ಸತ್ತಂತೆ ಇದ್ದಲ್ಲದೆ ತತ್ವವ ಕಾಣಬಾರದು

ಸತ್ತಂತೆ ಇದ್ದಲ್ಲದೆ ತತ್ವವ ಕಾಣಬಾರದು

ಹೊತ್ತು ಹೋಗದ ಮುನ್ನ ನೀವು‌ ಸತ್ತಂತೆ ಇರಿರೊ,
ಸತ್ತಂತೆ ಇದ್ದಲ್ಲದೆ ತತ್ವವ ಕಾಣಬಾರದು
ತತ್ವವ ಕಂಡಲ್ಲದೆ ಮನ ಬತ್ತಲೆಯಾಗದು
ಬತ್ತಲೆಯಾದಲ್ಲದೆ ಘನವ ಕಾಣಬಾರದು
ಘನವ ಕಂಡಲ್ಲದೆ ನಿಮ್ಮ ನೆನಹು ನಿಷ್ಪತ್ತಿಯಾಗದು
ಬಸವಪ್ರಿಯ ಕೂಡಲಚೆನ್ನಬಸವಣ್ಣ

                                        -ಹಡಪದ ಅಪ್ಪಣ್ಣ

ತತ್ವ ಸಾಧಕರು ಹೇಗಿರಬೇಕು. ತತ್ವವು ಎಂದರೆ ತನ್ನ ಕುರಿತು ತನಗೆ ಪರಿಚಯ ಮಾಡಿಕೊಳ್ಳುವುದಾಗಿದೆ. ತಾನೆ ತಾನಾಗುವುದು. ತಾನಾರು ಎಂಬುದನ್ನು ಅರಿವುದು ಆಗಿದೆ ಎನ್ನುತ್ತಾರೆ ಹಡಪದ ಅಪ್ಪಣ್ಣ ಶರಣರು.

ಹೊತ್ತು ಹೋಗದ ಮುನ್ನ ನೀವು‌ ಸತ್ತಂತೆ ಇರಿರೊ

ಸತ್ತವರು ಹೇಗಿರುತ್ತಾರೆ. ಸುಮ್ಮನಿರುತ್ತಾರೆ. ಬೈದರು, ಹೊಗಳಿದರು, ಬಡಿದರು ಎನೂ‌ ಮಾಡಿದರು ಸತ್ತವರು ಸುಮ್ಮನಿರುತ್ತಾರೆ. ಕಾರಣ ಪ್ರಾಣ ತ್ಯಾಗವಾಗಿದೆ. ಸಾಧಕನು ಕೂಡ ಸತ್ತವನಂತೆ ಇರಬೇಕು. ಹೊತ್ತು ಹೋಗದ‌ ಮುನ್ನ ಸತ್ತವನಂತೆ ಇರಿ ಎನ್ನುತ್ತಾರೆ ಅಪ್ಪಣ್ಣನವರು. ಆಯುಷ್ಯ ತೀರದ ಮುನ್ನ, ಯೌವ್ವನ ಹೋಗದ ಮುನ್ನ ಆತ್ಮದ ಸ್ಥಿತಿಯನ್ನು ಅರಿಯಿರಿ ಎನ್ನುತ್ತಾರೆ.

ತತ್ವವ ಕಂಡಲ್ಲದೆ ಮನ ಬತ್ತಲೆಯಾಗದು ಬತ್ತಲೆಯಾದಲ್ಲದೆ ಘನವ ಕಾಣಬಾರದು
ಆತ್ಮದ ಅರಿವು ಮೂಡಿದಾಗ‌ ಮಾತ್ರ ಮನ ಬತ್ತಲೆಯಾಗುತ್ತದೆ. ಮನವೆಂಬುದು ಇಲ್ಲದಂತಾಗುತ್ತದೆ. ಆತ್ಮದ ಅರಿವು ಆದಾಗ ಸಂಘರ್ಷ, ಚಡಪಡಿಕೆ ಗೌಣವಾಗಿ ಪ್ರಸನ್ನತೆ ಉಂಟಾಗುತ್ತದೆ.

ಘನವ ಕಂಡಲ್ಲದೆ ನಿಮ್ಮ ನೆನಹು ನಿಷ್ಪತ್ತಿಯಾಗದು ಬಸವಪ್ರಿಯ ಕೂಡಲಚೆನ್ನಬಸವಣ್ಣ
ಘನವು ಅಂದರೆ ಪರಶಿವ ವಸ್ತುವನ್ನು ಕಂಡಾಗ ಮನದ ನೆನಹು ಇಲ್ಲದಾಗುತ್ತದೆ. ಮನಕ್ಕೆ ನೆನಹಾಗಿ ಕಾಡಿತ್ತು ಮಾಹೆ ಎಂಬಂತೆ ನೆನಹು ಇರಬಾರದು. ಮನದ ನೆನಹಿಂದಲೇ ದುಃಖಗಳು ತೊರುತ್ತವೆ. ಮನದ ನೆನಹು ನಿಲ್ಲಿಸಬೇಕು. ಆಗ ನಿಜದ ನಿಲುವು ಉಳಿಯುತ್ತದೆ. ಆಗ ತನ್ನ ತಾನರಿಯಲು ಸಾಧ್ಯ ಎಂದು ಹಡಪದ ಅಪ್ಪಣ್ಣ ಶರಣರು ಅರುಹಿದ್ದಾರೆ.

ವೀರೇಶ ಸೌದ್ರಿ ಮಸ್ಕಿ

Don`t copy text!