ಮೊಟ್ಟೆ ತಿನ್ನುವ ಶಾಲಾಮಕ್ಕಳು ಮತ್ತು ಜಾತಿ ಹುಡುಕಾಟದ ಹುನ್ನಾರಗಳು
ಶಾಲಾಮಕ್ಕಳು ಮೊಟ್ಟೆ ತಿನ್ನುವುದು ಮತ್ತೆ ಚರ್ಚೆಯ ಮುಂಚೂಣಿಗೆ ಬಂದಿದೆ. ಎಂದಿನಂತೆ ಅದೆಲ್ಲ ಆಹಾರ ಸಂಸ್ಕೃತಿಯ ಹೆಸರಿನಿಂದ ಮಾಧ್ಯಮಗಳಿಗೂ ಹೆಚ್ಚು ಹುಕಿಯ ಸಂವಾದದ ಸುಡು ಸುಡುವ ವಸ್ತುವಾಗಿವೆ. ಅದು ಕೇವಲ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ರಾಜಕಾರಣವಾಗಿರದೇ ಅದರ ಅಂತಃಪ್ರಜ್ಞೆ ಮನುಷ್ಯರ ಜಾತಿ ಅನ್ವೇಷಣೆಯೇ ಆಗಿದೆ. ಅದರಲ್ಲೂ ಕೆಳಜಾತಿಗಳ ಹುಡುಕಾಟದ ಹೊಲಬುಗೇಡಿ ಪ್ರಕ್ರಿಯೆಯೇ ಆಗಿದೆ. ಇಂಥದನ್ನು ದುರ್ಬೀನು ಹಾಕಿ ನೋಡಿಯೇ ನಿರ್ಧರಿಸಬೇಕೆಂದೇನು ಇಲ್ಲ. ಮೇಲ್ನೋಟದಲ್ಲೇ ಎಂಥ ಮೂಢರಿಗೂ ಅರ್ಥವಾಗಬಲ್ಲ ಆಚರಣೆ.
ಹೆಸರಿಗಷ್ಟೇ ಸಸ್ಯಾಹಾರ ಹಾಗೂ ಮಾಂಸಾಹಾರ ಮತ್ತು ಮಿಶ್ರಾಹಾರ ಸೇವನೆಗಳ ಗುರುತಿಸುವಿಕೆ. ಆಳದಲ್ಲಿ ಅಕ್ಷರಶಃ ಕೆಳ ಮತ್ತು ಕಿಗ್ಗಳ ಜಾತಿಗಳನ್ನು ಪತ್ತೆಹಚ್ಚುವ ನೀಚ ಹುಡುಕಾಟದ ಹುನ್ನಾರಗಳು. ಇದು ಬಹಳ ಕಾಲದಿಂದಲೂ ನಡೆದುಬಂದ ಪ್ರಕ್ರಿಯೆ ಮಾತ್ರವಲ್ಲ ಒಂದು ಕ್ರೂರ ವ್ಯವಸ್ಥೆಯೇ ಆಗಿದೆ. ಸಸ್ಯಾಹಾರ ಶ್ರೇಷ್ಠ. ಮಾಂಸಾಹಾರ ಕನಿಷ್ಠ, ಅದು ಕಿಗ್ಗಳ ಜಾತಿ ಜನರು ತಿನ್ನುವ ಆಹಾರವೆಂಬ ಮೇಲ್ಜಾತಿಯ ಕೊಳಕು ಮನಸುಗಳ ಅಘೋಷಿತ ಜಾತಿ ಅಸ್ಪೃಶ್ಯತೆಯ ಆಚರಣೆಯೇ ಅದಾಗಿದೆ.
