ಗಜ಼ಲ್ 

ಗಜ಼ಲ್ 

ನಯವಂಚಕ ತೋಳಗಳ ನಡುವೆ ಇರಬೇಕಿದೆ ಗೆಳತಿ
ಮುಖವಾಡಗಳ ಬದಲಿಸುವವರ ಜೊತೆಗೆ ಬಾಳಬೇಕಿದೆ ಗೆಳತಿ

ಬದುಕಿನ ಬವಣೆಗಳು ಮುಗಿಯಲಾರವೇ
ತುಟಿ ಕಚ್ಚಿ ಮೌನವಾಗಿ ತಾಳಬೇಕಿದೆ ಗೆಳತಿ

ಮನದ ತುಡಿತಗಳು ಎಲ್ಲೂ ಕೇಳದಂತೆ ಸುಮ್ಮನಿವೆ
ಎದೆಯ ಗೋರಿಯೊಳಗೆ ಭಾವನೆಗಳ ಹೂಳಬೇಕಿದೆ ಗೆಳತಿ

ಕಂಬನಿ ಬತ್ತಿದ ಕಣ್ಣುಗಳಿಂದ ನೆತ್ತರು ಸುರಿಯುತಿದೆ
ಮಡುಗಟ್ಟಿದ ಮೂಕ ವೇದನೆ ಅಳಬೇಕಿದೆ ಗೆಳತಿ

ಪಂಜರದೊಳಗಿನ ಹಕ್ಕಿ ಹಾರ ಬಯಸಿದೆ ಬೇಗಂ
ಸಂಪ್ರದಾಯಗಳ ಬೇರುಗಳ ಕೀಳಬೇಕಿದೆ ಗೆಳತಿ

ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ 

Don`t copy text!