ಕಸಾಪ : ಸೋತುಗೆದ್ದ ಸರಸ್ವತಿ
ಇದೀಗ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗಳು ಮುಗಿದಿವೆ. ಫಲಿತಾಂಶದ ಪ್ರಕ್ರಿಯೆ, ಪ್ರತಿಕ್ರಿಯೆಗಳ ಮಹಾಪೂರವೂ ಮುಗಿದಿದೆ. ಯಾವುದೇ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೂ ಕಸಾಪ ಚುನಾವಣೆಗೂ ಸಾಸಿವೆ ಕಾಳಿನರ್ಧದಷ್ಟೂ ಫರಕು ಇಲ್ಲವೆನ್ನುವಷ್ಟು ಈ ಚುನಾವಣೆಗಳು ಬತ್ತಲೆಗೊಂಡವು. ಇವು ಸಾರ್ವತ್ರಿಕ ಚುನಾವಣೆಗಳಂತೆ ಕತಲ್ ರಾತ್ರಿಯ ಎಲ್ಲ ಕಂತ್ರಿ ಕೆಲಸದ ಪಡಪೋಸಿ ಪುಢಾರಿಗಳ ಸಂತೆಯಂತಿದ್ದವು.
ರಾಜಧಾನಿ ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಬಹತೇಕ ಕಡೆ ಬಹುತೇಕ ಮಂದಿ ಶಾಸಕರು, ಕಾರ್ಪೊರೇಟರುಗಳು ಅದು ತಮ್ಮ ತಮ್ಮ ಪಕ್ಷದ ಪ್ರತಿಷ್ಠೆಯ ಪ್ರಶ್ನೆ ಎನ್ನುವಂತೆ ಮತಗಟ್ಟೆಗಳ ತಮ್ಮ ಬೆಂಬಲಿತ ಅಭ್ಯರ್ಥಿಯ ಟೆಂಟುಗಳಲ್ಲೇ ದಿನವಿಡಿ ಠಿಕಾಣಿ ಹೂಡಿದ್ದರು.
ಕೆಲವರು ಅದು ತಮ್ಮ ಪಕ್ಷದ ಗೆಲುವಿನ ಕೆಲಸ ಎಂಬಂತೆ ಬೀಗುತ್ತಾ ಸಂ-ಭ್ರಮಿಸಿದರು. ರಾಜಕಾರಣಿಗಳದು ಈ ಕತೆಯಾದರೆ ಕೆಲವು ಮಠಾಧೀಶರು ತಮಗೆ ಬೇಕು ಬೇಕಾದ ಅಭ್ಯರ್ಥಿಗಳನ್ನು ಹಾಡಿ ಹೊಗಳಿ ಇಂತಿಂಥವರಿಗೇ ಮತ ಹಾಕಿರೆಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ‘ಮತ’ಪ್ರಜ್ಞೆಯ ಪುಂಖಾನುಪುಂಕ ಶಂಖ ಊದಿದರು. ದೇವರ ಹೆಸರಿನ ಇಂಥ ಪಟ್ಟಾಧಿಕಾರಿಗಳಿಗೆ ವಿಭೂತಿಪಟ್ಟ ಬೇರೆ ಕೇಡು.
