ಪುಸ್ತಕ ಪರಿಚಯ
“ಹೃದಯ ಡಬ್ಬಿಯಲ್ಲಿ ಹಬ್ಬಿಕೊಳ್ಳುವ ಕತೆ ಡಬ್ಬಿ”
“ಕನ್ನಡತಿ”, ನಮ್ಮ ಮನೆಯ “ಪುಟ್ಟ ಗೌರಿ” ರಂಜನಿ ರಾಘವನ್, ಅಭಿನಯದ ಮೂಲಕ ಮನೆಯ ದೂರದರ್ಶನ ಡಬ್ಬಿಯಲ್ಲಿ ಎಷ್ಟು ಮನೆ ಮಾತಾಗಿದ್ದರೋ ; ಅದಕ್ಕೂ ಹೆಚ್ಚಾಗಿ ಸಾಹಿತ್ಯ ಲೋಕದಲ್ಲಿ “ಕತೆ ಡಬ್ಬಿ” ಕಥಾ ಸಂಕಲನದ ಮೂಲಕ ಮನದ ಮಾತುಗಳಲ್ಲಿ ಪಾತ್ರವಾಗಿದ್ದಾರೆ. ಒಂದೇ ದಿನಕ್ಕೆ ಎರಡನೇ ಮುದ್ರಣ ಪಡೆದ ಕೃತಿಯ ಬಗೆಗೆ ಸ್ವಯಂ ವಿಚಾರದಲ್ಲಿ ತೊಡಗಿದಾಗ, ಒಬ್ಬ ಖ್ಯಾತ ನಟಿಯ ಕೃತಿಯಾದ ಕಾರಣಕ್ಕೆ ಇರಬಹುದೆಂದು ಊಹಿಸಿದ್ದೆ. ಮತ್ತೆ ಮೂರು ತಿಂಗಳೊಳಗೆ ಕೃತಿ ಐದನೇ ಮುದ್ರಣ ಕಂಡದ್ದು ತಿಳಿದಾಗ ನನ್ನ ಊಹೆ ಅಕ್ಷರಶಃ ತಪ್ಪಾಗಿತ್ತು… ಈ ಅಂತರದ ಮಧ್ಯೆಯೇ ನಾನು ಈ ಕೃತಿಯನ್ನು ಓದಿದ ಕಾರಣ ವೇಗವಾಗಿ ಮರು ಮುದ್ರಣ ಪಡೆಯುತ್ತಿರುವುದರ ಬಗೆಗೆ ನನಗೆ ಆಶ್ಚರ್ಯ ಎನಿಸಲಿಲ್ಲ. ಕಾರಣ ನಿಮಗೂ ಅರ್ಥವಾಗಿರುತ್ತದೆ.
ಹೌದು ಇದಕ್ಕೆ ಕಾರಣ ಈ ಕೃತಿಯಲ್ಲಿಯ ೧೪ ವಿಭಿನ್ನ ಕಥೆಗಳು. ವೈಚಾರಿಕ ಪ್ರಜ್ಞೆ, ಹೆಣ್ಮನದ ಹೊಯ್ದಾಟ, ಸಂಸಾರದ ಭಾರ, ಸಾಮಾಜಿಕ ಕಾಳಜಿ, ಸ್ವಯಂ ಕೊಚ್ಚಿಕೊಳ್ಳುವವರ ಮನಸ್ಥಿತಿ, ಮುಪ್ಪಲ್ಲೂ ಪ್ರೇಮಾಭಿಮಾನದ ಜೊತೆಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವ, ದೈವೀ ಚಿಂತನೆ, ತಮ್ಮ ನಡೆಯ ಬಗೆಗೆ ಸ್ವ ಅವಲೋಕನ ಮಾಡಿಕೊಳ್ಳುವ ಪಾತ್ರಗಳನ್ನು ಮತ್ತು ಅವುಗಳಿಗೆ ತಕ್ಕ ಸನ್ನಿವೇಶಗಳ ಚಿತ್ರಣ ಅಧ್ಭುತವಾಗಿ ಕಥಾ ಸಂಕಲನದಲ್ಲಿ ನಾವು ಕಾಣುತ್ತೇವೆ. ಕಥೆ ಸಾಗುತ್ತಿರುವಂತೆಯೇ ಓದುಗ ನಿರೀಕ್ಷಿಸದ ತಿರುವುಗಳು ಕೂಡ ಕಥೆಗಳ ಗೆಲುವಿಗೆ ಪೂರಕವಾಗಿವೆ ಎಂಬ ಮಾತು ಕೂಡ ಸತ್ಯ.
ಅಂತಹ ೧೪ ಕಥೆಗಳ ಕುರಿತಾಗಿ ಒಂದಷ್ಟು ಅವಲೋಕನದ ಅನಿಸಿಕೆಗಳು ತಮ್ಮ ಮುಂದೆ ಸಾದರಪಡಿಸುತ್ತೇನೆ.
