“ಆತ್ಮ ಧ್ಯಾನದ ಬುತ್ತಿ”

ನಾ ಓದಿದ ಪುಸ್ತಕ-ಪುಸ್ತಕ ಪರಿಚಯ

“ಆತ್ಮ ಧ್ಯಾನದ ಬುತ್ತಿ”
(ಅಲೆಮಾರಿಯ ಅನುಭಾವದ ಗಜಲ್ಗಳು)

ಕೃತಿ ಕರ್ತೃ: – ನಾಗೇಶ್ ಜೆ ನಾಯಕ

ಕಥೆ, ಕವಿತೆ, ಕೃತಿ ಅವಲೋಕನ, ಗಜಲ್ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ನಾಗೇಶ್ ಜೆ ನಾಯಕ ಅವರು ಹೃದಯವಂತರು. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಶ್ರೀಯುತರ ಗಜಲ್ಗಳು ಆತ್ಮ ಜ್ಞಾನವನ್ನು ವೃದ್ಧಿಸುವಂತಿರುತ್ತವೆ. ಈಗಾಗಲೇ “ಗರೀಬನ ಜೋಳಿಗೆ‌” ಮುಖಾಂತರ ಎಲ್ಲ ಗಜಲ್ ಓದುಗರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು; ಇವರ ಗಜಲ್ಗಳನ್ನು ಓದಿ ಭಾವುಕರಾದವರೇ ಹೆಚ್ಚು. ಜೊತೆಗೆ ಇವರ ಗಜಲ್ಗಳನ್ನು ಓದಿ ತಮ್ಮ ಬದುಕನ್ನು ವಿಶ್ವಾಸ ಪೂರ್ಣವಾಗಿ ಕಳೆಯಲು ನಿರ್ಧರಿಸಿದವರೂ ಇದ್ದಾರೆ ಎಂಬುದು ವೀಶೇಷವಾಗಿ ಗಮನಿಸಬೇಕಾದ ಆಂಶ.

ಅನೇಕ ಹಿರಿ, ಕಿರಿ ಸಾಹಿತಿಗಳ ಕೃತಿಗಳನ್ನು ಅವಲೋಕನ ಮಾಡಿ ಬೆನ್ನು ತಟ್ಟುವ ಕೆಲಸಕ್ಕೆ ನಿಂತ ಹಿರಿಯರಾದ ನಾಗೇಶ್ ಜೆ ನಾಯಕರ ವ್ಯಕ್ತಿತ್ವಕ್ಕೆ ಯುವ ಸಾಹಿತಿಗಳು ಜೈ ಎನ್ನುತ್ತಿದ್ದಾರೆ. ಬರೆಯುವುದರ ಜೊತೆಗೆ ಸಮಕಾಲೀನರ ಸಾಹಿತ್ಯವನ್ನು ಓದುವುದು ಒಂದು ಖುಷಿಯಾಗಿ ಸ್ವೀಕರಿಸಿ ಅವರ ಸಾಹಿತ್ಯವನ್ನೂ ಲೋಕಕ್ಕೆ ಪರಿಚಯಿಸುವ ಶ್ರೀಯುತರು ನಮಗೆಲ್ಲ ಮಾದರಿಯೂ ಹೌದು.

ಆತ್ಮ ಧ್ಯಾನದ ಬುತ್ತಿ” ಅಲೆಮಾರಿಯ ಅನುಭಾವದ ಗಜಲ್ಗಳು….. ಹೌದು ಈ ಹೊತ್ತಿಗೆ ತುಂಬಾ ಅನುಭವದ ಕೂಸುಗಳೇ ಇವೆ. ತಮಗಾದ ಅನುಭವಗಳನ್ನು ಅಕ್ಷರಕ್ಕೆ ಇಳಿಸುವ ಮುನ್ನ ಅದನ್ನು ಅನುಭಾವಿಸುವುದಿದೆಯಲ್ವಾ! ಅದು ನಿಜವಾದ ಸಾಹಿತಿಯ ಲಕ್ಷಣ. ಅದಕ್ಕೆ ಆದರ್ಶವಾಗಿ ನಮ್ಮ ಮುಂದೆ ಈ ಗಜಲ್ ಸಂಕಲನವಿದೆ.

