ವಿವಿಧ ಸಂಘಟನೆಗಳಿಂದ ಪ್ರತಿಭಟನೆ
e-ಸುದ್ದಿ ಮಸ್ಕಿ
ಮಸ್ಕಿ: ಕೇಂದ್ರ ಸರ್ಕಾರದ ವಿವಾದಿತ ಮೂರು ಮಸೂದೆಗಳನ್ನು ವಾಪಾಸು ಪಡೆಯಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಕಾಂಗ್ರೆಸ್ ನ ಕಿಶನ್ ಸೆಲ್, ಕರ್ನಾಟಕ ರೈತ ಸಂಘದ, ಕರವೇ, ರೈತ ಸಂಘ, 5 (ಎ) ನೀರಾವರಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಪ್ರತ್ಯೇಖವಾಗಿ ಪ್ರತಿಭಟನೆ ನಡೆಸುವ ಮೂಲಕ ಎಡ ಪಕ್ಷಗಳು ಕರೆ ನೀಡಿದ್ದ ಭಾರತ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದವು.
ನೀರಾವರಿ ಸಂಘ ಹಾಗೂ 5 (ಎ) ಕಾಲುವೆ ಹೋರಾಟ ಸಮಿತಿ, ಸಿಐಟಿಯುಸಿ ನೇತೃತ್ವದಲ್ಲಿ ಕೇಂದ್ರದ ಮೂರು ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ಹೋರಾಟ ಸಮಿತಿ ಮುಖಂಡ ಬಸವರಾಜಪ್ಪಗೌಡ ಹರ್ವಾಪೂರ ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದರು.
ಹೋರಾಟಕ್ಕೆ ಬೆಂಬಲ ಸೂಚಿ ಕಾಂಗ್ರೆಸ್ ನ ಕಿಶನ್ ಸೆಲ್ ಘಟಕದ ನಗರ ಬ್ಲಾಕ್ ಅಧ್ಯಕ್ಷ ಬಸವಂತಪ್ಪ ಮಟ್ಟೂರು, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಮೈಬುಸಾಬ ಮುದ್ದಾಪೂರ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಸವೇಶ್ವರ ವೃತ್ತದಲ್ಲಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ರೈತ ವಿರೋಧಿ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು.
ಬೆಳಿಗ್ಗೆ ಸಂತೋಷ ದಿನ್ನಿ ನೇತೃತ್ವದಲ್ಲಿ ಕರ್ನಾಟಕ ರೈತ ಸಂಘ ಸೇರದಂತೆ ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಗಡಿಗಳಿಗೆ ಬಂದ್ ಸಹಕರಿಸುವಂತೆ ಮನವಿ ಮಾಡಿದರು.
ಹಳೆಯ ಬಸ್ ನಿಲ್ದಾಣದ ಡಾ. ಅಂಬೇಡ್ಕರ್ ಪ್ರತಿಮೆ ಮುಂದೆ ಕೇಂದ್ರ ಸರ್ಕಾರ ಮಸೂದೆ ವಾಪಾಸು ಪಡೆಯುವಂತೆ ಆಗ್ರಹಿಸಿ ಘೋಷಣೆ ಹಾಕಿದರು.
ಕರವೇ ಮನವಿ ಸಲ್ಲಿಕೆ : ಕೇಂದ್ರ ಸರ್ಕಾರ ರೈತರಿಗೆ ಮಾರಕವಾದ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು.
ಕೂಡಲೇ ರೈತರಿಗೆ ಮಾರಕವಾದ ಮಸೂದೆಗಳನ್ನು ವಾಪಾಸು ಪಡೆಯುವಂತೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸಲ್ಲಿಸಿದರು. ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಮುರಾರಿ ಸೇರಿದಂತೆ ಕರವೇ ಪದಾಧಿಕಾರಿಗಳು ಪಾಲ್ಗೊಂಡಿದ್ದರು.