* “ಕ್ಯಾಬ್ we met“, ಕಥೆಯ ಉದ್ದಕ್ಕೂ ನಮ್ಮನ್ನು ಕ್ಯಾಬ್ ನಲ್ಲೇ ಉಳಿಸುವ ಕಥೆ. ದಾರಿಯಲ್ಲಿ ಕ್ಯಾಬ್ ಡ್ರೈವರ್ ಆಗಿ ಸಿಕ್ಕ ತಿಮ್ಮೇಶ್ ಕಥೆಯನ್ನು ಮತ್ತು ಕಥಾ ನಾಯಕಿಯನ್ನು ಸರಿಯಾದ ದಾರಿಗೆ ಸೆಳೆದೊಯ್ದು ಗುರಿ ಮುಟ್ಟಿಸುತ್ತಾನೆ. ಒಂದು ಬರ್ತ್ ಡೇ ವಿಶಸ್ನಿಂದ ಡ್ರೈವರ್ ನ ಜೊತೆ ಬೆಳೆದ ನಂಟು ವಾಟ್ಸಪ್ ಕಾಲ್ ಮಾಡಿ ಸಂತೋಷದ ವಂದನೆ ತಲುಪಿಸುವತ್ತ ಸಾಗಿದ ಪಯಣ ರೋಮಾಂಚಕಾರಿಯಾಗಿ ಮನಕ್ಕೆ ಮುಟ್ಟುತ್ತದೆ. ಪರರ ಹೃದಯದ ಮಿಡಿತಕ್ಕೆ ಸ್ಪಂದಿಸುವ ತಿಮ್ಮೇಶ್ ಮುಖ್ಯ ಪಾತ್ರವಾಗಿ ಕಾಣುತ್ತಾನೆ ಮತ್ತು ಓದುಗನ ಮನದಲ್ಲಿ ಉಳಿಯುತ್ತಾನೆ. ಅಂತೆಯೇ ಕಥಾ ನಾಯಕಿ ಸ್ಪಂದನಳ ನಡೆ, ಗುರಿ ಸ್ಪಷ್ಟವಾಗಿ ಮೂಡಿಬಂದಿದೆ, ಒಳ್ಳೆಯತನದ ಸಹಕಾರದೊಂದಿಗೆ.
* “ಅಪ್ಪನ ಮನೆ ಮಾರಟಕ್ಕಿದೆ” … ಸ್ವತಂತ್ರಗೊಂಡ, ನಗರ ಜೀವನಕ್ಕೆ ವಗ್ಗಿಕೊಂಡ, ಕಮರ್ಶಿಯಲ್ ಮೈಂಡ್ ಹೊಂದಿದ ಮನೋಜ್, ಅಪ್ಪನ ಮನೆಯ ಜೊತೆಗೆ ಅಪ್ಪನ ಮನಸನ್ನೇ ಮಾರಲು ಹಾತೊರೆದು ಗಿರಾಕಿಯೊಂದಿಗೆ ವ್ಯಾಪಾರವನ್ನೂ ಕುದುರಿಸಿದ್ದ. ಮನೋಜ್ ಅಲಿಯಾಸ್ ಮಲ್ಲಿ(ಹಳ್ಳಿಯಲ್ಲಿನ ಹೆಸರು) ತನ್ನ ತಂದೆಯ ಮನೆಯನ್ನು ಮಾರಾಟದ ಕೊನೆಯ ಹಂತಕ್ಕೆ ಹೋಗಿ ವ್ಯಾಪಾರ ಮುರಿದುಕೊಳ್ಳುತ್ತಾನೆ. ತಂದೆಗೆ ಅವರೊಂದಿಗೆ ಭಾವಾನಾತ್ಮಕ ನಂಟನ್ನು ಹೊಂದಿದ ಮನೆಯನ್ನು ಅವರಿಗಾಗಿ ಉಳಿಸಿಕೊಡುತ್ತಾನೆ. ರೂಬಿ(ಪೆಟ್ ಡಾಗ್)ಯ ಕೊನೆಯ ಪಂಜಿನ ಹಿಡಿತ ಮತ್ತು ರೂಬಿಗೆ ಹೋಲಿಸಿಕೊಂಡು ಆಡಿದ ನಂಜುಂಡಣ್ಣನ ಮಾತು ಮಲ್ಲಿಯ ಮನ ಬದಲಾಯಿಸಿತು ಅನ್ನೋದು ಖುಷಿ. ಮಕ್ಕಳಿಗೆ ವಿದ್ಯೆ, ಜನರ ಮೇಲಿನ ಭಾವನಾತ್ಮಕ ಸಂಬಂಧ ಬೆಳೆಸುವುದರ ಜೊತೆಗೆ ತಮ್ಮ ನಿರ್ಜೀವ ವಸ್ತುಗಳ ಮೇಲೆಯೂ ಒಂದು ಭಾವನಾತ್ಮಕ ನಂಟು ಅಂಟಿಸಬೇಕೆಂಬ ಹಿನ್ನೆಲೆಯ ಕಥೆ ಮನಕ್ಕೆ ನಾಟುವಂತೆ ಬರೆದದ್ದು ಲೇಖಕಿಯರ ಕಥಾ ರಚನಾ ಶಕ್ತಿಗೆ ಕನ್ನಡಿ.
* “ಚುಚ್ಚುಮದ್ದಿನ ಸೈಡ್ ಎಫೆಕ್ಟ್”, ಮಾನವ ತನ್ನ ಜೀವಮಾನದಲ್ಲಿ ಎಷ್ಟೆಲ್ಲಾ ಪಾಪ ಮಾಡುತ್ತಾನೆ. ಆ ಪಾಪ ಪ್ರಜ್ಞೆ ಕಾಡಲು ಶುರುವಾಯಿತೆಂದರೆ
ಹೇಗೆ ಅವನು ಅವನತಿ ಹೊಂದುತ್ತಾನೆ? ತಾ ಮಾಡಿದ ಪಾಪ ಹೇಗೆ ಜೀವ ಇರುವವರೆಗೆ, ಮನಸನ್ನು ಕೊರಗಿಸುತ್ತಲೇ ಇರುತ್ತದೆ? ಹೇಗೆ ಕಾಡುತ್ತಲೇ ಇರುತ್ತದೆ? ಎಂಬುದನ್ನು ಹಾಗೆ ಮಾಡಿದ ಪಾತ್ರ(ನರಹರಿ)ದ ಮೂಲಕ ಅವನ ಮಾನಸಿಕ ತಳಮಳ, ತೊಳಲಾಟವನ್ನು ಲೇಖಕಿ ಈ ಕಥೆಯಲ್ಲಿ ವ್ಯಕ್ತಪಡಿಸಿದ್ದಾರೆ.
