ಮಸ್ಕಿ ಪುರಸಭೆಯಲ್ಲಿ ಬಿಜೆಪಿ ಆಡಳಿತ – ಪ್ರತಾಪಗೌಡ ಪಾಟೀಲ್
e-ಸುದ್ದಿ ಮಸ್ಕಿ
ಮಸ್ಕಿ: ಪುರಸಭೆಯ 23 ವಾರ್ಡ್ ಗಳಲ್ಲಿ 14 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಪುನಃ ಪುರಸಭೆಯ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ 3 ಹಾಗೂ 4 ನೇ ವಾರ್ಡಿನಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿಗಳ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ ‘ಕಾಂಗ್ರೆಸ್ ನವರು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮತದಾರರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬರೀ ಸುಳ್ಳು ಹೇಳುವ ಮೂಲಕ ಸತ್ಯ ಮಾಡಲು ಹೊರಟಿದ್ದಾರೆ. ಕ್ಷೇತ್ರದ ಜನರಿಗೆ ಸತ್ಯ ಸಂಗತಿ ಗೊತ್ತಿದೆ ಎಂದರು.
ಶಾಸಕರಾಗಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಆಗಿದ್ದ ಮಸ್ಕಿಯನ್ನು ಪುರಸಭೆ ಸ್ಥಾನಮಾನ ಕೊಡಿಸಿ ಹೆಚ್ಚಿನ ಅನುದಾನ ದೊರೆಯುವಂತೆ ಮಾಡಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದರು. ಉಪ ಚುನಾವಣೆಯಲ್ಲಿ ಸೋಲಿನ ಕಹಿ ಮರೆತು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.
ಮುಖಂಡರಾದ ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ್, ಡಾ. ನಾಗನಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹನುಮಂತಮ್ಮ ಮೋಚಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಶಂಕ್ರಪ್ಪ ಮೋಚಿ, ರಾಯಪ್ಪ ಮುರಾರಿ ಸೇರಿದಂತೆ ಪಕ್ಷದ ಅಭ್ಯರ್ಥಿಗಳು, ಮುಖಂಡರು ಕಾರ್ಯಕರ್ತರು ಇದ್ದರು.