ವಿಶೇಷ ಲೇಖನ
ಬನ್ನಿ ಪತ್ರಿ ಪೂಜೆಗೆ ವಿಶೇಷ. ಬನ್ನಿ ಗಿಡಕ್ಕೆ ದೈವತ್ವದ ಪರಿಕಲ್ಪನೆ ಇದೆ. ಕರ್ನಾಟಕದಲ್ಲಿ ಬನ್ನಿ ಮರವನ್ನು ಪೂಜನೀಯವಾಗಿ ನೋಡುತ್ತಾರೆ. ಇದರ ವೈಜ್ಞಾನಿಕ ನಾಮ
Acacia farnesiana (L.) WILLD.ಪರ್ಯಾಯನಾಮ- ಶಮೀ ಎಂದು. ಇದು ಕುಟುಂಬಕ್ಕೆ ಸೇರಿದ
MIMOSACEAE
(ಲೆಗ್ಯುಮಿನೋಸೀ ಕುಟುಂಬದ ಮಿಮೋಸೀ ಉಪಕುಟುಂಬಕ್ಕೆ ಸೇರಿದ ವೃಕ)
ಬನ್ನಿಮರಕ್ಕೆ ಇರುವ ಇತರೆ ಹೆಸರುಗಳೆಂದರೆ,
ಸಂಸ್ಕೃತ- ಅರಿಮೇದ,
ತಮಿಳು- ಕಸ್ತೂರಿ ವೇಲಂ, ಮಲಿಯಾಲಂ-ಕರಿವೇಲಂ,
ಹಿಂದಿ-ಬಬೂಲ,
ತೆಲಗು-ಅರಿಮಿದಮು,
ಮರಾಠಿ-ದೇವ್ಬಾಬ್ಬುಲ,
ಇಂಗ್ಲಿಷ್-Cassie tree ಎಂದು ಕರೆಯುತ್ತಾರೆ.
ಬನ್ನಿಯನ್ನು ಆಯುರ್ವೇದ, ಸಿದ್ದಾ, ಚೈನಾ, ಜಾನಪದವಾಗಿ ಆರೋಗ್ಯಕ್ಕಾಗಿ ಸೇವಿಸುವ ಪರಿಪಾಠ ಇದೆ.
ಬನ್ನಿ ಭಾರತ, ಶ್ರೀಲಂಕಾದಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಭಾರತದಲ್ಲಿ ಕೊಂಕಣ, ಕರ್ನಾಟಕದ ಮೈದಾನ ಪ್ರದೇಶ, ಪಶ್ಚಿಮ ಘಟ್ಟದ ಪೂರ್ವ ಇಳಿಜಾರು ಭಾಗಗಳಲ್ಲಿ ದೊರೆಯುತ್ತದೆ. ಇದು ಮಧ್ಯಮಗಾತ್ರದ ಮುಳ್ಳು ಮರ. ಭಾರತ ದೇಶದಲ್ಲಿ ಪೂಜಾರ್ಹವೆನಿಸಿದೆ. ಹಿಂದೆ ಪಾಂಡವರು ಅಜ್ಞಾತವಾಸಕ್ಕಾಗಿ, ಕಾಡಿಗೆ ಹೋದಾಗ ಅರ್ಜುನ ತನ್ನ ಗಾಂಡೀವಾಸ್ತ್ರವನ್ನು ಬನ್ನಿಮರದಲ್ಲಿಟ್ಟದ್ದರು ಎಂದು ಪುರಾಣೇತಿಹಾಸ ಇರುವುದರಿಂದಲೇ ಇದು ಪೂಜಾರ್ಹತೆ ಪಡೆದಿರಬಹುದು.
ಮರ ನೋಡಲು ಅಂದವಾಗಿದೆ. ಸುಮಾರು 3-5 ಮೀ ಎತ್ತರಕ್ಕೆ ಬೆಳೆಯುತ್ತದೆ ತೊಗಟೆ ಕಂದು ಬಣ್ಣದ್ದು. ಚಳಿಗಾಲದಲ್ಲಿ ಎಲೆಗಳು ಉದುರಿ ಹೋಗುವುವು ಎಲೆಗಳ ಬುಡದಲ್ಲಿ ಬೆಳೆಯುವ ವೃಂತಪರ್ಣಗಳು ಮುಳ್ಳುಗಳ ರೂಪದಲ್ಲಿವೆ ಏಪ್ರಿಲಿನಲ್ಲಿ ಹೂ ಬಿಟ್ಟು ಜುಲೈ ತಿಂಗಳಲ್ಲಿ ಬೀಜ ಕಟ್ಟುತ್ತದೆ. ಮರದ ಹೊರಪದರ ಹಳದಿ ಮಿಶ್ರಿತ ಬಿಳಿ, ಒಳಭಾಗ ಆಲಿವ್ ಕಂದು ಬಣ್ಣದವು. ವಯಸ್ಸಾದಂತೆ ಒಳಭಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೊರಭಾಗ ಬೇಗನೆ ಕೆಟ್ಟು ಹೋರ ಚೇಗುಭಾಗ ಗಾಳಿ ಬೆಳಕಿಗೆ ಮೈಯೊಡ್ಡುವಂತಿದ್ದರೂ ಬಹುಕಾಲ ಬಾಳಿಕೆಬರುತ್ತದೆ. ಗಟ್ಟಿಮರವಾದ್ದರಿಂದ ಗಾಡಿಯ ಗಾಲಿ, ಕಂಬ, ದಿಮ್ಮಿಗಳ ಹಾಗೂ ಕೃಷಿ ಉಪಕರಣಗಳ ತಯಾರಿಕೆಗೆ ಉಪಯುಕ್ತ. ತೊಗಟೆ ಮತ್ತು ಕಾಯಿಯಿಂದ ತಯಾರಿಸಿದ ತೈಲ ಗಾಯದಿಂದ ಸೋರುವ ರಕ್ತಸ್ರಾವವನ್ನು ತಡೆಯುತ್ತದೆ. ಬನ್ನಿಯಿಂದ ಸಹ ಗಮ್ ಅರ್ಯಾಬಿಕಾ ರೀತಿಯ ಗೋಂದನ್ನು ಪಡೆಯಬಹುದು.