ಇಂತಹದ್ದೊಂದು ಗೆಲುವಿನ ಘನಂದಾರಿ ಕೆಲಸಕ್ಕಾಗಿ ವಾಮಪಂಥೀಯ ಟ್ರೇಡ್ ಯುನಿಯನ್ ಲೀಡರ್ ಸೇರಿದಂತೆ ಕೆಲವು ಮಾಜಿ ಶಾಸಕರು, ಮುಖ್ಯ ಸಚೇತಕರು, ಸಚಿವರು, ಪುರಸಭೆ, ನಗರಸಭೆ ಸದಸ್ಯರು, ಹಗಲು ರಾತ್ರಿ ದುಡಿದಿದ್ದಾರೆ. ಖಾಸಗಿಯಾಗಿ ಫೋನ್ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಯೇ ಸ್ಪರ್ಧಿಸಿದಂತೆ, ಅದು ತಮ್ಮ ಹೈಕಮಾಂಡ್ ಆದೇಶವಾಗಿದ್ದು ಅದನ್ನು ಪಾಲಿಸಲೇಬೇಕು ಎಂಬಂತೆ ಗೆಲುವಿಗೆ ಶ್ರಮಿಸಿದ್ದಾರೆ. ಮೇಲ್ವರ್ಗದ ಜಾತಿಪ್ರಜ್ಞೆ, ಪಕ್ಷಪ್ರಭಾವ, ಕೆಲವು ಜಾತಿಮಠ ಪ್ರಭಾವಗಳು ಅತಿರೇಕ ಎಂಬಷ್ಟು ಬಲ ಪ್ರದರ್ಶನದ ಒಳ ಬಾವಿಗಿಳಿದುದು ಅಲ್ಲಗಳೆಯಲಾಗದು. ನಿಸ್ಸಂದೇಹವಾಗಿ ಕೆಲವುಕಡೆ ಇದೊಂದು ಅಪ್ಪಟ ರಾಜಕೀಯ ಚುನಾವಣೆಯಂತೆಯೇ ಜರುಗಿರುವುದನ್ನು ಸಾಮಾಜಿಕ ಜಾಲತಾಣಗಳು ಸ್ಫೋಟಗೊಳಿಸಿವೆ.
ಕಸಾಪಕ್ಕೆ ಒಂದು ನೂರಾ ಆರು ವರ್ಷಗಳ ಇತಿಹಾಸ. ಅಷ್ಟು ಸುದೀರ್ಘ ಚರಿತ್ರೆಯುಳ್ಳ ಅದಕ್ಕೆ ಇದೇ ಮೊದಲ ಬಾರಿಗೆ ಜಾತಿ, ಲಿಂಗ ತಾರತಮ್ಯದ ಸೋಂಕು ಅಂಟಿಕೊಂಡಿದೆಯೆಂದಲ್ಲ. ಕಸಾಪ ಸಂಸ್ಥಾಪಕ ಮೈಸೂರು ಮಹಾರಾಜರ ಸಾಂಸ್ಕೃತಿಕ ಕನಸಿನ ಆರಂಭ ಕಾಲ ಹೊರತು ಪಡಿಸಿದರೆ ಅದು ಬಹಳ ಹಿಂದಿನಿಂದಲೂ ಒಳ ಮೈಯಲ್ಲಿ ಮೇಲು ಮತ್ತು ಬಲಾಡ್ಯ ಜಾತಿಗಳ ಅಘೋಷಿತ ಹಿಡಿತದಲ್ಲಿದೆ. ಬಹುತೇಕ ಕಡೆ ಬಲಾಡ್ಯ ಜಾತಿ ಮಾತ್ರವಲ್ಲ ಒಳಜಾತಿಯ, ಒಳಸಂಬಂಧಿಗಳ ಸದಸ್ಯತ್ವ ನೊಂದಣಿಯ ಮಸಲತ್ತು. ಈ ಕೆಲಸ ಸಣ್ಣ ಪ್ರಮಾಣದಿಂದ ಹಿಡಿದು ಇದೀಗ ಬೃಹತ್ ಪ್ರಮಾಣದ ಪಾಲಿಕೆಯಂತೆ ಪರಿಷತ್ತಿನ ಸದಸ್ಯತ್ವ ಪಟ್ಟಿ ಬೃಹದಾಕಾರ ಬೆಳೆದು ನಿಂತಿದೆ.
