ಓ೦ ಶ್ರೀಗುರು ಬಸವಲಿಂಗಾಯ ನಮಃ
ಶರಣರಿಗೆ ಸಾವಿಲ್ಲ. ಶರಣರಿಗೆ ಮರಣವೇ ಮಹಾನವಮಿ
ಉಪಮಿಸಬಾರದ ಉಪಮಾತೀತರು, ಕಾಲಕರ್ಮ ರಹಿತರು, ಭವವಿರಹಿತರು, ಕೂಡಲಸಂಗಮದೇವಾ ನಿಮ್ಮ ಶರಣರು.
ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬಬೀಜವಂಕುರಿಸಿ, ಲಿಂಗವೆಂಬ ಎಲೆಯಾುತ್ತು. ಲಿಂಗವೆಂಬ ಎಲೆಯ ಮೇಲೆ ವಿಚಾರವೆಂಬ ಹೂವಾಯಿತ್ತು, ಆಚಾರವೆಂಬ ಕಾಯಾುತ್ತು. ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.
ಲೋಕದಂತೆ ಬಾರರು, ಲೋಕದಂತೆ ಇರರು, ಲೋಕದಂತೆ ಹೋಗರು, ನೋಡಯ್ಯ. ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು, ಮುಕ್ತಿಯಂತೆ ಹೋಹರು, ನೋಡಯ್ಯಾ. ಉರಿಲಿಂಗದೇವಾ, ನಿಮ್ಮ ಶರಣರು ಉಪಮಾತೀತರಾಗಿಉಪಮಿಸಬಾರದು.
ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು, ಸಾವೆಂಬುದು ಸಯವಲ್ಲ. ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ. ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ, ಉಪಮಿಸಬಲ್ಲವರ ಕಾಣೆನು.
ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ, ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ. ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು ಕೂಡಲಸಂಗಮದೇವಾ
ನಮ್ಮ ಶರಣರಿಗೆ ಸಾವಿಲ್ಲ, ಮರಣವೆ ಮಹಾನವಮಿ. ಸಾವು ಎಂಬುದು ಈ ಭೌತಿಕ ದೇಹಕ್ಕೆ ಹೊರತು ಆತ್ಮಕ್ಕಲ್ಲ, ಅದು ಶಾಶ್ವತ ಅಮರ ಶರಣಬಂಧುಗಳೆ.
–ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ ಗಂಗಾವತಿ.