ಗೊಂಬೆಗಳ ಹಬ್ಬ ನವರಾತ್ರಿ
ನಾಡಿನಾದ್ಯಂತ ನಾಡಹಬ್ಬವಾಗಿ ಆಚರಿಸುವ ನವರಾತ್ರಿ ಹಬ್ಬ ಕನ್ನಡಿಗರ ಸಂಭ್ರಮ ಸಡಗರದ ಹಬ್ಬ. ಈ ಹಬ್ಬ ಅನೇಕ ವಿಶೇಷತೆಗಳನ್ನು ಹೊಂದಿದೆ. ಅಶ್ವಿಜ ಪಾಡ್ಯದಿಂದ ದಶಮಿಯವರೆಗೆ ಶಕ್ತಿ ದೇವತೆಯನ್ನು ವಿವಿಧ ಅವತಾರಗಳಲ್ಲಿ ಪೂಜಿಸಿ ಅಸುರ ಸಂಹಾರಕ್ಕೆ ಪ್ರಾರ್ಥಿಸುವದು, ಪಾರಾಯಣ ಮಾಡುವದು, ಜಂಬೂ ಸವಾರಿ,ದಾಂಡಿಯಾ ಬನ್ನಿಮುಡಿಯುವದು. ಹಾಗೆ ಗೊಂಬೆ ಹಬ್ಬ ಕೂಡ ನವರಾತ್ರಿಯ ಒಂದು ವಿಶೇಷ ಅತ್ಯಾಕರ್ಷಣೆಯ ಭಾಗವಾಗಿದೆ.
ಈ ಗೊಂಬೆ ಹಬ್ಬ ೧೮ ನೇ ಶತಮಾನದಲ್ಲಿಯೇ ಜಾರಿಯಲ್ಲಿತ್ತೆಂದು ಹೇಳಲಾಗಿದೆ. ದಸರಾ ಹಬ್ಬದೊಂದಿಗೆ ಅರಮನೆಯಲ್ಲಿ ಮತ್ತು ಮೈಸೂರಿನ ಮನೆಮನೆಗಳಲ್ಲಿ ಗೊಂಬೆಗಳನ್ನು ಅಲಂಕರಿಸಿ ಇಡಲಾರಂಭಿಸಿದರು. ಹೀಗಾಗಿ ದಸರೆಗೆ ಹೆಚ್ಚಿನ ಕಳೆ ಬಂದಿತು. ಗೊಂಬೆ ಅಂದರೇ ಮಕ್ಕಳು ,ಹೆಣ್ಣುಮಕ್ಕಳಿಗೆ ಏನೋ ಆಕರ್ಷಣೆ. ಗೊಂಬೆಗಳಲ್ಲು ಆಟದ ಗೊಂಬೆ, ದಸರಾ ಗೊಂಬೆ, ಸಾಂಸ್ಕೃತಿಕ ಕಲೆ ಮತ್ತು ಜಾನಪದ ಕಲೆ ಬಿಂಬಿಸುವ ಗೊಂಬೆ ಹೀಗೆ ಅನೇಕ ಪ್ರಕಾರದ ಬಣ್ಣ ಬಣ್ಣದ ಉಡುಗೆ ತೊಡಿಗೆಯ ಅತ್ಯಾಕರ್ಷಕ ಬಣ್ಣಬಣ್ಣದ ಗೊಂಬೆಗಳು ದೊರೆಯುತ್ತವೆ. ಗೊಂಬೆ ಮಾಡುವದು ಒಂದು ಕಲೆ. ಅನೇಕರಿಗೆ ಬದುಕು ಕಟ್ಟಿಕೊಡುವ ಕಲೆಯು ಕೂಡ.