ಅತ್ಯಂತ ಹೆಚ್ಚು ಉಷ್ಣತೆ, ಹಾಗು ಕಡಿಮೆ ನೀರಿರುವ ಕಡೆ ಬೆಳೆಯುತ್ತಂತೆ… ರಾಜಸ್ಥಾನ್ ಸಂಪೂರ್ಣವಾಗಿ ಈ ಮರದ ಮೇಲೆ ಅವಲಂಬಿಸಿದೆ.. ನೆರಳು, ಜಾನುವಾರುಗಳಿಗೆ ಮೇವು, ಸೌದೆ, ಫರ್ನಿಚರ್, ಅಷ್ಟೇ ಅಲ್ಲದೆ ಅದರ ಒಣಗಿದ ಕಾಯಿಗಳು ಅಲ್ಲಿನ ಪ್ರಮುಖ ಖಾದ್ಯ… ಕಿಲೋಗೆ 300 – 400 ರುಪಾಯಿವರೆಗೂ ಇದೆಯಂತೆ… ಇದರ ಕಾಯಿ ಪಲ್ಯದಿಂದ ಹಿಡಿದು ಉಪ್ಪಿನಕಾಯಿವರೆಗೂ ಉಪಯೋಗಿಸಲಾಗುತ್ತೆ..
ಸಾರಜನಕವನ್ನು ಮಣ್ಣಿಗೆ ಒದಗಿಸುವ ಮೂಲಕ ಪಲವತ್ತತೆಯೂ ಹೆಚ್ಚುತ್ತದೆಯಂತೆ… ಜಮೀನುಗಳ ಬದಿಗಳಲ್ಲಿ ಈ ಸಸಿಗಳನ್ನು ನೆಡುವುದರಿಂದ ನೈಸರ್ಗಿಕ ಗೊಬ್ಬರವೂ ಸಿಗುತ್ತೆ..
ಬನ್ನಿಯ ಮರವನ್ನು ಉರುವಲಾಗಿ ಉಪಯೋಗಿಸುವುದಿಲ್ಲ. ಹಾಗೆಯೆ ಗಿಡವನ್ನು ವ್ಯಾಪಾರ ಮಾಡುವುದಿಲ್ಲ.ಧಾರ್ಮಿಕವಾಗಿ ಬನ್ನಿ ಮರ ಪವಿತ್ರ ಸ್ಥಾನದಲ್ಲಿದೆ.
ಈ ವೃಕ್ಷ ದೈವಸ್ವರೂಪಿ. ವಿಜಯದಶಮಿ ಬಂತೆಂದರೆ ‘ಬನ್ನಿ’ ಯನ್ನು ನೆನೆಯದವರಿಲ್ಲ. ಸಂಭ್ರಮದ ದಸರಾಕ್ಕೆ ತೆರೆ ಬೀಳುವುದು ಈ ಬನ್ನಿ ಮರದಿಂದಲೇ.
ಹೋಮ ಹವನ ಯಜ್ಞ ಮಾಡುವ ವೇಳೆಯಲ್ಲಿ ಇದರ ಒಣಗಿದ ಟೊಂಗೆ ಅರ್ಪಿಸುವರು. ಆದ್ದರಿಂದ ಇದಕ್ಕೆ ಹವನೀಯ ವೃಕ್ಷವೆಂದೂ ಹೆಸರು.
ಯಜ್ಞಕ್ಕೆ ಬೇಕಾಗುವ ಅಗ್ನಿಯನ್ನು ಪಡೆಯಬೇಕಾದರೆ ಇದೇ ವೃಕ್ಷದ ಕೊಂಬೆಗಳನ್ನು ಕಡೆದು (ಉಜ್ಜಿ) ಪಡೆಯುವರು.
ಈ ವೃಕ್ಷದಲ್ಲಿ ಕೇಶಮಧಿನಿ, ತಪತನಯಾರ ಅಗ್ನಿಗರ್ಭಾ, ಹವಿರ್ಗಂಧಾ ಗುಣಧರ್ಮಗಳಿವೆ.
ಶಮೀವೃಕ್ಷದ ಉಪಯೋಗ, ಸಂತತಿ ಸೌಭಾಗ್ಯ
ಅಥರ್ವಣ ವೇದದಲ್ಲಿ ಶಮೀವೃಕ್ಷ ಸಂತತಿ ಸೌಖ್ಯವನ್ನು ನೀಡುವುದಾಗಿ ಹೇಳಿದೆ. ಮೂಲವ್ಯಾಧಿ ಯಿಂದ ಬಳಲುವವರು ಬನ್ನಿಯ ಎಲೆಯ ಕಷಾಯವನ್ನು ತಣ್ಣೀರಿನ ಟಬ್ಬಿನಲ್ಲಿ ಹಾಕಿ ಅದರಲ್ಲಿ ಕುಳಿತುಕೋಳ್ಳಬೇಕು
ಮುಖದ ಮೇಲಿನ ಅನಗತ್ಯ ರೋಮ ವು ಬೇಳೆಯುತ್ತಿದ್ದರೆ ಬನ್ನಿ ಕಾಯಿಯನ್ನು ನೀರಿನಲ್ಲಿ ತೇಯ್ದು ಲೇಪಿಸುತ್ತಿದ್ಧಲ್ಲಿ ಬೆಳವಣಿಗೆ ತಗ್ಗುತ್ತದೆ
ಬನ್ನಿ ತೋಗಟೆಯ ಕಷಾಯವು ಬೇದಿ, ಕೆಮ್ಮು, ತಲೆಸುತ್ತು, ಚರ್ಮ ರೋಗ, ರಕ್ತಸ್ರಾವ, ಜಂತುಹುಳುಗಳ ತೊಂದರೆ ಗೆ ಉಪಯುಕ್ತವಾಗಿದೆ.