ಆದರೆ ಶತಮಾನ ಕಾಲ ಅದು ಜೀವಂತ ಮಾತ್ರವಲ್ಲ ಕೆಲವು ಹಂತಗಳಲ್ಲಿ ಕ್ರಿಯಾಶೀಲವಾಗಿದೆ ಎಂಬುದೇ ಹೆಗ್ಗಳಿಕೆ. ಇದರ ನಡುವೆಯೂ ನೆನಪಿಡಲೇ ಬೇಕಾದ ಸುಡು ಸುಡುವ ಕೆಲವು ಕಡುಸತ್ಯಗಳಿವೆ. ಕನ್ನಡ ಓದಲು, ಬರೆಯಲು, ಮಾತಾಡಲೂ ಬಾರದ ಸಹಸ್ರಾರು ಮಂದಿ ಸದಸ್ಯರು ಕಸಾಪ ಗರ್ಭದಲ್ಲಿ ಡೊಕ್ಕು ಹೊಡೆದಿದ್ದಾರೆ. ಹೀಗಾಗಿ ಅದೀಗ ” ಕನ್ನಡ ಸಾಹಿತ್ಯ ಪರಿಷತ್ತು” ಎಂಬ ಹೆಸರಿಗೆ ಕಳಂಕ ಎನ್ನುವಂತಾಗಿದೆ. ಇನ್ನು ಅದರ ಅಂಗರಚನೆಯದು ವಿಚಿತ್ರ ಕತೆ. ಅಲ್ಲಿ ಆಂತರಿಕ ಪ್ರಜಾಸತ್ತೆ ಸತ್ತು ಹೋಗುವುದಲ್ಲ ಅಸಲಿಗೆ ಅದರ ಅಸ್ತಿತ್ವವೇ ಅಲ್ಲಿಲ್ಲ. ಸಣ್ಣದೊಂದು ನಿದರ್ಶನವೆಂದರೆ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡುವ ಸಾಮಾನ್ಯ ಮತದಾರನಿಗೆ ತನ್ನ ತಾಲೂಕಿನ ಅಧ್ಯಕ್ಷನನ್ನೇ ಆಯ್ಕೆ ಮಾಡುವ ಅವಕಾಶ ಇಲ್ಲವೆಂದರೆ ಅದ್ಯಾವ ಸೀಮೆಯ ಡೆಮಾಕ್ರಸಿ.? ಇಲ್ಲಿ ರಾಜ್ಯಕ್ಕೊಂದು ಜಿಲ್ಲೆಗೊಂದು ಬಗೆಯ ನೀತಿ ನಿಯಮ. ಹೀಗೆ ಇಂತಹ ಹತ್ತು ಹಲವು ಅಪಸವ್ಯಗಳ ಆಗರ.
ಇಂತಹ ಕಸಾಪಕ್ಕೆ ಇದುವರೆಗೂ ಓರ್ವ ಸಾಹಿತಿ ಮಹಿಳೆಯನ್ನು ಅಧ್ಯಕ್ಷೆಯನ್ನಾಗಿ ಸ್ವೀಕರಿಸುವ ಸಾಧ್ಯತೆಯಾಗಿಲ್ಲ. ಆದರೆ ಸಾಹಿತಿಗಳೇ ಅಲ್ಲದ ಅನೇಕ ಪುರುಷರು ಅಧ್ಯಕ್ಷರಾಗುತ್ತಲೇ ಇದ್ದಾರೆ. ಸಾಹಿತಿ ಮಹಿಳೆಯೊಬ್ಬಳು ಅಧ್ಯಕ್ಷೆಯಾಗುವ ಅಂಥದೊಂದು ಸಾಧ್ಯತೆಯ ಸಂಕಲ್ಪಕ್ಕೆ ಕಂಕಣತೊಟ್ಟು ಕನ್ನಡ ನಾಡಿನ ತುಂಬಾ ಆರೇಳು ತಿಂಗಳು ಕಾಲ ಅಹರ್ನಿಶಿ ಅಡ್ಡಾಡಿದವರು ಸರಸ್ವತಿ ಚಿಮ್ಮಲಗಿ ಅಕ್ಕ. ಅದು ಸರಸ್ವತಿಯ ಮಹಾಯಾನ. ಸರಸ್ವತಿ ಮಂದಿರದಲ್ಲಿ ಸಾಹಿತ್ಯ ಸರಸ್ವತಿ ಪ್ರತಿಷ್ಠಾಪನೆಯ ಪಣದ ಹೋರಾಟ ಅದಾಗಿತ್ತು. ಚಾಮರಾಜನಗರದಿಂದ ಬೀದರವರೆಗೆ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿದ ಏಕೈಕ ಮಹಾತಾಯಿ ಡಾ. ಸರಸ್ವತಿ ಶಿವಪ್ಪ ಚಿಮ್ಮಲಗಿ.
