ನಿಜವಾದ ಜನನಾಯಕ, ಮಾನವ ಪ್ರೇಮಿ ಅಮರೇಗೌಡ ಭಯ್ಯಾಪುರ
ಅಧಿಕಾರ ಶಾಶ್ವತ ಅಲ್ಲ. ಮನುಷ್ಯತ್ವ ದೊಡ್ಡದ್ದು. ಈ ಗುಣ ರಾಜಕೀಯ ನಾಯಕರಲ್ಲಿ ಕಾಣುವದು ಅಪರೂಪ. ಅಧಿಕಾರ ಇರಲಿ ಬಿಡಲಿ ಸದಾ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಕ್ಕೆ ದನಿಯಾಗುವ, ಕರುಣಾಮಯಿ ಅಮರೇಗೌಡ ಭಯ್ಯಾಪುರ ಅವರದು ಅಂತಃಕರಣದ ಮನಸ್ಸು.
೧೯೮೯ ರಿಂದ ಅವರ ಪರಿಚಯ. ಆಗ ನಾನು ಲಿಂಗಸುಗೂರು ವಿಸಿಬಿ ಕಾಲೇಜಿನ ವಿದ್ಯಾರ್ಥಿ. ಅದೇ ತಾನೆ ರಾಜ್ಯದಲ್ಲಿ ಪಂಚಾಯ್ತಿ ಆಡಳಿತ ಜಾರಿಗೊಂಡು ಮಂಡಲ ಪಂಚಾಯ್ತಿಗಳು ಅಸ್ಥಿತ್ವಕ್ಕೆ ಬಂದಿದ್ದವು. ಆಗ ನಾನು ಮತ್ತು ನನ್ನ ಗೆಳೆಯರಾದ ಮರೇಗೌಡ ಕಾರ್ಲಕುಂಟಿ, ಬಿ.ಎ.ನಂದಿಕೊಲಮಠ, ಸರ್ವೋತ್ತಮ ಉಪಾಧ್ಯಾಯ ಹಾಗೂ ಇತರರು ಸೇರಿ ಬಿ.ಎ. ಅಂತಿಮ ವರ್ಷದಲ್ಲಿ ಲಿಂಗಸುಗೂರು ತಾಲೂಕಿನ ಎಲ್ಲಾ ಮಂಡಲ ಪಂಚಾಯ್ತಿ ಪ್ರಧಾನರನ್ನು ಪ್ರತಿದಿನ ಕಾಲೇಜಿಗೆ ಕರೆಸಿಕೊಂಡು ಗ್ರಾಮೀಣಾಭಿವೃದ್ದಿ ಕುರಿತು ಮಾತಾಡಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
ಅಂದಿನ ಮಂಡಲ ಪಂಚಾಯತಿ ಅಧ್ಯಕ್ಷರಾಗಿದ್ದ ಅಮರೇಗೌಡ ಪಾಟೀಲ ಬಯ್ಯಾಪುರ ಇಂದು ಕೂಡ ಸಕ್ರಿಯ ರಾಜಕೀಯದಲ್ಲಿದ್ದು ಶಾಸಕರಾಗಿ ಮಂತ್ರಿಯಾಗಿ ನಡೆದ ದಾರಿಯೇ ರೋಚಕ ಕಥನ.
ಅವರ ೩೫ ವರ್ಷದ ರಾಜಕೀಯ ನಡೆಯನ್ನು ಅತೀ ಸೂಕ್ಷಮವಾಗಿ ಅವರ ಒಡನಾಟದಲ್ಲಿದ್ದ ನಾನು ಸಮಗ್ರವಾಗಿ ಲೇಖನವನ್ನು ಅವರ ಅಭಿನಂದನ ಗ್ರಂಥದಲ್ಲಿ ದಾಖಲಿಸಿದ್ದೇನೆ.
“ಪ್ರಜಾಪ್ರಭುತ್ವ “ ಒಂದು ಉತ್ತಮ ಸರಕಾರವನ್ನು ಮತಪೆಟ್ಟಿಗೆಯ ಮೂಲಕ ಸಮಾಜದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಯನ್ನು ತರಬಹುದು. ಅದು ರಕ್ತ ಹರಿಸದೆ ಎನ್ನುತ್ತಾರೆ. ಸಂವಿಧಾನ ಶಿಲ್ಪಿ ಡಾ.ಬಾಬ ಸಾಹೇಬ ಅಂಬೇಡ್ಕರ್.