ಬನ್ನಿಯ ಕಾಯಿ ಪಿತ್ತ ವೃದ್ಧಿ ಮಾಡುವುದಲ್ಲದೆ ಮೆದುಳಿನ ಟಾನಿಕ್ ಆಗಿ ಕೆಲಸ ಮಾಡುತ್ತದೆ
ಬನ್ನಿ ಮರದ ತೊಗಟೆ ಕಷಾಯ ರುಮಾಡಿಸಂ ಇಂದ ಬಳಲುತ್ತಿರುವವರಿಗೆ ಉತ್ತಮ
ಬನ್ನಿ ಮರದ ಹೂವುಗಳನ್ನು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ಗರ್ಭಪಾತವನ್ನು ತಡೆಗಟ್ಟಬಹುದು.
ತೊಗಟೆಯನ್ನು ಪುಡಿ ಮಾಡಿ ಪೇಸ್ಟನ್ನು ಚೇಳು ಕಡಿದ ಜಾಗಕ್ಕೆ ಹಚ್ಚಿದರೆ ವಿಷ ಪ್ರಭಾವ ಕಡಿಮೆ ಆಗುತ್ತದೆ. ತೊಗಟೆಯ ಪುಡಿಯನ್ನು ಅರಿಷಣ ಮತ್ತು ಹಾಲಿನೊಂದಿಗೆ ಕಳಿಸಿ ಹಚ್ಚಿದರೆ ಚರ್ಮ ಕಾಂತಿ ಯುತವಾಗುತ್ತದೆ.
ತೊಗಟೆಯ ಕಷಾಯವು ಆಮಶಂಕೆ, ಬೇದಿಗೆ ಉತ್ತಮ ಔಷಧಿ. ತೊಗಟೆಯ ಕಷಾಯದಿಂದ ಬಾಯಿ ಮುಕ್ಕಳಿಸಿದ್ದಲ್ಲಿ ಗಂಟಲು ನೋವು, ಹಲ್ಲು ನೋವು ಪರಿಹಾರವಾಗುತ್ತದೆ.
ಅರ್ಧಗಂಟೆ ಅಥವಾ ಒಂದು ಗಂಟೆ ಈ ಶಮೀವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದರೆ ದೀರ್ಘಕಾಲೀನ ರೋಗಗಳಿದ್ದರೆ ಗುಣವಾಗುವುದು.
ಹೃದ್ರೋಗ ಇದ್ದರೆ ಈ ಮರದ ಗಾಳಿಯನ್ನು ಪ್ರತಿದಿನ ಸೇವಿಸಿದ್ದರೆ ತೊಂದರೆ ನಿವಾರಣೆ ಆಗುವುದು.
ಶಮೀ ವೃಕ್ಷ ಇರುವ ಸ್ಥಳದಲ್ಲಿ ಬಾವಿ ತೋಡಿಸಿದರೆ ಸಿಹಿ ನೀರು ಸಿಗುತ್ತದೆ. ( ಗ್ರಾಮಿಣ ಹಿರಿಯರ ನಂಬಿಕೆ/ ಅನುಭವ )
ದೀರ್ಘವಾದ ಕೆಮ್ಮು ಇದ್ದರೆ ಈ ವೃಕ್ಷದ ಚಕ್ಕೆಯಿಂದ ಕಷಾಯ ಮಾಡಿ ಕುಡಿದರೆ ಗುಣಮುಖವಾಗುವುದು.
ಜನಪದರ ಬನ್ನಿ ಹಬ್ಬ
ವಿಜಯದಶಮಿ ಕನ್ನಡ ಜನಪದರ ಸಂಭ್ರಮದ ಹಬ್ಬ. ಭಾರತದ ತುಂಬೆಲ್ಲ ಈ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಬೇರೆ ಬೇರೆಯಾಗಿ ಆಚರಿಸಿದರೆ ಕನ್ನಡಿಗರು ಬನ್ನಿಯ ಹಬ್ಬವಾಗಿ ಇದನ್ನು ಆಚರಿಸುತ್ತಾರೆ. ಬೆಳಸು ತುಂಬಿದ ಭೂಮಿಯು ಕಾಡನ್ನು ಬಿಟ್ಟು ಕೆಲವೇ ದಿನಗಳಲ್ಲಿ ನಾಡನ್ನು ಸೇರುವದೆಂದು ಸೂಚಿಸುವ ಶುಭದಿನವಿದು.
ಊರ ಸೀಮೆಯ ದಾಟಿ ಕಾಡ ಗಡಿಯನು ಸೇರಿ
ಕಾಡ ಸಂಪತ್ತು ತರಬನ್ನಿ
ಬೆಳೆದ ಬೆಳಸಿಗೆ ಬನ್ನಿ
ಭೂಮಿ ತಾಯಿಗೆ ಬನ್ನಿ
ನಾಡ ಸಂಪತ್ತು ಬೆರಿ ಬನ್ನಿ
ನಾಡ ಜನರ ಒಡಲು ತುಂಬುವ ಭೂ ತಾಯಿಯ ಮಡಿಲು ತುಂಬಿ ಬರಲು ಈ ಹಬ್ಬದಲ್ಲಿ ದೇವರೆದುರಲ್ಲಿ ಘಟಸ್ಥಾಪನ ದಿನ ಸಸಿ ಬೆಳೆಸುತ್ತಾರೆ.ಇದೊಂದು ಜನಪದರ ಮಣ್ಣು ಪೂಜೆ.