ಈ ಸಂಕಲನದಲ್ಲಿ ಆಶಾವಾದ ಹುಟ್ಟಿಸುವ, ಒಲುಮೆ ಬೆಳೆಸುವ, ಆತ್ಮವಿಶ್ವಾಸ ತುಂಬುವ, ದುಷ್ಟತನವನ್ನು ಖಂಡಿಸುವ, ನೋವನ್ನು ಹಾರ ಹಾಕುವ, ಉತ್ತಮ ಸಂದೇಶಗಳನ್ನು ಸಾರುವ ಜೊತೆಗೆ ಓದುಗನನ್ನು ಭಾವುಕನನ್ನಾಗಿಸಿ ಭಾವನಾತ್ಮಕ ಲೋಕಕ್ಕೆ ಸೆಳೆದೊಯ್ಯುವ ಅನೇಕ ಗಜಲ್ಗಳಿವೆ.. ಅಂತಹ ಗಜಲ್ಗಳ ಕೆಲ ಸಾಲುಗಳನ್ನು ನಾನಿಲ್ಲಿ ಪ್ರಚುರ ಪಡಿಸುತ್ತಿದ್ದೇನೆ.

ಹಸಿವಿಗೂ ನಾಚಿಕೆಯಾಗಿ ಒಡಲಲ್ಲಿ ಇಂಗಿ ಹೋದ ಘಳಿಗೆ
ಮನುಷ್ಯತವ ಮರೆತವರ ಕ್ರೂರತೆಗೆ ಕೊರಗುತ್ತಿದ್ದೇವೆ ಕಣ್ಣೀರಾಗಿ” (ಕರುಣೆಯ ಸ್ಪರ್ಶಕೆ ಕಣ್ಣೀರಾದವರು)

ಹೌದಲ್ವಾ! ಮನುಷ್ಯ ತನ್ನಲ್ಲಿ ಹುಟ್ಟಿನಿಂದಲೇ ಬಂದ ಮನುಷ್ಯತ್ವವನ್ನು ಮರೆತ ಕಾರಣಕ್ಕಾಗಿ ಎಷ್ಟೋ ಜನ ನಿರ್ಗತಿಕರಾಗುತ್ತಿದ್ದಾರೆ… ಪ್ರತೀ ದಿನ ಹಸಿವನ್ನು ಒಡಲಲ್ಲೇ ಇಂಗಿಸಿಕೊಳ್ಳುತ್ತಿದ್ದಾರೆ. ವ್ಯಂಗ್ಯವಾಡುತ್ತಲೇ ಆಶಾವಾದವನ್ನು ಹೊರ ಹಾಕಿದ ಈ ಗಜಲ್ ಮಾನವ ಕುಲ ಒಂದೇ‌ ಎಂಬುದನ್ನು ಅಂತರ್ಗತವಾಗಿಸಾಕೊಂಡು ಹುಟ್ಟಿದೆ.
ಇದರಂತೆಯೇ ಕರುಣೆಯ ಕಡಲನ್ನು ಹರಿಸಿದ ಗಜಲ್ “ವಿಷ ಉಣಿಸುವ ಕೈಗಳಿಗೆ ಅಮೃತ”. ದ್ವೇಷ ಕಾರುವವರ, ಬೆನ್ನ ಹಿಂದೆ ಬೆಂಕಿ ಉಗುಳುವವರ, ನಮ್ಮ ನಡಿಗೆಗೆ ಮುಳ್ಳನ್ನು ಹಾಸಿದವರ ಮತ್ತು ನಮ್ಮ ಕನಸುಗಳ ಮೇಲೆ ಮಹಲ್ ಕಟ್ಟಿದವರ ನೆಮ್ಮದಿಗಾಗಿ ಹಾರೈಸಬೇಕಿದೆ, ಪ್ರಾರ್ಥಿಸಬೇಕಿದೆ ಎಂದು ಗಾಂಧೀವಾದವನ್ನು ಮತ್ತೆ ಮತ್ತೆ ನೆನಪಿಸುತ್ತಾರೆ ಗಜಲ್ ಕವಿಗಳು.

“ನಾಗೇಶಿ” ನಾಮಾಂಕಿತರಾದ ಶ್ರೀಯುತರು ಪ್ರೇಮಮಯಿಗಳಾಗಿ, ಹೆಣ್ಣಿನ ಒಲುಮೆ ಮತ್ತು ಮಮತೆಯನ್ನು ಯಾವುದಕ್ಕೂ, ಯಾರಿಂದಲೂ ಹೋಲಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರೇಮಪೂರ್ಣವಾಗಿಯೇ “ಹೋಲಿಕೆಗೆ ಸಿಗದವಳು” ಗಜಲ್ ನಲ್ಲಿ ತಮ್ಮ ಪ್ರೇಮಾನುಭಾವವನ್ನು ಅಚ್ಚೊತ್ತಾರೆ.