ದಕ್ಷಿಣ ಕನ್ನಡ ಮತ್ತು ಕೊಡಗು ಈ ಎರಡು ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಉದ್ದಗಲಕ್ಕೂ ಎರಡೆರಡು ಬಾರಿ ಮತದಾರ ಪ್ರಭುಗಳ ಮನೆ, ಮನಸಿನ ಬಾಗಿಲು ತಟ್ಟಿದರು. ಆದರೆ ಸರಸ್ವತಿಗೆ ಒಳಸುಳಿಯ ವ್ಯವಹಾರಿಕ ರಾಜಕಾರಣ ತಿಳಿಯದು. ಅಷ್ಟಕ್ಕೂ ಕೆಲವು ಮಹಿಳೆಯರು, ಬಹುಪಾಲು ಪುರುಷರು ಚಿಮ್ಮಲಗಿ ಅಕ್ಕಗೆ ಬಹಿರಂಗವಾಗಿಯೇ ಕವಯತ್ರಿಯೆನ್ನುವ ಕಾರಣಕ್ಕೆ ಬೆಂಬಲಿಸಿದರು. ಸರಸ್ವತಿ ಬಿಲ್ಕುಲ್ ಸೃಜನಶೀಲ ಸಾಹಿತಿಯಾಗಿದ್ದವರು. ವೃತ್ತಿಪರ ಖತರ್ನಾಕ ರಾಜಕಾರಣ ಅರಿಯದವರು. ಅಷ್ಟಕ್ಕೂ ಅವರ ಒಡನಾಟದಲ್ಲಿದ್ದ ನನ್ನಂಥವನಿಗೂ ಅದರ ಪರಿಚಯವಿರಲಿಲ್ಲ. ಪರಿಷತ್ತಿನ ಚುನಾವಣಾ ರಾಜಕಾರಣದ ಪ್ರಾಥಮಿಕ ಅರಿವು ಇಲ್ಲದೇ ಹೋಯಿತು. ಅದು ನೀತಿರಹಿತ ಯುದ್ಧಭೂಮಿ ಎಂಬುದರ ಅನುಭವ ಆಗುವಷ್ಟರಲ್ಲಿ ಚುನಾವಣೆ ಮುಗಿದಿತ್ತು. ಬೋಳೇತನ ಸೋತಿತ್ತು.