ಪ್ರಜೆಗಳ ಸುಖದುಖಃ ಕೇಳಲು ಪ್ರಜಾಪ್ರತಿನಿಧಿಯಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ಬರ್ನಾಡ ಷಾ.
ದೇಶವನ್ನು ಕಟ್ಟುವದೆಂದರೆ ಭವ್ಯವಾದ ಸೌಧ, ಅಣೆಕಟ್ಟು, ಬೃಹತ್ ರಸ್ತೆಗಳಷ್ಟೆ ಅಲ್ಲ. ಜನರ ಮನಸ್ಸುನ್ನು ಕಟ್ಟುವುದಾಗಿದೆ. ಅದು ಹುಸಿ ಮನಸ್ಸಲ್ಲ. ಭಾವನಾತ್ಮಕವಾಗಿ ಕಟ್ಟಿ ಘಾಸಿಗೊಳಿಸುವದೂ ಅಲ್ಲ.
ಅಧಿಕಾರವೆಂಬುದು ಪ್ರಜಾಪ್ರಭುತ್ವ ದಲ್ಲಿ ಮಂತ್ರದಂಡವಿದ್ದಂತೆ. ಅಧಿಕಾರವೆಂಬ ಮಂತ್ರದಂಡದಿಂದ ಸಾರ್ವಜನಿಕ ಜೀವನದಲ್ಲಿ ಪರೋಪಕಾರ ಮಾಡಿ ಜನರ ಬದಕನ್ನು ಉನ್ನತಿಕರಿಸಬೇಕು. ಅಂತಹ ಹಾದಿಯಲ್ಲಿ ದೂರದೃಷ್ಟಿ ನಾಯಕ ಅಮರೇಗೌಡ ಪಾಟೀಲ ಬಯ್ಯಾಪುರ ಅಗ್ರಗಣ್ಯ ನಾಯಕ.
ರಾಜಕಾರಣ ಎಂಬ ಮಾಯಾಂಗನೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ. ಯಾರನ್ನು ಯಾವಾಗ ಎಲ್ಲಿ ಮುಳಗಿಸುತ್ತಿದಿಯೋ ? ಎಲ್ಲಿ ತೆಲಿಸುತ್ತಿದಿಯೋ ? ಹೇಳಲು ಬಾರದ ಒಂದು ವಿಸ್ಮಯ. ರಾಜಕೀಯದಲ್ಲಿದ್ದ ವ್ಯಕ್ತಿ ನೀತಿವಂತನಾಗಿ, ಪ್ರಮಾಣಿಕನಾಗಿ, ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಬಾಳುವದು ಇಂದಿನ ಕಾಲದಲ್ಲಿ ಕಷ್ಟ ಸಾಧ್ಯ. ಆದರೆ ಈ ಕಾಲದಲ್ಲೂ ಮನುಷ್ಯತ್ವದ ಗುಣಗಳನ್ನು ರಾಜಕೀಯ ಒಳಸುಳಿಗೆ ಬಲಿಕೊಡದೆ ಕಾಪಿಟ್ಟುಕೊಂಡು ಜನರ ಮದ್ಯೆ ಜನನಾಯಕರಾಗಿ ಎಲ್ಲಾ ಮೌಲ್ಯಗಳನ್ನು ತುಂಬಿಕೊಂಡಿದ್ದಾರೆ ಅಮರೇಗೌಡ ಪಾಟೀಲ ಬಯ್ಯಾಪುರ.
