ಸಾಹಿತ್ಯ ಆಕಾಡೆಮಿ ಪುರಸ್ಕೃರಿಗೆ ಸನ್ಮಾನ
ಆಂತರಿಕ,-ಬಾಹ್ಯ ಪ್ರಜ್ಞೆಯಿಂದ ಹೊಸ ಸಾಹಿತ್ಯ ಸೃಷ್ಟಿ ಸಾಧ್ಯ- ಡಾ. ನುಗಡೋಣಿ
e- ಸುದ್ದಿ ಮಸ್ಕಿ
ಮಸ್ಕಿ: ಸಂಶೋಧಕರು, ಬರಹಗಾರರು, ಕವಿಗಳು ಆಂತರಿಕ ಹಾಗೂ ಬಾಹ್ಯ ಪ್ರಜ್ಞೆಯಿಂದ ಬರವಣಿಗೆ ತೊಡಗಿದಾಗ ಮಾತ್ರ ಹೊಸ ಸಾಹಿತ್ಯ ಉದಯಿಸಲು ಸಾಧ್ಯ ಎಂದು ಸಾಹಿತ್ಯ ಆಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಕಥೆಗಾರ ಡಾ. ಅಮರೇಶ ನುಗಡೋಣಿ ಹೇಳಿದರು.
ಪಟ್ಟಣದ ಗಚ್ಚಿನಮಠದಲ್ಲಿ ಭಾನುವಾರ ಗೆಳೆಯ ಬಳಗ ಹಮ್ಮಿಕೊಂಡಿದ್ದ ‘ಮಾತು-ಮಮತೆ’ ಕಾರ್ಯಕ್ರಮದಲ್ಲಿ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತಗೊಂಡ ಜಿಲ್ಲೆಯ ಸಾಹಿತಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ‘ಸಂಶೋಧಕರು, ಲೇಖಕರು ಬೌದ್ದೀಕ ದೃಷ್ಠಿಕೋನದಿಂದ ಸಾಹಿತ್ಯ ರಚನೆ ಮಾಡಿದಾಗ ಅದು ಗಟ್ಟಿ ಸಾಹಿತ್ಯವಾಗುತ್ತದೆ ಎಂದರು.
ಸಾಹಿತಿಗಳಿಗೆ ಸನ್ಮಾನ ಮಾಡುವಾಗ ಫಲಕ, ಹಾರ, ತುರಾಯಿ ನೀಡುತ್ತಾರೆ. ಇದು ಬೇಕಾಗಿಲ್ಲ, ಓದುಗರ ಅಭಿಮಾನವೇ ದೊಡ್ಡ ಪುರಸ್ಕಾರ ಎಂದರು.
ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಸಂಶೋಧಕ ಡಾ, ಚನ್ನಬಸಯ್ಯ ಹಿರೇಮಠ ಮಾತನಾಡಿ ಡಾ. ಎಂ.ಎಂ. ಕಲಬುರ್ಗಿ ಅವರ ಮಾರ್ಗದರ್ಶನದಿಂದ ನಾನು ಇವತ್ತು ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸುವಂತಾಯಿತು. ಕೃತಿಗಳು ವಿಮರ್ಷೆಗೆ ಒಳಪಟ್ಟಾಗ ಮಾತ್ರ ಅದಕ್ಕೆ ಗಟ್ಟಿತನ ಬರುತ್ತದೆ ಎಂದರು.
ಸಾಹಿತ್ಯ ಆಕಾಡೆಮಿ ಪುರಸ್ಕೃತರಾದ ಸುಮೀತ ಮೈತ್ರಿ, ಲಕ್ಷ್ಮಣ ಬಾದಮಿ, ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ, ವೀರೇಶ ಸೌದ್ರಿ ಮಾತನಾಡಿದರು.
ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ, ಅಕ್ಷರ ಸಾಹಿತ್ಯ ವೇದಿಕೆ, ಬಂಡಾರ ಪ್ರಕಾಶನ, ಗೆಳೆಯರ ಬಳಗ, ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಸಕ್ತ ವರ್ಷ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಲ್ವರನ್ನು ಸನ್ಮಾನಿಸಲಾಯಿತು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ನೆನಪಿನ ಕಾಣಿಕೆಯಾಗಿ ಬಿಳಿ ವಸ್ತ್ರ ಹೊದಿಸಿ ನವಣೆ ಮತ್ತು ಸಾವಯವ ಬೆಲ್ಲ , ಪುಸ್ತಕ ಕೊಡುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದರು.