ವೀರಹನುಮಾನರ ಹೈಕು‌ ಕವನ ಸಂಕಲನ ಮುಂಬೆಳಗು ಲೋಕಾರ್ಪಣೆ

 

ಕೃತಿ ಅವಲೋಕನ

ಕೃತಿ- ಮುಂಬೆಳಗು

(ದಿ.27 -11-2021 ರಂದು ಮುಂಬೆಳಗು ಕವನ ಸಂಕಲನ ಬಿಡುಗಡೆಯಾಗುುತ್ತಿದೆ)

ಕೃತಿ ಪರಿಚಯ –  ಗುಂಡುರಾವ್ ದೇಸಾಯಿ ಮಸ್ಕಿ

ರಾಯಚೂರು ಜಿಲ್ಲೆ ಯಾವತ್ತೂ ಸಾಹಿತ್ಯ ಪ್ರಯೋಗಶೀಲತೆಗೆ ಮಂಚೂಣಿಯಲ್ಲಿದೆ. ಸಾಹಿತ್ಯದ ಪ್ರಕಾರದ ಹಲವು ಧಾರೆಗಳ ಮೂಲ ನೆಲವು ರಾಯಚೂರಾಗಿದೆ. ಅದರಲ್ಲಿ ಹೈಕು ರಚನೆಗಳಲ್ಲಿ ಯಾವುದೆ ಭಾಗದಲ್ಲಿ ಆಗದಂತಹ ಸೃಜನಶೀಲತೆ ಈ ನೆಲದಲ್ಲಿ ಆಗುತ್ತಿದೆ. ಅಂತಹ ರಚನಾಕಾರರಲ್ಲಿ ಹೃದಯವಂತ ಬರಹಗಾರರು, ಯುವಕರಿಗೆಲ್ಲ ಮಾರ್ಗದರ್ಶಿಗಳಾಗಿರುವ ಜಿಲ್ಲೆಯೆ ಗೌರವಿಸುವ ವೀರ ಹನುಮಾನರು ಪ್ರಮುಖರು.


ತೆಲುಗಿನ ಕವಿ ದಿ.ಕುಮಾರಸ್ವಾಮಿಯವರ ಹೈಕುಗಳಿಗೆ ಮಾರುಹೋಗಿ ಹೈಕುಗಳ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡ ವೀರ ಹನುಮಾನ ಅವರು ನಾಡಿಗೆ ಪ್ರಥಮ ಹೈಕು ಸಂಕಲನ ಕೊಟ್ಟ ಹೆಗ್ಗಳಿಕೆ ಅವರಿಗಿದೆ. ಹೈಕು ನಮ್ಮ ಭಾಷೆಗೆ ಹೊಸದು. ಜಪಾನಿಯರ ಈ ವಿಶಿಷ್ಟ ಕಾವ್ಯ ಪ್ರಕಾರ ವನ್ನು ನಮ್ಮ ನೆಲಭಾಷೆಗೆ ಒಳಪಡಿಸಿ ಹೃದಯಕ್ಕೆ ತಾಗುವಂತಹ ಪ್ರಯತ್ನದಲ್ಲಿ ಈಗಾಗಲೆ ಆರು ಹೆಜ್ಜೆ ಮುಗಿಸಿ ಏಳನೆ ಸಂಕಲನ ʼಮುಂಬೆಳಗುʼ ಮೂಲಕ ನಮ್ಮೊಂದಿಗೆ ಹೊಸ ರೂಪದಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