ಒಂದು ಮರವನ್ನು ಕ್ರಮೇಣ ದಿನದಿನಕ್ಕೂ ಸಾವಿನತ್ತ ಸಾಗಿಸಲು ಚುಚ್ಚುಮದ್ದು ನೀಡಿ ಅದನ್ನು ಕೊಂದ ನರಹರಿಗೆ, ಕೊನೆಗೆ ತನ್ನ ಆರೋಗ್ಯ ವಿಷಮ ಸ್ಥಿತಿಗೆ ತಲುಪಿದಾಗ, ಮಗನೇ ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ; ಮಗನೂ ಕೂಡ ಜವರಾಯನಂತೆ ಗೋಚರಿಸುತ್ತಾನೆ. ಹೆತ್ತ ಮಗ ನನ್ನನ್ನು ಮುಗಿಸಲು ಸ್ಲೋ ಪಾಯ್ಸನ್ ತರಹ ಚುಚ್ಚುಮದ್ದು ನೀಡುತ್ತಿದ್ದಾನೇನೋ ಎಂದು ನರಹರಿಗೆ ಅನಿಸುತ್ತದೆ. ಆ ಮಟ್ಟಿಗೆ ಮಾಡಿದ ಕೆಟ್ಟ ಕೆಲಸ ನರಹರಿಗೆ(ಪಾತ್ರಕ್ಕೆ) ಬಿಟ್ಟು ಬಿಡದಂತೆ ಕಾಡುತ್ತದೆ. ಕೊನೆಗೆ ತನ್ನ ಆಸ್ತಿಯ ವಿಲ್ ಅನ್ನು ನರಹರಿಯಿಂದ ವನಶಕ್ತಿ ಸಂಸ್ಥೆಗೆ ಬರೆಸಿದ್ದು ಕಥೆಯ ಪ್ರಮುಖ ತಿರುವು ಗಮನಾರ್ಹವಾಗಿದೆ.
* “ವೀಕೆಂಡ್ ಸ್ವಯಂವರ” ಕಥೆಯಂತೂ ಬಹಳ ಕುತೂಹಲಭರಿತವಾಗಿದ್ದು ಓದುಗನನ್ನು ಸೆರೆಹಿಡಿವ ಕಥೆ. ಈಗಾಗಲೇ ಒಬ್ಬ ಬಡವನನ್ನು ಪ್ರೇಮಿಸಿದ ಕಥಾ ನಾಯಕಿಯನ್ನು ನೋಡಲು ಬಂದ ಶ್ರೀಮಂತನ ಮತ್ತು ಕಥಾ ನಾಯಕಿಯ ಮಧ್ಯೆ ನಡೆವ ಸಂಭಾಷಣೆಯುಳ್ಳ ಕಥೆ. ಶ್ರೀಮಂತ ಹುಡಗನನ್ನು ಕಂಡ ನಾಯಕಿಯ ಮನಸ್ಸಿನಲ್ಲಿ ಮೂಡುವ ಅನೇಕ ಭಾವನೆಗಳ ಚಿತ್ರಣ ಕಥೆಯಲ್ಲಿ ಓದುತ್ತೇವೆ. ಇಬ್ಬರಲ್ಲಿ ಯಾರು ಬದುಕಿಗೆ ಮುಖ್ಯ, ಬಡವನಾದರೂ ಮನದ ತುಂಬ ಪ್ರೀತಿ ತುಂಬಿಕೊಂಡ ಪ್ರೇಮಿಯೋ? ಅಥವಾ ಸ್ವಯಂವರಕ್ಕೆ ಬಂದ ಸಿರಿವಂತನೋ? ಎಂಬ ಹೆಣ್ಮನದ ಹೊಯ್ದಾಟ ಮತ್ತು ಅವಳ ಅಂತಿಮ ನಿರ್ಧಾರ ಓದುಗನಿಗೆ ಮೆಚ್ಚುಗೆಯಾಗುತ್ತದೆ.
ಒಬ್ಬ ಗೃಹಿಣಿಗೆ ಮನೆಯ ಕೆಲಸಗಳು ಎಷ್ಟು ಒತ್ತಡಕ್ಕೀಡುಮಾಡುತ್ತವೆ. ಯಾರ ಸಹಾಯನೂ ಇಲ್ಲದೆ ಪ್ರತಿನಿತ್ಯ ಹೊರಗೆ ನೌಕರಿ ಮಾಡುವುದಕ್ಕಿಂತಲೂ ಹೆಚ್ಚಿನ ಸಮಯ ದುಡಿಯುವುದು ಗೃಹಿಣಿಯ ನಿತ್ಯದ ಕಾಯಕವಾಗಿ, ಮನೆಯಲ್ಲಿ ಅವಳಿಗಾಗುವ ಬಳಲಿಕೆ, ಅದರಿಂದ ಆಗುವ ಮಾನಸಿಕೆ ಹಿಂಸೆಯನ್ನು ಬಿತ್ತರಿಸಿದ ಕಥೆ “ಉಪ್ಪಿಲ್ಲದ ಸತ್ಯಾಗ್ರಹ“. ಈ ಕಥೆಯಲ್ಲಿಯ ಗೃಹಿಣಿ ಪ್ರತಿಮಾ ಪಕ್ಕದ ಮನೆಯಾತ (ಶ್ರೀನಿವಾಸ) ತನ್ನ ಹೆಂಡತಿ ಕೈಗೆ ಕಾಫಿ ಕೊಡುವುದನ್ನು ನೋಡಿ ಗೊಣಗುವುದು, ಆ ಗೊಣಗಾಟವನ್ನೂ ಕೇಳಲೂ ಸಹ ತನ್ನ ಮನೆಯಲ್ಲಿ