ಮೇಲ್ಜಾತಿ ಮತ್ತು ಕೆಳಜಾತಿಗಳನ್ನು ಮೇಲ್ನೋಟದಲ್ಲೇ ಗುರುತು ಹಚ್ಚುವ ಶ್ಯಾಣೇತನವೇ ಆಹಾರ ಪದ್ಧತಿಯ ಸೂಕ್ಷ್ಮ ಮತ್ತು ಸರಳ ಹುಡುಕಾಟ. ಅದಕ್ಕೆಂದೇ ಶಹರ, ಪಟ್ಟಣಗಳಲ್ಲಿ ಮನೆ ಬಾಡಿಗೆ ಕೊಡುವಾಗ “ಸಸ್ಯಾಹಾರಿಗಳಿಗೆ ಮಾತ್ರ” ಎಂಬ ಬೋರ್ಡುಗಳು ದಾರ ಕಟ್ಟಿಕೊಂಡು ನೇತಾಡುತ್ತಿರುತ್ತವೆ. ಈ ದಾರಗಳ ಒಳಹೇತು ಏನೆಂಬುದು ಅರಿಯದ್ದೇನಲ್ಲ. ಮನೆಬಾಡಿಗೆ ಮೇಲ್ಜಾತಿಯವರಿಗೇ ಮೀಸಲು ಎಂದು ಘೋಷಿಸಿಕೊಂಡರೆ ಕಾನೂನಿನ ಅಡಕತ್ತರಿಯಲ್ಲಿ ಸಿಕ್ಕಿಬೀಳುವ ಅಪಾಯ. ಅದಕ್ಕೆಂದೇ ಕಾನೂನಿನಲ್ಲಿ ಸಿಕ್ಕಿ ಬೀಳದಂತೆ ಅಘೋಷಿತ ಅಸ್ಪೃಶ್ಯತೆ ಆಚರಣೆಯ ಶ್ಯಾಣೇತನ. ಅದನ್ನು ”ಸಸ್ಯಾಹಾರಿಗಳಿಗೆ ಮಾತ್ರ” ಎಂಬ ನಾಮಫಲಕದ ಮೂಲಕ ಸಾದರ ಪಡಿಸಲಾಗುವುದು.
ಅಷ್ಟೇಯಾಕೆ ಪತ್ರಿಕೆಗಳಲ್ಲಿ ‘ಸಸ್ಯಾಹಾರಿಗಳಿಗೆ ಮಾತ್ರ ಬಾಡಿಗೆಮನೆ’ ಎಂಬ ಜಾಹೀರಾತುಗಳೇ ಪ್ರಕಟಗೊಳ್ಳುತ್ತವೆ. ಇದೇನು ಕದ್ದುಮುಚ್ಚಿ ಜರುಗುವ ಕೆಲಸವೇನಲ್ಲ. ಇದನ್ನು ಬಹಳ ದಿನಗಳಿಂದಲೂ ಮೇಲ್ಜಾತಿಯ ಮನಸುಗಳು ರೂಢಿಗತ ಮಾಡಿಕೊಂಡಿವೆ. ಮೇಲ್ಜಾತಿಯೆಂದರೆ ಬಹುಪಾಲು ನಮಗೆಲ್ಲ ಬ್ರಾಹ್ಮಣರು ಮಾತ್ರ ಎಂದು ನೆನಪಾಗುವುದು ಸಹಜ.
ಆದರೆ ನೆನಪಿರಲಿ ಬ್ರಾಹ್ಮಣೇತರ ಕೆಲವು ಮೇಲ್ಜಾತಿಗಳು ಸಹಿತ ಇಂತಹ ಅಸ್ಪೃಶ್ಯತೆಯನ್ನು ಸೂಕ್ಷ್ಮವಾಗಿ ಆಚರಣೆಯಲ್ಲಿಟ್ಟಿವೆ. ಪ್ರಸ್ತುತ ಶಾಲಾಮಕ್ಕಳು ಕೋಳಿತತ್ತಿ ತಿನ್ನುವ ಪ್ರಸ್ತಾಪ ಇದಕ್ಕೆ ಹೊರತಾಗಿಲ್ಲ. ಕುಚೋದ್ಯವೆಂದರೆ ಶಾಲಾಮಕ್ಕಳ ಮೊಟ್ಟೆ ಸೇವನೆ ಕೆಲವು ಸಂಘಟನೆ ಮತ್ತು ಮಠಾಧೀಶರಿಗೆ ಧರ್ಮವಿರೋಧಿ ಎನಿಸಿದೆ.