ಖಂಡೆ ಪೂಜೆ
ಅಶ್ವಿನಿ ಶುದ್ದ ನವಮಿಯ ದಿನ ಆಚರಿಸುವ ಪೂಜೆ. ಈ ದಿನ ರೈತರು ಒಕ್ಕಲುತನದ ಸಾಮಗ್ರಿಗಳನ್ನೆಲ್ಲ ತೊಳೆದು, ತಿಕ್ಕಿ ಭಕ್ತಿಯಿಂದ ಪೂಜೆ ಮಾಡಿ ಹೊಲದಲ್ಲಿನ ತುಂಬಿದ ಬೆಳಸನ್ನು ತಂದು ಪೂಜೆಗೆ ಏರಿಸಿ ಕೈ ಮುಗಿಯುತ್ತಾರೆ. ವ್ಯಾಪಾರಿಗಳು ತಮ್ಮ ತೂಕ ತಕ್ಕಡಿಗಳನ್ನು ಈ ದಿನ ಪೂಜಿಸುತ್ತಾರೆ. ಹಿಂದೆ ರಾಜಮಹಾರಾಜರು ತಮ್ಮ ಯುದ್ದ ಸಾಮಗ್ರಿಗಳನ್ನು ಈ ದಿನ ಪೂಜೆ ಮಾಡುತ್ತಿದ್ದರು. ಬನ್ನಿ ಹಬ್ಬದ ದಿನವನ್ನು ದಿಗ್ವಿಜಯ ಕೈಕೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು ಕರೆದು ಯುದ್ದ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮುಂದಿನ ಬನ್ನಿಯ ದಿಬ್ಬಕ್ಕೆ ಸೇರುತ್ತಿದ್ದರು. ಇಂಥ ಬನ್ನಿಯ ದಿಬ್ಬಗಳು ಕರ್ನಾಟಕದ ಅನೇಕ ಕಡೆ ಇದ್ದವೆಂದೂ ಅವೆಲ್ಲ ಅಳಿದು ಹೋಗಿರಬಹುದಾದ ನಿದರ್ಶನಗಳಿವೆ.
ವಿಜಯನಗರದ ಬನ್ನಿದಿಬ್ಬ ಈಗ ನಮ್ಮ ಕಣ್ಣೆದುರಿಗೆ ಉಳಿದುಕೊಂಡಿರುವ ಒಂದು ಐತಿಹಾಸಿಕ ಸ್ಮಾರಕ.
ಬನ್ನಿ ಎಲೆ ಚಿನ್ನ
ಜನಪದರು ತಮ್ಮ ಪೂಜೆ ಪುನಸ್ಕಾರಗಳಲ್ಲಿ ಪಾಂಡವರಿಗೆ ಅಗ್ರಸ್ಥಾನ ನೀಡಿದ್ದಾರೆ ಬನ್ನಿ ಹಬ್ಬದ ದಿನವೇ ಪಾಂಡವರ ಅಜ್ಞಾತವಾಸ ಆರಂಭವಾದದ್ದು.ಅವರು ಅಜ್ಞಾತವಾಸಕ್ಕೆ ಹೋಗುವಾಗ ತಮ್ಮ ಆಯುಧಗಳನ್ನು ಬನ್ನಿಯ ಮರದ ಪೊಟರೆಯಲ್ಲಿಟ್ಟು ನಾವು ಬರುವವರೆಗೂ ಅವುಗಳನ್ನು ಕಾಯಬೇಕೆಂದು ಆ ಮರಕ್ಕೆ ಹೇಳಿ ಹೊರಟು ಹೋದರೆಂದು ಕಥೆ ಇದೆ. ಪಾಂಡವರ ವನವಾಸ, ಅಜ್ಞಾತವಾಸವನ್ನು ನಮ್ಮ ಜನಪದರು ಮನಕರಗುವಂತೆ ಕೆಲ ಸಾಲುಗಳಲ್ಲಿ ಹೇಳುತ್ತಾರೆ.
ಕಲ್ಲು ಕಡುಬ ಮಾಡಿ ಮುಳ್ಳ ಶಾವಿಗೆ ಮಾಡಿ
ಬನ್ನಿಯ ಎಲಿಯಾಗ ಎಡೆಮಾಡಿ-ಪಾಂಡವರು
ಉಂಡು ಹೋಗ್ಯಾರೋ ವನವಾಸೋ.
ರೈತರು ಪಾಂಡವರನ್ನು ಸುಗ್ಗಿ ಕಣದ ದಂಡೆಯ ಮೇಲೆ, ಹೊಟ್ಟಿನ ಕುಟ್ಟರಿಯ ಎಡಭಾಗದಲ್ಲಿಟ್ಟು ಪೂಜೆ ಮಾಡಿ ರಾಶಿ ಬುತ್ತಿಯ ಊಟವನ್ನು ಎಡೆಮಾಡುವರು. ಬನ್ನಿಮರದ ಎಲೆಯನ್ನು ಚಿನ್ನವೆಂದು ಜನಪದರು ಭಾವಿಸಿದ್ದಾರೆ.ಬನ್ನಿ ಮರ ಒಂದು ಪವಿತ್ರ ಮರ. ದಸರಾ ಹಬ್ಬದಲ್ಲಿ ಈ ಮರಕ್ಕೆ ವಿಶೇಷ ಪೂಜೆ. ವಿಜಯದಶಮಿಯ ದಿನ ಬನ್ನಿ ಮರವನ್ನು ಪೂಜಿಸಿ ಅದರ ಎಲೆಯನ್ನು ಚಿನ್ನವೆಂದು ತಿಳಿದು ಹಂಚುವ ಪದ್ಧತಿ ಇದೆ. ಈ ದಿನ ಬನ್ನಿಮರಕ್ಕೆ ನೈವೇದ್ಯ ತೆಗೆದುಕೊಂಡು ಹೋಗಿ ಹೆಣ್ಣು ಮಕ್ಕಳು ಅರಿಷಿಣ , ಕುಂಕುಮ ಹಚ್ಚಿ
ಪೂಜೆ ಮಾಡುವರು.
ದೇವದೇವರ ಬನ್ನಿ
ದೈವದೈವದ ಬನ್ನಿ
ನಾವು ಮುಡಿವೂದು ನಮ್ಮ ಬನ್ನಿ.
