ವ್ರತ—– ಪೂಜೆ

ಇಷ್ಟಲಿಂಗ ಪೂಜೆ ಮಾನಸಿಕ ನೆಮ್ಮದಿಗೆ ಕಾರಣ

ವ್ರತ—– ಪೂಜೆ

ಮನುಷ್ಯ, ತನ್ನ ಹಾಗೂ ತನ್ನ ಕುಟುಂಬಕ್ಕಾಗಿ ನೂರೆಂಟು ವ್ರತಗಳನ್ನು ಮಾಡುತ್ತಾನೆ. ಈ ವ್ರತ ನೇಮಗಳು ಹಸಿವು ತೃಷೆ ತಡೆಹಿಡಿದು ಮಾಡುತ್ತಾರೆ.

ಈ ವ್ರತ ಫಲಕೊಡದಿದ್ದೊಡೆ ಮತ್ತೊಂದು ಇಲ್ಲಾ ಮಗದೊಂದು.ಹೀಗೇ ಮೌಢ್ಯ ಆಚರಣೆ ಮಾಡುತ್ತಾರೆ.ಇಂತಹ ಮೌಢ್ಯಗಳನ್ನು ತಲೆಯಲ್ಲಿ ತುಂಬಲು ಆದಿ ಅನಾದಿಕಾಲದಿಂದಲೂ ಒಂದು ವರ್ಗ ನಿರಂತರವಾಗಿ ಶೋಷಿತರಿಗೆ ತಲೆ ಕೆಡಸುತ್ತಲೇ ಬಂದಿದೆ.

ಅನಿಷ್ಟ ಪದ್ದತಿಗಳಾದ ಬೆತ್ತಲೆ ಪೂಜೆ,ಓಕಳಿ, ದೇವದಾಸಿ, ಕೊರಳಿಗೆ ಮುತ್ತು ಅಥವಾ ಮಣಿ ಕಟ್ಟುವುದು,ಜಡೆ ಬಿಡುವುದು ಮುಂತಾದವುಗಳ ಆಚರಣೆ ಕೇವಲ ಕೆಳ ವರ್ಗದವರಿಗೆ ಮಾತ್ರ. ಇಂತಹ ಅನಿಷ್ಠ ಪದ್ಧತಿಯನ್ನು ಹೇಳುವ ಮನೆಯೇ ಹೆಂಗಳೆಯರಿಗಿಲ್ಲ.ಆಚರಣೆ, ವ್ರತಗಳ ನೆಪದಲ್ಲಿ ಸಮಾಜ ಬಾಹಿರ ಚಟುವಟಿಕೆಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ.

ವ್ರತ-ಮತ್ತು-ಹಸಿವು ಯಾವ ರೀತಿಯಲ್ಲಿ ಒಂದು ವರ್ಗ ಹೇಳುತ್ತದೆಯೋ ಅದು ವೇದ,ದೇವ ವಾಕ್ಯವೆಂದು ಪರಿಪಾಲಿಸುವ ಮೂರ್ಖರಿದ್ದಾರೆ.

ವ್ರತ–ಪೂಜೆ
ದೇವರಿಗೆ ಹಲವು ಬಗೆಯ ಪೂಜೆ ಸಲ್ಲಿಸುವುದು, ಉಪವಾಸ,ಘಟ್ಟ ಹಾಕುವುದು,ದೇಹ ಪ್ರದರ್ಶನ,ದೇಹದಂಡನೆ ಮುಂತಾದುವುಗಳು ಬರುತ್ತವೆ.

ವೃತ್ತ ತಪ್ಪಿತೆಂದು ಘಟ ಬಿಟ್ಟಲ್ಲಿ ಮೆಚ್ಚುವ ದೈವ ಬೇಡ ಇಂತೀ ಕ್ರೀ ಓಸರಿಸಿದಲ್ಲಿ ಬಿಟ್ಟಡೆ ಪ್ರಾಣವ ಮೆಚ್ಚಿ ಕೈಲಾಸಕ್ಕೆ ಕರೆವ ದೈವವುಂಟೆ? ಇಂತೀ ಉಭಯ ಭ್ರಷ್ಟ ವಾದಲ್ಲಿ ಸಿಕ್ಕಿತ್ತು ವ್ರತ ಮನಕ್ಕೆ ಮನೋಹರ ಶಂಖೇಶ್ವರ ಲಿಂಗ ತಪ್ಪಿದಡೂ ಹೊರಗೆಂಬೆನು