ಇವರದೇನು ಮೊದಲಿನಿಂದಲೂ ಶ್ರೀಮಂತ ಮನೆತನವಾಗಲಿ, ಅಧಿಕಾರದ ಹಮ್ಮಿಣಿಯಾಗಲಿ ಇವರ ಮನೆತನಕ್ಕೆ ಇರಲಿಲ್ಲ. ಲಿಂಗಸುಗೂರು ತಾಲೂಕಿನ ಬಯ್ಯಾಪುರ ಸಣ್ಣ ಹಳ್ಳಿ. ಆ ಊರಿನಲ್ಲಿ ಲಿಂಗನಗೌಡರದು ಸಾತ್ವಿಕ, ಆಧ್ಯಾತ್ಮಿಕ ಗುಣದ ಗೌಡರು. ಲಿಂಗನಗೌಡರಿಗೆ ಮಹಾಂತಮ್ಮ ಮಡದಿಯಾಗಿ ಮನೆತನಕ್ಕೆ ತಕ್ಕಂತೆ ಹಳ್ಳಿಯಲ್ಲಿದ್ದ ಬಡ ಬಗ್ಗರ ಬಗ್ಗೆ ಮಮಕಾರ ಹೊಂದಿ ಅವರಿಗೆ ಬಡವರ ಕಷ್ಟ ಕಾರ್ಪಣ್ಯಗಳಿಗೆ ಸಹಾಯ ಮಾಡುವ ಪರೊಪಕಾರಿಗಳು. ತಂದೆ ತಾಯಿಯ ಗುಣ ಅವರ ಸುಪುತ್ರ ಅಮರೇಗೌಡ ಪಾಟೀಲ ಬಯ್ಯಾಪುರ ಅವರಿಗೆ ರಕ್ತಗತವಾಗಿ ಹರಿದು ಬಂದಿದೆ.
ಅಮರೇಗೌಡ ಪಾಟೀಲ ಬಯ್ಯಾಪುರ ಅವರು ನ್ಯಾಯ ನಿಷ್ಟುರಿಗಳು. ತಮ್ಮಿಂದ ಮಾಡಬಹುದಾದ ಕೆಲಸಗಳನ್ನು ಯಾವ ಹಮ್ಮು ಬಿಮ್ಮು ಇಲ್ಲದೆ ಮಾಡುವವರು. ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಸುಳ್ಳು ಭರವಸೆಗಳನ್ನು ಕೊಡುವುದು ಇವರಿಗೆ ಅಲರ್ಜಿ. ಯಾವಗಲು ಅಭಿವೃದ್ಧಿ ಪರ ವಿಚಾರಗಳ ಆಲೋಚನೆ ಮತ್ತು ಕಾರ್ಯಗತ ಮಾಡಲು ಚಿಂತನ ಮಂಥನಗಳಿಗೆ ತುಡಿಯುವ ಮನಸ್ಸು ಇವರದು.
ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಜನತೆಯ ಋಣ ತೀರಿಸುವ ಕಾರ್ಯತತ್ಪರತೆ ಇವರ ಹೆಗ್ಗುರುತು. ಅದಕ್ಕೆಂತಲೇ ಇವರು ಯಾವುದೇ ಹಳ್ಳಿ ಪಟ್ಟಣಗಳಿಗೆ ಹೋಗಲಿ ಜನ ಇವರನ್ನು ಮುತ್ತಿಕೊಳ್ಳುವರು. ಹೂವಿಗೆ ದುಂಬಿ ಮುತ್ತಿಕೊಂಡಂತೆ.
ಬರಗಾಲದ ದವಡೆಗೆ ಸಿಕ್ಕು ಬಡತನದ ಬೇಗುದಿಯಲ್ಲಿದ್ದ ಲಿಂಗಸುಗೂರು ತಾಲೂಕು ನೀರಾವರಿ ಪ್ರದೇಶವಾಗುವಂತೆ ಮಾಡಿದ ಭಗಿರಥ ಅಮರೇಗೌಡ ಪಾಟೀಲ ಬಯ್ಯಾಪುರ.
ಅಂದಿನ ಮುಖ್ಯಮಂತ್ರಿ ದೇವೆಗೌಡ ಅವರಿಗೆ ಖಾಲಿ ಕೈಯಲ್ಲಿ ನನ್ನ ಕ್ಷೇತ್ರಕ್ಕೆ ಬರಬೇಡಿ. ನೀರಾವರಿ ಮಾಡಲು ಹಣ ಮಂಜೂರು ಮಾಡಿ ಕ್ಷೇತ್ರಕ್ಕೆ ಬನ್ನಿ ಎಂದು ಮುಖ್ಯಮಂತ್ರಿಗಳಿಗೆ ತಾಕೀತು ಮಾಡಿ ಆಡಳಿತ ಸರ್ಕಾರದ ವಿರುದ್ಧವೇ ಪ್ರತಿಭಟಿಸಿ ನೀರು ಬರುವಂತೆ ಮಾಡಿದ ಧೀಮಂತ ನಾಯಕ.
ದೇವೆಗೌಡರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡುವಲ್ಲಿ ಅಮರೇಗೌಡರ ಪರಿಶ್ರಮ ಅಗಾಧವಾದದು. ದೇವೆಗೌಡರ ಕೆಂಗೆಣ್ಣಿಗೆ ಗುರಿಯಾಗಿ ಮಂತ್ರಿ ಸ್ಥಾನದಿಂದ ವಂಚಿತರಾದರು ಎದೆಗುಂದದೆ ಶಾಸಕರಾಗಿ ಜನರ ಮದ್ಯೆ ಸದಾ ಇರುವ ಅಮರೇಗೌಡರದು ಅಧಿಕಾರದ ಹಂಬಲಕ್ಕಾಗಿ ಇರದೆ ಜನರ ಸೇವೆಗೆ ಎಂದು ಅರಿತುಕೊಂಡು ಜಾಗೃತರಾಗಿದ್ದಾರೆ. ಅಂಹಕಾರದ ಲವಲೇಶವೂ ಇಲ್ಲದ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಬೆಳವಣಿಗೆಗೆ ಅವರ ಅಣ್ಣ ದಿ.ಅಂದಾನಗೌಡ ಪಾಟೀಲ ಅವರ ಪರಿಶ್ರಮ ಅಷ್ಟಿಷ್ಟಲ್ಲ. ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಪತ್ನಿ ಶಶಿಕಲಾ ಅವರದು ಬೆನ್ನ ಹಿಂದಿನ ಬೆಳಕು. ಸಾಕ್ಷಾತ ಅನ್ನಪೂರ್ಣೇಶ್ವರಿ. ಮನೆಗೆ ಬಂದು ಹೋಗುವ ಬಂಧು ಬಾಂಧವರಿಂದ ಹಿಡಿದು. ಪತಿಯ ಗೆಳೆಯರು, ಸಾರ್ವಜನಿಕರು ಮನೆಗೆ ಬಂದವರನ್ನೆಲ್ಲ ಉಪಚರಿಸುವದು ಅವರ ದೊಡ್ಡಗುಣ.
ಅಮರೇಗೌಡರ ಆಡಳಿತದಲ್ಲಿ ನೂರಾರು ವರ್ಷ ಶಾಶ್ವತವಾದ ಕೆಲಸ ಮಾಡಿದ್ದಾರೆ. ಲಿಂಗಸುಗೂರು ತಾಲೂಕು ನೀರಾವರಿ ಪ್ರದೇಶ ಮಾಡಿದ್ದು, ಲಿಂಗಸುಗೂರು ಪಟ್ಟಣ ಸೇರಿ ಅನೇಕ ಹಳ್ಳಿ, ಹೊಬಳಿಗಳಲ್ಲಿ ಶಾಶ್ವತ ಕುಡಿಯುವ ನೀರು ಕಲ್ಪಿಸಿದ್ದಾರೆ. ಲಿಂಗಸುಗೂರಿನಲ್ಲಿ ಜಿ.ಟಿ.ಡಿ.ಸಿ ಕಾಲೇಜು, ಡಿಪ್ಲೋಮಾ ಕಾಲೇಜು, ಬಸವೇಶ್ವರ ವಿದ್ಯಾವರ್ಧಕ ಸಂಘ, ಅಮರೇಶ್ವರ ಬಾಲಕಿಯರ ಪ್ರೌಡ ಮತ್ತು ಪದವಿ ಪೂರ್ವ ಕಾಲೇಜು ಅಭಿವೃದ್ಧಿಗೆ ಅಮರೇಗೌಡರೇ ಕಾರಣ.
ಹಟ್ಟಿ, ಮುದಗಲ್, ಮಸ್ಕಿಯಲ್ಲಿ ಪದವಿ ಕಾಲೇಜು, ಬಸ್ ಡಿಪೋ, ಅವರ ಕೊಡುಗೆಗಳು.