ಗೊಂಬೆಗಳನ್ನು ಕಟ್ಟಿಗೆಯಿಂದ, ಮಣ್ಣಿನಿಂದ, ಪ್ಲಾಸ್ಟರ ಆಪ್ ಪ್ಯಾರಿಸ್‌ನಿಂದ ಮಾಡುತ್ತಾರೆ. ಇತ್ತಿತ್ತಲಾಗಿ ಬಣ್ಣದ ಹೊಳೆಯುವ ಹಾಳೆಯಿಂದ ಕೂಡ ಮನಮೋಹಕ ಗೊಂಬೆ ತಯಾರಿಸುತ್ತಾರೆ. ನಮ್ಮ ದೇಶದಲ್ಲಷ್ಟೇ ಅಲ್ಲ ಅನ್ಯ ದೇಶಗಳಲ್ಲೂ ಚೆಂದದ ಗೊಂಬೆಗಳಿಗೆ ಹೆಚ್ಚಿನಬೇಡಿಕೆ ಇದೆ. ಗೊಂಬೆಗಳೆಂದರೆ ಎಲ್ಲರಿಗೂ ಪ್ರೀತಿ. ಮತ್ತು ಅವನ್ನು ಪ್ರೀತಿಯ ಕಾಣಿಕೆಯಾಗಿ ಕೊಡುವದಿದೆ.
ನವರಾತ್ರಿ ಸಮಯದಲ್ಲಿ ಮೈಸೂರಿನ ಹೆಚ್ಚಿನ ಮನೆಗಳಲ್ಲಿ ಗೊಂಬೆಗಳ ಆರಾಧನೆ ಶತಮಾನಗಳಿಂದ ಸಂಪ್ರದಾಯವಾಗಿ ಬೆಳೆದು ಬಂದಿದೆ.
ಅದು ಇಂದು ಬೆಂಗಳೂರು ಹಾಗು ಧಾರವಾಡದಂತಹ ಇನ್ನಿತರ ಊರುಗಳಿಗೆ ಕೂಡ ವ್ಯಾಪಿಸಿರುವದು ಗೊಂಬೆಯ ಕುರಿತ ಜನರ ಆಕರ್ಷಣೆ ಎದ್ದು ಕಾಣುತ್ತದೆ. ಗೊಂಬೆಗಳ ಅಲಂಕಾರ ಆರಾಧನೆ ಪ್ರದರ್ಶನ ಅನೇಕ ಮನೆಗಳ ಸಂಪ್ರದಾಯವಾಗಿ ಬೆಳೆದು ಬಂದಿದೆ. ತವರು ಮನೆಯವರು ಮದುವೆಯಲ್ಲಿ ಮಗಳಿಗೆ ಪಟ್ಟದ ಗೊಂಬೆ ಕೊಡುವ ಸಂಪ್ರದಾಯವೂ ಕೆಲವು ಕಡೆ ಇದೆ. ಮುಂದೆ ಪ್ರತಿವರ್ಷ ಗೊಂಬೆಗಳ ಹಬ್ಬಮಾಡಲು ಪ್ರಾರಂಭ ಮಾಡಿದಂತೆ ಎಂದು ತಿಳಿಯಲಾಗಿದೆ.
ವಿಷ್ಣುಲಕ್ಷ್ಮಿ, ಶಿವ ಪಾರ್ವತಿ ಹಾಗು ರಾಧಾ ಕೃಷ್ಣ ರಾಮ ಸೀತಾ ಪರಿವಾರ, ಸತ್ಯನಾರಾಯಣ,ಗಣಪತಿ ಗುರು ಋಷಿಮುನಿಗಳ ಹೋಲುವ , ಯಕ್ಷಗಾನ ಕಲಾವಿದರ, ಜಾನಪದ ಕಲೆ ಹೋಲುವ ಗೊಂಬೆಗಳು ಇನ್ನೂ ಅನೇಕ ವಿಧದ ಗೊಂಬೆಗಳು ಚೆನ್ನಪಟ್ಟಣ ಕೋಲಾರ ಮುಂತಾದ ಕಡೆ ಸಿಗುತ್ತವೆ. ಈಗಂತೂ ಆನ್‌ಲೈನ್ ದಲ್ಲಿ ತರಿಸಿಕೊಳ್ಳಬಹುದಾಗಿದೆ. ಸಂಪ್ರದಾಯದಂತೆ ೩,೫ ಮತ್ತು ೯ ದಿನಗಳಕಾಲ ಗೊಂಬೆ ಕೂಡಿಸುತ್ತಾರೆ. ಅದಕ್ಕಾಗಿ ಮೊದಲೆ ಗೊಂಬೆ ಮನೆ ಶೃಂಗಾರಗೊಂಡಿರುತ್ತದೆ. ಹಳೆಯ ಗೊಂಬೆಗಳನ್ನು ಹೊರತೆಗೆದು ಸ್ವಛ್ಚಗೊಳಿಸಿ, ಬೇಕಾದಲ್ಲಿ ಮತ್ತೆ ಬಣ್ಣ ಕೊಡಿಸಿ ಇಟ್ಟುಕೊಳ್ಳುವರು. ಇವುಗಳಿಗೆ ಹೊಸದಾಗಿ ತಂದ ಗೊಂಬೆಗಳನ್ನು ಸೇರಿಸಿಡುತ್ತಾರೆ. ಬಹಳ ವರ್ಷಗಳಿಂದ ಕೂಡಿಟ್ಟು ಸಾವಿರಾರು ಗೊಂಬೆಗಳ ಸಂಗ್ರಹಣೆ ಮಾಡಿಟ್ಟಿರುತ್ತಾರೆ.
