ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರ
ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ.
ಅಯ್ಯಾ, ನಿಮ್ಮ ಶರಣರಿದ್ದ ಪುರವೆ ಕೈಲಾಸಪುರವಯ್ಯಾ.
ಅಯ್ಯಾ, ನಿಮ್ಮ ಶರಣರು ನಿಂದುದೆ ನಿಜನಿವಾಸವಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ,
ಆನು ಸಂಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು
-ಅಕ್ಕ ಮಹಾದೇವಿ
ಅಕ್ಕ ಮಹಾದೇವಿ ಶರಣ ಸಂಕುಲದ ಶ್ರೇಷ್ಠ ವಚನಕಾರ್ತಿ. ಅವಳ ವಚನಗಳಲ್ಲಿ ವೈರಾಗ್ಯ ವಿರಕ್ತಿ ಯೋಗಾಂಗ ,ಅನುಭಾವ ಅಧ್ಯಾತ್ಮ ಮುಂತಾದ ಅನೇಕ ವಿವಿಧ ಹತ್ತು ಹಲವು ತತ್ವಗಳ ನಿಲುವುಗಳ ಅನಾವರಣವಾಗುತ್ತದೆ.
ಚೆನ್ನ ಮಲ್ಲಿಕಾರ್ಜುನ ತನ್ನ ಗಂಡ ಎಂದು ನಂಬಿಕೊಂಡು ಸಾಂಸಾರಿಕ ಸುಖವನ್ನು ನಿರಾಕರಿಸಿ ಪಾರಮಾರ್ಥಿಕ ವಿಶಾಲ ಜಗತ್ತಿನಲ್ಲಿ ತನ್ನ ಅನುಭವವನ್ನು ಹುರಿಗೊಳಿಸಿ ತಾನು ಕಲ್ಯಾಣಕ್ಕೆ ಬಂದ ಕಾರ್ಯ ಮುಗಿಸಿ ಅಲ್ಲಿರುವ ಶರಣರ ಕಂಡು ಪುನಿತಳಾಗಿ ತನ್ನ ಕೃತಾರ್ಥ ಭಾವವನ್ನು ಈ ಕೆಳಗಿನಂತೆ ವ್ಯಕ್ತಗೊಳಿಸಿದ್ದಾಳೆ.
ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ
ಶರಣರು ಎಂದರೆ ಬದುಕಿನ ಪಥದಲ್ಲಿ ಪ್ರಾಪಂಚಿಕ ಮತ್ತು ಪಾರಮಾರ್ಥಿಕ ಎರಡರಲ್ಲೂ ಸಾಧನೆ ನಡೆಸಿ ಮುಕ್ತಿ ಸಾಧಿಸುವ ಸಾಧಕ. ಇಂತಹ ಒಂದು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರು ಕಲ್ಯಾಣ ವಚನ ಚಳುವಳಿಯಲ್ಲಿ ಪಾಲ್ಗೊಂಡಿರುವದನ್ನು ಕಂಡು. ಬಸವಣ್ಣನವರನ್ನು ಉದ್ದೇಶಿಸಿ –
ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ ಎಂದು ಹೇಳಿದ್ದಾಳೆ.
ಅಯ್ಯಾ, ನಿಮ್ಮ ಶರಣರಿದ್ದ ಪುರವೆ ಕೈಲಾಸಪುರವಯ್ಯಾ
ಕೈಲಾಸವೆಂಬುದೊಂದು ಭ್ರಮೆ ಅಲ್ಲಿರುವ ಶಿವ ಹೆಡ್ಡ ಎಂದು ಅನೇಕ ಶರಣರು ಹೇಳಿದ್ದಾರೆ. ಇಲ್ಲಿ ಅಕ್ಕನಿಗೂ ಕಲ್ಯಾಣಕ್ಕೆ ಬರುವ ಪೂರ್ವದಲ್ಲಿ ಕೈಲಾಸ ಶಿವ ಪರಶಿವ ಚೆನ್ನಮಲ್ಲಿಕಾರ್ಜುನ ಮುಂತಾದ ದ್ವೈತ ಕಲ್ಪನೆಗಳಿದ್ದವು. ಆದರೆ ಕಲ್ಯಾಣದ ಶರಣ ಸಂಗದಿಂದ ಅದು ದೂರವಾಗಿ ಬಸವನ ನಿರ್ಮಿಸಿದ ಕಲ್ಯಾಣ ಪುರವೆ ಕೈಲಾಸವಾಯಿತ್ತೆಂದು ಹೇಳುತ್ತಾಳೆ.
ಅಯ್ಯಾ, ನಿಮ್ಮ ಶರಣರು ನಿಂದುದೆ ನಿಜನಿವಾಸವಯ್ಯಾ.
ಭಾರತದ ಮೂಲೆ ಮೂಲೆಗಳಿಂದ ಬಂದ ಆಂಡಾಳರು, ನಯನಾರರು ,ಲಾಲಗೊಂಡರು ಮುಂತಾದ ಬೇರೆ ಬೇರೆ ಭೂಪ್ರದೇಶಗಳಿಂದ ಬಂದ ಅನೇಕ ರಾಜ ಮಹಾರಾಜರು,ಕಲ್ಯಾಣದಲ್ಲಿ ನೆಲೆ ನಿಂತರು.ಅಂತೆಯೇ ಅಕ್ಕ ಬಸವನ್ನನ್ನು ಕುರಿತಾಗಿ “ಅಯ್ಯಾ, ನಿಮ್ಮ ಶರಣರು ನಿಂದುದೆ ನಿಜನಿವಾಸವಯ್ಯಾ” ಅವರು ಎಲ್ಲೇ ನಿಂತರು ಅದು ನಿಜ ನಿವಾಸವಾಗುವುದು.
ಚೆನ್ನಮಲ್ಲಿಕಾರ್ಜುನಯ್ಯಾ, ,ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ, ಆನು ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು .
ಬಸವಣ್ಣನವರ ನಾಯಕತ್ವದಲ್ಲಿ ನಂಬಿಗೆ ಇಟ್ಟು ಲಕ್ಷಾಂತರ ಶರಣರು ಪರಿವರ್ತನೆಯ ಮಹಾ ಸಿದ್ಧಿಯಲ್ಲಿ ಕ್ರಾಂತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಇಂತಹ ಬಸವಣ್ಣನವರ ಕಾರ್ಯಕ್ಷೇತ್ರವು ಅವಿಮುಕ್ತ ಕ್ಷೇತ್ರವಾಗಿ ರೂಪಗೊಂಡಿದೆ.ಹಾಗಿದ್ದಾಗ ನಾನು ಬಸವಣ್ಣನವರ ಅರಿವು ಜ್ಞಾನಕ್ಕೆ ನಮೋ ನಮೋ ಎನ್ನುತಿರ್ದೆನಯಾ ಎಂದು ಅಕ್ಕ ಮಹಾದೇವಿ.ಅತ್ಯಂತ ಭಕ್ತಿ ವಿನಮ್ರ ಭಾವದಿಂದ ಹೇಳಿದ್ದಾರೆ.
ಇದು ಈ ವಚನದ ಸಾರಾಂಶವು.
–ಡಾ.ಶಶಿಕಾಂತ.ಪಟ್ಟಣ.ರಾಮದುರ್ಗ -ಪೂನಾ