ಕಿವಿಗಳಿಲ್ಲದಿರುವುದು, ಗಂಡ ಎಲ್ಲೂ ಹೊರಗೆ ಕರೆದುಕೊಂಡು ಹೋಗುವುದಿಲ್ಲ ಎನ್ನುವ ಕಂಪ್ಲೇಂಟ್, ಗಂಡ ಹೆಂಡಿರ ಮಧ್ಯದ ವಾದದ ನಡುವೆ ಎದುರು ಮನೆಯವರ ಸಂಸಾರವೇ ಸ್ವರ್ಗ ಅನ್ನಿಸುತ್ತದೆ. ಇನ್ನು ಟಿ.ವಿ ಧಾರಾವಾಹಿಯಲ್ಲಿನ ಗಂಡ, ತನ್ನ ಹೆಂಡತಿಯನ್ನು ಪ್ರೇಮಿಸುವ, ಆರೈಕೆ ಮಾಡುವ ಪರಿ ಕಂಡು ಮತ್ತಷ್ಟು ಮಾನಸಿಕವಾಗಿ ಕುಪಿತಗೊಂಡ ಪ್ರತಿಮಾ, ಜಗತ್ತಿನಲ್ಲಿ ನನ್ನ ಹೊರತಾಗಿ ಎಲ್ಲರೂ ಸಂತೋಷವಾಗಿದ್ದಾರೆ ಎಂದು ಖಿನ್ನಳಾಗಿಬಿಡುತ್ತಾಳೆ. ಗಂಡ ಹೆಂಡಿರ ನಡುವೆ ಕೋಲಾಹಲ ಎದ್ದುದಕ್ಕೆ ಪರಿಹಾರಾರ್ಥವಾಗಿ ಮನೋವೈದ್ಯರನ್ನು ಕಂಡಾಗ ಎದುರು ಮನೆಯವರ ನಿಜವಾದ ಪರಿಸ್ಥಿತಿ ವೈದ್ಯರಿಂದ ತಿಳಿದು; ಅವರ ಕಷ್ಟದ ನಡುವೆ ನಮ್ಮದೇನೂ ಅಲ್ಲ ಎನ್ನುವಂತಹ ಸಂದರ್ಭವನ್ನು ಲೇಖಕಿಯವರು, “ಉಪ್ಪಿಲ್ಲದ ಸತ್ಯಾಗ್ರಹ” ಕಥೆಯಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ. ಮತ್ತು ನಮ್ಮ ಜೀವನವನ್ನು ಪರರ ಬದುಕಿಗೆ ಹೋಲಿಸಿಕೊಂಡಾಗ ಆಗುವ ಸಾಂಸಾರಿಕ ಅನಾಹುತಗಳನ್ನು ಪರಿಣಾಮಕಾರಿಯಾಗಿ ಅರ್ಥೈಸಿದ್ದಾರೆ.
* ಬರೀ ಮಾತಿನಲ್ಲೇ ಮನೆ ಕಟ್ಟಿ, ಆಶಾ ಗೋಪುರ ನಿರ್ಮಿಸುವ ಬೊಗಳೆ ದಾಸನ ಕಥೆ ” ಮಾತುಗಾರರಿದ್ದಾರೆ ಎಚ್ಚರಿಕೆ”. ಪರದೇಶಕ್ಕೆ ಹೋಗಿ ದುಡ್ಡಿಗಿಂತ ಹೆಚ್ಚು ಕೊಚ್ಚಿಕೊಳ್ಳೋದನ್ನು ಕಲಿತ, ಬಲಗೈಯಿಂದ ಮಾಡಿದ ಸಹಾಯ ಎಡಗೈಗೆ ಗೊತ್ತಾಗದಂತೆ ಬದುಕುತ್ತಿದ್ದ ಮಹಾನ್ ತಾಯಿ ಅರವಿಂದಮ್ಮನ ಮಗ(ವಾಚಾಳಿ)ನ ಕಥೆ. ಚೆನ್ನಾಗಿದೆ, ನಗುವಿನ ಜೊತೆ ಇಂತಹ ಮಾತುಗಾರರಿಂದ ದೂರ ಇರಬೇಕೆಂದು ತಿಳಿಸುವ ಕಥೆ.
“ಕಾಣೆಯಾದವರ ಬಗ್ಗೆ ಪ್ರಕಟಣೆ”, ಮಂಗನಿಂದ ಓದುಗನಿಗೆ ಕಲಿಸಿದ ಪಾಠ ಎನ್ನಬಹುದು. ಜಾತಿ, ಧರ್ಮ, ಬೇಧ, ಭಾವ ತುಂಬಿದ ಲೋಕದ ದರ್ಶನವನ್ನು, ತನ್ನ ಮರಿಯನ್ನು ಕಳೆದುಕೊಂಡ ಕೋತಿ, ಮರಿಯ ಪತ್ತೆಗಾಗಿ ಅರಣ್ಯದಿಂದ ನಾಡಿಗೆ ಬಂದು ಅನುಭವಿಸಿದ, ಕಂಡ ಅಷ್ಟೂ ಖೇದಕರ ಸನ್ನಿವೇಶಗಳನ್ನು ಬಿಂಬಿಸುವ ಕಥೆ. ಕಡೆಯಲ್ಲಿ ಮರಿಕೋತಿ ಸಿಕ್ಕರೂ ಅದು ತಾಯಿಯೊಡನೆ ಹೋಗದೆ, ತನ್ನನ್ನು ಎಗರಿಸಿ, ಕುಣಿಸಿ ಹಣ ಸಂಪಾದಿಸಿ ಹೊಟ್ಟೆ ತುಂಬಿಕೊಳ್ಳುತ್ತಿದ್ದ ಮಾಲಿಕನ ಬಳಿಯೇ ತೆರಳುವ ಸನ್ನಿವೇಶ ಮತ್ತು ಇದನ್ನು ತನ್ನ ತಾಯಿಗೆ ಮನವರಿಕೆ ಮಾಡುವ ಸನ್ನಿವೇಶ ಕಣ್ಣಂಚಲಿ ನೀರು ತರಿಸುತ್ತದೆ. ಮತ್ತೆ ಮತ್ತೆ ಓದಬೇಕೆನಿಸುವ ಕಥೆ.
