ದೇವನೊಲಿದ ಕುಲವೆ ಸತ್ಕುಲಂ

ದೇವನೊಲಿದ ಕುಲವೆ ಸತ್ಕುಲಂ

ನಡೆ ಚೆನ್ನ ನುಡಿ ಚೆನ್ನ ಎಲ್ಲಿ ನೋಡಿದೊಡೆ ಚೆನ್ನ
ಪ್ರಮಥರೊಳಗೆ ಚೆನ್ನ
ಪುರಾತನರೊಳಗೆ ಚೆನ್ನ, ಸವಿದು ನೋಡಿ ಅಂಬಲಿ ರುಚಿಯಾಯಿತ್ತೆಂದು ಕೂಡಲಸಂಗಮದೇವನಿಗೆ ಬೇಕೆಂದು ಕೈದೆಗೆದ ನಮ್ಮ‌ ಚೆನ್ನ”
“ಚೆನ್ನಯ್ಯ ನನ್ನಯ್ಯ, ಚೆನ್ನಯ್ಯನ ಮಗ ನಾನು”
“ಅಯ್ಯಗಳ ಅಯ್ಯ ನಮ್ಮ ಮಾದಾರ ಚೆನ್ನಯ್ಯ” ಎಂದೆಲ್ಲ ಮನದುಂಬಿ ಹೇಳಿದ್ದಾರೆ ಬಸವಣ್ಣನವರು.‌ ಬಸವಣ್ಣನವರಿಂದ ಹೀಗೆ ಅನೇಕ‌ ರೀತಿಯಾಗಿ‌ ಸ್ತುತಿಸಿಕೊಂಡ ಮಹಾನುಭಾವನೇ ಮಾದಾರ ಚೆನ್ನಯ್ಯ.
ತಮ್ಮ ಕುಲಕಸುಬಾದ ಚಪ್ಪಲಿ ಜೋಡುಮೆಟ್ಟು ತಯಾರಿಸುವ ಕಾಯಕದಲ್ಲೆ ದೇವರನ್ನು‌ ಕಂಡವರು ಮಾದಾರ ಚೆನ್ನಯ್ಯನವರು. ಇವರು ಜನಿಸಿದ್ದು ಕ್ರಿ.ಶ.೧೦೫೦ ರಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ‌ ಬಳ್ಳೆಗಾವಿಯಲ್ಲಿ ಹೊಸ್ತಿಲ ಹುಣ್ಣಿಮೆಯಂದು. ಇವರ ತಂದೆ ತಾಯಿ ಶಿವಭಕ್ತರಾದ ಶಿವಯ್ಯ ಹಾಗು ಶಿವಗಂಗಮ್ಮ. ಚಾಲುಕ್ಯರ ದಾಳಿಯಿಂದಾಗಿ ಬಳ್ಳೆಗಾವಿಯನ್ನು ತೊರೆದು ಉದ್ಯೋಗ ಅರಸುತ್ತ ಗಡಿಪಟ್ಟಣವಾದ ಕಂಚಿ ಪಟ್ಟಣಕ್ಕೆ ಬಂದು ನೆಲೆಸುತ್ತಾರೆ. ಕರಿಕಾಲ ಚೋಳನ ಆಸ್ಥಾನದಲ್ಲಿದ್ದು ಮಾದಾರ ಚೆನ್ನಯ್ಯ ಲಾಯದಲ್ಲಿದ್ದ ಕುದುರೆಗಳಿಗೆ ಹುಲ್ಲು ತಂದು ಹಾಕುವ ಕಾಯಕ ಮಾಡುತ್ತಿರುತ್ತಾನೆ. ಮಹಾಶಿವಭಕ್ತನಾದ ಇವನ ಮನಸ್ಸು ಸದಾ ಶಿವಲಿಂಗ ಪೂಜೆಯತ್ತ ಇರುತ್ತದೆ. ತನ್ನ ಷಡಿಂದ್ರಿಯಗಳಲ್ಲಿ ಷಡ್ಲಿಂಗಗಳನ್ನು ಧರಿಸಿ ಸರ್ವವನ್ನು ಶಿವಾರ್ಪಿತ ಮಾಡುತ್ತಲಿದ್ದ ಶಿವಶರಣ. ಹರಿಹರ ಕವಿ ತನ್ನ ಕಾವ್ಯದಲ್ಲಿ ಈತನ ಶಿವಪೂಜೆಯ ವರ್ಣನೆ ಮಾಡಿದ್ದಾನೆ.