ಸರಸ್ವತಿ ನಾಮಪತ್ರ ಸಲ್ಲಿಸಿದ ಕೆಲವೇ ದಿನಗಳಲ್ಲಿ ಇವರ ಸಾಹಿತ್ಯ ಮತ್ತು ರಂಗಭೂಮಿಯ ಕರ್ತೃತ್ವ ಶಕ್ತಿ ಬಲ್ಲವರೇ ವಿಚಿತ್ರವಾಗಿ ಆಡತೊಡಗಿದರು. ಇವರನ್ನು ಬಲಪಂಥೀಯ ಬಿಜೆಪಿ ಅಭ್ಯರ್ಥಿಯೆಂದು ಬಣ್ಣಿಸಲಾಯಿತು. ಬಲಪಂಥೀಯರ ಅಧಿಕೃತ ಬೆಂಬಲ ಪಡೆದವರು ಯಾರೆಂದು ಖಚಿತವಾದ ಮೇಲೂ ಕೆಸರೆರಚಾಟ ಕಮ್ಮಿಯಾಗಲಿಲ್ಲ. ಕೆಲವು ಅಭ್ಯರ್ಥಿಗಳಿಗೆ ಕೆಲವರು ಅಡವಿಟ್ಟುಕೊಂಡವರಂತೆ ಅರೆಹುಚ್ಚಾಟ ಆಡ ತೊಡಗಿದರು. ನಾಗರ ನಾಲಗೆಯ ಬಂಡುಖೋರ ಲೇಬೆಲ್ಲಿನ ಓರ್ವ ಗಂಡು ಸಾಹಿತಿ ” ಇವಳೇನು ಆಕಾಶದಿಂದ ಇಳಿದುಬಂದ ತಾರೆಯೇ ” ಎಂದು ಕೆಂಡ ಕಾರಿತು. ತನ್ನ ಕ್ಯಾಂಡಿಡೇಟನ್ನು ಗೆಲಿಸುವ ಭರದಲ್ಲಿ ಹೀಗೆ ಕಂಡ ಕಂಡವರ ಮೇಲೆ ಕೈಲಾಗದ ಕೆಂಡಕಾರಿ ಕೊಂಡಿತು. ಅಷ್ಟೇಯಾಕೆ ಚುನಾವಣೆ ಮುಗಿದ ಮೇಲೆ ಅವರ ಪರ ಇದ್ದವರನ್ನು ಒಂದು ಕೈ ನೋಡಿಕೊಳ್ಳುವ ಧಮಕಿ ಬೇರೆ. ಸರಸ್ವತಿ ಇಂಥದೆಲ್ಲವನ್ನೂ ಎದುರಿಸಬೇಕಾಯಿತು.
ಸರಸ್ವತಿ ಬರೀ ಕವಯತ್ರಿ ಮಾತ್ರವಲ್ಲ. ಮೂಲತಃ ಅವರೊಬ್ಬ ದಣಿವರಿಯದ ಹೋರಾಟಗಾರ್ತಿ. ಹಾಗೆ ನೋಡಿದರೆ ಅವರು ಸೋಲಿನಿಂದ ಧೃತಿಗೆಟ್ಟಿಲ್ಲ. ಸಾಂಸ್ಕೃತಿಕ ಹೋರಾಟದ ಶೃತಿಗೆ ಹೊಸದೊಂದು ಸಾಹಿತ್ಯದ ಅಧ್ಯಾಯವನ್ನೇ ಸರಸ್ವತಿ ಸೃಜಿಸಿದ್ದಾರೆ. ಅವರ ಸ್ಪರ್ಧೆ ಮತ್ತದರ ಸಾತ್ವಿಕ ಸ್ವರೂಪವೇ ಸಭ್ಯ ಸಂಸ್ಕೃತಿಯ ಅಧ್ಯಾಯ. ತಮ್ಮ ಸ್ಪರ್ಧೆಯ ಮೂಲಕ ಕಸಾಪ ಚುನಾವಣೆಗೆ ಹೊಸ ಭಾಷ್ಯ ಬರೆದಿದ್ದಾರೆ. ಕಸಾಪ ಹೆಸರಿನ ವರ್ತಮಾನದ ಸಾರ್ವತ್ರಿಕ ಚುನಾವಣೆಗಳ ಕುತಂತ್ರ ಕುರಿತು ಸರಸ್ವತಿಗೆ ಸಹಜವಾಗಿ ಸಂಕಟ ಮತ್ತು ಕ್ರುದ್ಧತೆ. ಹೌದು ಸರಸ್ವತಿ ಮಂದಿರದಲ್ಲಿ ಸರಸ್ವತಿಗೇ ಅವಕಾಶವಿಲ್ಲ. ಅದೀಗ ಸರಸ್ವತಿ ಮಂದಿರವಾಗುಳಿದಿಲ್ಲ. ಅಲ್ಲಿ ಭುವನೇಶ್ವರಿ ದೇವಿಯ ಚಿತ್ರವಷ್ಟೇ ಶೋಭಾಯಮಾನ. ಸರಸ್ವತಿ ಮಂದಿರದಲ್ಲಿ ಪುರುಷ ಪಾರಮ್ಯದ ಕಮಂಡಲ ತಾಂಡವ ನೃತ್ಯ. ಇದು ಮೊನ್ನೆಯ ಕಸಾಪ ಚುನಾವಣೆಯ ಸೂಚನೆಗಳು. ಅಷ್ಟಮಾತ್ರವಲ್ಲ ಇನ್ನುಮುಂದೆ ಮಹಿಳೆಗೆ ಸ್ಪರ್ಧೆಯೇ ದುಃಸಾಧ್ಯವೆನ್ನುವಷ್ಟು ಕಹಿಯ ಅನುಭವಗಳಿಗೆ ಅವಕಾಶ ಮಾಡಿಕೊಟ್ಟಿದೆ.
ಕವಯತ್ರಿ ಚಿಮ್ಮಲಗಿ ಅಕ್ಕನ ಸ್ಪರ್ಧೆ ಕುರಿತು ಬಲಾಡ್ಯ ಮೇಲ್ಜಾತಿಯ ಹಿರಿಯ ಮಿತ್ರರೊಬ್ಬರು ಹೀಗೆ ಸಹಜವಾಗಿ ಪ್ರೀತಿಯಿಂದ ಮಾತಾಡುತ್ತಲೇ ಕೇಳಿದ್ದು., ಸರಸೋತಿ ಯಾವ ಪೈಕಿ ? ಅದುವರೆಗೆ ಆಕ್ಕನ ಜಾತಿ ಕುರಿತು ತಲೆಕೆಡಿಸಿಕೊಳ್ಳದ ನಾನು ಅದನ್ನು ಕೇಳಿ ಖಚಿತ ಪಡಿಸಿಕೊಂಡು “ಉಪ್ಪಾರ” ಪೈಕಿಯಂತೆ ಸರ್ ಅಂತ ಹೇಳಿದೆ. ಶತಮಾನ ಮೀರಿದ ಇತಿಹಾಸದಲ್ಲಿ ಮೇಲ್ವರ್ಗದ ಮಹಿಳೆಗೇ ಕಸಾಪ ಅಧ್ಯಕ್ಷಗಿರಿ ದಕ್ಕದ ಜಾಗ. ಹೀಗಿರುವಾಗ ಇನ್ನೊಂದು ಶತಮಾನ ಕಳೆದರೂ ನಿಮ್ಮ ಸರಸೋತಿ ಅಂತಹ ಖರೇ ಖರೇ ಸಾಹಿತಿ ಮಹಿಳೆಯರಿಗೆ ಕಸಾಪ ಪಟ್ಟ ನಿಲುಕದ ನಕ್ಷತ್ರವದು. ಅವರ ಕಠೋರ ನುಡಿಗಳಿಗೆ ನನ್ನಲ್ಲಿದ್ದ ಮಾರುತ್ತರವೆಂದರೆ ಚಿಮ್ಮಲಗಿ ಅಕ್ಕ ಸೋತುಗೆದ್ದ ಸರಸ್ವತಿ.
*ಮಲ್ಲಿಕಾರ್ಜುನ ಕಡಕೋಳ*
9341010712
ನೀವು ಬರೆದದ್ದೆಲ್ಲವೂ ೧೦೦% ನಿಜ! ಸೋತು ಗೆದ್ದ ಅಕ್ಕನಿಗೆ ನನ್ನ ಅಭಿನಂದನೆಗಳು..