ಅಂಧರ ಬದುಕಿನ ನೈಜ ಸ್ಥಿತಿಗತಿಯನ್ನು ಅಚ್ಚುಗೊಳಿಸಿರುವ ಕಥೆ, “ಕಾಣದ ಕಡಲಿಗೆ”. ಕಣ್ಣರಿಯದಿದ್ದರೂ ಮನಸು ಎಲ್ಲವನ್ನೂ ಅರಿಯುತ್ತದೆ. ಅಂತರಂಗದ ಕಣ್ಣಿಂದ ಎಲ್ಲವನ್ನೂ ಅಳೆಯುವ ಚಾಣಾಕ್ಷೆ ಕಥಾ ನಾಯಕಿ(ಶ್ರೀದೇವಿ)ಗೆ, ಕಣ್ಣಿದ್ದೂ ನಟಿಸುವ ಮನುಷ್ಯರ ನಡೆ, ಗುಣವನ್ನು ಅರಿಯಲು ಸಾಧ್ಯವಾದೀತೆ? ಸಾಧ್ಯವಾಗದ ಸಂದರ್ಭಗಳು ಸಾಕ್ಷಿಯಾಗಿ ಕಥೆಯಲ್ಲಿ ಸಿಗುತ್ತವೆ ಎಂದು ಒಮ್ಮೆ ಅನ್ನಿಸಿದರೆ ಮತ್ತೊಮ್ಮೆ ಎಲ್ಲರ ಮನಸನ್ನು ಅರಿತೂ ನಿರುತ್ತರಳಾಗಿ, ಸ್ಪಂದನೆ ನೀಡದೆ ಕಥಾ ನಾಯಕಿ ಉಳಿಯುತ್ತಾಳೆಯೇನೋ ಅನಿಸಿಬಿಡುತ್ತದೆ. ಇದಕ್ಕೆ ಕಾರಣ ಅವಳ ಜೀವನದಲ್ಲಿ ನಡೆದ ಕಹಿ ಘಟನೆ. ತಂದೆಯ ಒಂದು ಸ್ವಾಭಿಮಾನದ ನುಡಿಯಿಂದ ಮದುವೆ ಮುರಿದುಬಿದ್ದದ್ದು. ಅದಕ್ಕೆ ಪಶ್ಚಾತ್ತಪವೇನೂ ಇಲ್ಲ ಎಂಬುದು ಶ್ರೀದೇವಿಯ ನಿಲುವು. ಆದರೆ, ಶ್ರೀದೇವಿಯ ತಂದೆ ಮಗಳ ಕುರಿತಾದ ತಮ್ಮ ಸ್ವಾಭಿಮಾನವನ್ನು ಒಂದು ಕ್ಷಣ ಹತೋಟಿಯಲ್ಲಿಟ್ಟುಕೊಂಡಿದ್ದರೂ ಮಗಳ ಬದುಕು ಬಂಗಾರವಾಗುತ್ತಿತ್ತೇನೋ ಎಂದು ಓದುಗನಿಗೆ ಅನ್ನಿಸದೇ ಇರದು. ಕೆಲವೊಮ್ಮೆ ಕೆಲವರ ಮಾತುಗಳು ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟರೂ, ನಾವು ಸಹಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವುದಾದರೆ ಸಹಿಸಿಕೊಂಡು ಸುಮ್ಮನಿರಬೇಕು ಎಂಬುದು ನನ್ನ ನಿಲುವು. ಆ ನಿಟ್ಟಿನಲ್ಲಿ ಶ್ರೀದೇವಿಯ ತಂದೆ ಎಡವಿದರು ಅನಿಸುತ್ತದೆ. ಮುಂದೆ ಈ ಎಲ್ಲ ವಿಷಯವನ್ನು ಅವಳ ಡೈರಿಯಿಂದ ಓದಿ ತಿಳಿದ ಆಪ್ತ ಗೆಳತಿ ಕುಮುದಳಿಗೂ ದೊಡ್ಡ ಆಘಾತವಾಗುತ್ತದೆ. ಆ ಕಾರಣಕ್ಕೆ ಕುಮುದಾ ತನ್ನ ಕೆಲಸವನ್ನೂ, ಶ್ರೀದೇವಿಯ ಸ್ನೇಹವನ್ನೂ ಬಿಡುತ್ತಾಳೆ ಎಂಬುದೇ ಕಥೆಯ ಗುಟ್ಟು… ತುಂಬಾ ಚೆನ್ನಾಗಿದೆ. ಇಲ್ಲಿ ಶ್ರೀದೇವಿಯ ಜೀವನ ದರ್ಶನ ಓದುಗನ ಮನದ ಕುರುಡನ್ನು ಕಳೆಯುತ್ತದೆ. ಮನಸ್ಥಿತಿಯನ್ನು ಬೆಳಗಿಸುತ್ತದೆ.
* “ಪ್ರಸೂತಿ ವೈರಾಗ್ಯ” ಎಂಬ ನಾಣ್ಣುಡಿಯನ್ನು ಬಹುತೇಕರು ಕೇಳಿರುತ್ತೀರಿ. ಇದರ ಅಂತರಾರ್ಥವನ್ನೇ ಸೂಚಿಸುವ ಕಥಾವಸ್ತುವನ್ನು ಲೇಖಕಿಯವರು “ವೈರಾಗ್ಯದ ವ್ಯಾಲಿಡಿಟಿ” ಎಂಬ ಶೀರ್ಷಿಕೆಯಡಿ ಕಟ್ಟಿಕೊಟ್ಟಿದ್ದಾರೆ. ನೇರವಾಗಿ ಹೇಳದೆ ಅದಕ್ಕೊಂದು ರೂಪ, ಸನ್ನಿವೇಶ ಸೃಷ್ಟಿಸಿ ವೈರಾಗ್ಯ ಭಾವದಿಂದಿರುವುದು ಅಥವಾ ಆ ಭಾವವನ್ನು ನಾವುಗಳು ಎಷ್ಟು ಸಮಯ ಕಾದಿಟ್ಟುಕೊಳ್ಳಲು ಸಾಧ್ಯ ಎಂಬುದನ್ನು “ವೈರಾಗ್ಯದ ವ್ಯಾಲಿಡಿಟಿ” ಕಥೆಯಲ್ಲಿ ಸೊಗಸಾಗಿ ತೋರಿಸಿದ್ದಾರೆ. ಪ್ರವಚನ ಕೇಳುವಾಗ ಇರುವ ವೈರಾಗ್ಯ ಭಾವ ಅಲ್ಲಿಂದ ಎದ್ದ ಮೇಲೆ ಇರದೆ ಊಟಕ್ಕೆ ಕಚ್ಚಾಡುತ್ತಾ ಕೂರುತ್ತೇವೆ. ಯಾರಾದರೂ ಸತ್ತಾಗ ಅವರ ಅಂತಿಮ ಯಾತ್ರೆ ಮುಗಿಯುವವರೆಗಿನ ನಮ್ಮ ಮಾತುಗಳಲ್ಲಿನ ವೈರಾಗ್ಯ ಭಾವ, ನಮ್ಮ ತಲೆ ಮೇಲೆ ನೀರು ಬಿದ್ದಾಗ ನೀರಿನೊಂದಿಗೆ ಹೋಗಿಬಿಡುತ್ತದೆ. ಅಂತಹದ್ದೇ ಕಥೆ ಓದುಗನಿಗೆ ಮೆಚ್ಚಾಗುತ್ತದೆ.