ಹುಲ್ಲು ಕೊಯ್ದು ಹೊರೆ ಕಟ್ಟುವವರೆಗೆ ಅಂತರಂಗದಲ್ಲಿ ಪೂಜೆ, ಹೊರೆ ಕೆಲಸ ಮುಗಿಯುತ್ತಲೆ ಬಹಿರಂಗದಲ್ಲಿ ಪೂಜೆ. ಚೆನ್ನಯ್ಯ ಪ್ರತಿನಿತ್ಯ ಸಂಪಿಗೆ ಸುಗಂಧಿ, ಕೆಂಜಾಜಿ, ಸುರಗಿ, ಕಣಗಿಲೆ ಮುಂತಾದ ಸುಗಂಧಯುತವಾದ ಹೂಗಳಿಂದ ಶಿವನನ್ನು ಬಹು ಭಕ್ತಿಯಿಂದ ಪೂಜಿಸುತ್ತಿದ್ದನು. ಚೆನ್ನಯ್ಯಗಳ ಪುಣ್ಯಾಂಗನೆ ಅಂಬಲಿ‌ ಮಾಡಿಡುತ್ತಿದ್ದಳು. ಚೆನ್ನಯ್ಯ ಆ ಅಂಬಲಿಗೆ ತನ್ನ ಭಕ್ತಿಯ ಅಮೃತ ಬೆರೆಸಿ ಶಿವನಿಗರ್ಪಿಸುತ್ತಿದ್ದನು. ಚೆನ್ನಯ್ಯನದು ಗುಪ್ತ ಭಕ್ತಿಯಾಗಿದ್ದಿತು. ತನ್ನ ಭಕ್ತರಲ್ಲೆ ಶ್ರೇಷ್ಠನಾದ ಚೆನ್ನಯ್ಯ ಹೀಗೆ ಅಜ್ಞಾತನಾಗಿ ಉಳಿಯದೆ, ಈತನ ಶಿವಭಕ್ತಿ ಇತರರಿಗೆ ತಿಳಿಸಬೇಕೆಂದುಕೊಂಡ‌ ಶಿವ. ಆಗ ನಡೆದ ಅಂಬಲಿ ಪ್ರಸಂಗ ಬಹಳ ವಿಶಿಷ್ಟವಾದದ್ದು. ಈತನ ಗುಪ್ತಭಕ್ತಿ ಅರುಹಲೆಂದೆ ಸಾಕ್ಷಾತ್ ಶಿವನು ಚೆನ್ನಯ್ಯನ ಮನೆಗೆ ಬಂದು ಅರ್ಪಿಸಿದ ಅಂಬಲಿಯನ್ನು ಕುಡಿದು ಸಂತೃಪ್ತನಾದನು.
ಇದನ್ನು ತಿಳಿದು ಸ್ವತಃ ಶಿವಭಕ್ತನಾದ ಚೋಳರಾಜನು
“ಎಲೆ ದೇವ! ದೇವನೊಲಿದವನ ಕುಲಂ ಸತ್ಕುಲಂ
ಘನಮಹಿಮನೊಲಿದ ಜಾತಿಯೇ
ಜಾತಿ‌ ನಿರ್ಮಲಂ
ಶರ್ವನೊಡನುಂಡ ನಿಮ್ಮಯ ಜಾತಿಗಾಂ ಸರಿಯೇ? ಸರ್ವಜ್ಞ ನಿಮ್ಮ ಕೆರವಿಂಗೆನ್ನ ಶಿರ ಸರಿಯೆ” ಎಂದು ಚೆನ್ನಯ್ಯನಿಗೆ ನಮಸ್ಕರಿಸುತ್ತಾನೆ. ಚೋಳರಾಜ ಚೆನ್ನಯ್ಯನನ್ನು ಆನೆಯಮೇಲೆ ಅಂಬಾರಿಯಲ್ಲಿ ಕುಳ್ಳಿರಿಸಿ ನಗರದಲ್ಲೆಲ್ಲ ಮೆರವಣಿಗೆ ಮಾಡಿಸಿದನು. ಇದು ಅಂತ್ತಜನಾದ ಚೆನ್ನಯ್ಯನ ಗುಪ್ತಭಕ್ತಿ ನಿಷ್ಕಾ ಭಕ್ತಿ ಹಾಗು ನಿರಾಡಂಬರ ಭಕ್ತಿಗೆ ಸಂದ ಗೌರವ.