ವ್ರತದ ಹೆಸರಲ್ಲಿ ಪ್ರಾಣ ಬಿಡುವ ಹಲವಾರು ವೃತ್ತಿಗಳಿವೆ ಅದರಲ್ಲೂ ಜೈನಧರ್ಮದಲ್ಲಿ ಸಲ್ಲೇಖನ ವೃತ ಎಂಬುದಿದ್ದು ದೇವರ ಹೆಸರಿನಲ್ಲಿ ಪ್ರಾಣತ್ಯಾಗ ಮಾಡುವ ಒಂದು ಬಗೆಯಾಗಿದೆ ಇಂತಹ ವೃತ್ತಗಳನ್ನು ಶರಣರು ಖಂಡಿಸುತ್ತಾರೆ. ಈತ ದೇವ ಕೊಟ್ಟ ಕಾಯ, ಶರೀರವನ್ನು ದಂಡಿಸಿದವರನ್ನು ದೇವರು ತನ್ನೆಡೆಗೆ ಕರೆದುಕೊಳ್ಳಲಾರ. ಒಂದು ವೇಳೆ ಅಂತಹ ದೇವರಿದ್ದರೆ ಆ ದೇವರೇ ನಮಗೆ ಬೇಕಿಲ್ಲ.ಇದು ವಚನದ ತಾತ್ಪರ್ಯ.

ವೃತ್ತ ವನಾಶ್ರಯಿಸಿದ ಮೇಲೆ ಹುಸಿ ಕೊಲೆ ಕಳವು ಪರದಾರ ಮಾಡುವನ್ನಬರ ವ್ರತಸ್ಥನಲ್ಲದೆ ನೇಮಕ್ಕೆ ಸೊಲ್ಲ, ಅವಗಾಚಾರವಿಲ್ಲ ಅವನು ರಾಜನೆಂದು ದ್ರವ್ಯದಾಸೆಗಾಗಿ ಅವನ ಮನೆಯ ಹೊಕ್ಕು ವಿಭೂತಿ ವೀಳ್ಯಯ ಮೊದಲಾದ ಉಪಚಾರಕ್ಕೊಳಗಾದವ ಸತ್ತ ಕುಕ್ಕುರನ ಕೀಟಕ ತಿಂದು ಅದು ಸತ್ತಡೆ ತಾ ತಿಂದು ಪಂಚಾಚಾರಕ್ಕೊಳಗಾದವ ಶುದ್ಧಕ್ಕೆ ಹೊರಗು. ಆಚಾರವೇ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಮುನ್ನವೇ ಹೊರಗು

ವ್ರತದ ನೆಪದಲ್ಲಿ ವೇಷ ಧರಿಸಿ ಅಶನವ ಕೊಂಬುವ ಮನುಷ್ಯರು, ಪಂಚಾಚಾರ ಹೊರಗೆ ಇರಲಿ ಸಂಪ್ರದಾಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಆಚಾರವಿಲ್ಲದಿದ್ದೊಡೆ ಹೇಗೆ? ಎಂದು ಮೆರೆಮಿಂಡದೇವನ ಅಭಿಪ್ರಾಯ ಆಗಿದೆ.

ಕಾಯಕ ತಪ್ಪಿದಡೆ ಸೈರಿಸಬಾರದು: ವೃತ ತಪ್ಪಿದರೆಂತು ಸೈರಿಸಬಹುದು ಕರ್ಮಹರ ಕಾಳೇಶ್ವರ

ಇದು ಮಹಾ ಶಿವಶರಣೆ ಕಾಳವ್ವೆ ಯ ವಚನವಾಗಿದೆ ಕಾಯಕವೇ ಒಂದು ವೃತ್ತ ವಾಗಿರುವ ಇನ್ನುಳಿದ ವ್ರತಗಳು ವ್ಯರ್ಥವೆಂದು ‌ ತಾಯಿ ಹೇಳುತ್ತಾಳೆ.

