ಹೊಲಿಗೆಯ ಮೇಲೊಂದು ಹೊಲಿಗೆ

ಹೊಲಿಗೆಯ ಮೇಲೊಂದು ಹೊಲಿಗೆ

ಹೊಲಿಗೆಯ ಮೇಲೊಂದು ಹೊಲಿಗೆ
ಹಾಕುವ ಅವ್ವ
ಧೀರ್ಘಬಾಳಿಕೆ ಬರುವ ಬಟ್ಟೆಗಳಿಗೆ ಜೀವ ನೀಡುತ್ತಾಳೆ!

ನುಚ್ಚಿಟ್ಟ ಪುಂಡೆಪಲ್ಲೆ ಬೇಳೆಸಾರು
ಒಲೆಯ ಮೇಲೆ ಉಕ್ಕು ಬರಲು
ಬಿಚ್ಚಿಟ್ಟ ಬಾಳಿನಲ್ಲಿ ನಾಳೆಯೆ ನೂರು
-ಸಾವಿರದಷ್ಟು ಧಕ್ಕೆಬರಲು
ಕೂಡಲೇ ಧಾವಿಸುವವಳು ನನ್ನವ್ವ!

ಸೌದೆಯನ್ನು ಹಿಂದೆ ಎಳೆದು
ಒಲೆಯ ಉರಿ ಕಮ್ಮಿ ಮಾಡಿದಂತೆ;
ನಮ್ಮ ದುಃಖಗಳನ್ನು ಹಿಂದೆ ಎಳೆದು
ತಲೆ ಸವರಿ ಕನಸುಗಳಿಗೆ ಉಮ್ಮ ನೀಡುತ್ತಾಳೆ!

ಹೊಲಿಗೆ ಯಂತ್ರದ ಮೇಲೆ ಬರೆದ
ಅದರ ಕಂಪನಿ ಬ್ರಾಂಡಿನ ಇಂಗ್ಲೀಷ್ ಅಕ್ಷರ
ಓದಲಿಕ್ಕೆ ಬಾರದಿದ್ದರೂ
ಯಂತ್ರವೇ ನಾಚುವಂತೆ
ನಾನಾಬಗೆಯ ವಸ್ತ್ರಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿ
ಅಂಗಿ ಲಂಗ ರವಿಕೆ ಕುಪ್ಪಸಗಳ ಆಕೃತಿ ನೀಡುತ್ತಾಳೆ.!

ಊರ ರಾಜಕುಮಾರಿಯ ರವಿಕೆ ಕುಪ್ಪಸ
ಹೊಲೇರ ಹುಡುಗಿಯ ಲಂಗ ಚೂಡಿದಾರಗಳು
ಅವ್ವನ ಕಾಲುನೋವಿನಿಂದ ಜನ್ಮ ತಳೆದಂತವು!

ಅಮೀನಾಬೇಗಂ, ಅಂತೋನಿಯ ಹೆಂಡತಿ
ಕಮಲಮ್ಮ ಹೀಗೆ ಎಲ್ಲರ ಬಟ್ಟೆಗಳನ್ನು
ಒಂದೇ ಬಾಕ್ಸಿನಲ್ಲಿ ಹಾಕಿಕೊಳ್ಳುವ ಅವ್ವನ
ರಾಟೆಚಕ್ರಕ್ಕೆ ಯಾವುದೇ ಬೇಧವಿಲ್ಲ.

ನಾನೆಂದೂ ಅವ್ವನಿಗೆ ನಮಸ್ಕರಿಸಿಲ್ಲ!
ಅವ್ವ ನನ್ನೆಲ್ಲಾ ಅಂಗಾಗಳಲ್ಲಿ ವಾಸಿಸುವವಳು
ಅದಕ್ಕೆ ದಿನಾಲು ನಾನು
ನನ್ನ ದೇಹಕ್ಕೆ ನಾನೇ ನಮಸ್ಕರಿಸಿಕೊಳ್ಳುತ್ತೇನೆ.!

ಪ್ರಪಂಚದ ಯಾವ ದೇಶವೂ
ಇದುವರೆಗೂ ಮತ್ತು ಮುಂದೆಂದಿಗೂ
ನಿರ್ಮಿಸದಷ್ಟು ಎತ್ತರದ ಪ್ರತಿಮೆ ನನ್ನವ್ವ;
ಆಕೆಯ ಪಾದದಡಿಯಲ್ಲಿ
ನನ್ನ ಬಾಳ ಭರವಸೆಗಳನ್ನೆಲ್ಲ ಇಟ್ಟು ಜೀವಿಸುತ್ತಿರುವೆ
ನಾನೇನಾದರು ಅವಳ ಪಾದಕ್ಕಿಂತ
ಚೂರೇ ಚೂರು ಎತ್ತರ ಬೆಳೆದೆನೆಂದರೆ ಸಾಕು
ಅಲ್ಲಿಗೆ ನನ್ನ ಜನ್ಮ ಸಾರ್ಥಕವಾದಂತೆ!

~ ವೆಂಕಟೇಶ ಪಿ. ಮರಕಂದಿನ್ನಿ

One thought on “ಹೊಲಿಗೆಯ ಮೇಲೊಂದು ಹೊಲಿಗೆ

Comments are closed.

Don`t copy text!