ಸ್ಟೀಲ್ ಅಥವಾ ಕಟ್ಟಿಗೆಯ ಸ್ಟ್ಯಾಂಡನ್ನು ಮೆಟ್ಟಲುಗಳ ರೀತಿಯಲ್ಲಿ ಮಾಡಿಸಿರುತ್ತಾರೆ. ೯,೫,೩ ಸಾಲುಗಳ ಮೆಟ್ಟಲುಗಳಲ್ಲಿ ಗೊಂಬೆಗಳನ್ನು ಜೋಡಿಸಿಡುತ್ತಾರೆ. ಮೊದಲ ಸಾಲಿನಲ್ಲಿ ಗಣಪತಿ ಮತ್ತು ಲಕ್ಷ್ಮಿ ವಿಷ್ಣುವಿನ, ಶಿವ ಪಾರ್ವತಿಯರ, ಸರಸ್ವತಿ, ಅಷ್ಟಲಕ್ಷ್ಮಿಯರ, ನವದುರ್ಗೆಯರ ಗೊಂಬೆ ಇಡುತ್ತಾರೆ. ನಂತರದ ಸಾಲಿನಲ್ಲಿ ರಾಜಾ ರಾಣಿ ಪಟ್ಟದ ಗೊಂಬೆ, ಆನೆ, ಕುದುರೆ ಹೀಗೆ ಏನ್ನೆಲ್ಲ ಗೊಂಬೆ ಇಡುತ್ತಾರೆ. ಮುಂದಿನ ಸಾಲುಗಳಲ್ಲಿ ಸಾಂಸ್ಕೃತಿಕ, ಜಾನಪದ ಕಲೆ ಹೋಲುವ ಗೊಂಬೆ ಇಡುವರು. ರಾಮಾಯಣ, ಮಹಾಭಾರತ, ಶ್ರೀ ಕೃಷ್ಣ ಲೀಲೆ, ಪೌರಾಣಕ ಮತ್ತು ಐತಿಹಾಸಿಕ ಕಥೆ ಜಂಬೂಸವಾರಿ, ನೃತ್ಯ, ವಾದ್ಯವೃಂದ ಹೀಗೆ ಅರ್ಥಪೂರ್ಣ ರೀತಿಯಲ್ಲಿ ನೋಡುಗರಿಗೆ ಸಂದರ್ಭ ತಿಳಿಯುವಂತೆ ಜೋಡಿಸುತ್ತಾರೆ.