ನಂತರದಲ್ಲಿ ಬಸವಣ್ಣ ಹಾಗು ಕಲ್ಯಾಣದ ಮಹತಿಯನ್ನು ತಿಳಿದು ಕಲ್ಯಾಣದತ್ತ ಬರುತ್ತಾರೆ. ತಮಗಿಂತ ಹಿರಿಯರಾದ ಶಿವಭಕ್ತ ಚೆನ್ನಯ್ಯನನ್ನು ಗೌರವಾದರದಿಂದ ಬರಮಾಡಿಕೊಳ್ಳುತ್ತಾರೆ ಶರಣರು. ತಮ್ಮ‌ ಕುಲಕಸುಬಾದ ಮೆಟ್ಟು ಹೊಲೆಯುವ ಕೆಲಸ ಮಾಡುತ್ತಾ, ಶಿವನನ್ನು ಆರಾಧಿಸುತ್ತಾ ಮೆಟ್ಟುಗಳನ್ನು ಮಾರಾಟಮಾಡಿ ಜೀವನಸಾಗಿಸುತ್ತ ದಾಸೋಹಗೈಯ್ಯುತ್ತಾರೆ. ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸಿ ವಚನ ರಚನೆ ಮಾಡುತ್ತಾರೆ. ಅವರ ಕೇವಲ ೧೦ ವಚನಗಳು ದೊರೆತಿವೆ. ಸಂಖ್ಯೆಯಲ್ಲಿ ಅಲ್ಪವಾದರು ಅರ್ಥಪೂರ್ಣವಾಗಿವೆ. ತಮ್ಮ ಕುಲಕಸುಬಿನ ಪರಿಕರಗಳಾದ ಅಡಿಗೂಂಟ, ಕೈಉಳಿ ಮತ್ತು ಕತ್ತಿಗಳನ್ನು ಅಂಕಿತನಾಮದಲ್ಲಿ ಉಪಯೋಗಿಸಿಕೊಂಡಿದ್ದಾರೆ. “ಅರಿ ನಿಜಾತ್ಮ ರಾಮ ರಾಮನ” ಎನ್ನುವ ಅಂಕಿತನಾಮದಿಂದ ರಚಿಸಲಾದ ಸಾವಿರಾರು ವಚನಗಳಲ್ಲಿ ಸಿಕ್ಕಿರುವ ವಚನಗಳನ್ನೇ ಪಚನಮಾಡಿಕೊಂಡರು ಸಾಕು ಅವರ ವಿಭಿನ್ನ ಅನುಭಾವಿಕ‌ ನೆಲೆಯನ್ನು ಕಾಣುತ್ತೇವೆ.