ಕೆಳಜಾತಿ ಜನಗಳನ್ನು ಮೇಲ್ಜಾತಿ ಜನಗಳು ತಮ್ಮ ಮನೆಗಳಲ್ಲಿ ಕೂಡಿಸುವ ಜಾಗಗಳು, ಅವರಿಗೆ ನೀಡುವ ಚಹ, ಊಟದ ಪ್ರತ್ಯೇಕ ಕ್ರಮಗಳು ಯಥೇಚ್ಛ ಅಸ್ಪೃಶ್ಯತೆ ಆಚರಣೆಯ ವಿಧಾನಗಳಾಗಿವೆ. ಇಂತಹ ಒಳಮುಸುಕು ಆಚರಣೆಗಳು ಎಲ್ಲಾಪಕ್ಷದ ಸರಕಾರಗಳ ಕಾಲಗಳಲ್ಲೂ ಜೀವಂತವಾಗಿವೆ.
ಕೆಳಜಾತಿಗಳನ್ನು ಪತ್ತೆ ಹಚ್ಚಲು ಆಹಾರ ಪದ್ಧತಿಯ ಹುಡುಕಾಟವೇ ಸರಳ ಆಯುಧ. ತಿನ್ನುವ ಕುಡಿಯುವ ಜನರು. ಅಂದರೆ ಕಪ್ಪು ಕಡಿ ತಿನ್ನುಣ್ಣುವ ಪರಿಭಾಷೆಯ ಮತ್ತು ಮದ್ಯ ಸೇವಿಸುವವರೆಂದರೆ ಅಕ್ಷರಶಃ ಮಾಂಸಾಹಾರಿ ಜನರೆಂದೇ ಅರ್ಥ. ಅಂದರೆ ಕೆಳಜಾತಿ ಜನರೆಂದೇ ಅರ್ಥ. ಹಾಗೆಂದು ಅವರು ದಲಿತರೆಂದು ಮಾತ್ರ ಅರ್ಥವಲ್ಲ. ದಲಿತೇತರ ಕೆಳ ಮತ್ತು ಮಧ್ಯಮ ವರ್ಗದ ಅನೇಕ ಜಾತಿಯ ಜನರು ಸೇರಿದಂತೆ ಮಾಂಸಾಹಾರಿಗಳು ಅಂದರೆ ಕೆಳ ಕಿಗ್ಗಳ ಜಾತಿಗಳೆಂದೇ ಅರ್ಥ. ಹೀಗೆ ಕೆಳಜಾತಿಗಳ ಅಸ್ಮಿತೆಯ ಸೂಕ್ಷ್ಮತೆ ಅರಿಯುವ ಮೇಲ್ಜಾತಿ ಮನಸುಗಳ ಸೂಕ್ಷ್ಮಾನ್ವೇಷಣೆಗಳ ವೈಖರಿ ಇದು.
ಹೀಗೆ ಆಹಾರ ಸೇವನೆಯೆಂಬ ಉಣ್ಣುವ ಅನ್ನದ ಹೆಸರಿನಲ್ಲಿ ನಿಮ್ನ ಕುಲಗಳ ಗುರುತು ಹಚ್ಚುವ ಜಾಣತನದ ಲೆಕ್ಕಾಚಾರಗಳೇ ಆಹಾರ ಸಂಸ್ಕೃತಿ ಹೆಸರಿನ ಆಚರಣೆಗಳು. ಸೋಜಿಗವೆಂದರೆ ಪ್ರಗತಿಪರ ಹೆಸರಿನ ಮೇಲ್ಜಾತಿಯ ಕೆಲವರು ವೇದಿಕೆಗಳಲ್ಲಿ ಖಂಡುಗ, ಖಂಡುಗ ವೈಚಾರಿಕತೆಯ ಭಾಷಣಗಳ ಭೋಂಗು ಬಿಡುತ್ತಾರೆ. ಬುದ್ಧ, ಬಸವ, ಅಲ್ಲಮ, ಅಂಬೇಡ್ಕರ ವಿಚಾರಗಳ ಹೊಳೆಗಳನ್ನೇ ಓತಪ್ರೋತವಾಗಿ ಹರಿಸಿ ಭಾರೀ ಸೆಕ್ಯುಲರ್ ಫೋಸ್ ಕೊಡುತ್ತಾರೆ. ಅಂಥ ಕೆಲವರು ಇಂತಹ ಆಚರಣೆಗಳ ಭಾಗವಾಗಿರುವುದು ಸೋಜಿಗ.