ತಮ್ಮ ಟಿ ಆರ್ ಪಿ ಗಾಗಿ ಅಟ್ಟಕ್ಕೇರಿಸಿ ಕೈ ಚೆಲ್ಲುವ, ಮಾಧ್ಯಮಗಳ ಬಗ್ಗೆ ನಾವೆಲ್ಲಾ ನೋಡಿದ್ದೇವೆ. ಅಂತಹ ಉದಾಹರಣೆಗಳಿಗೇನು ಕಮ್ಮಿ ಇಲ್ಲ. ಅಂತಹದ್ದೇ ಉದಾಹರಣೆಯನ್ನು ವಿಭಿನ್ನ ವಸ್ತುವನ್ನಾಯ್ದುಕೊಂಡು ನಿರೂಪಿಸಿದ ಕಥೆ “English ಕೃಷ್ಣ”. ಬಾಲ್ಯದಲ್ಲೇ ಬೆನ್ ಎನ್ನುವ ಕೆಂಪು ಮುಖದ ಅಮೇರಿಕನ್ ಅಕ್ಸೆಂಟ್ನಲ್ಲಿ ಮಾತಾಡುವ ವ್ಯಕ್ತಿಯ ಸಾಂಗತ್ಯದಿಂದ ಇಂಗ್ಲೀಷ್ ಮಾತಾಡುವುದನ್ನು ಕಲಿತ ಮಲ್ಲೇಶ್ ನ ಬುದ್ಧಿವಂತಿಕೆಯನ್ನು ಕಂಡ, ಅವನ ತಾಯಿ ರಾಣಿ; ಅವನನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗೆ ಸೇರಿಸುವ ಕನಸಿನಿಂದ ಪ್ರಾರಂಭವಾಗುವ ಕಥೆ, ಬಡತನದ ಕಾರಣಕ್ಕೆ, ಒಣ ಪ್ರಚಾರ ಗಿಟ್ಟಿಸಿಕೊಂಡು ಕೈ ಬಿಟ್ಟ ಸಮಾಜ(ಮಾಧ್ಯಮ)ದ ಕಾರಣಕ್ಕೆ, English ಕೃಷ್ಣನನ್ನಾಗಿ ಮಾಡಿದ ಬೆನ್ ಕೂಡ ಅಸಹಾಯಕನಾದ ಕಾರಣಕ್ಕೆ, ಕೊನೆಯಲ್ಲಿ ಮಲ್ಲೇಶ್ ಕನ್ನಡ ಶಾಲೆಗೆ ದಾಖಲಾಗಿ ತನ್ನ ಪರಿಚಯವನ್ನು English ನಲ್ಲಿ ಹೇಳಿ ಎಲ್ಲ ಮಕ್ಕಳು ಹುಬ್ಬೇರಿಸುವಂತೆ ಮಾಡುತ್ತಾನೆ ಎಂಬಲ್ಲಿ ಕಥೆ ಅಂತ್ಯವಾಗುತ್ತದೆ. ಬಡವರು ಎಂದಿಗೂ ತಮ್ಮ ಮಕ್ಕಳನ್ನು ದೊಡ್ಡ ಶಾಲೆಗೆ ಸೇರಿಸಲು ಸಾಧ್ಯವಿಲ್ಲ ಎಂಬ ಖೇದಕರ ವಿಷಯ ಇಲ್ಲಿ ಬಹುಮುಖ್ಯವಾಗಿ ಕಾಣುತ್ತದೆ.
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಗಳೂ ತಮ್ಮ ಉದರದ ಹಸಿವನ್ನು ಇಂಗಿಸಿಕೊಳ್ಳಲು ಶ್ರಮಿಸುತ್ತವೆ. ಎಲ್ಲ ಜೀವಿಗಳೂ ಹೋರಾಟದಿಂದಲೇ ತಮ್ಮ ಆಹಾರ ಪಡೆದುಕೊಂಡರೆ ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ತನ್ನ ಹಸಿವನ್ನು ಇಂಗಿಸಿಕೊಳ್ಳುತ್ತಾನೆ. ಆದರೆ ಪ್ರಾಣಿ, ಪಕ್ಷಿಗಳಾದಿಯಾಗಿ ಎಲ್ಲವೂ ತಮ್ಮ ಹೊಟ್ಟೆ ಹಸಿವಿಗೆ ತವಕಿಸಿದರೆ, ಮಾನವ ಇದರ ಹೊರತಾಗಿ; ಹಣ, ಅಧಿಕಾರ ಮುಂತಾದ ಹಸಿವನ್ನು ಹುಟ್ಟಿಸಿಕೊಂಡು ತೃಪ್ತಿ ಇಲ್ಲದ ಬದುಕಿಗೆ ಜೋತು ಬಿದ್ದಿದ್ದಾನೆ ಎಂಬುದನ್ನು ಲೇಖಕಿಯವರು “Hungry Man” ಕಥೆಯಲ್ಲಿ ವಿಶಿಷ್ಟವಾಗಿ ತೋರ್ಪಡಿಸಿದ್ದಾರೆ. ದೇವರೂ ಕೂಡ ಮಾನವನ ಈ ಹಸಿವುಗಳನ್ನು ಇಂಗಿಸಲು ನನಗೆ ಸಾಧ್ಯವಿಲ್ಲ, ಇದಕ್ಕೆ ಪರಿಹಾರವೂ ಮನುಷ್ಯನೇ ಕಂಡುಕೊಳ್ಳಬೇಕೆಂದುಬಿಡುತ್ತಾನೆ. ಬಹಳ ಉತ್ತಮವಾದ ಕಥೆ ಸಂಯೋಜನೆ.
