ಅಪ್ಪನಿಲ್ಲದ ೨೧ ವರ್ಷ- ನೆನಪುಗಳ ಸಾಗರ

ಅಪ್ಪನಿಲ್ಲದ ೨೧ ವರ್ಷ- ನೆನಪುಗಳ ಸಾಗರ

(೫-೧೦-೨೦೦೦ ರಂದು ಲಿಂಗೈಕ್ಯರಾದ ಅಪ್ಪನನ್ನು ನೆನೆಯುತ್ತ)
ಅಪ್ಪ ಆಲದ ಮರ ಇದ್ದಂತೆ. ತನ್ನ ತೆಕ್ಕೆಗೆ ಬಂದರನ್ನು ಬಾಡದಂತೆ ನೆರಳು, ಆಶ್ರಯ ನೀಡಿ ಅಕ್ಷರ ಕಲಿಸಿ ಬದುಕಿನ ದಾರಿ ತೋರಿಸಿದ ಪುಣ್ಯಾತ್ಮ.
ಅಪ್ಪ ಸರ್ಕಾರಿ ಕನ್ನಡ ಶಾಲೆಯಲ್ಲಿ ಗಣಿತ‌ ಮತ್ತು ವಿಜ್ಞಾನ ಬೋಧಿಸುತ್ತಿದ್ದ. ೧೯೬೪ ರಲ್ಲಿ ಪಿಯುಸಿ ಓದುವಾಗಲೇ ಸರ್ಕಾರಿ ನೌಕರಿಗೆ ಸೇರಿ ೯೦ ರೂ ವೇತನವನ್ನು ಮೊದಲಬಾರಿಗೆ ಪಡೆದಿದ್ದ. ನಮ್ಮದು ಮೂಲತಃ ಕಿರಾಣಿ ವ್ಯಾಪಾರ ಮಾಡುವ ಕುಟುಂಬ. ನನ್ನ ತಾತ ಈರಪ್ಪನಿಗೆ ನಾಲ್ಕು ಜನ ಗಂಡು, ಇಬ್ಬರು ಹೆಣ್ಣು ಮಕ್ಕಳು, ನನ್ನ ತಾತನ ತಮ್ಮ ನಿಗೆ ನಾಲ್ಕು ಜನ ಗಂಡು ಮಕ್ಕಳು ಒಬ್ಬ ಮಗಳು ಕೂಡು ಕುಟುಂಬ .
ವೃತ್ತಿ ಕಿರಾಣಿ ವ್ಯಾಪಾರ ಹಾಗೂ ೧೬ ಎತ್ತಿನ ನೂರಾರು ಎಕರೆ ವ್ಯವಾಸಾಯದ ದೊಡ್ಡ ಕುಟುಂಬ. ೮-೧೦ ಜನ ಒಕ್ಕಲುತನ ಮಾಡಲು ಮನೆಯಲ್ಲಿ ನೌಕರಿ ಮಾಡುತ್ತಿದ್ದರು.
ನಮ್ಮ ಊರು ಹೊಕ್ರಾಣಿ, ಮಸ್ಕಿಯಿಂದ ೨೬ ಕಿ.ಮೀ ದೂರದ ಕುಗ್ರಾಮ, ರಸ್ತೆ, ಕರೆಂಟು, ಶಾಲೆ ಇರಲಿಲ್ಲ. ರಸ್ತೆಗಳೆಂದರೆ ಬಂಡಿ ದಾರಿ. ದಾವಖಾನೆ ಇರಲಿಲ್ಲ. ಯಾರದರು ಕಾಯಿಲೆ ಬಿದ್ದರೆ ಮಸ್ಕಿ ಬಂಡಿಯಲ್ಲಿ ಕರೆ ತರಬೇಕಾಗುತಿತ್ತು. ಈಗಿನಂತೆ ಕರೆಂಟ ಇರಲಿಲ್ಲ. ಕಂದೀಲು, ಚಿಮಣಿ ಬೆಳಕಿನಲ್ಲಿ ರಾತ್ರಿ ಕಳೆಯುತ್ತಿದ್ದರು. ಹಬ್ಬ ಹರಿದಿನಗಳು, ಜಾತ್ರೆಗಳಲ್ಲಿ ಜಗಮಗಿಸುವ ಪೆಟ್ರೊಮ್ಯಾಕ್ಸ ಇದ್ದವು.
