ಅಪ್ಪಟ ಬಲಪಂಥೀಯ ಶ್ರೇಷ್ಠ ಚಿಂತಕರು:
ಪ್ರೊ. ಕೆ.ಎಸ್.ನಾ.
ಆಳೆತ್ತರದ ದಢೂತಿ ದೇಹ, ಕರಿ ಕೋಟು, ತಲೆ ಮೇಲೆ ಕರಿ ರಟ್ಟಿನ ಟೊಪ್ಪಿಗೆ ಕರ್ನಾಟಕ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಕೆ.ಎಸ್.ನಾರಾಯಣಾಚಾರ್ ಅವರನ್ನು ಕಂಡರೆ ನಮಗೆಲ್ಲ ಭಯದ ಜೊತೆಗೆ ಭಕ್ತಿ. ಐದು ವರ್ಷಗಳ ಕಾಲ ಅವರ ಪಾಠ ಕೇಳಿ ಪ್ರಭಾವಿತನಾದ ಪರಿಣಾಮದಿಂದಾಗಿ ಇಂದಿಗೂ ಇಂಗ್ಲಿಷ್ ಪಾಠ ಮಾಡುತ್ತ, ಕನ್ನಡದಲ್ಲಿ ಬರೆಯುತ್ತಲಿದ್ದೇನೆ.
ನಾಡು ಕಂಡ ಅದ್ವಿತೀಯ, ಅಪರೂಪದ ಪ್ರಾಧ್ಯಾಪಕರು. ಇಂಗ್ಲಿಷ್, ಕನ್ನಡ, ಸಂಸ್ಕೃತ, ತಮಿಳು ಭಾಷೆಗಳಲ್ಲಿ ಅಪಾರ ಹಿಡಿತ ಹೊಂದಿದ್ದ ಅವರ ಕ್ಲಾಸಿಕಲ್ ಪಾಠಗಳನ್ನು ಎಂದೂ ಮರೆಯಲಾಗದು. ವರ್ಗ ಕೋಣೆಯಲ್ಲಿ, ಅದರಲ್ಲೂ ವಿಶೇಷವಾಗಿ ಇಂಗ್ಲಿಷ್ ಪ್ರಧಾನ ವಿಷಯದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಾಗ ಪಟ್ಟಾಗಿ ಕುಳಿತು ಪಾಠ ಮಾಡುತ್ತಿದ್ದ ಮಾತಿನ ವೈಖರಿ ರೋಮಾಂಚಕಾರಿ. ಜಗತ್ತಿನ ಎಲ್ಲ ಮಹಾಕಾವ್ಯಗಳನ್ನು ನಮ್ಮ ದೇಶದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತದ ಜೊತೆಗೆ ಹೋಲಿಸಿಕೊಂಡು ರಸವತ್ತಾಗಿ ವಿವರಿಸುತ್ತಿದ್ದರು. ತಾವು ನಂಬಿರುವ ಅಪ್ಪಟ ಬಲಪಂಥೀಯ ಮೌಲ್ಯಗಳನ್ನು ಆತ್ಮವಿಶ್ವಾಸದಿಂದ ವಿವರಿಸುತ್ತಿದ್ದರು. ಸನಾತನ ಧರ್ಮದ ಶ್ರೇಷ್ಟತೆಯ ತಮ್ಮ ನಂಬಿಕೆಯನ್ನು ನೂರಾರು ಉದಾಹರಣೆಗಳಿಂದ ಸಾಬೀತು ಮಾಡುತ್ತಿದ್ದರು. ಪ್ರಶ್ನೆ ಕೇಳುವ ಜ್ಞಾನವಾಗಲಿ, ಧೈರ್ಯವಾಗಲಿ ನಮ್ಮ ಬಳಿ ಇರಲಿಲ್ಲ. ವಚನ ಸಾಹಿತ್ಯ ಓದುತ್ತ ಬೆಳೆದ ನಮಗೆ ಸಂಕೋಚವಾಗುತ್ತಿತ್ತು ಆದರೆ ಕೇಳುವ ಧೈರ್ಯ ಸಾಲದೆ ಸುಮ್ಮನಾಗುತ್ತಿದ್ದೆವು.