ಹದ ಮಣ್ಣಲ್ಲದೆ ಮಡಿಕೆಯಾಗಲಾರದು.ವ್ರತಹೀನನ ಬೆರೆಯಲಾಗದು ಬೆರೆತರೆ ನರಕ ತಪ್ಪದು. ನಾನೊಲ್ಲೆ ಬಲ್ಲೆನಾಗಿ ಕುಂಬೇಶ್ವರಾ

*ರೇಚವ್ವೆ* ಇಲ್ಲಿ ವ್ರತಹೀನನ್ನು ಬೆಳೆಯಲಾಗದು ಬೆರೆತರೆ ನರಕ ತಪ್ಪದು ಎನ್ನುವಲ್ಲಿ ಲಿಂಗಧರ್ಮ ತತ್ವವನ್ನು ಮರೆತರೆ ನರಕ ಎಂದಿದ್ದಾಳೆ.
ಪ್ರತಿಯೊಂದು ವ್ರತದ ಹಿಂದೆ ಒಂದು ಉದ್ದೇಶ ಇರುತ್ತದೆ.

ಲಿಂಗಾಯತರಿಗೆ ಕಾಯಕದಿಂದ ಬಂದುದನ್ನು ಸ್ವಲ್ಪ ದಾಸೋಹಕ್ಕೆ ಮೀಸಲಿಡುವುದು ಒಂದು ವ್ರತ.ವ್ರತದ ಹೆಸರಿನಲ್ಲಿ ಅನಾಚಾರ ಮಾಡುವುದು ತಪ್ಪು.ಅದರಲ್ಲೂ ಗೊತ್ತಿದ್ದು ಗೊತ್ತಿದ್ದು ಮಾಡುವವರಿಗೆ ಉಗ್ರ ಶಿಕ್ಷೆ ತಪ್ಪಿದಲ್ಲ.ಎಂದು ಕೊಟ್ಟಣದ ಸೋಮವ್ವೆ ಹೇಳುತ್ತಾಳೆ.

ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.ವ್ರತಹೀನನ ನೆರೆಯ ನರಕವಲ್ಲದೆ ಮುಕ್ತಿಯಿಲ್ಲ.ಅರಿದರಿದು ಹೋಗಲಿ,ಅರೆದು ಬೆರನಾದರೆ,ಕನ್ನಗತ್ತಿಯಲ್ಲಿ ಕಿವಿಯ ಕೊಯ್ವಿರಯ್ಯಾ.ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ

ತನು ಬತ್ತಲೆಯಾದರೇನು,ಮನ ಬೆತ್ತಲೆಯಾಗದನ್ನಕ್ಕರ? ವ್ರತವಿದ್ದರೇನು, ವ್ರತಹೀನನಾದ ಬಳಿಕ?ನೆರೆದರೆ ನರಕವಯ್ಯಾ ನಿಂಬೇಶ್ವರಾ
ಇಲ್ಲಿ *ಗುಡ್ಡವ್ವೆ* ವ್ರತಾಚರಣೆಯಲ್ಲಿ ಬಾಹ್ಯ ತೋರಿಕೆ ತೋರಿಸಿ ಮನಸ್ಸಿನಲ್ಲಿ ಇಟ್ಟುಕೊಂಡ ಉದ್ದೇಶಕ್ಕೆ ತಕ್ಕಂತೆ ನಡೆಯದೆ ಹೋಗುವವರ ಜೊತೆ ನಾವು ಸೇರಿಕೊಂಡರೆ ನರಕ ತಪ್ಪದು ಎಂದು ಎಚ್ಚರಿಸಿದ್ದಾಳೆ.

ಪೂಜೆ —
ಇಂದಿನ ಪೂಜೆಗೆ ಅಂದಿನ ಪೂಜೆಗೂ ಇರುವ ‌ವ್ಯತ್ಯಾಸ ಬಹಳವಿದೆ.ಪ್ರತಿ ಧರ್ಮಗಳು ತಮ್ಮ ತಮ್ಮ ಮೂಲ ಸಿದ್ಧಾಂತ ಗಳ ಬಗೆಗೆ ತಿಳಿದುಕೊಳ್ಳದೇ ಬದುಕು ಸಾಗಿಸುತ್ತಿದ್ದರೆ.ಧರ್ಮದ ಹೆಸರಲ್ಲಿ ಅನ್ಯ ಧರ್ಮೀಯ ಆಚರಣೆಗಳನ್ನು ಆಚರಿಸುತ್ತಿದ್ದಾರೆ.ಹೋಮ,ಹವನ,ಯಜ್ಞ, ಯಾಗಾದಿಗಳನ್ನು ಮಾಡಿಸುತ್ತಿದ್ದಾರೆ.ಮನೆಯಲ್ಲಿರುವ ದೇವರ ಪೂಜೆಯನ್ನು ಮಧ್ಯವರ್ತಿಗಳಿಂದ ಮಾಡಿಸುವುತ್ತೇವೆ.