ಎಡದ ಕೈಯಲ್ಲಿ ಹೆಂಡ ಬಲದ ಕೈಯಲ್ಲಿ ಖಂಡ, ಕೊರಳಲ್ಲಿ ಲಿಂಗ ಇದ್ದೊಡೆ ಶರಣೆಂಬೆ, ಜಂಗಮನೆಂಬೆ ಎಂಬ ವಚನ ಚಳವಳಿಯನ್ನೇ ಇವರು ಉಕ್ಕಿಸಿ ಬಿಡುವರು. ದುರಂತವೆಂದರೆ ಇಂತಹ ಕೆಲವರು ಕೆಳಜಾತಿ ಕುಲಗಳ ಹುಡುಕಾಟದ ಕುಲಮದಗಳ ಕ್ರೂರಿಗಳಾಗಿರುತ್ತಾರೆ.
ಹಾಗೆ ನೋಡಿದರೆ ತಿನ್ನುಣ್ಣುವ ಜಾತಿಗಳಿಗಿಂತ ಸಂಪ್ರದಾಯಸ್ಥ ಮೇಲ್ಜಾತಿಯ ಜನರೇ ಅದರಲ್ಲೂ ಮೇಲ್ಜಾತಿಯ ಪುರುಷರೇ ಹೆಚ್ಚುಮಂದಿ ಮಾಂಸಾಹಾರಿಗಳು. ಹಾಗೆಂದು ಅವರಲ್ಲಿ ಮಹಿಳೆಯರು ಇಲ್ಲವೇ ಇಲ್ಲ ಎಂದೇನಿಲ್ಲ. ಆದರೆ ಅದೆಲ್ಲವೂ ಅನಧಿಕೃತ. ಅದಕ್ಕೆ ಸಿಂಧುತ್ವದ ಪ್ರಮಾಣ ಪತ್ರ ಅಲಭ್ಯ. ಅಂದರೆ ಮೇಲ್ಜಾತಿಯ ಮನೆ, ಕುಟುಂಬಗಳಲ್ಲಿ ಮಾಂಸಾಹಾರ ತಯಾರಿಸುವ ಮತ್ತು ಮಹಿಳೆಯರು ಸೇರಿದಂತೆ ಕುಟುಂಬದ ಸದಸ್ಯರು ಮಾಂಸಾಹಾರ ಸೇವಿಸುವ ಅಧಿಕೃತ ಪದ್ಧತಿ ಇರುವುದಿಲ್ಲ. ಅಂತೆಯೇ ಕೆಳಜಾತಿ ಜನರಿಗೆ ಮಾತ್ರ ಮಾಂಸಾಹಾರ ಸೇವನೆಯ ವಿಪುಲ ಅವಕಾಶ. ಕೆಳಜಾತಿ ಎಂಬ ಕಾರಣಕ್ಕೆ ಅವರ ಮಾಂಸಾಹಾರ ಸೇವನೆಯ ಅಘೋಷಿತ ಸಿಂಧುತ್ವ ಪ್ರಮಾಣ ಪತ್ರ ಲಭ್ಯ. ಈ ಬಗೆಯ ಸಾಮಾಜಿಕ ಸಂರಚನೆಯ ಮೇಲು ಕೀಳರಿಮೆಗಳು ಸಮಾಜದಲ್ಲಿ ಸ್ಥಾಯಿಗೊಂಡಿವೆ.