ವಿಶೇಷವಾಗಿ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರ ಬಗ್ಗೆ ಅಪಾರ ಗೌರವ ಅಮರೇಗೌಡರಿಗೆ. ಅಭಿವೃದ್ಧಿಯ ಕನಸು ಶಾಲೆಗಳಲ್ಲಿ ಅರಳಲಿ. ವಿದ್ಯಾರ್ಥಿಗಳು ಭವಿಷ್ಯದ ಬದುಕಿನಲ್ಲಿ ಶ್ರೇಷ್ಠ ಪ್ರಜೆಗಳಾಗಲಿ ಎಂಬ ಕನಸು ಅವರದು. ಅದಕ್ಕಾಗಿ ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಖಾಸಗಿ ಶಾಲೆಗಳು ಬೆಳೆಯಬೇಕು. ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಶಾಲೆ ನಡೆಯುವಂತಾಗಲು ಹಗಲಿರುಳು ಸರ್ಕಾರದ ಜತೆ ಸಂಘರ್ಷದಲ್ಲಿರುತ್ತಾರೆ. ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿರುವ ಇವರಿಗೆ ಬೇಜಾವಬ್ದಾರಿ ಶಿಕ್ಷಕರನ್ನು ಕಂಡರೆ ರೌದ್ರಾವತಾರ ತಾಳಿಬಿಡುತ್ತಾರೆ. ಮುಖಮೊತಿ ನೋಡದೆ ಅವರನ್ನು ಬೆವರಿಳಿಸಿಬಿಡುತ್ತಾರೆ.
ಅಮರೇಗೌಡ ಪಾಟೀಲ ಬಯ್ಯಾಪುರ ಅವರಿಗೆ ನಮ್ಮ ಗೆಳೆಯರ ಬಳಗ ಎಂದರೆ ವಿಶೇಷ ಪ್ರೀತಿ ಮತ್ತು ಮಮಕಾರ. ಮಸ್ಕಿಯಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಅವರ ಪ್ರೇರಣೆ, ಮಾರ್ಗದರ್ಶನ ಇದ್ದೇ ಇರುತ್ತದೆ. ತಮ್ಮ ರಾಜಕೀಯ ಜಂಜಾಟದ ಮದ್ಯೆ ಗೆಳೆಯರೊಂದಿಗೆ ಬೆರೆಯುವದಕ್ಕಾಗಿ ಹಂಬಲಿಸುತ್ತಾರೆ. ಒತ್ತಡ ನಿವಾರಣೆಗಾಗಿ ನಮ್ಮೊಂದಿಗೆ ನಾವಿದ್ದಲ್ಲಿಗೆ ಬಂದು ಬೆರೆಯುತ್ತಾರೆ. ಇಲ್ಲ ತಾವಿರುವಲ್ಲಿ ನಮ್ಮನ್ನು ಕರೆಸಿಕೊಂಡು ಹಗುರಾಗುತ್ತಾರೆ. ಸದಾ ನಮ್ಮ ಸಮಾಜಮುಖಿ ಕಾರ್ಯದ ಹಿಂದೆ ಅಮರೇಗೌಡರ ಛಾಪು ಇದ್ದೇ ಇರುತ್ತದೆ.