ನನ್ನ ತಾತನ ಬಂಧು ಮಿತ್ರರು ಪಟ್ಟಣದಲ್ಲಿ ಇದ್ದುದ್ದರಿಂದ ಎಲ್ಲರೂ ಹಳ್ಳಿಯಲ್ಲಿ ಇರುವುದು ಬೇಡ. ಮಕ್ಕಳು ಸರ್ಕಾರಿ ಶಾಲೆ ಕಲಿಲಿ ಎಂದು ೭೦ ವರ್ಷಗಳ ಹಿಂದೆಯೇ‌ ಮಸ್ಕಿಯ ಮುಖ್ಯ ಬಜಾರದಲ್ಲಿರುವ ಬಸವಣ್ಣ ಗುಡಿಯ ಪಕ್ಕದಲ್ಲಿ ಒಂದು ಮನೆ ಖರೀದಿಸಿ ನಮ್ಮ ಸಣ್ಣ ಅಜ್ಜಿ ಅಡುಗೆ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳಲು‌ ಮಸ್ಕಿಗೆ ಕರೆತಂದಿದ್ದರು.
ಹೊಕ್ರಾಣಿಯಲ್ಲಿ ಸರ್ಕಾರಿ ಶಾಲೆ ಇರಲಿಲ್ಲವಾದ್ದರಿಂದ ಬಸವಣ್ಣ ಗುಡಿಯಲ್ಲಿ ಐನರ ಶಾಲೆ. ಮದ್ದಾನಯ್ಯನವರು ಪೇಟ ಸುತ್ತಿಕೊಂಡು ಗುಡಿ ಸಾಲಿಯಲ್ಲಿ ಹತ್ತಾರು ಮಕ್ಕಳಿಗೆ ಮಗ್ಗಿ, ಕನ್ನಡ ಅಕ್ಷರ ಅಭ್ಯಾಸ, ವ್ಯಾಕರಣ, ವಚನಗಳನ್ನು, ಜೈಮಿನಿ ಭಾರತವನ್ನು ಬೋಧಿಸುತ್ತಿದ್ದರು.

ಪ್ರಶ್ನೆ ಕೇಳಿದಾಗ ಸರಿಯಾದ ಉತ್ತರ ನೀಡದಿದ್ದವರಿಗೆ ಹಳ್ಳದ ದಂಟಿಗುಂಟ ಬೆಳೆದಿರತ್ತಿದ್ದ ರಬ್ಬರ ಜಬಲದಿಂದ ವಿದ್ಯಾರ್ಥಿಗಳಿಗೆ ಶಬಕ್ ಅಂತ ಬಾರ್ ಮುಡುವಂತೆ ಏಟು ಕಟ್ಟಿಟ್ಟ ಬುತ್ತಿ. ಬಡತಕ್ಕ ಹೆದರದ ಹುಡಗರಿಗೆ ಬಗ್ಗಿಸಿ ಎರಡು ಕಾಲುಗಳ ಸಂದಿಯಲ್ಲಿ ಕೈ ಹಾಕಿ ಎಡ ಕಿವಿಗೆ ಬಲಕೈಯಿಂದ ಬಲ ಕಿವಿಗೆ ಎಡಗೈಯಿಂದ ಹಿಡಿದುಕೊಂಡು ಬಗ್ಗಿಕೊಂಡಿರಬೇಕು.