ಬನ್ನಿ ಮುಡಿಯುವದೆಂದರೆ ಅದೊಂದು ಸಂಭ್ರಮದ ಸಂದರ್ಭ. ದೇವರಿಗೆ,ತಂದೆ ತಾಯಂದಿಯರಿಗೆ ,ಅಕ್ಕ ತಂಗಿಯರಿಗೆ,ಅಣ್ಣ ತಮ್ಮರಿಗೆ ,ಬೀಗರು ಬಿಜ್ಜರಿಗೆ, ಗೆಳೆಯ ಗೆಳತಿಯರಿಗೆ ಬನ್ನಿ ಕೊಡುವುದು ಎಲ್ಲಿಲ್ಲದ ಸಂಭ್ರಮ.ಜಗಳವಾಡಿ, ಮಾತು ಬಿಟ್ಟು ಮುನಿಸಿಕೊಂಡವರು ಈ ದಿನ ಬನ್ನಿ ವಿನಿಮಯ ಮಾಡಿಕೊಂಡು ಒಂದಾಗುವ ಸಂಭ್ರಮ ಹಳ್ಳಿಗಳಲ್ಲಿ ನೋಡಬಹುದು.
ಹಡೆದ ತಾಯಿಗೆ ಬನ್ನಿ
ಹಡೆದ ತಂದೆಗೆ ಬನ್ನಿ
ಪಡೆದ ಗಂಡನಿಗೆ ನಮ್ಮ ಬನ್ನಿ
ಮಕ್ಕಳು ತಂದೆ-ತಾಯಿಯರಿಗೆ,ಹೆಂಡತಿ ಗಂಡನಿಗೆ ಬನ್ನಿ ಕೊಡುವ ಮೂಲಕ ಕೃತಜ್ಞತೆ ಸಲ್ಲಿಸುವ ವಿಧವಿದೆ.ಹೆಣ್ಣುಮಗಳೊಬ್ಬಳು ಬನ್ನಿಯ ಹಬ್ಬಕ್ಕೆ ತವರಿಗೆ ಹೋಗಿ ಅಲ್ಲಿ ಅಣ್ಣನಿಗೆ ಹಿಡಿ ಬನ್ನಿಯನ್ನು ಕೊಟ್ಟು ಅಣ್ಣನ ಮಗಳಿಗೆ ಕುಂಕುಮದ ಬೊಟ್ಟಿಟ್ಟು ಸೊಸೆಯನ್ನಾಗಿ ಮಾಡಿಕೊಂಡು ಬರುವ ಸಂದರ್ಭ ಗೀತೆಯೊಂದಿದೆ.
ದಸರೇಕ ತವರಿಗೆ ಕುಶಲದಿ ನಾ ಹೋದೆ
ಸೊಸಿನೋಡಿ ಕೊಟ್ಟೆ ಹಿಡಿ ಬನ್ನಿ-ಅಣ್ಣಯ್ಯ
ಖುಷಿಲಿಂದ ಬೊಟ್ಟು ಸೊಸೆಗಿಟ್ಟು.
ಬನ್ನಿ ಮುಡಿಯುವ ಆಚರಣೆಯು ಬಂಧುತ್ವ ಮತ್ತು ಭಾವೈಕೈತೆಯನ್ನು ಬೆಸೆಯುತ್ತದೆ.ಬದುಕಿನ ಜಂಜಾಟದಲ್ಲಿ ,ಹತ್ತು ಹಲವು ನೋವು,ವಿರಸದಲ್ಲಿ ಮುನಿಸಿಕೊಂಡವರು ಒಂದಾಗುವ ಚೆಂದಾಗುವ ಉಲ್ಲಾಸದ ಈ ದಿನ ಬದುಕಿಗೆ ಹೊಸ ಅರ್ಥ ಕೊಡುತ್ತದೆ.
ನಾವು ಕುಣಿಯೋಣ ಬನ್ನಿ
ಹ್ಯಾಂವ ಮುರಿಯೋಣ ಬನ್ನಿ
ಜೀವ ಒಂದಾಗಿ ಇರಬನ್ನಿ
ಇಂದು ಮುಡಿಯುವ ಬನ್ನಿ
ಮುಂದೆಮಗೆ ಹೊನ್ನಾಗಿ
ಕಂದಣದಾರುತಿ ಬೆಳಗುದಕ.
ನವರಾತ್ರಿಯಲ್ಲಿ ಬನ್ನಿ-ಶಮೀ
ನವರಾತ್ರಿ ನಮ್ಮ ನಾಡಿನ ಹಬ್ಬ. ಈ ಹಬ್ಬದ ನಿಮಿತ್ತ ನವದುರ್ಗೆಯ ಆರಾಧನೆ ಎಲ್ಲೆಡೆ ಅದ್ಧೂರಿಯಾಗಿ ನಡೆಯುತ್ತೆ. ಇದರ ಜೊತೆ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಬನ್ನಿ ವೃಕ್ಷದ ಪೂಜೆಗೆ ಹಲವು ನಂಬಿಕೆ ಮತ್ತು ಕಾರಣಗಳಿವೆ.
ನವರಾತ್ರಿ ಬಂದ್ರೆ ಸಾಕು, ಉತ್ತರ ಕರ್ನಾಟಕದಲ್ಲಿ ಹಲವು ಆಚರಣೆಗೆ ಕಾಣಿಸಲಾರಂಭಿಸುತ್ತವೆ. ಅದರಲ್ಲಿ ಪ್ರಮುಖವಾದದ್ದು ಮನೆಯಲ್ಲಿ ದೀಪ (ಘಟ್ಟ) ಹಾಕುವುದು ಮತ್ತು ಬನ್ನಿ ವೃಕ್ಷಕ್ಕೆ ಮಹಿಳೆಯರು ಪ್ರಾತಃಕಾಲದಲ್ಲಿ ಪೂಜೆ ಸಲ್ಲಿಸುವುದು. ಈ ದಿನಗಳಲ್ಲಿ ನಸುಕಿನ ವೇಳೆ ಬನ್ನಿಮಂಟಪಗಳಲ್ಲಿ ಮಹಿಳೆಯರು ಕಂಡುಬರುತ್ತಾರೆ.