ಅಣ್ಣನ ಕನಸು ನನಸು
ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಅಣ್ಣ ಅಂದಾನಗೌಡ್ರಿಗೆ ರಾಜಕೀಯದ ಹುಚ್ಚು. ಶಾಸಕರಾಗಬೇಕೆಂಬ ಹಂಬಲ. ಕಾರಣಾಂತರಗಳಿದ್ದ ನಾನು ಶಾಸಕನಾಗುವುದಿಲ್ಲ ಎಂಬುದನ್ನು ಅರಿತ ಅಂದಾನಗೌಡ್ರು ನಮ್ಮ ಮನೆತನ ರಾಜಕೀಯದ ಸೋಪಾನದಲ್ಲಿ ವಿಜೃಂಭಿಸಲಿ ಎಂದು ಸಹೋದರ ಅಮರೇಗೌಡ್ರನ್ನ ಶಾಸಕನಾಗಿ ಮಾಡಿ ಸಂತೋಷ ಪಟ್ಟವರು. ಅಮರೇಗೌಡರು ಅಣ್ಣನ ಆಸೆಯನ್ನು ಶಾಸಕರಾಗುವ ಮೂಲಕ ಪೂರೈಸಿದವರು. ಅಷ್ಟೇ ಅಲ್ಲ. ಮೊನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಣ್ಣನ ಮಗ ಶರಣಗೌಡ ಬಯ್ಯಾಪುರ ಅವರನ್ನು ಚುನಾವಣೆಗೆ ನಿಲ್ಲಿಸಿ ಕಾಂಗ್ರೆಸ್ ಪಕ್ಷದ ಘಾಟುನುಘಟಿ ನಾಯಕರನ್ನು ಒಗ್ಗೂಡಿಸಿಕೊಂಡು ಶರಣಗೌಡ ಗೆಲ್ಲುವಂತೆ ಮಾಡಿ ಅಣ್ಣನ ಋಣ ತೀರಿಸಿದ ಸಂತೃಪ್ತಿ ಅಮರೇಗೌಡರದಾಗಿದೆ.
ಧರ್ಮನಿಷ್ಠ : ಅಮರೇಗೌಡರು ಧರ್ಮನಿಷ್ಠರು. ಧರ್ಮ ಎಂದರೆ ಜಾತಿ ಅಲ್ಲ.ಮಾನವ ಪ್ರೇಮ ಎಂಬುದನ್ನು ಅಳವಡಿಸಿಕೊಂಡವರು. ತಾವು ಆಚರಿಸುತ್ತಿರುವ ಲಿಂಗಾಯತ ಧರ್ಮದ ಬಸವಣ್ಣನವರ ಆಶಯದಂತೆ ಕಾಯಕ, ದಾಸೋಹ ತತ್ವವನ್ನು ಮೈಗೂಡಿಸಿಕೊಂಡು ಸದಾ ಪಾಲಿಸುತ್ತಿದ್ದಾರೆ. ಇತರ ಧರ್ಮಿಯರನ್ನು ಸ್ವಧರ್ಮದವರಂತೆ ಕಾಣು ವಿಶಾಲ ಗುಣ ಅವರದು.
ಪ್ರಶ್ನಾತೀತರಲ್ಲ
ಅನೇಕ ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡು ಅನೇಕ ಪ್ರಗತಿಪರ ವಿಚಾರಗಳಿಂದ ಅಭಿವೃದ್ಧಿಯ ಹರಿಕಾರರಾದ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಪ್ರಶ್ನಾತೀತರಲ್ಲ. ಅವರು ರಾಜಕೀಯ ಚದುರಂಗದಾಟದಲ್ಲಿ ಒಳಸುಳಿಗಳ ಪಟ್ಟನ್ನು ಜಾಗೃತವಾಗಿ ಬಳಸುವ ಕಲೆ ಕರಗತವಾಗಿದೆ. ವಿರೋಧಿ ಗಳು ಎಂಥವರೇ ಆಗಲಿ ಚುನಾವಣೆ ಹಿನ್ನಲೇಗಾಗಿ ಸೆದೆ ಬಡಿಯಲು ಹಿಂಜರಿಯುವವರಲ್ಲ. ಟೀಕೆ ಟಿಪ್ಪಣಿ ಎನೇ ಬಂದರೂ ಸಹಜವಾಗಿ ಸ್ವಿಕರಿಸುವ ಗುಣ ಇವರಲ್ಲಿದೆ. ಚುನಾವಣೆ ಮುಗಿದ ನಂತರ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಸಣ್ಣತನ ಅವರಿಗಿಲ್ಲ. ಇದು ಅವರ ಹಿರಿಮೆ, ಗರಿಮೆ.
ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಬಗ್ಗೆ ಇಷ್ಟೆಲ್ಲಾ ಬರೆಯಲು ಕಾರಣ ಇಂದು ಅವರ ಜನ್ಮದಿನ. ಜನ್ಮದಿನದ ಶುಭಾಶಯಗಳು ಸರ್, ನೂರ್ಕಾಲ ಬಾಳಿ. 🙏🙏
–ವೀರೇಶ ಸೌದ್ರಿ ಮಸ್ಕಿ