ಕೆಳಜಾತಿ ಜನರಿಗಾದರೂ ಕಡ್ಡಾಯವಾಗಿ ಶ್ರಾವಣ ಮಾಸದಲ್ಲಿ ಮಾಂಸಾಹಾರ ವರ್ಜ್ಯ. ಆದರೆ ಕೇವಲ ಸಸ್ಯಾಹಾರಿಗಳೆಂಬ ಮೇಲರಿಮೆಯ ಸರ್ಟಿಫಿಕೇಟ್ ಹೊಂದಿದ್ದಕ್ಕೆ ವರ್ಷದ ಎಲ್ಲಾತಿಂಗಳು ಮಾಂಸ ತಿನ್ನುಣ್ಣುವ ಮಾಂಸಬಾಕರಾಗಿದ್ದರೂ ಅವರು ಶ್ರೇಷ್ಠರಂತೆ. ಅವರು ಹುಟ್ಟಿದ ಜಾತಿ ಮಾಂಸ ತಿನ್ನುವ ಜಾತಿ ಆಗಿರುವುದಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ಮೇಲರಿಮೆಯ ಪಟ್ಟ. ಅಚ್ಚರಿಯೆಂದರೆ ಅದೆಷ್ಟೋ ಮಂದಿ ಕೆಳ ಕಿಗ್ಗಳ ಜಾತಿಯ ಜನರು ವಾಸ್ತವದಲ್ಲಿ ಮಾಂಸಾಹಾರಿಗಳಾಗಿರುವುದಿಲ್ಲ. ಆದರೆ ಅವರಿಗೆ ಸಸ್ಯಾಹಾರಿ ಸರ್ಟಿಫಿಕೆಟ್ ಸಿಗುವುದಿಲ್ಲ. ಹಾಗೆಂದು ಮೇಲ್ಜಾತಿಯ ಮನಸುಗಳು ಅವರಿಗೆ ಮನೆಬಾಡಿಗೆ ನೀಡಲು ಮುಂದೆ ಬರುತ್ತಾರೆಂದು ಭಾವಿಸಬೇಕಿಲ್ಲ.
ಸಸ್ಯಾಹಾರಿ ಮತ್ತು ಮಾಂಸಾಹಾರಿ ಹುಡುಕಾಟವೆಂದರೆ ಕೇವಲ ಕೆಳ ಜಾತಿಗಳ ಹುಡುಕಾಟವಷ್ಟೇ. ಇದುಕೇವಲ ಮನೆಬಾಡಿಗೆ ನೀಡುವ ಪ್ರಕ್ರಿಯೆಗೆ ಮಾತ್ರ ಸೀಮಿತವಲ್ಲ. ಶ್ರೇಣೀಕೃತ ಸಮಷ್ಟಿಯ ಮನುಷ್ಯರ ಕೆಳಜಾತಿ ಹುಡುಕಾಟಗಳ ಒಳ ಹುನ್ನಾರಗಳಷ್ಟೇ. ಮಾಂಸಾಹಾರದ ಕೆಳಜಾತಿಯವರಿಗೆ ಮನೆಬಾಡಿಗೆ ಕೊಡದವರು ಕೊಡಕೊಳ್ಳುವ ಬೀಗಸ್ತನ ಮಾಡುವುದುಂಟೇ.? ಆ ದಿಕ್ಕಿನಲ್ಲಿ ಯೋಚನೆ ಕೂಡಾ ಮಾಡಲಾಗದು. ಈ ಬಗೆಯ ಆಹಾರ ಸಂಸ್ಕೃತಿ ನೆಲೆಗಳು ಕಿಗ್ಗಳ ಮತ್ತು ವೆಗ್ಗಳ ಜಾತಿ ತಾರತಮ್ಯ ಅಸ್ಮಿತೆಯನ್ನು ಸಾಕ್ಷೀಕರಿಸುತ್ತವೆ.