ತನ್ನಾಶ್ರಯದ ರತಿ ಸುಖವನ್ನು ತಾನುಂಬ ಊಟವನು ಬೇರೆ ಮತ್ತೊಬ್ಬರನ್ನು ಕೈಯಲ್ಲಿ ಮಾಡಿಸಬಹುದೇ?ತನ್ನ ಲಿಂಗಕ್ಕೆ ಮಾಡುವ ನಿತ್ಯ ನೇಮವನು ತಾ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ? ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮ ನೆತ್ತ ಬಲ್ಲರು ಕೂಡಲಸಂಗಮದೇವಾ?

ಯಾವುದನ್ನು ಮಾಡಬೇಕಾಗಿದೆಯೋ. ಅದನ್ನು ನಾವೇ ಮಾಡಬೇಕಾಗುತ್ತದೆ. ಎಲ್ಲ ರಾಜಕಾಣಿಗಳು ದೊಡ್ಡ ದೊಡ್ಡ ಉದ್ದಿಮೆಗಳು ಕೋಟ್ಯಾಂತರ ಬೆಲೆ ಬಾಳುವ ವಸ್ತುಗಳನ್ನು
ತಿರುಪತಿಗೆ.ನೀಡುತ್ತಿದ್ದಾರೆ. ಕೊಟ್ಟಂತಹ ಬೆಲೆಬಾಳುವ ವಸ್ತುಗಳನ್ನು ನೀಡಿದರೂ ಜೈಲಿಗೆ ಹೋಗಿ ಬಂದವರಾಗಿದ್ದಾರೆ.

ಕೆಲಕ್ಕೆ ಶುದ್ಧನಾದೆನಲ್ಲದೆ ಮನಕ್ಕೆ ಶುದ್ಧನಾಗೆನೇಕಯ್ಯ? ಕೈ ಮುಟ್ಟಿ ಪೂಜಿಸುವಡೆ, ಎನ್ನ ಮನ ಶುದ್ಧವಲ್ಲಯ್ಯಾ.ಭಾವ ಶುದ್ಧವಾಗದೊಡೆ ಕೂಡಲಸಂಗಮದೇವ ನಿತ್ತ ಬಾ ಎಂದೆತ್ತಿಕೊಳ್ಳುವನು.

ಅಕ್ಕ ಮಹಾದೇವಿಯ ತಾಯಿಯ ಒಂದು ವಚನವನ್ನು ನೋಡಿದರೆ ಪೂಜೆಯ ಮಾಡುವ ವಿಧಾನವನ್ನು ಸುಸ್ಪಷ್ಟವಾಗುತ್ತದೆ.

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು

ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು. ಹದುಳಿಗರಲ್ಲದವರಲ್ಲಿ

ಗಂಧಾಕ್ಷತೆಯನೊಲ್ಲೆಯಯ್ಯಾ
ನೀನು.

ಅರಿವು ಕಣ್ದೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು. ಭಾವಶುದ್ಧವಿಲ್ಲದವರಲ್ಲಿ

ಧೂಪವನೊಲ್ಲೆಯಯ್ಯ ನೀನು.
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು. ಹೃದಯಕಮಲವರಳದವರಲ್ಲಿ ಇರಲೊಲ್ಲೆಯಯ್ಯಾ ನೀನು. ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ ?

ಕೊನೆಯದಾಗಿ ಹೇಳುವುದೇನೆಂದರೆ ವ್ರತ ಮಾನಸಿಕ, ದೈಹಿಕ ಹಿಂಸೆಯನ್ನು ನೀಡಿದರೆ ಆಡಂಬರವಿಲ್ಲದ ಅದರಲ್ಲೂ ನಿರಾಕಾರವಾದ ಇಷ್ಟಲಿಂಗ ಪೂಜೆ ಮಾನಸಿಕ ನೆಮ್ಮದಿ ನೀಡುತ್ತದೆ.

ರವೀಂದ್ರ ಆರ್ ಪಟ್ಟಣ
ಮುಳಗುಂದ—ರಾಮದುರ್ಗ

Don`t copy text!