ಮೌನ ಭಾಷೆ
ಅಟ್ಟಕಟ್ಟಿ ಕುಣಿದ
ಕನಸುಗಳು ದಣಿದು
ಸುಮ್ಮನಾದವು
ಹೊಣೆ ಹೊತ್ತ ಹೆಗಲು
ಸವೆದ ದಾರಿಯಲಿ
ನಿಟ್ಟುಸಿರ ಮೈಲುಗಲ್ಲು
ಮರುಗುವ ಮನಕ್ಕೆ
ಕಾತರಿಸುವ ಕಣ್ಣಲಿ
ಚಿತ್ರಗಳೆಲ್ಲ ಮಸುಕು…!
ಮಿಡಿತವಿರದ ಉಸಿರಾಟ
ಸಡಗರಕ್ಕೆಂದೇ ಮಾತು-ನಗು
ತ್ಯಾಗ-ತಾಳ್ಮೆ ಪಟ್ಟದಡಿ
ಚಿವುಟಿದ ಚಿಗುರು ಕತ್ತಲ ಕಣ್ಣೀರು
ಶೋಷಣೆ-ನ್ಯಾಯ ಶಬ್ಧಗಳದು
ಹೋರಾಟ ಇತಿಹಾಸ
ನಿಲುಕದ ನೆಮ್ಮದಿಗೆ
ಅಸ್ಮಿತೆಯೊಂದು ಅಣುಕು..!
ಮುಗಿಯಿತೆ…?
ಇಲ್ಲ..!
ಸರದಿ ಸಾಲು ಇದೆ ಕಾಣದಷ್ಟು..
ಯಾಕೆ ಹೀಗೆ..?
ಸುತ್ತ ನಿಂತವರಿಗೆ ಗೊತ್ತು..
ಅವಳು-
ಮಾತನಾಡುವ ಭಾಷೆ
*ಮೌನ* …
–ಪ್ರೊ ಜಯಶ್ರೀ.ಕೆ. ಶೆಟ್ಟರ.
ಇಳಕಲ್ಲ.