ಛಡಿ ಏಟಿಗಿಂತ ನರಕ ಯಾತನೆ. ಬಗ್ಗಿದ ಸ್ಥಿತಿಗೆ ಬಾಯಿಂದ ಜೊಲ್ಲು, ಮೂಗಿನಿಂದ ನೀರಿನಂತ ಸಿಂಬಳ ಹರಿದು ಹೋಗುತ್ತಿತ್ತು. ಸ್ವಚ್ಛ ಮಾಡಿಕೊಳ್ಳಲು ಕೈ ಸಡಿಲಿಸಿದರೆ ಮತ್ತೆ ಎರಡು ಛಡಿ ಏಟು ಗ್ಯಾರಂಟಿ. ಇಂತಹ ಕಠಿಣ ಶಿಕ್ಷೆ ಪಡೆದು ವಿದ್ಯೆ ಕಲಿಯಬೇಕಾಗಿತ್ತು. ಪಾಲಕರು ಕೂಡ ಮಕ್ಕಳಿಗೆ ಚನ್ನಾಗಿ ಶಿಕ್ಷೆ ಕೊಟ್ಟು ಕಲಿಸಿ ಐನೋರೆ ಎಂದು ಅವರ ಕಾಲಿಗೆ ನಮಸ್ಕರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ.
ಶಿಕ್ಷೆಯ ಸ್ಥಾನದಲ್ಲಿ ಪ್ರೋತ್ಸಾಹ, ಬಹುಮಾನ ನೀಡುವ ಮೂಲಕ ಮಕ್ಕಳಿಗೆ ಮಮತೆಯಿಂದ ಕಲಿಸುವ ವ್ಯವಸ್ಥೆ ತೆರೆದುಕೊಂಡಿದೆ.
ನಮ್ಮ ತಾತ ಅಪ್ಪನನ್ನು, ದೊಡ್ಡಪ್ಪ, ಚಿಕ್ಕಪ್ಪ ರನ್ನು ಮಸ್ಕಿಗೆ ಕರೆತಂದು ಸರ್ಕಾರಿ ಶಾಲೆಗೆ ಹಚ್ಚಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಣಿಗೊಳಿಸಿದರು. ಅವರಲ್ಲಿ ನನ್ನ ಅಪ್ಪ ಮಾತ್ರ ಹೆಚ್ಚಿಗೆ ಓದಿದರು. ಉಳಿದವರು ೭ನೇ ತರಗತಿ, ೧೦ ನೇ ತರಗತಿ ಓದಿ. ಕಿರಾಣಿ ವ್ಯಾಪರಕ್ಕೆ ಅಣಿಯಾದರು. ನನ್ನ ಅಪ್ಪ ಮಾತ್ರ ಮುಲ್ಕಿ ಪರೀಕ್ಷೆ ಬರೆದು ಕಲಬುರ್ಗಿಯಲ್ಲಿ ಪ್ರಥಮ ವರ್ಷದ ಪಿಯುಸಿ ಪಾಸಾಗುತ್ತಲೇ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ೧೯೬೪ ರಲ್ಲಿ ರಾಯಚೂರು ಹತ್ತಿರದ ಮರ್ಚಡದಲ್ಲಿ ಸರ್ಕಾರಿ ಸೇವೆಗೆ ಸೇರಿ ೩೬ ವರ್ಷ ವಿವಿಧಡೆ ಶಿಕ್ಷಕರಾಗಿ ಅಕ್ಟೋಬರ್ ೫-೨೦೦೦ ರಲ್ಲಿ ಲಿಂಗೈಕ್ಯರಾದರು.