ನನಗೆ ಅಂತಹ ಅವಕಾಶ ಸಿಕ್ಕದ್ದು ಕೊನೆಯ ವರ್ಷದ ಬಿ.ಎ. ಓದುತ್ತಿದ್ದಾಗ. ಅಂತಿಮ ವರ್ಷದ ವಿದ್ಯಾರ್ಥಿಗಳು ಒಂದು ದಿನದ ದಾಂಡೇಲಿ ಪ್ರವಾಸ ಹಮ್ಮಿಕೊಂಡಾಗ ಅವರು ನಮ್ಮ ಜೊತೆಯಾದದ್ದು ಪುಣ್ಯ ವಿಶೇಷ. ದಾಂಡೇಲಿಯ ಸುಂದರ ಪರಿಸರದಲ್ಲಿ ನಾನು ಧೈರ್ಯ ಮಾಡಿ ಕೇಳಿದ ಪ್ರಶ್ನೆಗಳಿಗೆ ಅಷ್ಟೇ ಪರಿಣಾಮವಾಗಿ ಉತ್ತರಿಸಿದರು. ಅವರ ವೈಯಕ್ತಿಕ ಬದುಕಿನ ಆಚಾರ,ವಿಚಾರಗಳನ್ನು ಸಮರ್ಥಿಸಿಕೊಂಡರು. ಅದು ಸರಿ,ತಪ್ಪು ಎಂಬುದು ನನಗೆ ಮುಖ್ಯ ಎನಿಸಲಿಲ್ಲ, ಅವರ ನಂಬಿಕೆಯನ್ನು ಪೂಜ್ಯತೆಯಿಂದ ಸ್ವೀಕರಿಸಿದೆ. ಅವರು ಪಾಲಿಸುತ್ತಿದ್ದ ಮಡಿ,ಮೈಲಿಗೆ, ಇಂಗ್ಲಿಷ್ ಸಾಹಿತ್ಯ ಓದಿದರೂ ತಲೆ ಮೇಲಿನ ಜುಟ್ಟು… ಇಂತಹ ನನ್ನ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಹೊಸ ಆಲೋಚನಾ ಕ್ರಮಕ್ಕೆ ನಾಂದಿ ಹಾಡಿದರು. ‘ ನೀವು ಶೂದ್ರರು, ನಿಮಗೆ ಸಾಧಿಸುವ ಛಲ ಇರುವುದಿಲ್ಲ, ಬರೀ ಹುಂಬತನ ದುಡುಕು, ಆಳವಾಗಿ ಗ್ರಹಿಸುವ ಸಹನೆ ಇರುವುದಿಲ್ಲ’ ಎಂಬ ಟೀಕೆಯನ್ನು ಸಕಾರಾತ್ಮಕ ಸವಾಲು ಎಂದು ಸ್ವೀಕರಿಸಲು ಪ್ರೇರಣೆಯಾದರು.
ನಂತರ ಅವರು ವಾರ ಪತ್ರಿಕೆ ತರಂಗದಲ್ಲಿ ಬರೆದ ರಾಮಾಯಣ, ಮಹಾಭಾರತದ ಪಾತ್ರ ಪ್ರಪಂಚವನ್ನು ನಿಷ್ಠೆಯಿಂದ ಓದಿ, ಅಪ್ಪಟ ಸಾಹಿತ್ಯ ವಿದ್ಯಾರ್ಥಿಯಂತೆ ಮಹಾಕಾವ್ಯಗಳ ಒಳನೋಟ ಗ್ರಹಿಸಿಕೊಂಡೆ. ಮಹಾಕಾವ್ಯಗಳ ಪಾತ್ರಗಳ ಉದ್ದೇಶ, ಮಾನವಶಾಸ್ತ್ರ ಮತ್ತು ಮಾನಸಶಾಸ್ತ್ರಗಳ ಅಗಾಧ ವಿವರಣೆ ಮತ್ತು ವಿಶಾಲತೆಯನ್ನು ಮನ ಮುಟ್ಟುವಂತೆ ದಾಖಲಿಸಿದ್ದಾರೆ.
ನಾನು ಬರೆಯಲಾರಂಭಿಸಿದ ದಿನಗಳಲ್ಲಿ ಒಂದೆರಡು ಬಾರಿ ಭೇಟಿಯಾದೆ. ಅಷ್ಟೇ ಲವಲವಿಕೆಯಿಂದ ಮಾತನಾಡಿ ಬೆನ್ನು ಚಪ್ಪರಿಸಿದರು.
ಇತ್ತೀಚಿನ ಅವರ ಕಠೋರ ಬಲಪಂಥೀಯ ಧೋರಣೆಗಳಲ್ಲಿ ಕೂಡ ಅದೇ ಖಚಿತತೆ ಇತ್ತು.
