ವಿಶೇಷ ಲೇಖನ : ಮುತ್ತುರಾಜ ಅಕ್ಕಿ, ಇಳಕಲ್
ಇಡಿ ವಿಶ್ವವೇ ಎರಡು ಮಹಾಯುದ್ಧಗಳಲ್ಲಿ ಬೆಂದು, ಶಾಂತಿಗಾಗಿ ಹಂಬಲಿಸಿದ ಸಮಯವದು, ಪ್ರಪಂಚದಲ್ಲಿ ಮತ್ತೆ ಯುದ್ಧ ನಡೆಯಬಾರದು ಎಂಬ ಮಹತ್ವದ ಸಂಕಲ್ಪದಿಂದ ನಡೆದ ಹಲವು ಸುತ್ತಿನ ಸಭೆ, ವಿಚಾರ ವಿನಿಮಯಗಳ ಫಲವಾಗಿ ಅಂದು “ವಿಶ್ವಸಂಸ್ಥೆ” ಯನ್ನು ಹುಟ್ಟುಹಾಕಲಾಯಿತು. ಅಂತಹ ವಿಶ್ವಸಂಸ್ಥೆಯ ದಿನಚರಣೆಯನ್ನು ಇಂದು ವಿಶ್ವದೆಲ್ಲೆಡೆ ಆರಿಸಲಾಗುತ್ತಿದೆ.
ಆಗತಾನೆ ಎರಡನೆಯ ಮಹಾಯುದ್ಧ ಮುಗಿದಿತ್ತು. ಆಗ ವಿಶ್ವದಲ್ಲಿ ಶಾಂತಿ, ಭದ್ರತೆ, ಎಲ್ಲಾ ದೇಶಗಳ ನಡುವೆ ಸ್ನೇಹ, ಸೌಹಾರ್ದ, ಪರಸ್ಪರ ಹಕ್ಕುಗಳ ಮನ್ನಣೆ ಮತ್ತು ವಿವಾದಗಳನ್ನು ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ಹತ್ತು ಹಲವು ಘನ ಉದ್ದೇಶಗಳನ್ನು ಜಾರಿಗೊಳಿಸಲು, ೧೯೪೫ರ ಜೂನ್ ನಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಪ್ರಾನ್ಸಿಸ್ಕೋದಲ್ಲಿ ನಡೆದ ಸಮಾವೇಶದಲ್ಲಿ ನಾಲ್ಕು ದೇಶಗಳಾದ ಬ್ರಿಟನ್, ಚೀನಾ, ಸೋವಿಯತ್ ಒಕ್ಕೂಟ ಮತ್ತು ಅಮೇರಿಕಾ ದೇಶಗಳು ವಿಶ್ವಸಂಸ್ಥೆ ಸ್ಥಾಪನೆಗೆ ಸಹಿ ಹಾಕಿ, ೧೯೪೫ರ ಅಕ್ಟೋಬರ್ ೨೪ ರಂದು ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಯಿತು. ನಮ್ಮ ದೇಶ ಭಾರತ ೧೯೪೫ ಅಕ್ಟೋಬರ್ ೩೦ ರಂದು ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು. ಅಲ್ಲದೆ ೧೯೪೮ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಅಕ್ಬೋಬರ್ ೨೪ ರಂದು ವಿಶ್ವಸಂಸ್ಥೆಯ ದಿನಾಚರಣೆಯಾಗಿ ಆಚರಿಸಲು ಘೋಷಿಸಿತು.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯಾಲಯವನ್ನು ನ್ಯೂಯಾರ್ಕ್ ನ ಈಸ್ಟ್ ನದಿಯ ದಡದಲ್ಲಿ ೭.೨೮೫ ಹೆಕ್ಟರ್ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಮೂವತ್ತೊಂಬತ್ತು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಸುಮಾರು ನಾಲ್ಕು ಸಾವಿರ ಜನರು ವಿಶ್ವಸಂಸ್ಥೆಯ ಆಡಳಿತವನ್ನು ನಿರ್ವಹಿಸುತ್ತಾರೆ. ಪ್ರಪಂಚದ ಎಲ್ಲಾ ರಾಷ್ಟ್ರಗಳಿಂದಲೂ ವಿಶ್ವಸಂಸ್ಥೆಯ ಅಧಿಕಾರಿವರ್ಗಕ್ಕೆ ಆಯ್ಕೆ ಮಾಡಲಾಗುತ್ತದೆ. ಅತ್ಯಂತ ಸಮರ್ಥರೆನಿಸಿದ ಅಧಿಕಾರಿಗಳು ವಿಶ್ವಸಂಸ್ಥೆಯ ಧ್ಯೇಯೋದ್ದೇಶಗಳಿಗಾಗಿ ದುಡಿಯುತ್ತಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಈ ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ.
ವಿಶ್ವಸಂಸ್ಥೆಯ ಜವಾಬ್ದಾರಿ ಏನೆಂದರೆ..?, ಎರಡು ದೇಶಗಳ ಸೇನೆಗಳು ಪರಸ್ಪರ ಹೋರಾಡದಂತೆ ನೋಡಿಕೊಳ್ಳುವುದು. ಎಲ್ಲಾ ರಾಷ್ಟ್ರಗಳು ಅಭಿವೃದ್ಧಿ ಹೊಂದುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು. ಪ್ರಪಂಚದ ಎಲ್ಲಾ ಮನುಕುಲವು ಒಂದೂ ಎನ್ನುವ ಭಾವನೆಯನ್ನು ಜನರಲ್ಲಿ ಮೂಡಿಸುವುದು ಸೇರಿದಂತೆ ಹಲವು ಉದ್ದೇಶಗಳ ಈಡೇರಿಕೆಗಾಗಿ, ವಿಶ್ವಸಂಸ್ಥೆಯ ಆಶ್ರಯದಲ್ಲಿ, ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆ, ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ಜಾಗತಿಕ ಆಹಾರ ಮತ್ತು ವ್ಯವಸಾಯ ಸಂಸ್ಥೆ, ಶೈಕ್ಷಣಿಕ ಸಂಸ್ಥೆ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಒಟ್ಟು ೧೪ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು, ಅಮೇರಿಕ, ಬ್ರಿಟನ್, ಚೀನಾ, ಪ್ರಾನ್ಸ್ ಮತ್ತು ರಷ್ಯಾ ಸೇರಿದಂತೆ ಐದು ಶಾಶ್ವತ ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಇತರೆ ಹತ್ತು ರಾಷ್ಟ್ರಗಳನ್ನು ಎರಡು ವರ್ಷಗಳ ಅವಧಿಗೆ ಸದಸ್ಯ ರಾಷ್ಟ್ರಗಳಾಗಿ ಆಯ್ಕೆ ಮಾಡಲಾಗುತ್ತದೆ. ಈ ಸ್ಥಾನಗಳನ್ನು ಜಗತ್ತಿನ ವಿವಿಧ ಪ್ರದೇಶಗಳಿಗೆ ಮೀಸಲಿರಿಸಲಾಗುತ್ತದೆ. ೧೯೪೫ರ ನಂತರ ಜಗತ್ತಿನಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿರುವ ನಮ್ಮ ದೇಶ ಭಾರತ ಹಾಗೂ ಜಪಾನ್ ಮತ್ತು ಜರ್ಮನಿಯಂತಹ ದೇಶಗಳಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ನೀಡುವ ಪ್ರಯತ್ನ ಮುಂದಕ್ಕೆ ಸಾಗುತ್ತಲೇ ಇದೆ. ಇವುಗಳಲ್ಲಿ ಪ್ರತಿ ದೇಶ ಶಾಸ್ವತ ಸದಸ್ಯತ್ವಕ್ಕೆ ಪ್ರಯತ್ನಿಸಿದಾಗ ಮತ್ತೊಂದು ದೇಶ ಅದಕ್ಕೆ ತಡೆ ಒಡ್ಡುತ್ತದೆ. ನಮ್ಮ ದೇಶಕ್ಕೆ ಖಾಯಂ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಭಾರತ ದೇಶವೂ ಯಶಸ್ವಿಯಾಗಲಿ.