ಅಪ್ಪನಿಲ್ಲದ ಈ ಇಪ್ಪತ್ತೊಂದು ವರ್ಷಗಳು ಹೇಗೆ ಹೋದವು. ಅವರನ್ನು ಕಳೆದುಕೊಂಡ ನಾನು ಎಷ್ಟು ಸಂಕಟ ಪಟ್ಟಿದ್ದೇನೆ. ಅಪ್ಪನ ಸ್ಥಾನದಲ್ಲಿ ನಿಂತು ನಮ್ಮ ಕುಟುಂಬ ಮುನ್ನಡೆ ಸಲು ಪಟ್ಟಪಾಡು, ಸಾಗಿದ ದಾರಿ ನೆನೆದರೆ ……….
ಹಾಗೆ ನೋಡಿದರೆ ನನ್ನ ಅಪ್ಪ ಮುಗ್ದ. ಆತನಿಗೆ ಶಾಲೆ, ವಿದ್ಯಾರ್ಥಿಗಳು ಅಂದರೆ ಪಂಚ ಪ್ರಾಣ. ನಾನು‌ ಮೊದಲೇ ಹೇಳಿದಂತೆ ನನ್ನಪ್ಪ ಗಣಿತ ಶಿಕ್ಷಕ ಲೆಕ್ಕ ಸರಿಯಾಗಿ ಮಾಡದಿದ್ದರೆ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆ ಗ್ಯಾರಂಟಿ. ಅಂಗೈ ಮತ್ತು ಕಾಲಿನ ಮೀನಗಂಡ ಭಾಗಕ್ಕೆ, ಇಲ್ಲ ಪೃಷ್ಠಕ್ಕೆ ರೂಲ್ ಕಟ್ಟಿಗೆಯಿಂದ ಏಟು ತಿನ್ನಲಾರದವರು ಯಾರು ಇರಲಿಕ್ಕಿಲ್ಲ.

(ಭವಿಷ್ಯ ನನ್ನ ಅಪ್ಪ ತನಗೆ ಕಲಿಸಿದ ಗುರುಗಳಿಂದ ಪಡೆದ ವಿದ್ಯೆ ಹಾಗೂ ಶಿಕ್ಷೆಯನ್ನು ತನ್ನ ಶಿಷ್ಯರಿಗೆ ಧಾರೆಯರೆಯುತ್ತಿದ್ದ)
ಬಹಳಷ್ಟು ಜನ ನನ್ನ ಅಪ್ಪನ ಕೈಯಿಂದ ಬಡಿಸಿಕೊಂಡವರು ಛಡಿ ಏಟು‌ ಮರೆತಿಲ್ಲ. ಹಾಗೆಯೇ ಅವರಷ್ಟು ಚನ್ನಾಗಿ ಲೆಕ್ಕ ಕಲಿಸುವವರನ್ನು ನಾವು ನೋಡಿಯೇ ಇಲ್ಲ ಎಂದು ಛಡಿ ಏಟು, ಹೇಳಿಕೊಟ್ಟ ಪಾಠವನ್ನು ಅನೇಕರು ಸ್ಮರಿಸುವದನ್ನು ಕೇಳಿದ್ದೇನೆ. ಅಪ್ಪನ ಬಗ್ಗೆ ಅಭಿಮಾನದಿಂದ ಅವರ ಶಿಷ್ಯರು ನೆನೆಯುವಾಗಲೆಲ್ಲ ನನಗೆ ಅಪ್ಪ ಮತ್ತಷ್ಟು ಕಾಡುತ್ತಾರೆ. ನೆನಪಾಗುತ್ತಾರೆ. ನನಗರಿವಿಲ್ಲದಂತೆ ನನ್ನ ಕಣ್ಣಲ್ಲಿ ನೀರು ಜಿನುಗುತ್ತವೆ.