ಆಚಾರವೆ ಕುಲ ಅನಾಚಾರವೆ ಹೊಲೆ
ಇಂತಿ ಉಭಯವ ತಿಳಿದರಿಯಬೇಕು
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ
ಅರಿ ನಿಜಾತ್ಮ ರಾಮ ರಾಮನ”
ನೇರ ವಿಷಯದ ಪ್ರಸ್ತಾವನೆಯೊಂದಿಗೆ ಅಂದು ವ್ಯವಸ್ಥೆಯಲ್ಲಿದ್ದ ಜಾತಿಯತೆ, ಅಸ್ಪೃಶ್ಯತೆ, ಮೌಢ್ಯತೆಯ ವಿರುದ್ಧ ಚಾಟಿ ಏಟು ಬೀಸಿದ್ದಾರೆ. ತಮ್ಮ ಕಸುಬಿನ ಬಗ್ಗೆ ಅಭಿಮಾನ ಹೊಂದಿದ್ದ ಅವರು ಕುಲ‌ಕುಲ ಎನ್ನುವದನ್ನು ನಿಷ್ಟೂರವಾಗಿ‌ ನಿಂದಿಸಿದ್ದಾರೆ. ಮಾದಿಗರ ಧೈರ್ಯ, ಸ್ಥೈರ್ಯ, ಸಹನೆ, ಸ್ವಾಭಿಮಾನ ಮತ್ತು ಕೆಚ್ಚನ್ನು ಅವರ ವಚನಗಳಲ್ಲಿ ಕಾಣಬಹುದಾಗಿದೆ.
” ನಡೆನುಡಿ ಸಿದ್ಧಾಂತವಾದಲ್ಲಿ ಕುಲಹೊಲೆ ಸೂತಕವಲ್ಲ. ನುಡಿಲೇಸು ನಡೆಯಧಮವಾದಲ್ಲಿ‌ ಅದು ಬಿಡುಗಡೆ ಇಲ್ಲದ ಹೊಲೆ. ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ ಕೆಟ್ಟು ನಡೆವುತ್ತ ಮತ್ತೆ ಕುಲಜರೆಂಬ ಒಡಲವರುಂಟೆ? ಅರಿ ನಿಜಾತ್ಮ ರಾಮ ರಾಮನ.” ದಾಸರು ಕುಲ‌ಕುಲವೆಂದು ಹೊಡೆದಾಡದಿರಿ, ಕುಲದ ನೆಲೆಯನೇನಾದರು‌ ಬಲ್ಲಿರಾ? ಎಂದು ಪ್ರಶ್ನಿಸಿರಿವದು ಇದೇ ಅಲ್ಲವೆ. ಹುಟ್ಟಿನಿಂದ ಯೋಗ್ಯತೆ ಪಡೆಯದೆ ಗುಣದಿಂದ, ನಡೆನುಡಿಯಿಂದ ಯೋಗ್ಯತೆ ಪಡೆಯಬೇಕೆಂಬ ಗಟ್ಟಿ ನಿಲುವು ವ್ಯಕ್ತಪಡಿಸುತ್ತಾರೆ. ನಡೆನುಡಿಯೊಳಗಾಗಿ ಬದುಕುವವರೆ ಕುಲಜರು. “ಸದಾಚಾರವೆ ಕುಲ, ಅನಾಚಾರವೆ ಹೊಲೆ” ಎಂದು ತಾವು ಅಸ್ಪೃಶ್ಯರೆಂದು ಸಮಾಜದಲ್ಲಿ ಅನುಭವಿಸಿದ ನೋವನ್ನು ಅವರ ವಚನಗಳಲ್ಲಿ ಕಾಣಬಹುದಾಗಿದೆ. ಶ್ರೇಷ್ಠ ಜಾತಿ ಯಾವುದೆಂದು ಪ್ರಶ್ನಿಸುತ್ತಾ ಜಾತೀಯತೆಯನ್ನು ಅಲ್ಲಗಳೆಯುತ್ತಾರೆ. ತಮ್ಮ ವಚನಗಳಲ್ಲಿ ಜಾತೀಯತೆ, ಕುಲಹೀನತೆಯನ್ನು ಖಂಡಿಸಿದ, ವಿರೋಧಿಸಿದ ಮೊದಲ ವ್ಯಕ್ತಿಯಾಗಿ ಕಾಣುತ್ತಾರೆ. ಎಷ್ಟೋ ಶತಮಾನಗಳು ಸಂದಿವೆಯಾದರು ಅವರ ಪ್ರತಿಭಟನೆಯ ಕಾವು ಇಂದಿಗೂ ಇದೆ.
