂಬಂಧಗಳ ಅಂತಃಕರಣ, ತಾಯ್ತನ ಇವೆಲ್ಲ ಕೇವಲ ಪದಕೋಶಗಳ ಶಬ್ದಗಳಾಗಿ ವಿಜೃಂಭಿಸುತ್ತಿವೆ. ಮನುಷ್ಯರ ಜೀವಕ್ಕೆ ಕಿಲುಬುಕಾಸಿನ ಕಿಮ್ಮತ್ತಿಲ್ಲ ಎನ್ನುವಂತಾಗಿದೆ. ಮನುಷ್ಯರನ್ನು ಕೇವಲ ‘ಮತ’ಹಾಕುವ ಯಂತ್ರದಂತೆ ನೋಡುವ ಸ್ಥಿತಿ. ಜಾಗತೀಕರಣೋತ್ತರ ನೆಲೆಗಳಲ್ಲಿ ಚಳವಳಿಗಳನ್ನು ಗ್ರಹಿಸುವ ಮತ್ತು ಪುನರ್ ರೂಪಿಸುವ ತುರ್ತು ಅಗತ್ಯಗಳಿವೆ.
ಇಂತಹದ್ದೊಂದು ಸಂಕೀರ್ಣ ಸನ್ನಿವೇಶದಲ್ಲಿ ಮೊನ್ನೆ ಸೆಪ್ಟೆಂಬರ್ ಮೂರರಂದು ದಾವಣಗೆರೆ ಶಹರದ ಪ್ರವಾಸಿ ಮಂದಿರದಲ್ಲಿ “ಪ್ರಗತಿಪರ ಚಳವಳಿ ಮತ್ತು ಚುನಾವಣೆಗಳು” ಎಂಬ ಚಿಂತನಶೀಲ ವಿಚಾರಗಳ ಪೂರ್ವಭಾವಿ ಸಭೆ ಜರುಗಿತು. ಜೀವಪರ ಆಲೋಚನೆಗಳ ಅಪಾರ ಅರಿವಿರುವ ರೈತನಾಯಕ ತೇಜಸ್ವಿ ಪಟೇಲ್ ಸಭೆ ಕರೆದಿದ್ದರು.
ತೇಜಸ್ವಿ ಪಟೇಲ್, ಮಾಜಿ ಮುಖ್ಯಮಂತ್ರಿ ಜೆ. ಎಚ್. ಪಟೇಲರ ತಮ್ಮನ ಮಗ. ಸಹಜವಾಗಿ ಪಟೇಲರೆಂಬ ಸಮಾಜವಾದಿ ಗರಡಿಮನೆಯ ನಿವಾಸಿ. ನಿಕಟ ವ್ಯಾಸಂಗದ ಸಾಮು ತೆಗೆದವರು. ಅಧ್ಯಯನದ ಸಾತತ್ಯ ಮತ್ತು ಪ್ರಯೋಗಶೀಲ ವಿಚಾರಗಳ ಮೂಲಕ ಗಟ್ಟಿಗೊಳ್ಳುತ್ತಿರುವವರು ತೇಜಸ್ವಿ ಪಟೇಲ್. ದೂರದ ದಿಲ್ಲಿಯ ರೈತ ಆಂದೋಲನ, ಇಲ್ಲಿಯ ರೈತ ಹೋರಾಟದ ಇಂಚಿಂಚು ಅನುಭವ ಬದುಕುತ್ತಿರುವವರು. ಅನೇಕ ಪ್ರಗತಿಪರ ಹೋರಾಟಗಳ ವಿವೇಕ ಮತ್ತು ವಿವೇಚನೆಯುಳ್ಳ ವಿನಯವಂತರು. ಅಲ್ಪಸಂಖ್ಯಾತರು, ಮಹಿಳೆಯರು, ದಲಿತರು, ದಮನಿತರ ದನಿಗಳನ್ನು ಆಲಿಸುವ ಮತ್ತು ಸಶಕ್ತಗೊಳಿಸುವ ಸಹೃದಯತೆ. ಕೋಮು ಸೌಹಾರ್ದತೆಯಂತಹ ವಿಷಯಾಧಾರಿತ ಚಳವಳಿಗಳಲ್ಲಿ ತಮ್ಮ ಆರೋಗ್ಯಕರ ಆಲೋಚನೆಗಳ ಮೂಲಕ ಸ್ಪಷ್ಟತೆಯ ಹಾದಿ ಕಂಡುಕೊಂಡವರು. ಜನಪರ ಚಳವಳಿಗಳ ಚುರುಕಿನ ಚಲನಶೀಲತೆಯನ್ನು ರಾಜಕೀಯ ಅಂಗಳದಲ್ಲೂ ಕಾಣ ಬಯಸುವವರು.