ನನ್ನ ಅಪ್ಪನ ಬಗ್ಗೆ ನನಗೆ ಅಭಿಮಾನ ಇರುವಂತೆ ಸಣ್ಣ ಬೇಸರವು ಇತ್ತು. ಆತ ನಮ್ಮ ಕುಟುಂಬದವರ ಪಾಲಿಗೆ ಬರಿ ಶಿಕ್ಷಕನಾಗಿ ಜೀವನ‌ ಸಾಗಿಸಿದ. ಹೆಂಡತಿಗೆ ಏನು ಬೇಕು ಬೇಡ ಎಂದು ಒಂದು ದಿನವು ವಿಚಾರಿಸುತ್ತಿರಲಿಲ್ಲ. ನನ್ನವ್ವ ಶ್ರೀಮಂತರ ಮನೆತನದಿಂದ ಬಂದಿದ್ದರು ನನ್ನಪ್ಪನ‌ ಮುಂದೆ ಯಾವ ಬೇಡಿಕೆಯನ್ನು ಮಂಡಿಸುತ್ತಿರಲಿಲ್ಲ.
ಅವ್ವ ನಮ್ಮನ್ನೆಲ್ಲ ಸಾಕಿ ದೊಡ್ಡವರನ್ನಾಗಿ ಮಾಡುವದೊರಳಗಾಗಿ ಹೈರಾಣ ಆಗಿ ಹೋದಳು. ನನ್ನ ಅಪ್ಪ ಕೂಡ ನನ್ನ ತಾತನಂತೆ ೬ ಮಕ್ಕಳನ್ನು ಹುಟ್ಟಿಸಿದ. ಮೂರು ಗಂಡು, ಮೂರು ಹೆಣ್ಣು, ನಾನೇ ಹಿರೇ ಮಗ.
ಬರುವ ಸಣ್ಣ ಪಗಾರದಲ್ಲಿ ಕುಟುಂಬ ನಿರ್ವಹಿಸುವದು ಎಷ್ಟು ಕಷ್ಟ. ಎಂದು  ಈಗ ನನ್ನ ಅನುಭವಕ್ಕೆ ಬರುತ್ತಿದೆ. ಮನೆ ನಡೆಸುವದು ವಾಹನ ನಡೆಸಿದಷ್ಟು ಸುಲಭ ಅಲ್ಲವಲ್ಲ.

ಅಪ್ಪ ನನ್ನ ತಂಗಿಯನ್ನು ಸೋದರ ಸಂಬಂಧಿಗೆ ಕೊಟ್ಟು ಮದುವೆ ಮಾಡಿದ. ನನಗೆ ‌ಮದುವೆ ಮಾಡಲು ಉತ್ಸುಕನಾಗಿದ್ದ. ಆದರೆ ನಾನು ತಲೆಯಲ್ಲಿ ಏನೇನೊ ತುಂಬಿಕೊಂಡು ಅಪ್ಪನ ಮಾತಿಗೆ ಬೆಲೆ ಕೊಡದೆ ಕಾಲ ತಳ್ಳಿದೆ. ಮೊದ ಮೊದಲು ತಂಗಿಯ ಮದುವೆ ಆಗಲಿ ಆ ಮೇಲೆ ನಾನು ಮಾಡಿಕೊಳ್ಳುವೆ ಎಂದು ಹಠ ಹಿಡಿಯುತ್ತಿದ್ದೆ. ಮಗನ ಮುಂದೆ ತನ್ನ ಆಟ ನಡೆಯುವುದಿಲ್ಲ ಎಂದರಿತ ನನ್ನಪ್ಪ ನನಗೆ ಮದುವೆ ವಿಷಯ ಪ್ರಸ್ತಾಪ ಮಾಡುವುದನ್ನು ಬಿಟ್ಟು ಬಿಟ್ಟ.