ಹೀಗೆ ಒಂದು ವಿಷಯದ ಪರಿಕಲ್ಪನೆ, ಕಥಾವಸ್ತು ಆಧರಿಸಿ ಗೊಂಬೆ ಜೋಡಿಸುವದು ಒಂದು ಕಲೆ. ಮಹಿಳೆಯರಿಗೆ ಬಹಳ ಸಂತೋಷದ ವಿಷಯ. ಇಂದಿನ ಜನರು ಪೌರಾಣಿಕ ಮತ್ತು ದೇವರ ಮೂರ್ತಿಯ ಜೊತೆ ಮದುವೆ, ಉದ್ಯಾನವನ, ಜಾತ್ರೆ, ಪ್ರಸಿಧ್ದ ಐತಿಹಾಸಿಕ ತಾಣಗಳ ಶಿಲ್ಪಕಲೆ ತೋರಿಸುವ ಗೊಂಬೆಗಳನ್ನು ಅತ್ಯಂತ ಮನೋಜ್ಞವಾಗಿ ಜೋಡಿಸಿಡುತ್ತಾರೆ. ಪ್ರಾಣಿ ಪಕ್ಷಿ, ಹಳ್ಳಿ ಜನರ ಜೀವನ ಬಿಂಬಿಸುವ ಗೊಂಬೆಗಳನ್ನು ಅಲಂಕಾರಿಕವಾಗಿ ಜೋಡಿಸಿಡುತ್ತಾರೆ.. ಇದೆಲ್ಲ ನೋಡುವದೇ ಚೆಂದ. ದೀಪಾಲಂಕಾರದಿಂದ ಮೆರಗುಗೊಳಿಸುತ್ತಾರೆ. ರಂಗೋಲಿ ಹಾಗು ಹೂಗಳಿಂದ ಗೊಂಬೆಮನೆಯನ್ನು ಶೃಂಗರಿಸುತ್ತಾರೆ. ಪುರಾಣ ಓದುತ್ತಾರೆ. ಪಾರಾಯಣ ಮಾಡುತ್ತಾರೆ. ಕೆಲವರು ಸಂಗೀತ ಕಾರ್ಯಕ್ರಮ ಕೂಡ ಏರ್ಪಡಿಸುತ್ತಾರೆ.
ಗೊಂಬೆ ರೂಪದ ದೇವತೆಗಳಿಗೆ, ಪಟ್ಟದ ಗೊಂಬೆಗಳಿಗೆ ನಿತ್ಯ ಪೂಜೆ ಸಲ್ಲಿಸಿ ಸಹಿ ನೈವೇದ್ಯ ಮಾಡುತ್ತಾರೆ. ಒಬ್ಬರ ಮನೆಗೊಬ್ಬರು ಗೊಂಬೆ ನೋಡಲು ಹೋಗುವದೇ ಮನಸ್ಸಿಗೆ ಉಲ್ಲಾಸನೀಡುತ್ತದೆ. ಬಂದವರಿಗೆ ಸಿಹಿ ತಿಂಡಿ ಚಕ್ಕುಲಿ ಮುಂತಾದವನ್ನು ಕೊಡುವದಷ್ಟೇ ಅಲ್ಲ ಉಡುಗೊರೆ ಕೂಡ ನೀಡುತ್ತಾರೆ. ಬಂದವರಿಗೆ ದಸರಾ ಗೊಂಬೆ ತೋರಿಸುವದೇ ಸಂಭ್ರಮ. ಧಾರವಾಡದ ಮಂಜುಳಾ ಕುರ್ತಕೋಟಿ ಅವರ ಮನೆಯಲ್ಲಿ ಮೊದಲ ಬಾರಿಗೆ ಗೊಂಬೆಗಳನ್ನಿಟ್ಟು ದಸರಾ ಗೊಂಬೆ ಹಬ್ಬ ಅಚರಿಸುತ್ತಿದ್ದಾರೆ. ಎಲ್ಲರನ್ನು ಮನೆಗೆ ಆವ್ಹಾನಿಸಿ ಗೊಂಬೆ ತೋರಿಸಿ ಸಿಹಿ ಹಂಚಿ ಸಂಭ್ರಮ ಪಡುತ್ತಿದ್ದಾರೆ. ಹೀಗೆ ದಸರಾ ಹಬ್ಬಕ್ಕೂ ಗೊಂಬೆ ಹಬ್ಬಕ್ಕು ಅವಿನಾಭಾವ ಸಂಬಂಧವಿದೆ.
ಗೊಂಬೆ ಹಬ್ಬದಲ್ಲಿ ಸಾಂಸ್ಕೃತಿಕ ಸಂಭ್ರಮವಿದೆ, ಕಲೆಯ ಆರಾಧನೆ ಇದೆ, ಧಾರ್ಮಿಕತೆ ಇದೆ. ಪ್ರೀತಿಯ ಬೆಸುಗೆ ಇದೆ, ಮನಸ್ಸಿಗೆ ಉಲ್ಲಾಸವಿದೆ.
–ಶಾರದಾ ಕೌದಿ
ಅಡಕಿ ಓಣಿ
ನಗರೇಶ್ವರ ಗುಡಿ ಹತ್ತಿರ
ಮಂಗಳವಾರಪೇಟ
ಧಾರವಾಡ
8951491838