5+7+5 ಅಕ್ಷರಗಳ ವಿನ್ಯಾಸದ ಹೈಕು ನೋಡಲು ಸರಳ ಎನಿಸಿದರು ರಚನೆ ಬಲು ಕಷ್ಟ. ಒಂದು ಸಾಲು ಜ್ಞಾನೇಂದ್ರಿಯಾನುಭವ ಎರಡನೆ ಸಾಲು ಇನ್ನೊಂದು ಸಂದರ್ಭಕ್ಕೆ ಅಥವಾ ಭಾಗಕ್ಕೆ ಪ್ರವೇಶ ಮೂರನೆ ಸಾಲು ಹೊಸತನ್ನು ಸೃಷ್ಟಿಸಿ ಅಚ್ಚರಿಗೊಳಿಸುವಂತೆ ಮಾಡುವ ಕೌಶಲ.ಇದು ಎಲ್ಲರಿಗೂ ಆಗದು. ಅಂತಹ ಸಾಮರ್ಥ್ಯ ವೀರ ಹನುಮಾನವರಿಗೆ ಅವರ ಅಪಾರ ಅನುಭವದಿಂದ ಸಿಧ್ಧಿಸಿದೆ.
ಸುರಭಿ ಪ್ರಕಾಶನ ರಾಯಚೂರು ಪ್ರಕಟಿಸಿರುವ ಹಿರಿಯ ಕವಿಗಳಾದ ಅಯ್ಯಪಯ್ಯ ಅವರ ಮುನ್ನುಡಿ ಹಾಗೂ ನಾಡಿನ ಹೆಸರಾಂತ ಲೇಖಕಿ ಡಾ.ಪುಷ್ಪ ಎಚ್.ಎಲ್ಅವರ ಬೆನ್ನುಡಿ ಹೊತ್ತಿರುವ ಅಂದವಾದ ಮುಖಪುಟ ಹಾಗೂ ಸಾಂದರ್ಭಿಕ ಅರ್ಥವತ್ತಾದ ಚಿತ್ರಗಳಿರುವ ಮುಂಬೆಳಗು ಹೈಕು ಕವಿಗಳಿಗೊಂದು ಮಾದರಿಯಂತಿದೆ.