ತಮ್ಮ ಸಾತ್ವಿಕ ಬದುಕಿನಿಂದಾಗಿ ಎಲ್ಲ ಶರಣರಿಂದ ಹೊಗಳಲ್ಪಟ್ಟಿದ್ದಾರೆ. “ಚೆನ್ನಂ ರಕ್ಷಿಸುಗೆನ್ನಂ, ಚೆನ್ನನ ಸುತನೆಂದು ಹಂಪೆಯ ವಿರೂಪಾಕ್ಷ” ಹಂಪೆಯ ವಿರುಪಾಕ್ಷನೇ ಚೆನ್ನಯ್ಯನವರ ಮಗನೆಂದು ಹರಿಹರ ಕವಿ ಪ್ರಾರ್ಥಿಸಿದ್ದಾನೆ.
ಬಸವಣ್ಣನವರು ತಾವು ಇಂಥ ಶಿವಭಕ್ತನ ಸೇವಕನೆಂದು ಕರೆಯಿಸಿಕೊಳ್ಳುವಲ್ಲಿ ಸಂತೋಷವಿದೆ ಎಂದಿದ್ದಾರೆ.ಚೆನ್ನಯನವರನ್ನು ಅತ್ಯಂತ ಪೂಜ್ಯ ಭಾವದಿಂದ ಕಂಡಿದ್ದಾರೆ. ಅಷ್ಟೇ ಅಲ್ಲ ಅವರ ಕಾಯಕ ಇಷ್ಟಲಿಂಗ ಪೂಜೆ, ದಾಸೋಹದಿಂದ ಪ್ರಭಾವಿತರಾದ ಬಸವಣ್ಣ ಅವರ ಘನತೆ ಗೌರವ ಹೆಚ್ಚಿಸಿದ್ದಾರೆ. ಬಸವಣ್ಣನವರ ವಿಚಾರಪತ್ನಿ‌ ನೀಲಾಂಬಿಕೆ ತಾನು ಮಾದಾರ ಚೆನ್ನಯ್ಯನವರ ಮೊಮ್ಮಗಳೆಂದು ಹೇಳಿಕೊಂಡಿದ್ದಾರೆ. ‌ಕಲ್ಯಾಣದಲ್ಲಿ ಕೂಡ ನಿತ್ಯ ಅಂಬಲಿ ಸೇವೆ ಮಾಡುತ್ತಿದ್ದುದರ ಕುರುಹಾಗಿ ಈಗಲು ಅಲ್ಲಿ ಅಂಬಲಿ ಕುಂಡವಿದೆ. ಪುರಾಣಗಳಲ್ಲಿ ಶಿಲಾಶಾಸನಗಳಲ್ಲಿ ಇವರ ಕುರಿತು ಉಲ್ಲೇಖವಿದೆ. ಕಲ್ಯಾಣ ಕ್ರಾಂತಿಯ ನಂತರ ತಮ್ಮ ಪತ್ನಿ ಗಂಗಮ್ಮ ಹಾಗು ಮಕ್ಕಳೊಂದಿಗೆ ಈಗಿನ ಕೊಳ್ಳೆಗಾಲ ತಾಲೂಕಿನ ಕುರುಬಕಟ್ಟಿ ಗ್ರಾಮಕ್ಕೆ ಹೋಗಿ ನೆಲೆಸುತ್ತಾರೆ. ಕ್ರಿ.ಶ.೧೧೬೫ ರಲ್ಲಿ ಐಕ್ಯರಾಗುತ್ತಾರೆ. ದಂಪತಿಗಳ ಗದ್ದುಗೆಗೆ ಈಗಲು ಪೂಜೆ ನಡೆಯುತ್ತದೆ.
ಅಂಬಲಿಯೊ ಅಮೃತವೊ ಶಂಭು ಹರನೆಂಜಲವೊ
ಹಂಬಲಿಸಿ ಹರನುಣ್ಣುವದೊ ಶರಣನಿಗೆ ನಂಬಿ
ಶಿವಕೊಟ್ಟ ಶಿವಪಥವೊ”


ಶಾರದಾ ಕೌದಿ, ಧಾರವಾಡ
8951491838

Don`t copy text!