ವಿಧಾನ ಪರಿಷತ್ ಚುನಾವಣೆ ಶೇ.೧೦೦ ರಷ್ಟು ಮತದಾನ
e-ಸುದ್ದಿ ಮಸ್ಕಿ:
ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶಾಂತಿಯುತವಾಗಿ ಶೇ. 100 ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್ ಕವಿತಾ ಆರ್. ತಿಳಿಸಿದ್ದಾರೆ.
ಬೆಳಿಗ್ಗೆ ಆರಂಭವಾದ ಮತದಾನ ಸಂಜೆ 5 ರವರೆಗೆ ನಡೆಯಿತು. ಪ್ರತಿ ಮತಗಟ್ಟೆಗಳ ಮುಂದೆ ಕೊವಿಡ್ ನಿಯಮದಂತೆ ಸಾನಿಟೈಸರ್ ಹಾಗೂ ಮಾಸ್ಕ್ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಚಿಕ್ಕಪುಟ್ಟ ಮಾತಿನ ಚಕಮಕಿ ಬಿಟ್ಟರೆ ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆಯಿತು.
ತಾಲ್ಲೂಕು ಆಡಳಿತ ಪೊಲೀಸ್ ಬೀಗಿ ಭದ್ರತೆಯಲ್ಲಿ ಮತಪೆಟ್ಟೆಗೆಗಳನ್ನು ರಾಯಚೂರಿಗೆ ಕಳಿಸಿ ಕೊಡಲಾಯಿತು. ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯಾಗಿರುವ ಈ ಚುನಾವಣೆಯಲ್ಲಿ ಬೀಗಿ ಭದ್ರತೆ ಮಾಡಲಾಗಿತ್ತು.
ತಹಶೀಲ್ದಾರ್ ಕವಿತಾ ಆರ್. ಸರ್ಕಲ್ ಇನ್ ಸ್ಪೆಕ್ಟರ್ ಸಂಜೀವ್ ಕುಮಾರ, ಸಬ್ ಇನ್ ಸ್ಪೆಕ್ಟರ್ ಸಿದ್ಧರಾಮ ಸೇರಿದಂತೆ ಹಿರಿಯ ಅಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶಾಸಕ ಆರ್. ಬಸನಗೌಡ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮತಗಟ್ಟೆಗಳಿಗೆ ತೆರಳಿ ತಮ್ಮ ತಮ್ಮ ಕಾರ್ಯಕರ್ತರನ್ನು ಭೇಟಿಯಾಗಿ ಮತದ ಪ್ರಮಾಣ ಪಡೆಯುತ್ತಿದ್ದ ದೃಶ್ಯ ಕಂಡು ಬಂತು.