ಅವರ ಈ ಏಳನೆ ಹೈಕು ಕೃತಿ ಮುಂಬೆಳಗು ಸಂಕಲನದಲ್ಲಿ ವಿವಿಧ ವಸ್ತು ವಿಷಯಗಳಿಂದ ಬೆರಗುಗೊಳಿಸುವಂತಹ ರಚನೆಗಳು ಮನಸ್ಸಿಗೆ ಚಿಂತನೆಗೆ ಒಳಪಡಿಸುತ್ತವೆ,ಆಹ್ಲಾದವನ್ನುಂಟು ಮಾಡುತ್ತವೆ. ಪುಟದಷ್ಟು ಹೇಳುವ ವಿಷಯವನ್ನು ಪುಟ್ಟ ರಚನೆಯಲ್ಲಿ ಹೇಳಿರುವುದು ಬೆರಗು ಮೂಡಿಸುತ್ತದೆ. ಓದುತ್ತಾ ಹೋದಂತೆ ‘ನಾವು ಅಂತಹ ರಚನೆಯತ್ತ ಯಾಕೆ ಪ್ರಯತ್ನಿಸಬಾರದು?’ ಎನ್ನುವ ಭಾವ ಬರದೆ ಇರದು. ಇವರ ಪ್ರೇರಣೆಯಿಂದ ಹೈಕು ಕೃತಿ ಪ್ರಕಟಿಸಿದ ಕವಿಗಳ ದೊಡ್ಡ ಬಳಗ ರಾಯಚೂರಿನಲ್ಲಿದೆ. ಅವರಿಗೆಲ್ಲ ವೀರ ಹನುಮಾನ ಅವರೆ ಪ್ರೇರಕರೆನ್ನಬಹುದೇನೊ…?
ʼಊಸರವಳ್ಳಿ/ನಾಚಿಕೆ ಪಡುತ್ತಿದೆ/ನಮ್ಮನ್ನು ನೋಡಿʼ
‘ರೈತರ ಬಾಳು/ನಿನ್ನೆ ಮೊನ್ನೆ ಬಾಡಿತ್ತು/ಮುಳುಗಿತಿಂದುʼ
ʼಕಾಖಾನೆಗಳಲ್ಲಿ /ಮಕ್ಕಳೇ ಕಾಮಿಕರು/ಸ್ವತಂತ್ರವೆಲ್ಲಿ?ʼ
ʼಕೈಯಲ್ಲಿ ಕೋಲು/ಹಿಂದೆ ಜನ ನೂರಾರು/ಗಾಂಧಿಗಿರಿʼ
ಮೇಲಿನ ಕೆಲ ಹೈಕುಗಳೆ ನಿದರ್ಶನ ಸದರಿ ಸಂಕಲನದ ಕವಿಯ ಹೈಕುವಿನೊಂದಿಗೆ ಹೊಂದಿರುವ ತಾದಾತ್ಮತೆಯನ್ನು ಸಾಬೀತುಪಡಿಸಲು. ಕವಿಗಳೆ ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದಂತೆ ಹೈಕು ರಚನೆ ಒಂದು ಧ್ಯಾನ ಮಾರ್ಗ. ಜೀವನ ಮಾರ್ಗ. ಧ್ಯಾನ ಪ್ರಪಂಚವನ್ನು ಅರ್ಥೈಸಿಕೊಂಡು ಹೊಸ ಚಿಂತನೆಯನ್ನು ಸೃಜಿಸುವ ಸಾಧ್ಯತೆಯನ್ನು ತಂದು ಕೊಡುತ್ತದೆ. ಆ ಸಾಧ್ಯತೆಯೆ ಇಂತಹ ಹೊಸ ಬಗೆಯ ಹೊಸ ಒಳನೋಟದ ಹೈಕುಗಳಿಗೆ ಕಾರಣವಾಗಿದೆ.
ಅವರೆ ಹೇಳುವಂತೆ
ʼಹೈಕು ಚಿಕ್ಕದೇ/ಅಕ್ಷರ ಲೆಕ್ಕದಲ್ಲಿ/ಅರ್ಥ ಅಪಾರʼ
ಎನ್ನುವಂತೆ ಅಪಾರ ಅರ್ಥ ಕೊಡುವ ನಮ್ಮ ತ್ರಿಪದಿಯ ರಚನೆಯಂತೆಯೆ ಇರುವ ಹೈಕು ಒಂದರ್ಥ ದಲ್ಲಿ 17 ಅಕ್ಷರಗಳ ಅಲಂಕಾರದ ಸೊಬಗು ಅನ್ನಬಹುದು. ಹೈಕುವಿನಲ್ಲಿ ವ್ಯಾಕರಣದ ಹಲವು ಅಲಂಕಾರಗಳು ಸಾಂದರ್ಭಿಕವಾಗಿ ಪ್ರವೇಶ ಪಡೆದಿವೆ ಏನೊ ಎನಿಸುತ್ತವೆ. ಅದು ನನ್ನ ವ್ಯಕ್ತಿಗತ ಅಭಿಪ್ರಾಯ. ತ್ರಿಪದಿ ರಚನೆ ಸುಲಭವಾದರು ಕಡಿಮೆ ಅಕ್ಷರಗಳಲ್ಲಿ ಹಲವು ವಿಚಾರಗಳನ್ನು ಸೆರೆಹಿಡಿಯುವ ಹೈಕು ರಚನೆ ತುಸು ಕಷ್ಟವೆ.
