ಜಾರಕಿಹೊಳಿ ಬ್ರದರ್ಸ್ V/s ಲಕ್ಷೀ ಹೆಬ್ಬಾಳ್ಕರ್

ಬೆಳಗಾವಿ ವಿಧಾನ ಪರಿಷತ್ ಚುನಾವಣೆಯೂ..! ಜಾರಕಿಹೊಳಿ ಬ್ರದರ್ಸ್ V/s ಲಕ್ಷೀ ಹೆಬ್ಬಾಳ್ಕರ್ ಚುನಾವಣೆ ಆಗಿದೆ.

e-ಸುದ್ದಿ, ಬೆಳಗಾವಿ

ಕರ್ನಾಟಕದ ರಾಜಕಾರಣ ಒಂದು ತೂಕವಾದರೆ, ಗಡಿ ಜಿಲ್ಲೆ ಬೆಳಗಾವಿ ರಾಜಕಾರಣದ್ದೇ ಮತ್ತೊಂದು ತೂಕವಾಗಿದೆ. ಇಲ್ಲಿ ಕುಟುಂಬ ರಾಜಕಾರಣ ಬಹಳ ಸದ್ದು ಮಾಡುತ್ತಿದೆ. ಇಲ್ಲಿ ಏನೇ ರಾಜಕೀಯ ಸುದ್ದಿಗಳಾದರೂ ಅದು ಪ್ರತಿಷ್ಠೆಗಾಗಿ ನಡೆದಿರುತ್ತದೆ. ಸದ್ಯ ವಿಧಾನ ಪರಿಷತ್ ಚುನಾವಣೆಯೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದರಿಂದಾಗಿ ಬೆಳಗಾವಿ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.

ಲಖನ್ ಜಾರಕಿಹೊಳಿ ಬೆಳಗಾವಿ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಅಮರನಾಥ ಜಾರಕಿಹೊಳಿ ಮತ್ತು ಅಂಬಿರಾವ್ ಪಾಟೀಲ್ ಮುಂತಾದವರೂ ಉಪಸ್ಥಿತರಿದ್ದರು.

ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 2 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣಾ ಕಾಳಗ ಭಾರೀ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ, ಬಿಜೆಪಿ ಪಕ್ಷದಿಂದ ಮಹಾಂತೇಶ ಕವಟಗಿಮಠ ನಾಮಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ಮೂಲಕ ಬೆಳಗಾವಿಯಲ್ಲಿ ಮತ್ತೊಂದು ರಾಜಕೀಯ ಪ್ರತಿಷ್ಠೆಯ ಜಿದ್ದಾಜಿದ್ದಿ ಕಾಣಬಹುದು.

ಲಖನ್ ಬೆನ್ನಿಗೆ ಜಾರಕಿಹೊಳಿ ಸಹೋದರರು

ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೊರತುಪಡಿಸಿ ಉಳಿದೆಲ್ಲ ಜಾರಕಿಹೊಳಿ ಸಹೋದರರು ಲಖನ್ ಬೆನ್ನಿಗೆ ನಿಂತಿದ್ದಾರೆ. ಸತೀಶ್ ಜಾರಕಿಹೊಳಿ ಮಾತ್ರ ಕುಟುಂಬಕ್ಕಿಂತ ಪಕ್ಷವೇ ಮುಖ್ಯ ಎಂದಿದ್ದಾರೆ.

ಇದೇ ವೇಳೆ ತಮ್ಮ ಲಖನ್‌ಗೆ ಟಾಂಗ್ ನೀಡಿರುವ ಸತೀಶ್ ಜಾರಕಿಹೊಳಿ, ಸಿಂಗಲ್ ಅಭ್ಯರ್ಥಿ, ಸಿಂಗಲ್ ಮತ ಎಂಬುದೂ ಕೂಡ ಕಾಂಗ್ರೆಸ್ ತತ್ವ. ಇದೇ ಲಖನ್ ಮತ್ತು ರಮೇಶ್ ಜಾರಕಿಹೊಳಿ ಲೋಕಸಭಾ ಉಪ ಚುವಾವಣೆಯಲ್ಲಿ ನನ್ನ ವಿರುದ್ಧ ಹಣ ಹಂಚಿ ನನ್ನನ್ನು ಸೋಲಿಸಿದ್ದಾರೆ. ಆ ನೋವು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೂ ಇದೆ.

ಸತೀಶಣ್ಣ ಸೇರಿದಂತೆ ಎಲ್ಲರ ಆಶೀರ್ವಾದ ನಮ್ಮ ಮೇಲೆ ಇದೆ. ನಾವೇ ಗೆಲ್ಲೋದು ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಉಳಿದ ಜಾರಕಿಹೊಳಿ ಸಹೋದರರಿಗೆ ಟಾಂಗ್ ನೀಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿಯನ್ನು ಶತಾಯ ಗತಾಯ ಸೋಲಿಸಲು ರಮೇಶ್​ ಜಾರಹೊಳಿ ಪಣ ತೊಟ್ಟಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಕಿರಿಯ ಸಹೋದರ ಲಖನ್ ಜಾರಕಿಹೊಳಿಯನ್ನು ಎರಡನೇ ಪ್ರಾಶಸ್ತ್ಯ ಮತಕ್ಕಾಗಿ ಕಣಕ್ಕಿಳಿಸಿದ್ದಾರೆ. ನಾವು ಲಖನ್‌ಗೆ ಬಿಜೆಪಿ ಟಿಕೆಟ್ ಕೇಳಿಲ್ಲ. ನಮ್ಮ ಮೊದಲ ಆದ್ಯತೆ ನಮ್ಮ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು. ಎರಡನೇಯದು ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕು. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಏನೇನು ಮಾಡಬೇಕು ಎಂಬುದನ್ನು ಚರ್ಚಿಸುತ್ತೇವೆ ಎಂದಿದ್ದಾರೆ.