ರಾಮಾಯಣ ಮತ್ತು ಮಹಾಭಾರತ ಕಾಲದಿಂದ ಬನ್ನಿಮರಕ್ಕೆ ವಿಶೇಷವಾದ ಸ್ಥಾನಮಾನ ಇದೆ. ಎರಡು ಮಹಾಕಾವ್ಯಗಳಲ್ಲಿ ಶಮೀವೃಕ್ಷಕ್ಕೆ ಪೂಜ್ಯಭಾವನೆ ನೀಡಲಾಗಿದೆ. ಈ ಬನ್ನಿ ಮಹಾವೃಕ್ಷಕ್ಕೆ ಉತ್ತರಕರ್ನಾಟಕದಲ್ಲಿ ನವರಾತ್ರಿ ದಿನಗಳಂದು ವಿಶೇಷವಾದ ಆದ್ಯತೆ ನೀಡಲಾಗುತ್ತದೆ. ಮಹಿಳೆಯರು ಈ ದಿನಗಳಂದು ಸೂರ್ಯೋದಯಕ್ಕೂ ಮುನ್ನ ಬನ್ನಿಗಿಡಕ್ಕೆ ಪೂಜೆ ಸಲ್ಲಿಸುತ್ತಾರೆ. ಬನ್ನಿ ಮರ ಪೂಜಿಸಿದರೆ ಸಂತಾನಭಾಗ್ಯ ಮತ್ತು ಕಂಕಣಭಾಗ್ಯ ಲಭಿಸುತ್ತವೆ ಎಂಬ ನಂಬಿಕೆ ಉತ್ತರ ಕರ್ನಾಟಕದ ಜನರ ನಂಬಿಕೆಯಾಗಿದೆ.
ನವರಾತ್ರಿಯ 9 ದಿನಗಳ ಕಾಲ ಮಹಿಳೆಯರು ವಿಶೇಷವಾದ ಪ್ರಾತಃಕಾಲದಲ್ಲಿ ಎದ್ದು ಶುಚಿಭೂತರಾಗಿ ಬನ್ನಿಗಿಡಕ್ಕೆ ಪುಷ್ಪ ಮತ್ತು ಹಂಗನೂಲುಗಳಿಂದ ಸಿಂಗಾರಮಾಡಿ ಮುತ್ತೈದೆಯರಿಗೆ ಉಡಿ ತುಂಬುತ್ತಾರೆ. ಈ ರೀತಿ ಆಚರಣೆ ಹಲವು ಶತಮಾನಗಳಿಂದ ನಡೆಯುತ್ತಿದ್ದು, ಅದನ್ನೇ ತಾವು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಹೆಂಗಳೆಯರು ತಿಳಿಸುತ್ತಾರೆ.
ಈ ಆಚರಣೆ ಪ್ರಾಮುಖ್ಯತೆ ಅಂದರೆ ಗ್ರಾಮದ ಮಹಿಳೆಯರಲ್ಲಿ ಮುಂಜಾನೆ ಯಾರು ಪ್ರಥಮ ಬಾರಿಗೆ ಪೂಜೆ ಸಲ್ಲಿಸುತ್ತಾರೊ ಅವರ ಹೆಚ್ಚಿನ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆಯೂ ಇದೆ. ಈ ಹಿನ್ನೆಲೆಯಲ್ಲಿ ಸೂರ್ಯೋದಯಕ್ಕು ಮುನ್ನ ಮಹಿಳೆಯರು ಪೈಪೋಟಿ ಮೇಲೆ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸುತ್ತಾರೆ.
ಬನ್ನಿ ಬಂಗಾರ” ಪೌರಾಣಿಕ ಕಥೆ
ಶಮೀವೃತ ಎಂಬ ಬಡ ಬಾಲಕನಿದ್ದ. ತಂದೆ ತಾಯಿಗಳಿಲ್ಲದ ಅನಾಥ, ಆದರೂ ಗುಣ ಸಂಪನ್ನ. ಓದಬೇಕೆಂದ. ಅವನ ಊರಿನ ಹತ್ತಿರ ಸಿಸು ಎಂಬ ಗುರುಕುಲವಿತ್ತು. ಅಲ್ಲಿ ಮಹಾನ ಎಂಬ ಗುರು ಇದ್ದ. ಶಮೀವೃತ ಕಠಿಣ ಪರಿಶ್ರಮಿ. ಗುರುಗಳ ಹತ್ತಿರ ಬಂದು ನಿಷ್ಠೆಯಿಂದ ಅಧ್ಯಯನ ಕೈಗೊಂಡ. ಇವನೊಂದಿಗೆ ಅದೇ ಪ್ರದೇಶದ ಮಹಾರಾಜರ ಮಗನಾದ ವೃಕ್ಷಿತನೆಂಬ ಯುವರಾಜನೂ ಅಲ್ಲಿಯೇ ವೇದಾಧ್ಯಯನ ಮಾಡುತ್ತಿದ್ದ. ಕಲಿಯುವಾಗ ಬಾಗಿಕೊಂಡಿರಬೇಕು, ತಿಂದುಣ್ಣದೇ ಅಕ್ಷ ರ ಪಡೆಯಬೇಕು ಎಂದು ಗುರುಗಳು ಹೇಳುವುದನ್ನು ಹಸಿವೆಯಾದರೂ ಶಮೀವೃತ ಪಾಲಿಸುತ್ತಿದ್ದ. ಆದರೆ ವೃಕ್ಷಿತ ಮಾತ್ರ, ‘ಊಟವಿದ್ದರೆ ಸ್ಫ್ಪೂರ್ತಿ, ಪಾಠ ಪಠಣ ಎಲ್ಲ. ಅದೇ ಇಲ್ಲದಿದ್ದರೆ ವಿದ್ಯಾರ್ಥಿ ಜೀವಂತವಿದ್ದರೂ ಹೆಣದಂತೆ’ ಎನ್ನುತ್ತಿದ್ದ.