“ನಂಜನಗೂಡು to ನ್ಯೂಜರ್ಸಿ” ಕಥಾ ಸಂಕಲನದಲ್ಲಿ ನನಗೆ ಬಹಳ ಮೆಚ್ಚುಗೆಯಾದ ಕಥೆ. ವಯೋವೃದ್ಧ ಅಜ್ಜಿ, ತನ್ನ ಮಗನ ಸಾಲ ತೀರಿಸುವುದಕ್ಕೆ ಒಬ್ಬಂಟಿಯಾಗಿ ಪರದೇಶ(ನ್ಯೂಜರ್ಸಿ)ಕ್ಕೆ ಹೋಗಿ, ಬಾಣಂತನದ ಕಾರ್ಯ ಮಾಡಿ ಹಣ ಸಂಪಾದಿಸಿ ಮಗನ ಸಾಲ ತೀರಿಸಿ, ತನ್ನ ಗಂಡನ ಸಮಾಧಿಯುಳ್ಳ ಜಮೀನನ್ನು ಉಳಿಸಿಕೊಳ್ಳುತ್ತಾಳೆ. ಗಂಡನ ಮೇಲಿನ ಅದಮ್ಯ ಪ್ರೇಮ ಅವಳಿಂದ ಇಂತಹ ದಿಟ್ಟತನದ ಕಾರ್ಯ ಮಾಡಿಸುತ್ತದೆ. ಒಂಟಿಯಾಗಿ ಆ ಇಳಿ ವಯಸ್ಸಲ್ಲಿ ಪರದೇಶಕ್ಕೆ ಹೋಗಿ, ಅಲ್ಲಿ ಇರುವವರಿಗೆಲ್ಲಾ ಮೆಚ್ಚಿನ ಕನಕಮ್ಮಳಾಗುತ್ತಾಳೆ. ಅಲ್ಲಿ ಹೇಗೆ ಅಲ್ಲಿ ಎಲ್ಲರಿಗೂ ಆಪ್ತಳಾಗುತ್ತಾಳೆ ಎಂಬುದನ್ನು ಅನೇಕ ಸನ್ನಿವೇಶಗಳನ್ನು ಸೃಷ್ಟಿಸುವ ಮೂಲಕ ಕಥೆಯನ್ನು ಆಪ್ತವಾಗಿಸುವ ಲೇಖಕಿಯರ ಕಥೆ ಕಟ್ಟುವ ಶೈಲಿ ಓದುಗನಿಗೆ ಇಷ್ಟವಾಗುತ್ತದೆ.
ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡ ಅದೆಷ್ಟೋ ರೈತರು, ಪರಿಸರ ಆಡುವ ಜೂಜಾಟಕ್ಕೆ ಬಲಿಯಾಗಿ ಬೆಳೆ ಕೈಗೆ ಹತ್ತದೇ ಬೀದಿಗೆ ಬೀಳುತ್ತಾರೆ. ಅತಿವೃಷ್ಟಿಗೋ ಅನಾವೃಷ್ಟಿಗೋ… ರೈತರ ವರ್ಷದ ಶ್ರಮ ವ್ಯರ್ಥವಾಗಿ ಪಡೆದ ಸಾಲ ತೀರಿಸಲಾಗದೆ, ಆತ್ಮಹತ್ಯೆಗೂ ಶರಣಾಗುವ ರೈತರ ಕುರಿತಾಗಿ ಪ್ರತೀ ವರ್ಷ ಕೇಳುತ್ತಲೇ ಇರುತ್ತೇವೆ. ಆದರೆ, ಇಂತಹ ರೈತನ ಸಾವಿಗೆ ಕಾರಣ “ಯಾರು?”, ಸಾಲ ಕೊಟ್ಟ ಬ್ಯಾಂಕ್ ಮ್ಯಾನೇಜರೇ ಕಾರಣ ಎಂದು, ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ರೈತನ ಮಗನ ಏಕಮುಖ ನಿರ್ಧಾರದ ಕಥೆ “ಯಾರು?”. ತಂದೆಯ ಸಾವಿನ ಸೇಡು ತೀರಿಸಿಕೊಳ್ಳಲು ಮಗ ಏನು ಮಾಡುತ್ತಾನೆ? ಎಂಬುದು ಕಥೆಯ ತಿರುಳು, ಹಾಗೇ ಸರಾಗವಾಗಿ ಓದಿಸಿಕೊಳ್ಳುವ ಕಥೆ. ಸೊಗಸಾಗಿದೆ. ವರ್ತಮಾನದ ರೈತನ ಬದುಕಿನ ಕನ್ನಡಿಯಾಗಿದೆ.