ಆದರೆ ನಮ್ಮ ಕೆಲವುಮಂದಿ ಪ್ರಗತಿಪರರು ತಾವು ಅಪ್ಪಟ ಮನುಷ್ಯಪರ, ಜೀವಪರ, ಜಾತ್ಯತೀತವಾಗಿದ್ದೇವೆಂದು ಜಬರ್ದಸ್ತಾಗಿ ಭಾಷಣ ಕುಟ್ಟುತ್ತಾರೆ. ಕುಳುಬಾನ ಒಟ್ಟಿದಂತೆ ಅದೇ ನಿಲುವಿನ ಪುಸ್ತಕಗಳನ್ನು ಬರೆದು ಒಟ್ಟುತ್ತಾರೆ. ಅದಕ್ಕಾಗಿ ಪ್ರಶಸ್ತಿ, ಪುರಸ್ಕಾರಗಳನ್ನೂ ಹೊಡಕೊಳ್ಳುತ್ತಾರೆ. ಅಂತರ್ಜಾತಿ, ಅಂತರ್ಧರ್ಮೀಯ ವಿವಾಹಗಳನ್ನು ಪ್ರೋತ್ಸಾಹಿಸುವ ಬಗ್ಗೆ ಒಣತೌಡು ಕುಟ್ಟುತ್ತಾರೆ. ಆದರೆ ಅವರು ಅನುಷ್ಠಾನದಲ್ಲಿ ಇರುವುದೇ ಬೇರೆ.
ತಮ್ಮ ಕುಟುಂಬದಲ್ಲೇ ತನ್ನ ಮಗಳು ಇಲ್ಲವೇ ಮಗನು ಕೆಳಜಾತಿಯ ಹುಡುಗ ಹುಡುಗಿಯನ್ನು ಪ್ರೀತಿಸಿ ಮದುವೆಗೆ ಮುಂದಾದರೆ ಸಾಕು. ಆಗ ನಮ್ಮ ಸೋಕಾಲ್ಡ್ ಪ್ರಗತಿಪರರ ಅಸಲೀಯತ್ತು ಬಟಾಬಯಲು. ಆಗ ಇವರು ಕುಂಡಿಸುಟ್ಟ ಬೆಕ್ಕಿನಂತೆ ಒದ್ದಾಡುತ್ತಾರೆ. ಆದರೆ ಬೇರೆಯವರ ಮಕ್ಕಳನ್ನು ತಾವರಿಯದ ಬಾವಿಗೆ ತಳ್ಳಿ ಆಳ ನೋಡುವುದರಲ್ಲಿ ಮಾತ್ರ ನಿಸ್ಸೀಮರು.
ಹೀಗೆ ನಮ್ಮ ಬಹುಪಾಲು ಪ್ರಗತಿಪರರ ನಡೆ ನುಡಿಗಳು ಒಂದೇ ಆಗಿರುವುದಿಲ್ಲ. ಬರಹ ಮತ್ತು ಭಾಷಣದಲ್ಲಿ ಮಾತ್ರ ಭಯಂಕರ ಜಾತ್ಯತೀತರು. ಆದರೆ ನಿತ್ಯದ ಬದುಕಿನಲ್ಲಿರುವುದೇ ಬೇರೆ. ಇವರ ನಡೆಗು ನುಡಿಗೂ ಅಜಗಜಾಂತರ ಫರಕು. ನಡೆ ನುಡಿ ಒಂದಾಗದಿರ್ದೊಡೆ ಹಿಡಿದಿರ್ಪ ಲಿಂಗವು ಘಟಸರ್ಪವಾಗುವುದೆಂಬ ವಚನವನ್ನು ಉರಹೊಡಿಯುವ ಇವರ ನಾಲಗೆಗಳು ಎಕ್ಕಡವಾಗಿ ಬಿಟ್ಟಿವೆ. ಅಂಥವರಿಗೆ ವಚನಗಳು ಬೇರೆ ಕೇಡು.
–ಮಲ್ಲಿಕಾರ್ಜುನ ಕಡಕೋಳ
9341010712