ಕೆಲವು ದಿನ ಕಳೆಯಲು ವಿದ್ಯಾಭ್ಯಾಸ ಮುಗಿಯಿತು. ಆಗ ಗುರುಗಳು, ‘ನಾನು ನಿಮ್ಮ ಹತ್ತಿರ ಬಂದಾಗ ನನಗೆ ಬೇಕಾದ ಗುರುಕಾಣಿಕೆ ಕೊಡಿ’ ಎಂದು ಹೇಳಿದರು.
ಒಂದು ದಿನ ಗುರುಗಳು ವೃಕ್ಷಿತನ ಅರಮನೆಗೆ ಬರುತ್ತಾರೆ. ರಾಜನಾಗಿದ್ದ ವೃಕ್ಷಿತನು, ತಾನು ಕೊಟ್ಟಷ್ಟು ಕಾಣಿಕೆಯನ್ನು ಗುರುಗಳಿಗೆ ಇನ್ನು ಮುಂದೆ ಯಾರೂ ಕೊಟ್ಟಿರಬಾರದು, ಹಾಗೇ ತಾನು ಎಷ್ಟು ಶ್ರೇಷ್ಠ ವಿದ್ಯಾರ್ಥಿ ಎಂಬುದು ಗುರುಗಳಿಗೆ ತಿಳಿಯಬೇಕು ಎಂದು ಆನೆಯ ಮೇಲೆ ನಗನಾಣ್ಯ ವಜ್ರ-ಆಭರಣಗಳ ರಾಶಿಯನ್ನೇ ಹೇರಿ ಗುರುಗಳ ಹಿಂದೆ ಕಳಿಸಿದ. ಅಲ್ಲದೇ ಶಮೀವೃತ ಗುರುಗಳಿಗೆ ಏನೂ ಕೊಡಲಾಗಲಿಲ್ಲ ಎಂದು ನೊಂದುಕೊಳ್ಳುವುದನ್ನು ನೋಡಲೆಂದೇ ಗುರುಗಳ ಹಿಂದೆಯೇ ಗೊತ್ತಾಗದಂತೆ ಬಂದ.
ಶಮಿವೃತನು ಗುರುಗಳನ್ನು ಹಣ್ಣು ಹಾಲುಗಳಿಂದ ಸತ್ಕರಿಸಿದ. ಅವರ ಯೋಗಕ್ಷೇಮ ವಿಚಾರಿಸಿದ. ಗುರುಗಳಿಗೆ ತನ್ನ ಹತ್ತಿರ ಕಾಣಿಕೆ ಕೊಡಲು ಏನೂ ಇಲ್ಲವೆಂದು ಗೊತ್ತಿದ್ದರೂ ತನ್ನ ಹತ್ತಿರವಿರುವ ಯಾವುದೇ ವಸ್ತು ಕೇಳಿದರೂ ಕೊಡುವುದಾಗಿ ಹೇಳಿದ.
ಆಗ ಗುರುಗಳು ಅವನ ಗುಡಿಸಲಿನ ಹಿತ್ತಲಿನಲ್ಲಿದ್ದ ಹಸಿರು ಎಲೆಗಳಿಂದ ಸಮೃದ್ಧವಾಗಿದ್ದ ಒಂದು ವೃಕ್ಷ ವನ್ನೇ ಕೊಡಲು ಕೇಳಿದರು. ‘ಗುರುವಿಗಿಂತ ಹಿರಿದು ಮರಣಕ್ಕಿಂತ ಕೊನೆಯದು ಯಾವುದೂ ಇಲ್ಲ’ ಎಂದು ಆ ಮರವನ್ನೇ ಗುರುದಕ್ಷಿಣೆಯಾಗಿ ಕೊಡಲು ಗುರುವನ್ನು ಕರೆದ. ಆಶ್ಚರ್ಯವೆಂಬಂತೆ ಗುರುಗಳು ಮುಟ್ಟಿದ ತಕ್ಷ ಣ ಆ ಗಿಡದ ನಾಣ್ಯದ ಗಾತ್ರದ ಎಲೆಗಳೆಲ್ಲ ಬಂಗಾರದ ಎಲೆಗಳಾದವು. ಹರಿದು ಹರಿದು ಹಾಕಿದಂತೆ ಬಂಗಾರದ ನಾಣ್ಯದ ರಾಶಿಯೇ ಗುಡ್ಡದಂತೆ ಬಿದ್ದರೂ ಮರದ ಒಂದೆಲೆಯೂ ಬರಿದಾಗಲಿಲ್ಲ.
ಕೊಟ್ಟೆನೆಂಬ ಅಹಂ ಇಲ್ಲದೆ ಪ್ರೀತಿಯಿಂದ ಕೊಟ್ಟ ಒಂದೆಲೆಯೂ ಬಂಗಾರಕ್ಕೆ ಸಮ ಎಂದು ಗುರುಗಳು ಹೊಗಳಿದರು. ಅಡಗಿಕೊಂಡ ವೃಕ್ಷಿತನನ್ನು ಕರೆದು, ಚಿನ್ನ ಎಲ್ಲೆಲ್ಲಿಯೂ ಸಿಗಬಹುದು. ಪ್ರೀತಿ ಸ್ನೇಹ ಸಂಬಂಧಗಳನ್ನು ಹೊನ್ನಿನಿಂದ ಗಳಿಸಲಾಗದು ಎಂದು ಗೆಳೆಯನಲ್ಲಿ ಕ್ಷಮೆಯಾಚಿಸಲು ತಿಳಿಸಿದರು. ಇಬ್ಬರೂ ಮರದ ಮಹಿಮೆಯಿಂದ ಒಂದಾದುದಕ್ಕೆ ಆ ಮರಕ್ಕೆ ಶಮೀವೃಕ್ಷ ಎಂದು ಕರೆದರು.
ಅಂದಿನಿಂದ ಶಮೀವೃಕ್ಷ ದ ಎಲೆ ಹಂಚಿಕೊಂಡು ಬಂಗಾರದಂತೆ ಹೋಗೋಣವೆಂಬ ಮಾತು ಜನಜನಿತವಾಯಿತು. ಇಡೀ ನಾಡಿನ ತುಂಬ ಶಮೀವೃತನ ಹೆಸರು ಪ್ರಸಿದ್ದಿಯಾಯಿತು. ಬನ್ನಿ ಬಂಗಾರವಾಗೋಣ ಎಂಬ ಮಾತು ಉಳಿಯಿತು.
