ಅನ್ನದ ಮೇಲಣ ಲವಲವಿಕೆ

ಅನ್ನದ ಮೇಲಣ ಲವಲವಿಕೆ

ಅನ್ನದ ಮೇಲಣ ಲವಲವಿಕೆ, ನಿದ್ರೆಯ ಮೇಲಣ ಲವಲವಿಕೆ, ಅಂಗನೆಯರ ಮೇಲಣ ಲವಲವಿಕೆಯಿದ್ದಂತೆ ಲಿಂಗದಲ್ಲಿರಬೇಕು. ಶಿವಲಿಂಗದಲ್ಲಿ ಮೋಹವನಳವಡಿಸಿದರೆ, ತನ್ನನೀವ ನಮ್ಮ ಚೆನ್ನಬಂಕನಾಥದೇವರು
                               -ಸುಂಕದ ಬಂಕಣ್ಣನ ವಚನ

ಮನುಷ್ಯ ಮೊದಲು ಬಯಸುವುದೇ ಅನ್ನ! ಅನ್ನದೇವರೊಂದನ್ನು ಕೊಟ್ಟುಬಿಟ್ಟರೆ, ಇನ್ನೂಳಿದ ದೇವರನ್ನು ಬಯಸುವದು ಕಡಿಮೆ. ಅನ್ನ ಉಂಡ ಮೇಲೆ ನಿದ್ರಿಸಬೇಕೆಂಬ ಆಸೆ. ನಿದ್ರೆಯಿಂದ ಎದ್ದ ಮೇಲೆ ಅನ್ನದಿಂದಾದ ವಿಕಾರದಿಂದ ಅಂಗನೆಯರ ಬಯಕೆ. ಅನ್ನ, ಅಂಗನೆಯರು, ನಿದ್ರೆ, ಈ ಮೂರರ ಮೇಲೆ ಹೆಚ್ಚು ಆಸಕ್ತಿ ಮನುಷ್ಯನಿಗೆ. ಶಿವಲಿಂಗದ ಮೇಲೆ ಯಾರಿಗೆ ಮೋಹವಿದೆ? ಶಿವಲಿಂಗದ ಮೇಲೆ ಮೋಹಿಯಾದರೆ, ಶಿವನು ತನ್ನನ್ನೇ ತಾನು ಕೊಡುತ್ತಾನೆ ಎನ್ನುತ್ತಾರೆ ಸುಂಕದ ಬಂಕಣ್ಣನವರು.

ಅನ್ನದ ಮೇಲಣ ಲವಲವಿಕೆ, ನಿದ್ರೆಯ ಮೇಲಣ ಲವಲವಿಕೆ, ಅಂಗನೆಯರ ಮೇಲಣ ಲವಲವಿಕೆಯಿದ್ದಂತೆ ಲಿಂಗದಲ್ಲಿರಬೇಕು.

ನಮಗೆ ಮೊದಲು ಅನುಭವಕ್ಕೆ ಬರುವುದೇ ಹಸಿವು. ಈ ಹಸಿವೆಂಬ ರೋಗಕ್ಕೆ ಅನ್ನವೇ ಔಷದಿ. ಹೊಟ್ಟೆ ತುಂಬುವದೊರಳಗೆ ಹೊತ್ತು ಮುಳುಗುತ್ತದೆ. ನಮ್ಮ ಲವವಿಕೆ ಅಂದರೆ ಆಸಕ್ತಿ ಒಲವು ಅನ್ನದ ಕಡೆಗೆ. ಕೆಲವು ಸಂದರ್ಭದಲ್ಲಿ ಹೀಗೆ ಅನಿಸುತ್ತದೆ, ಅನ್ನವಿದ್ದರೆ ಸಾಕು ಮತ್ತೇನು ಬೇಡವೆಂದು. ಅನ್ನ ಪಡೆಯುವುದರೊಳಗೆ ಜೀವನದ ಅಮೂಲ್ಯ ಸಮಯವೆಲ್ಲ ಮುಗಿಯುತ್ತದೆ. ಊಟವಾದ ಮೇಲೆ ಸಹಜವಾಗಿ ನಿದ್ರೆ ಬರುತ್ತದೆ. ನಿದ್ರೆ ಮಾಡದಿದ್ದರೆ ಊಟ ಪಚನವಾಗುವುದಿಲ್ಲ. ಆದ್ದರಿಂದ ನಿದ್ರೆಯ ಕಡೆಗೆ ನಮ್ಮ ಆಸಕ್ತಿ. ನಿದ್ರೆಯಾದ ಮೇಲೆ ಮನಸ್ಸಿನ ವಿಕಾರ ಕಾಡುತ್ತೆ. ವಿಕಾರಗಳನ್ನು ಅನುಭವಿಸಲು ಹೆಂಗಳೆಯರು ಬೇಕು. ಅವರ ಸಂಗಸುಖದಲ್ಲಿ ಜೀವನವೆಲ್ಲ ಸವೆಸುತ್ತೇವೆ.
ಈ ಅನ್ನ, ನಿದ್ರೆ, ಅಂಗನೆಯರ ಮೇಲೆ ಇರುವ ಒಲವು ಲಿಂಗದ ಮೇಲೆ ಇಡಬೇಕು.

ಶಿವಲಿಂಗದಲ್ಲಿ ಮೋಹವನಳವಡಿಸಿದರೆ, ತನ್ನನೀವ ನಮ್ಮ ಚೆನ್ನಬಂಕನಾಥದೇವರು

ನಮ್ಮ ಒಲವು ಸಂಪೂರ್ಣವಾಗಿ ಲಿಂಗದ ಮೇಲೆ ಇಟ್ಟಾಗ ಶಿವನೇ ನಾವಾಗುತ್ತೇವೆ ಎನ್ನುತ್ತಾರೆ ಸುಂಕದ ಬಂಕಣ್ಣ ಶರಣರು.

Don`t copy text!