ವಿಧಾನ ಪರಿಷತ್ ಚುನಾವಣೆ ಹೆಬ್ಬಾಳ್ಕರ್ V/S ಜಾರಕಿಹೊಳಿ ಚುನಾವಣೆಯೇ ಎಂಬ ಪ್ರಶ್ನೆಗೆ ಕೆರಳಿದ ರಮೇಶ್ ಜಾರಕಿಹೊಳಿ ಥೂ.. ಥೂ.. ಎನ್ನುವ ಮೂಲಕ ಕಿಡಿಕಾರಿದರು.

ಲಖನ್ ಎಂಟ್ರಿಯಿಂದ ಎಲ್ಲ ಕ್ಷೇತ್ರಗಳಿಗಿಂತ ಬೆಳಗಾವಿ ಕ್ಷೇತ್ರದ ರಾಜಕೀಯ ಎಲ್ಲರ ಗಮನ ಸೆಳೆದಿದೆ. ಯಾರು ಗೆಲ್ಲುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರಗಳೂ ಜೋರಾಗಿವೆ.
ಆದರೆ ಮತದಾರರಾದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಯಾರ ಕೈ ಹಿಡಿಯಲಿದ್ದಾರೆ ಎಂಬುದಕ್ಕೆ ಫಲಿತಾಂಶದ ದಿನದವರೆಗೂ ಕಾಯಲೇಬೇಕಿದೆ. ಲಖನ್ ಜಾರಕಿಹೊಳಿ ಕಾಂಗ್ರೆಸ್‌ಗೆ ಪೆಟ್ಟು ಕೊಡ್ತಾರಾ, ಬಿಜೆಪಿಯ ಮತ ಪೆಟ್ಟಿಗೆಗೆ ಕೈ ಹಾಕುತ್ತಾರಾ ಎನ್ನುವುದರ ಮೇಲೆ ಫಲಿತಾಂಶ ಅವಲಂಬಿತವಾಗಿದ

ವಿಧಾನ ಪರಿಷತ್ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚನ್ನರಾಜ ಹಟ್ಟಿಹೊಳಿ ಪರ ಸತೀಶ್ ಜಾರಕಿಹೊಳಿ ಮತಬೇಟೆ ನಡೆಸಿದ್ರೆ, ಮಹಾಂತೇಶ ಕವಟಗಿಮಠ ಮತ್ತು ಲಖನ್ ಜಾರಕಿಹೊಳಿ ಪರ ರಮೇಶ್ ಜಾರಕಿಹೊಳಿ ಮತಯಾಚನೆ ಮಾಡುತ್ತಿದ್ದಾರೆ

ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಮಣಿಸಲು ರಮೇಶ್ ಜಾರಕಿಹೊಳಿ‌ ಫೀಲ್ಡ್‌ಗಿಳಿದಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ರಮೇಶ್ ಜಾರಕಿಹೊಳಿ ಗ್ರಾಮ ಪಂಚಾಯತ್ ಸದಸ್ಯರ ಸಭೆ ನಡೆಸಿ, ಮಹಾಂತೇಶ ಕವಟಗಿಮಠ ಮತ್ತು ಲಖನ್ ಜಾರಕಿಹೊಳಿ ಪರ ಮತ ಯಾಚನೆ ಮಾಡಿದರು. ಈ ವೇಳೆ ರಮೇಶ್ ಜಾರಕಿಹೊಳಿಗೆ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ಸಾಥ್ ನೀಡಿದರು.

ಮತ್ತೊಂದೆಡೆ, ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಪರ ಸತೀಶ್ ಜಾರಕಿಹೊಳಿ ಮತಯಾಚನೆ ಮಾಡುತ್ತಿದ್ದಾರೆ. ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಗ್ರಾಮ್ ಪಂಚಾಯತ್ ಸದಸ್ಯರ ಸಭೆಯಲ್ಲಿ ಚನ್ನರಾಜ ಹಟ್ಟಿಹೊಳಿ ಭಾಗಿಯಾಗಿದ್ದರು.

ಏನೇ ಆಗಲಿ ಈ ವಿಧಾನ ಪರಿಷತ್ ಚುನಾವಣೆಯು ಲಕ್ಷೀ ಹೆಬ್ಬಾಳಕರ್ ಮತ್ತು ಜಾರಕಿಹೊಳಿ ಬ್ರದರ್ಸ್ ನ ನಡುವಿನ ಪಂದ್ಯವಾಗಿದ್ದಂತು ಸತ್ಯ.

ಕೆ.ಶಿವು.ಲಕ್ಕಣ್ಣವರ

Don`t copy text!