ಇತರ ಬಲಪಂಥೀಯ ವಾದಿಗಳ ಸುಳ್ಳುಗಳ ಸರಮಾಲೆಯ ವೈಭವೀಕರಣ ಅವರ ಮಾತು ಅಥವಾ ಬರಹಗಳಲ್ಲಿ ಇರುತ್ತಿರಲಿಲ್ಲ. ನಂಬಿದ ಸಿದ್ಧಾಂತವನ್ನು ಪರಿಣಾಮಕಾರಿಯಾಗಿ ವಾದಿಸುತ್ತಿದ್ದರು. ಒಂದೇ ಕಡೆ ಗುರುತಿಸಿಕೊಂಡರೂ ವೈಯಕ್ತಿಕ ನಿರೀಕ್ಷೆ ಮತ್ತು ಪ್ರಲೋಭನೆಗಳಿಗೆ ಒಳಗಾಗಿರಲಿಲ್ಲ. ಅಧಿಕಾರ, ಅಂತಸ್ತು,ಪದವಿ, ಪುರಸ್ಕಾರಗಳ ಹುಚ್ಚು ಕೂಡ ಇರಲಿಲ್ಲ. ಅದೇ ಅವರ ದೊಡ್ಡತನ.
ದಾಂಡೇಲಿ ಪ್ರವಾಸದಲ್ಲಿ ಇದ್ದಾಗ ಕೇಳಿದೆ ‘ ಸರ್ ನೀವು ನಮ್ಮ ಜೊತೆಗೆ ಊಟ ಮಾಡದೇ ಇರುವುದು, ಭೇದ ಭಾವ ಮಾಡಿ ಅವಮಾನಿಸಿದಂತಾಗುವುದಿಲ್ಲವೆ?’, ‘ ಇಲ್ಲ ಯಾರನ್ನೂ ಅವಮಾನಿಸುವ ಉದ್ದೇಶ ಅಲ್ಲ ಇದು, ನಾನು ನಂಬಿದ ಜೀವನಶೈಲಿ ಅಷ್ಟೇ.’ ಎಂದಾಗ ಮೌನವಾದೆ.
ಆದರ್ಶ ಶಿಕ್ಷಕ: ಒಂದು ಸಲ ಸುಮಾರು ನಾಲ್ಕು ತಾಸು ದಣಿವಿಲ್ಲದೆ ನಿರರ್ಗಳವಾಗಿ ಪಾಠ ಮಾಡಿದರು. ಹೊರ ಬಂದಾಗ ಯಾವದೋ ಪ್ರಪಂಚದಲ್ಲಿ ವಿಹರಿಸಿದ ಅನುಭವ ನಮ್ಮದಾಗಿತ್ತು.
ಕೊನೆಯ ವರ್ಷದ ಪದವಿ ತರಗತಿಗೆ ‘ಸಾಹಿತ್ಯ ವಿಮರ್ಶೆ’ ಪಾಠ ಮಾಡುತ್ತಿದ್ದರು, ಆದರೆ ಒಂದು ದಿನ ಅಂತಿಮ ವರ್ಷದ ಬೀಳ್ಕೊಡುವ ಸಮಾರಂಭದಲ್ಲಿ ನಮ್ಮ ಸೀನಿಯರ್ ಒಬ್ಬರು, ‘ಪ್ರೊ. ನಾರಾಯಣಾಚಾರ್ ಅವರು ತುಂಬಾ ವಿಷಯಾಂತರ ಮಾಡಿ, ತಾವು ನಂಬಿದ ಸಿದ್ಧಾಂತಗಳನ್ನು ನಮ್ಮ ಮೇಲೆ ಹೇರುವ ಪ್ರಯತ್ನ ಮಾಡುತ್ತಾರೆ’ ಎಂದು ನೇರವಾಗಿ ಆರೋಪಿಸಿದಾಗ ತುಂಬಾ ನೊಂದುಕೊಂಡರು.
ನಮಗೆಲ್ಲ ಈ ಘಟನೆಯಿಂದ ಬೇಸರವಾಯಿತು. ಮುಂದಿನ ವರ್ಷದಿಂದ ಆ ವಿಷಯ ಪಾಠ ಮಾಡುವುದನ್ನು ನಿಲ್ಲಿಸಿ ಬಿಟ್ಟರು. ನಾವು ಅವರ ‘ಸಾಹಿತ್ಯ ವಿಮರ್ಶೆಯಿಂದ’ ವಂಚಿತರಾದೆವು. ‘ಶಿಕ್ಷಕನಾದವನು ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಗೌರವ ಕೊಡಬೇಕು, ಇತರರಿಗೆ ಸಾಹಿತ್ಯ ವಿಮರ್ಶೆ ಕಲಿಸುವ ಅವಕಾಶ ಸಿಗಲಿ’ ಎಂದು ಹಿಂದೆ ಸರಿದರು.