ಬದುಕಿನಲ್ಲಿ ಗುರಿ ಸಾಧಿಸಬೇಕೆಂದರೆ ಪರಿಶ್ರಮ ಮುಖ್ಯ. ನಡೆಯುವ ದಾರಿಯ ಬಗೆಗೆ ನಾವು ಮಾತನಾಡಬಾರದು.. ದಾರಿಯಲ್ಲಿ ಮುಳ್ಳ ಮೊನೆ ತಾಕಿ ಜಿನಿಗಿದ ರಕ್ತ ನಮ್ಮ ಪರಿಶ್ರಮದ ಕಥೆಯನ್ನು, ಕನಸಿನ ಗಾಥೆಯನ್ನು , ಯಶಸ್ಸಿನ ಗುಟ್ಟನ್ನು ತಿಳಿಸಬೇಕೆಂದು ಅತ್ಯಂತ ಸೂಕ್ಷ್ಮವಾಗಿ ಓದುಗನಿಗೆ “ಪರಿಶ್ರಮದ ಬೆವರಿನ ಗಾಥೆ”ಯಲ್ಲಿ ಹೇಳಿ; ಮುಂದುವರೆದು ಗುರಿ ಸಾಧಿಸಬೇಕಾದರೆ ದುಷ್ಟರ ಛಾಯೆಯಿಂದ ಹೊರಬರಬೇಕೆಂಬುದನ್ನೂ “ದುಷ್ಟಕೂಟದ ಕರಿನೆರಳು” ಗಜಲ್ ನಲ್ಲಿ ಒತ್ತಿ ಒತ್ತಿ ಹೇಳಿದ್ದಾರೆ.

ಇದ್ದಾಗ ಇರದ ಹಂಬಲ ಇಲ್ಲವಾದಾಗಲೇ ಹೆಚ್ಚಲ್ಲವೇ ‘ನಾಗೇಶಿ’ “
ಎಂದು ಮನಸಿಗೆ ಹತ್ತಿರವಾದವರು ಬಳಿ ಇದ್ದಾಗ ಬೆಲೆ ತಿಳಿಯದಂತೆ ಬಿಟ್ಟು ಹೋದಾಗ ತಮ್ಮಿರುವಿನ ಮಹತ್ವವನ್ನು ತೋರಿಸಿದರು ಎಂಬುದನ್ನು ವ್ಯಾಖ್ಯಾನಿಸಿ ಅಗಲಿಕೆಯ ಬಳಲುವಿಕೆಯನ್ನು ಮನ ಮಿಡಿಯುವಂತೆ “ಆತ್ಮದ ಅಗಲಿಕೆ”ಯಲ್ಲಿ ಬರೆದಿದ್ದಾರೆ… ಜೊತೆಗೆ ಇದಕ್ಕೆ ವಿರುದ್ಧವಾಗಿ “ಗೋರಿಗಳ ನಡುವೆ ಧ್ಯಾನ” ಇದೆ. ಅಗಲಿಕೆ ತರುವ ನೋವಿನ ಅನುಭವ ಇಲ್ಲದವರು ಕ್ರೂರಿಗಳಾಗುತ್ತಾರೆ, ಕೊಲ್ಲುವವರಾಗುತ್ತಾರೆ. ಅದನ್ನೆ ಗಜಲ್ ಮಾಂತ್ರಿಕರಾದ ನಾಗೇಶ್ ನಾಯಕ ಅವರು

ಕೊಂದವರು ಯಾರೂ ಉಳಿದುಕೊಂಡಿಲ್ಲ ಈ ಜಗದೊಳಗೆ
ಜೀವ ಬದುಕಿಸಿ ನೋಡು ಒಮ್ಮೆ ಧನ್ಯತೆಯೊಳಗೆ ಸತ್ಯ ತಿಳಿಯುವುದು”

ಎಂಬುದಾಗಿ ಜೈವಿಕ ಸತ್ಯವನ್ನು ಸಾಬೀತು ಮಾಡಿ ಓದುಗನ ಮನದ ಕದ ತೆರೆಯುತ್ತಾರೆ. ಜೀವಕಳೆ ತುಂಬಿ ಹೃದಯವಂತಿಕೆ ಬೆಳೆಸುತ್ತಾರೆ.