ಈ ಸಭೆಗೆ ಕೃಷಿಬೆಲೆ ಆಯೋಗದ ನಿಕಟಪೂರ್ವ ಅಧ್ಯಕ್ಷ ಹಾಗೂ ಕೃಷಿ ವಿಜ್ಞಾನಿ ಪ್ರೊ. ಟಿ. ಎನ್. ಪ್ರಕಾಶ್ ಕಮ್ಮರಡಿ ಆಗಮಿಸಿದ್ದರು. ಮಲೆನಾಡಿನ ಹಸಿರು ಚಿಂತನೆಗಳ ಸಮಾಜವಾದಿ ಪ್ರೇರಣೆಯ ಪೈರು ಪ್ರೊ. ಕಮ್ಮರಡಿ.
ದಿಲ್ಲಿಯ ರೈತಹೋರಾಟಕ್ಕೆ ಬರುವ ನವೆಂಬರ್ ೨೬ಕ್ಕೆ ವರ್ಷ ತುಂಬಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿಲ್ಲಿಯ ಈ ಹೋರಾಟ ಮಹತ್ವ ಪಡೆದಿದೆ. ಆದರೆ ದೇಶಿಯ ಮಟ್ಟದಲ್ಲಿ ನೆಲಮೂಲಕ್ಕೆ ತಲುಪುತ್ತಿಲ್ಲ. ಇಲ್ಲಿಯ ನಮಗೇ ದಿಲ್ಲಿ ದೂರವಾಗಬೇಕಿಲ್ಲ. ರೈತರಿಗೆ ರಾಜಕೀಯ ಪ್ರಜ್ಞೆಯ ಅರಿವಿನ ಅಗತ್ಯವಿದೆ. ರೈತರ ಆತ್ಮಹತ್ಯೆ, ಹಸಿವಿನ ಸಾವುಗಳು ನಿಂತಿಲ್ಲ. ಮುಂಬರುವ ಸ್ಥಳೀಯ ಹಾಗೂ ವಿಧಾನಸಭೆ ಚುನಾವಣೆಗಳಿಗೆ ಮುಖಾಮುಖಿಯಾಗಿ ರೈತಶಕ್ತಿಯ ಪ್ರದರ್ಶನ ಆಗಬೇಕು. ವೃತ್ತಿಪರ ಮುಠ್ಠಾಳ ರಾಜಕಾರಣದಿಂದ ಮುಕ್ತಿ ಪಡೆಯಬೇಕು. ಆ ನಿಟ್ಟಿನಲ್ಲಿ ವಿವಿಧ ಸಂಘಟನೆ ಮತ್ತು ಸಂಘಟಕರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು. ನಮ್ಮ ದೇಶಿಯ ಜವಾರಿ ಬೀಜಗಳನ್ನು ಬಿತ್ತಲು ಭೂಮಿ ಹದಗೊಳಿಸಬೇಕಿದೆ. ಅದಕ್ಕಾಗಿ ರಾಜಕೀಯದ “ಮಾಗಿ ಉಳುಮೆ” ಮಾಡಬೇಕಿದೆ. ಈ ನಡುವೆ ದೆಹಲಿ ಮಟ್ಟದಲ್ಲಿ ಪ್ರೊ. ಅಶೋಕ ತನ್ವಾರ್ ಅವರು ಹುಟ್ಟು ಹಾಕಿರುವ “ಅಪ್ನಾ ಭಾರತ ಮೋರ್ಚಾದ” ಕನಸುಗಳು ಬಿತ್ತರಗೊಳ್ಳಬೇಕಿದೆ. ಇದೆಲ್ಲವನ್ನು ಅಂದು ಸಭೆಗೆ ಹಂಚಿಕೊಂಡದ್ದು ಪ್ರೊ. ಪ್ರಕಾಶ್ ಕಮ್ಮರಡಿ.