ಮುಂಜಾನೆ ಕಾಲೇಜು ಮುಗಿಸಿ, ಸಂಜೆ ಧಾರವಾಡದಲ್ಲಿ ಪ್ರವಚನ ಮಾಡುವಾಗ, ಅಪ್ಪಟ ಸನಾತನ ವೇಷಭೂಷಣದಲ್ಲಿ ಇರುತ್ತಿದ್ದರು. ಬಹಿರಂಗವಾಗಿ ಕಾಣುವ ಜುಟ್ಟು, ಬಿಳಿ ಪಂಚೆ, ಹಣೆ ಮೇಲಿನ ನಾಮ ನಮಗೆ ಖುಷಿ ಕೊಡುವುದರೊಂದಿಗೆ, ಅವರ ಅದ್ಭುತ ಕನ್ನಡ ಮತ್ತು ಸಂಸ್ಕೃತ ಕೇಳುವ ಸುವರ್ಣಾವಕಾಶ ಲಭಿಸುತ್ತಿತ್ತು. ಕರಿ ಕೋಟು ಮತ್ತು ಬಿಳಿ ಪಂಚೆಯ ದೇಸಿಯತೆಯ ವಿಭಿನ್ನ ವ್ಯಕ್ತಿತ್ವದ ಘನ ಗಾಂಭೀರ್ಯತೆಯನ್ನು ಎಂದಿಗೂ ಮರೆಯಲಾಗದು.
ಸಾಹಿತ್ಯ ಅಧ್ಯಯನ, ಕಾವ್ಯದ ವಿಮರ್ಶೆ,ಆಧ್ಯಾತ್ಮಿಕ ಔನ್ನತ್ಯವನ್ನು ಪರಿಣಾಮಕಾರಿಯಾಗಿ ಕಲಿಸಿ ಕೊಟ್ಟ ಗುರುಗಳದು ಸಂತೃಪ್ತ ತುಂಬು ಜೀವನ. ಸಿದ್ಧಾಂತಗಳಾಚೆಗೆ ಅನೇಕ ಅನುಕರಣೀಯ ಮೌಲ್ಯಗಳನ್ನು ಬಿಟ್ಟು ಹೋದ ಗುರುಗಳಿಗೆ ಸಾವಿರದ ನಮನಗಳು.
ಪ್ರೊ.ಸಿದ್ದು ಯಾಪಲಪರವಿ. ಕಾರಟಗಿ.
ಹಿರಿಯರ ಕುರಿತಾದ ಗೌರವಯುತ ಬರಹ… ಎಲ್ಲೂ ಋಣಾತ್ಮಕ ಭಾವ ಹೊಂದದೆ ಗುರುಗಳ ವಾಕ್ಯ ಸ್ವೀಕರಿಸುವುದೂ ಶಿಷ್ಯರ ಒಂದು ವಿಧೇಯ ಗುಣ… ತಮ್ಮ ಬರಹದಲ್ಲಿ ಅದು ಕಾಣುತ್ತಿದೆ. ಪ್ರತಿಯೊಬ್ಬರದೂ ಅವರದೇ ಆದ ಜೀವನ ಶೈಲಿ ಇರುತ್ತದೆ.. ಅದನ್ನು ಪಾಲಿಸಲು ಅವರ ಪಾಡಿಗೆ ಅವರನ್ನು ಬಿಟ್ಟರೆ ಎಲ್ಲಿಯೂ ವೈಮನಸ್ಸು, ಭಿನ್ನಾಭಿಪ್ರಾಯ ಹುಟ್ಟುವುದಿಲ್ಲ… ಅಂತಹ ಭಾವಯುತ ಅಭಿಪ್ರಾಯವೂ ತಮ್ಮ ಬರಹದಲ್ಲಿ ಕಾಣುತ್ತದೆ…
ಮಹಾನ್ ಚೇತನ, ವಾಙ್ಮಿಗಳಿಂದ ಪಾಠ ಪಡೆದದ್ದೂ ಒಂದು ಅದೃಷ್ಟ…
ಅವರೆಂದಿಗೂ ತುಂಬಿದ ಕೊಡ… ಎಲ್ಲಿಯೂ ತುಳುಕಲಿಲ್ಪ. ಜೊತೆಗೆ ಪರರಿಗೆ ತಮ್ಮ ಕೊಡದಲ್ಲಿಯ ಅಪಾರ ಜ್ಞಾನವನ್ನು ಹಂಚಿ … ಭಗವಂತನ ಪಾದದಲ್ಲಿ ಲೀನವಾದವರು.. ಹರಿ ಓಂ… ನಾರಾಯಣ ನಾರಾಯಣ