ದೇವರು ಎಲ್ಲಿದ್ದಾನೆ? ಎಂದು ಕೇಳಿದರೆ, ಗುಡಿಯಲ್ಲಿ , ಮನೆಯ ದೇವರ ಕೋಣೆಯಲ್ಲಿ, ಫೋಟೋ ಫ್ರೇಮಿನಲ್ಲಿ ಎಂಬುದು ಸಾಮಾನ್ಯ ಜನರ ಸರ್ವೇ ಸಾಮಾನ್ಯ ಉತ್ತರ. ಅಂತೆಯೇ ರಿನೋವೇಶನ್ಗೊಂಡ ಅಂಗಡಿಯಲ್ಲಿದ್ದ ಹಳೆಯ ಮಹಾಲಕ್ಷ್ಮಿ ಫೋಟೋವನ್ನು ಮಗ(ಶ್ರೀನಿವಾಸ್ ಆಚಾರಿ) ಗುಡಿಗೆ ವರ್ಗಾಯಿಸಿದ್ದು, ತನ್ನ ಸಂಪತ್ ಲಕ್ಷ್ಮಿಯೇ ಕಳೆದು ಹೋದಳು ಎಂಬ ತಂದೆ(ಗೋಪಾಲಾಚಾರಿ)ಯ ತಳಮಳ ಕೊನೆಗೆ ಪತ್ರಿಕೆಯಲ್ಲೂ “ದೇವರು ಕಾಣೆಯಾಗಿದ್ದಾರೆ”, ಹುಡುಕಿಕೊಡಿ ಎಂದು ಹಾಕಿಸುವ ಮಟ್ಟಕ್ಕೆ ತಲುಪುತ್ತದೆ. ತಂದೆಯ ಪೂರ್ವಾಗ್ರಹ ಪೀಡಿತ ಮನಸನ್ನು ಬದಲಾಯಿಸಲು ಮನೆಯವರೆಲ್ಲರೂ ಶ್ರಮಿಸಿದರೂ ಸಾಧ್ಯವಾಗದೆ, ಅವರೆಲ್ಲರೂ ಚಿಂತಾಕ್ರಾಂತರಾಗುತ್ತಾರೆ. ಸಿಟ್ಟಿಗೆದ್ದ ಮಗ ನಿಮ್ಮದು ಭಕ್ತಿಯೋ? ಭಯವೋ? ಅವಲಂಬನೆಯೋ? ದೇವರು ಸರ್ವಾಂತರ್ಯಾಮಿ, ಕೇವಲ ಫೋಟೋ ಫ್ರೇಮಿನಲ್ಲಿ ಏಕೆ ದೇವರನ್ನು ಬಂಧಿಸುತ್ತೀರಿ? ಎಂಬ ಮುಂತಾದ ಪ್ರಶ್ನೆಗಳ ಸುರಿಮಳೆ, ತಂದೆಯನ್ನು ಚಿಂತನೆಗೆ ಹಚ್ಚುತ್ತವೆ. ಪೂರಕವಾಗಿ ದೇವಸ್ಥಾನದ ಪ್ರವಚನದಲ್ಲೂ ಭಕ್ತಿಯ ನವವಿಧಾನಗಳನ್ನು ಕೇಳಿ, ಸ್ವಾವಲೋಕನ ಮಾಡಿಕೊಳ್ಳುತ್ತಾರೆ ಗೋಪಾಲಾಚಾರಿ. ಕೊನೆಗೆ ಪ್ರವಚನಕಾರರನ್ನೇ, ದೇವರನ್ನು ಕಾಣೋದು ಹೇಗೆ? ಎಂದು ಪ್ರಶ್ನಿಸಿದಾಗ, ಅವರಿಂದ ಬಂದ ಉತ್ತರವೇ ಇಡೀ ಕಥೆಯ ಅಂತಃಶಕ್ತಿಯಾಗಿದೆ. ಹೌದು ದೇವರನ್ನು ನಾವು ಅಲ್ಲಿ ಇಲ್ಲಿ ಹುಡುಕದೆ, ಅಂತರಂಗದಲ್ಲಿ ಹುಡುಕಬೇಕೆಂಬುದೇ ಸತ್ಯ ಎಂಬ ಅರಿವು ನಮಗಾಗುವಂತೆ ಲೇಖಕಿಯವರು ಅಮೋಘವಾಗಿ ಕಥೆಯನ್ನು ರಚಿಸಿದ್ದಾರೆ.
ಒಟ್ಟು ೧೪ ಕಥೆಗಳನ್ನೊಳಗೊಂಡ ಈ “ಕತೆ ಡಬ್ಬಿ” ೧೪ ವಿಭಿನ್ನ ವ್ಯಕ್ತಿಗಳ, ವಿಭಿನ್ನ ಸನ್ನಿವೇಶಗಳನ್ನು ನಮಗೆ ಪರಿಚಯಿಸುತ್ತದೆ. ಕಥೆ ಹೇಳುತ್ತ ಸಾಗುವ ನಿರೂಪಕಿಯವರು ಚೊಕ್ಕವಾಗಿ ಅಂತ್ಯಕ್ಕೆ ಬಂದುಬಿಡುತ್ತಾರೆ. ಚಿಕ್ಕದರಲ್ಲೇ ಮುಗಿಸುವ ಅನಿವಾರ್ಯತೆ ಇಲ್ಲದಿದ್ದರೆ ಈ ಕಥೆಗಳು ಕಾದಂಬರಿ ರೂಪವನ್ನೂ ತಾಳುವಂತಹವುಗಳಾಗಿವೆ. ಒಟ್ಟಿನಲ್ಲಿ ತಮ್ಮ ಅನುಭವದಿಂದಲೋ, ಆಲೋಚನೆಯಿಂದಲೋ ಕಥೆಗಾರ್ತಿ “ರಂಜನಿ ರಾಘವನ್” ಅವರು ಉತ್ತಮ ಕಥೆಗಳನ್ನು ನೀಡಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರಿಂದ ಮತ್ತಷ್ಟು ಉತ್ಕೃಷ್ಟ ಕಥೆಗಳು ಓದುಗನನ್ನು ತಲುಪಲಿ, ಮಾಗಿದ ಸಾಹಿತ್ಯ ಅವರಿಂದ ಉದ್ಭವವಾಗಲಿ ಎಂಬ ಆಶಯದೊಂದಿಗೆ ಕೃತಿ ಅವಲೋಕನೆಗೆ ವಿರಾಮ ನೀಡುತ್ತೇನೆ.
— ವರದೇಂದ್ರ ಕೆ ಮಸ್ಕಿ
9945253030
ಪುಸ್ತಕಕ್ಕಾಗಿ ಸಂಪರ್ಕಿಸಿ
——– ಬಹುರೂಪಿ
7019182729