(ತೇಜಸ್ವಿ ಪಟೇಲ್ )
ಅಜಮಾಸು ಮುವತ್ತಕ್ಕು ಹೆಚ್ಚು ಮಂದಿ ರೈತಮುಖಂಡರು, ಕಾರ್ಮಿಕ ನಾಯಕರು, ಸಾಹಿತಿಗಳು ಭಾಗವಹಿಸಿದ್ದ ಪೂರ್ವಭಾವಿ ಸಭೆ ಭರವಸೆದಾಯಕವಾಗಿತ್ತು.
ನೆಲಮೂಲದ ಕೃಷಿ, ಫಸಲು, ಬೆಲೆ ಇತ್ಯಾದಿ ಅಸಲಿಯತ್ತುಗಳ ಅನನ್ಯ ಜ್ಞಾನ ಹೊಂದಿರುವವರು ಮತ್ತು ಅಖಿಲ ಭಾರತಮಟ್ಟ ರೈತಹೋರಾಟದ ಒಡನಾಡಿಯಾದ ಪ್ರೊ. ಸಿ. ನರಸಿಂಹಪ್ಪನವರು ಇಂತಹ ಹತ್ತಾರು ಹೊಸ ವಿಚಾರಧಾರೆಗಳ ಆಡುಂಬೊಲ. ಆ ಕುರಿತು ಮತ್ತೊಮ್ಮೆ ಬರೆಯುವೆ. ಅವರು ೧೯೭೮ ರಷ್ಟು ಹಿಂದೆಯೇ ಒಂದು ಕೋಟಿಯಷ್ಟು ಸಂಖ್ಯೆಯ ರೈತರು ಭಾಗವಹಿಸಿದ ದೆಹಲಿಯ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಗಮನ ಸೆಳೆದವರು. ಎಂದೋ ಕೇಂದ್ರ ಸರಕಾರದ ಕೃಷಿ ಮಂತ್ರಿಯಾಗಬೇಕಿದ್ದ ಎಲ್ಲ ಅರ್ಹತೆಯುಳ್ಳವರು. ಪ್ರಾಯಶಃ ಈಗಲೂ ಅವರ ಸಂಪರ್ಕಗಳು ಅಪ್ಡೇಟ್ ಆಗಿರಬಲ್ಲವು.
ರೈತರು ಮಾತ್ರವಲ್ಲದೇ ಮಹಿಳೆಯರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಸಮಾಜದ ಎಲ್ಲಸ್ತರದ ಜನರಲ್ಲಿ ಹೊಸ ರಾಜಕೀಯ ಪ್ರಜ್ಞೆ ಮೂಡಿಸಲು ಮತ್ತೆ ಎಂಬತ್ತರ ದಶಕದ ಪ್ರಗತಿಪರ ಚಳವಳಿಗಳು ಅನುಸಂಧಾನ ಮತ್ತು ಹೊಸ ವಿನ್ಯಾಸಗಳೊಂದಿಗೆ ಮುಂಚೂಣಿಗೆ ಬರಬೇಕಿದೆ. ಸಮಸ್ತ ರೈತರ ವಿಮೋಚನೆಗಾಗಿ ರೈತ ಸಂಘಟನೆಯ ಎಲ್ಲ ಬಣಗಳು ಒಗ್ಗೂಡಬೇಕು. ಹಸಿರು ಶಾಲು ಮತ್ತು ಕೆಂಪು ಶಾಲುಗಳು ಐಕ್ಯತೆಯ ಹೋರಾಟಕ್ಕೆ ಸಜ್ಜಾಗಬೇಕು.
–ಮಲ್ಲಿಕಾರ್ಜುನ ಕಡಕೋಳ
9341010712