ನಾನು ರಾಯಚೂರಿನಲ್ಲಿ ಸುದ್ದಿಮೂಲ ಪತ್ರಿಕೆಯಲ್ಲಿ ವರದಿಗಾರನಾಗಿ, ರಾಯಚೂರು ಆಕಾಶವಾಣಿ ಯಲ್ಲಿ ಅರೆಕಾಲಿಕ ಅನೌನ್ಸರ್ ಆಗಿ ಕೆಲಸದಲ್ಲಿದ್ದಾಗ ಒಂದು ದಿನ ನನ್ನಪ್ಪನಿಗೆ ಲಘುವಾಗಿ ಹೃದಯಘಾತವಾದ ಸುದ್ದಿ ಕೇಳಿ ರಾಯಚೂರು ತೊರೆದು ಮಸ್ಕಿಗೆ ಬಂದು ಬಿಟ್ಟೆ. ಅಪ್ಪನ ಮುಖ ನೋಡಿದಾಗ ಬಳಲಿದಂತಿದ್ದರು. ತನಗೆ ಏನೂ ಆಗಿಲ್ಲವೆಂಬಂತೆ ಆರಾಮ ಇದ್ದೇನೆ. ನೀನು ಯಾಕೆ ಕೆಲಸ ಬಿಟ್ಟು ಬಂದಿ ಎಂದು ನನಗೆ ಗದರಿದರು.
ನನ್ನ ಅಪ್ಪನ ಸರ್ಕಾರಿ ಸೇವಾ ಅವಧಿ ಇನ್ನೂ ೧೦ ತಿಂಗಳು ಇರುವಾಗಲೇ ಇಹಲೋಕ ತ್ಯಾಜಿಸಿ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ಪ್ರಯಣಿಸಿಬಿಟ್ಟರು.
ಈಗಲು ನನಗೆ ಕಾಡುತ್ತಿದೆ. ಸತ್ತ ಅಪ್ಪನ ದೇಹವನ್ನು ಮಣ್ಣಿಗೆ ಅರ್ಪಿಸಿದ್ದಾಯಿತು. ಆತನ ಆತ್ಮ ಎಲ್ಲಿ ಹೋಯಿತು. ಯಾರ ಮಡಿಲು ಸೆರಿತು. ಎಲ್ಲೋ ಇದ್ದು ನನ್ನನ್ನು ನೋಡುತ್ತಿದ್ದಾರೆಯೋ, ಇಲ್ಲ ನನ್ನ ಮಕ್ಕಳ‌ ರೂಪದಲ್ಲಿ ಮತ್ತೆ ಬಂದಿದ್ದಾರೇನು ಅಂತ ಅನಿಸುತ್ತಿದೆ. ನನಗೆ ತಿಳಿಯುತ್ತಿಲ್ಲ. ಅಪ್ಪ ಈಗ ಇಲ್ಲ ಎನ್ನುವ ಸತ್ಯ ಮಾತ್ರ ಶಾಶ್ವತ. ಅಪ್ಪನ‌ ಒಳ್ಳೆಯತನ, ಬಂಧು ಬಳಗದವಗೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ರೀತಿ ಅವರಿಗೆಲ್ಲ ತೊರಿಸುತ್ತಿದ್ದ ಕಾಳಜಿ, ಅನೇಕ ಬಂಧುಗಳನ್ನು ಮನೆಯಲ್ಲಿಟ್ಟುಕೊಂಡು ಅವರಿಗೆ ಅನ್ನ, ಶಿಕ್ಷಣ ಕೊಟ್ಟ ಪರೋಪಕಾರ ನನಗೆ ಆದರ್ಶವಾಗಿವೆ.
ಹೇಳಿಕೊಳ್ಞವ, ಹೇಳಿಕೊಳ್ಳಲಾರದ ಅನೇಕ ಸಂಗತಿಗಳಿವೆ.
ಅಪ್ಪನ ಬಗ್ಗೆ ಎಷ್ಟು ಬರೆದರು ದಣಿವಾಗಲಾರದು. ಕೆದಕಿದಂತೆಲ್ಲ ಜೀವನಾಮೃತ ಹರಿಯುತ್ತದೆ.

ವೀರೇಶ ಸೌದ್ರಿ, ಮಸ್ಕಿ

Don`t copy text!