ಸಂಬಂಧ ಬೆಸೆಯುವ ಬನ್ನಿ ಹಬ್ಬ
ಭಾರತದಾದ್ಯಂತ ಬನ್ನಿಗೆ ವಿಶೇಷ ಮಹತ್ವವಿದೆ. ಬನ್ನಿಯನ್ನು ಶುಭದ ಸಂಕೇತವೆಂದು ಪೂಜಿಸುತ್ತಾರೆ. ಕರ್ನಾಟಕದಲ್ಲಿ ಬನ್ನಿ ಮರವನ್ನು ದಸರಾ ಸಂದರ್ಭದಲ್ಲಿ ಭಕ್ತಿಗೌರವಗಳಿಂದ ಪೂಜಿಸುತ್ತಾರೆ. ಬನ್ನಿಯನ್ನು ಬನ್ನಿ, ಶಮೀವೃಕ್ಷವೆಂದೂ, ಅದರ ಎಲೆಗಳನ್ನು ಚಿನ್ನವೆಂದು ಭಾವಿಸುತ್ತಾರೆ. ಬನ್ನಿ ಹಬ್ಬ ಅಥವಾ ಬನ್ನಿ ಮುಡಿಯುವುದು ಎಂದು ಕರೆಯುವುದು ವಾಡಿಕೆ. ಹಿಂದೆ ದಿಗ್ವಿಜಯ ಕೈಗೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು, ಅಂದು ಯುದ್ಧ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮುಂದಿನ ಬನ್ನಿಯ ದಿಬ್ಬಕ್ಕೆ ಸೇರುತ್ತಿದ್ದಂತೆ, ಬನ್ನಿಯ ದಿಬ್ಬದಲ್ಲಿ ಬನ್ನಿಯನ್ನು ಮುಡಿದು ಊರುಗಳಿಗೆ ಬರುತ್ತಿದ್ದರಂತೆ. ವಿಜಯದಶಮಿಯ ಆಚರಣೆಯಲ್ಲಿ ಊರ ದೇವರುಗಳು ಪಲ್ಲಕ್ಕಿಯಲ್ಲಿ ಸಂಚರಿಸಿ, ಬನ್ನಿಕಟ್ಟೆಯಲ್ಲಿ ಸೇರಿ, ಬನ್ನಿಯನ್ನು ಮುಡಿಯುವುದು ಮೇಲಿನ ನಿದರ್ಶನಕ್ಕೆ ಸಾಕ್ಷಿ ಒದಗಿಸಿದೆ.
ಉತ್ತರ ಕರ್ನಾಟಕದ ಭಾಗದಲ್ಲಿ ವಿಜಯದಶಮಿಯಂದು ಜನರು ಪತ್ರಿಗಿಡದ ಎಲೆಯಲ್ಲಿ ಬನ್ನಿ ಎಲೆಗಳನ್ನು ಸೇರಿಸಿ ಮಾಡಿದ ವಸ್ತುವನ್ನು ಬಂಗಾರದ ಗಟ್ಟಿ ಎಂದೂ ಭಾವಿಸುತ್ತಾರೆ. ಬನ್ನಿ ಬಂಗಾರದ ಗಟ್ಟಿಯನ್ನು ಹಿಡಿದು ಜನರು ಮನೆ ಮನೆಗೆ ಹೋಗಿ ‘ನಾವು ನೀವು ಬಂಗಾರದಂಗೆ ಇರೋಣ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಅಂದು ಊರಿನ ಗೌಡರು ಹೊಲದಲ್ಲಿಯ ದೇವಿ ಗುಡಿಗೆ ಪಲ್ಲಕ್ಕಿಯಲ್ಲಿ ತೆರಳಿ ಬನ್ನಿಗಿಡವನ್ನು ಪೂಜಿಸಿ, ಬನ್ನಿಯನ್ನು ಮುಡಿಯುತ್ತಾರೆ. ನಂತರ ಊರಿನ ಜನರೆಲ್ಲ ಪರಸ್ಪರ ಬನ್ನಿ ಹಂಚಿಕೊಂಡು ನಲಿಯುತ್ತಾರೆ. ಬನ್ನಿ ಕೊಟ್ಟು ಬಂಗಾರ ಪಡೆಯುವುದು ಎಂದೇ ಪ್ರಸಿದ್ದಿಯಾಗಿರುವ ಹಬ್ಬವು ಹಳಸಿದ ಸಂಬಂಧಗಳನ್ನು ಬೆಸೆಯುತ್ತದೆ. ಅಲ್ಲದೆ ಹೊಸ ಸ್ನೇಹಕ್ಕೂ ಕಾರಣವಾಗುತ್ತದೆ.
ಬನ್ನಿ ಮುಡಿಯುವ ಸಮಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತುಗಳಿವು:-
“ಬಂಗಾರ ಕೊಟ್ಟು ಬಂಗಾರದ್ಹಾಂಗ ಇರೋಣ್ರಿ… ಕೈ ಹಿಡೀರಿ, ಉಡಿ ಒಡ್ಡರೀ… ಸಾಕು ಅನ್ನುವಷ್ಟು ಬಂಗಾರ ಕೊಡ್ತೀವಿ… ಬಂಗಾರ ರೇಟ್ ಕೇಳಿದ್ರ ಬಂಗಾರ ಅಂಗಡಿ ಮುಂದ್ ನಿಲ್ಲಕ್ಕಾಗಾಂಗಿಲ್ಲ ನಿಮ್ಮ ಮನಿತನಕ ನೀವು ಹೇಳ್ದ ಕೇಳ್ದ ಬಂಗಾರ ತಂದೀವಿ… ಎಷ್ಟು ಬೇಕು ಅಷ್ಟು ತುಗೊಳ್ರಿ…”