ಈ ಹೈಕು ಸಂಕಲನದಲ್ಲಿ ಗಾಂಧೀ, ಅಂಬೇಡ್ಕರ್, ಹಂಪಿ, ರಾಯಚೂರಿನ ಸ್ಥಿತಿ ಸಾರುವ ಹಲವು ಮಾರ್ಮಿಕ ಸಾಲುಗಳ ಸಾಲೆ ಇದೆ. ಹಂಪಿಯ ಬಗ್ಗೆ ಹೇಳುವಾಗ ʼಕಮಲ ಮನೆ/ಕಲ್ಲಲ್ಲಿ ಅರಳಿದೆ/ಕೆಸರಿಲ್ಲದೆ ʼ ಎನ್ನುವ ಹೈಕಾಗಲಿ ʼವಿಠ್ಠಲನಿಲ್ಲ/ ಕಲ್ಲು ಕಂಬಗಳಲ್ಲಿ/ನಾದ ಕೇಳಲು ʼ ಜೊತೆಗೆ ಪ್ರತಿಷ್ಟೆಯಂತೆ ಮೈಲುದ್ದ ಹರಡಿದೆ/ ಸೂಳೇ ಬಜಾರ್ ʼ ಹೈಕಂತು ವಿವೇಚನೆಗೆ ಹಚ್ಚುವಂತಹದ್ದು.
ರಾಯಚೂರಿನ ಕುರಿತು ಬರೆದ ಹೈಕುಗಳಲ್ಲಿ ʼತೀನ್ ಕಂದೀಲ್/ ಆ ಕಾಲದ ಹೈಮಾಸ್/ ಸ್ವಿಚ್ಡಾಫ್ʼ ಹಾಗೆ ಕೆರೆ ಬಗ್ಗೆ ʼಆಮ್ ತಲಾಬ್/ ಹೆಸರು ಸುಪ್ರಸಿದ್ಧ/ ನೀರೇ ಅಶುದ್ಧʼ ಎನ್ನುವ ಹೈಕುವಾಗಲಿ ʼಹೆದ್ದೊರೆ ನಾಡು /ಪ್ರಗತಿಗೆ ದೂರಾಗಿ/ಅನಾಥ ನೆಲʼ ಎನ್ನುವಂತಹ ಹೈಕು ಇಲ್ಲಿಯ ಪರಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಅಂಬೇಡ್ಕರ್ ಅವರ ಶ್ರೇಷ್ಠತೆಯನ್ನು ಬಿಂಬಿಸುವ ʼನೋವುಂಡ ಮನ/ಬರೆದ ಸಂವಿಧಾನ/ಹಕ್ಕು ಸಮಾನʼ ಎನ್ನುವ ಸಾಲುಗಳು ವೀರ ಹನುಮಾನ ಅವರ ಅಧ್ಯಯನಶೀಲತೆ, ವಿಚಾರ ಪ್ರಜ್ಞೆಯಿಂದ ಅರಳಿದ ಹೈಕಾಗಿದೆ.
‘ಮುಂಬೆಳಗು’ವಿನ ಮೂಲಕ ಹೊಸ ಬಗೆಯೆ ಹೈಕುಗಳನ್ನು ನೀಡಿರುವ ವೀರಹನುಮಾನರು ಖಂಡಿತವಾಗಿ ಹೈಕು ಕಾವ್ಯದ ಮೇರು ಶಿಖರ. ಹೈಕುಗಳ ಬಗ್ಗೆಯೆ ಕೆಲವರು ಎಂ.ಫಿಲ್ ಹಾಗೂ ಪಿ.ಹೆಚ್.ಡಿ ಮಾಡಿರುವುದು ಗಮನಾರ್ಹ ಸಂಗತಿ. ಇತ್ತೀಚಿಗೆ ಡುಂಡಿರಾಜ ಅಂತಹವರು ಕೂಡಾ ಹೈಕುಗಳ ರಚನೆಗಳಿಗೆ ಇಳಿದಿರುವುದು ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯವು ಹೈಕುಗಳ ಬಗ್ಗೆ ವಿಶೇಷ ಒಲವು ತೋರುವುದುರ ಮೂಲಕ ಈ ಕಾವ್ಯ ಪರಂಪರೆಯನ್ನು ಬೆಳಸಬೇಕಾದುದು ಅವಶ್ಯವಾಗಿದೆ.

Don`t copy text!