ಹೀಗೆ “ನಾಲಿಗೆ ನಂಜಾಗುವ ಪರಿ” , “ನೆತ್ತರು ಕುಡಿದ ನೆಲದ ಕರುಣೆ”, “ಚಂದ್ರನ ತಂಪಿಗೆ ಕರಗಿದವಳು ಖುಷಿಯಾಗಿರಬೆಕು”, “ದುಃಖ ನುಂಗಿದ ಹನಿ”, “ಅಪ್ಪನ ಅಂತಃಕರಣ”, ತಪ್ಪದಿರಲಿ ಇಡುವ ಹೆಜ್ಜೆಗಳು”, “ಸೂತಕದ ನೆರಳು”, ಹಸಿ ಹಸಿ ಗಾಯದ ಬಿಕ್ಕುಗಳು”, “ಮರಣ ಮೃದಂಗ”, “ಆತ್ಮದ ಹಸಿವು”, “ಬಣ್ಣ ಬದಲಿಸುವ ಬದುಕು”, “ಬೆಳಕು ಹನಿಸಿದ ಕತ್ತಲು”, “ಬಣ್ಣ ಬಯಲಾಗುತ್ತದೆ” ಗಜಲ್ಗಳು ಒಂದಕ್ಕಿಂತ ಒಂದು ಭಿನ್ನ, ವಿಭಿನ್ನವಾಗಿವೆ. ಮುಖಪುಟದಲ್ಲಿರುವಂತೆ ಖಂಡಿತವಾಗಿಯೂ ಈ ಗಜಲ್ಗಳು ಒಬ್ಬ ಅಲೆಮಾರಿಯ ಅನುಭಾವದ ನುಡಿಗಳು ಎಂಬುದು ಸತ್ಯ.
ಅಲೆಮಾರಿ ಎಂದರೆ ದೇಶ ಸುತ್ತಿ ಅನುಭವ ಪಡೆದುದಲ್ಲ. ಮಾನವನ ಮನಸುಗಳ ಸುತ್ತ ಸುತ್ತಿ ಸುತ್ತಿ ಅಲೆದು ಅವನ ಅಷ್ಟೂ ಗುಣಾವಗುಣಗಳನ್ನು ಓದಿ, ಧ್ಯಾನಿಸಿ ಕಟ್ಟಿಕೊಂಡ ಜ್ಞಾನದ ಬುತ್ತಿ ಈ “ಆತ್ಮ ಧ್ಯಾನದ ಬುತ್ತಿ ಕೃತಿ.
ಈ ಕೃತಿಯ ಪ್ರತಿಯೊಂದು ಗಜಲ್ಗಳನ್ನೂ ವಿಶ್ಲೇಷಿಸುತ್ತ ಹೋದರೆ ಈ ಕೃತಿಗೆ ಮತ್ತೊಂದು ಕೃತಿ ಹುಟ್ಟಿಕೊಳ್ಳುತ್ತದೆ. ಹಾಗೆ‌ ವಿಶ್ಲೇಷಿಸುವಂತೆ ಮನವನ್ನು ಕಾಡುವ ಗಜಲ್ಗಳ ಸಂಕಲನ ಆ ಕೃತಿ. ಕಾಡುವುದರೊಂದಿಗೆ ಕೃತಿಯ ಅನೇಕ ಗಜಲ್ಗಳು ಮನಸಿನಲ್ಲಿ ಧ್ಯಾನಿಸುತ್ತಲೇ ಉಳಿದು ಬಿಡುವಷ್ಟು ಬದುಕಿಗೆ ಆಪ್ತವಾದ ಗಜಲ್ಗಳು ಇಲ್ಲಿವೆ.

ಸಾಹಿತ್ಯ, ಕೇವಲ ಸಾಹಿತ್ಯ ಪ್ರೌಢಿಮೆಗೆ, ಅಲಂಕಾರಕ್ಕೆ ಸೀಮಿತವಾದರೆ ಸಾಲದು. ಮೌಲ್ಯವನ್ನು ಬಿತ್ತಬೇಕು. ಅದನ್ನೇ ಬೆಳೆಸಬೇಕು, ಬುತ್ತಿ ಕಟ್ಟಿ ಕೊಡಬೇಕು
ಈ ಕಾರ್ಯವನ್ನು ಶ್ರೀಯುತರ ಕೃತಿ ಖಂಡಿತವಾಗಿ ಮಾಡಿದೆ ಎಂಬುದು ನನ್ನ ಕೊನೆಯ ಅನಿಸಿಕೆಯಾಗಿದೆ.
ಇಷ್ಟು ಪರಿಪೂರ್ಣ ಅನುಭಾವದ ಕೃತಿ, ನಾಡಿನಾದ್ಯಂತ ಪ್ರಯಾಣಿಸಲಿ. ಎಲ್ಲರಿಗೂ ಬದುಕಿನ ವಾಸ್ತವದ ದರುಶನವನ್ನು ಮಾಡಿಸಲಿ ಎಂದು ಆಶಿಸುತ್ತಾ ನನ್ನ ಮಾತಿಗೆ ವಿರಾಮ ನೀಡುತ್ತೇನೆ.

ವರದೇಂದ್ರ ಕೆ ಮಸ್ಕಿ
9945253030

ಪುಸ್ತಕಕ್ಕಾಗಿ ಸಂಪರ್ಕಿಸಿ
—– ನಾಗೇಶ್ ಜೆ ನಾಯಕ
9900817716

Don`t copy text!