ಸರ್‌, ಹೋಗಿ ಬನ್ನಿ, ನಮಸ್ಕಾರ

ಸರ್‌, ಹೋಗಿ ಬನ್ನಿ, ನಮಸ್ಕಾರ

ನಮ್ಮ ಪ್ರೀತಿಯ ಚಂದ್ರಶೇಖರ ಪಾಟೀಲರು (ಚಂಪಾ, ಜೂನ್‌ ೧೮, ೧೯೩೯ – ಜನವರಿ ೧೦, ೨೦೨೨) ಇಂದು ಬೆಳಗ್ಗೆ ೬.೩೦ಕ್ಕೆ ಬೆಂಗಳೂರಲ್ಲಿ ನಿಧನರಾಗಿದ್ದಾರೆ. ಅವರು ೧೯೮೦ರ ಬಂಡಾಯ ಚಳುವಳಿಯಲ್ಲಿ ಬರಗೂರರೊಡಗೂಡಿ ನಮಗೆಲ್ಲ ಮಾರ್ಗದರ್ಶನ ಮಾಡಿದವರು. ಚಂಪಾ ನಿಧನದೊಂದಿಗೆ ಜನಪರ ಚಳುವಳಿಯ ಇನ್ನೊಂದು ಕೊಂಡಿ ಕಳಚಿತು. ನನ್ನಂಥ ಹಲವರು ಏನಾದರೂ ಚಿಕ್ಕ ಪುಟ್ಟ ಪ್ರತಿಭಟನೆಯ ಕಿಚ್ಚು ಉಳಿಸಿಕೊಂಡಿದ್ದರೆ ಅದಕ್ಕೆ ಚಂಪಾ ಮತ್ತು ಅವರು ತರುತ್ತಿದ್ದ ಸಂಕ್ರಮಣ ಪತ್ರಿಕೆ ಕಾರಣ. ಕವಿ, ನಾಟಕಕಾರ, ವಿಮರ್ಶಕ, ಭಾಷಣಕಾರ ಮತ್ತು ಕನ್ನಡ ಪರ ಹೋರಾಟಗಾರರಾಗಿ ಅವರು ಸದಾ ನಮ್ಮ ನೆನಪಲ್ಲಿ ಉಳಿಯುತ್ತಾರೆ.
ಚಂಪಾ ಹುಟ್ಟಿದ್ದು ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ. ಓದಿದ್ದು ಹತ್ತಿಮತ್ತೂರು-ಹಾವೇರಿಗಳಲ್ಲಿನ ಕನ್ನಡ ಶಾಲೆಗಳಲ್ಲಿ. ೧೯೫೬ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿ, ೧೯೬0ರಲ್ಲಿ ಬಿ.ಎ. ಪೂರೈಸಿದರು. ೧೯೬೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದರು. ೧೯೬೯ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. ೧೯೮0-೮೩ರ ಅವಧಿಯಲ್ಲಿ ಧಾರವಾಡದ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗೋಕಾಕ್ ಚಳವಳಿಗೆ ಪ್ರೇರಣೆ ನೀಡಿದರು. ಗೋಕಾಕ ಚಳುವಳಿಯು ಅವರನ್ನು ನಾಡಿನ ಪ್ರಮುಖ ಹೋರಾಟಗಾರರೆಂದು ಗುರುತಿಸುವಂತೆ ಮಾಡಿತು. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದ ಅವರು ಸಾಹಿತಿಗಳ ಮೈ ಚಳಿ ಬಿಡಿಸಿದರು.
ಮಾತೃಭಾಷಾ ಮಾಧ್ಯಮ ಚಳುವಳಿಗೆ ಚಂಪಾ ಕೊಡುಗೆ ಬಹಳ ದೊಡ್ಡದು. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಬೋಧನಾ ಮಾಧ್ಯಮವಾಗಿರಬೇಕು, ಬೇಕಿದ್ದರೆ ಇಂಗ್ಲಿಷನ್ನು ಪ್ರಾಥಮಿಕ ೫ನೇ ತರಗತಿಯಿಂದ ಕಲಿಸಬೇಕು, ಕೇಂದ್ರ ಪಠ್ಯಕ್ರಮದ ಮಾಧ್ಯಮಗಳ ಶಾಲೆಗಳು ಕರ್ನಾಟಕದಲ್ಲಿದ್ದರೆ ಅವು ಕನ್ನಡವನ್ನು ಕಲಿಸಬೇಕು- ಎಂಬ ವಿಷಯಗಳ ಬಗ್ಗೆ ಚಂಪಾ ಅವರು ನಿರಂತರವಾಗಿ ಹೋರಾಡಿದರು. ಕನ್ನಡ ಮಾಧ್ಯಮದಲ್ಲಿ ಶಾಲೆಯನ್ನು ನಡೆಸಲು ಅನುಮತಿ ಪಡೆದು ಆಂಗ್ಲಮಾಧ್ಯಮದಲ್ಲಿ ಶಾಲೆ ನಡೆಸುತ್ತಿದ್ದ ಸುಮಾರು ೨೨೧೫ ಶಾಲೆಗಳ ಮಾನ್ಯತೆಯನ್ನು ರದ್ದು ಮಾಡಿಸುವಲ್ಲಿ ಚಂಪಾ ಅವರು ಯಶಸ್ವಿಯಾಗಿದ್ದರು.
೧೯೭೯ರಲ್ಲಿ ಬಂಡಾಯ ಚಳುವಳಿಯು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಹಿಷ್ಕಾರ ಹಾಕಿದರೂ ಚಂಪಾ ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ( ನವೆಂಬರ್ ೨00೪ ರಿಂದ ೨00೮ರವರೆಗೆ) ಸೇವೆ ಸಲ್ಲಿಸಿದರು. ಅವರ ನೇತೃತ್ವದಲ್ಲಿ ನಡೆದ ಶಿವಮೊಗ್ಗ ಸಾಹಿತ್ಯ ಸಮ್ಮೇಳನ ಅನೇಕ ಘಟನೆಗಳಿಗೆ ಸಾಕ್ಷಿಯಾಯಿತು. ಕಸಾಪವನ್ನು ಜನರ ಹತ್ತಿರ ಕೊಂಡೊಯ್ಯಲು ಅವರು ಮಾಡಿದ ಕೆಲಸಗಳು ಹಲವು. ಅದರಲ್ಲಿ ಅವರು ಚಾಲ್ತಿಗೆ ತಂದ ಶನಿವಾರದ ಪುಸ್ತಕಸಂತೆ ಕಾರ್ಯಕ್ರಮವೂ ಒಂದು. ಪ್ರತಿ ಶನಿವಾರವೂ ಪರಿಷತ್ತಿನ ಅಂಗಳದಲ್ಲಿ ಕನ್ನಡ ಪುಸ್ತಕ ಪ್ರಕಾಶಕರನ್ನು ಮತ್ತು ಮಾರಾಟಗಾರರನ್ನು ಆಹ್ವಾನಿಸಿ ರಿಯಾಯಿತಿ ದರದಲ್ಲಿ ಓದುಗರಿಗೆ ಪುಸ್ತಕಗಳು ದೊರೆಯುವಂತೆ ವ್ಯವಸ್ಥೆ ಮಾಡಿದರು. ಈ ಪುಸ್ತಕಸಂತೆಯಲ್ಲಿ ಹೊಸ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಜತೆಗೆ ಹಳೆ ಪುಸ್ತಕ ವ್ಯಾಪಾರಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಅಷ್ಟೇ ಅಲ್ಲದೆ ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸುತ್ತಿದ್ದ ಲೇಖಕರೂ ಇಲ್ಲಿ ತಮ್ಮ ಪುಸ್ತಕಗಳನ್ನು ತಂದು ಮಾರುತ್ತಿದ್ದರು. ಅಪರೂಪದ ಮತ್ತು ಅಲಭ್ಯ ಗ್ರಂಥಗಳು ಇಲ್ಲಿ ಸಿಗುತ್ತಿದ್ದವು. ಇದರ ಜತೆಗೆ ಪರಿಷತ್ತಿನ ಮುಂಭಾಗದಲ್ಲಿ ಹಾಡು, ನೃತ್ಯ, ಭಾಷಣ ಇತ್ಯಾದಿ ಕಾರ್ಯಕ್ರಮಗಳೂ ನಡೆದುವು. ಅವರ ಅಧಿಕಾರಾವಧಿ ಮುಗಿಯುತ್ತಿದ್ದಂತೆ ಅದು ಯಾಕೋ ನಿಂತು ಹೋಯಿತು.

ಬಾನುಲಿ, ಮಧ್ಯಬಿಂದು, ಹೂವು ಹಣ್ಣು ತಾರೆ, ಓ ಎನ್ನ ದೇಶ ಬಾಂಧವರೇ, ಗುಂಡಮ್ಮನ ಹಾಡು ಮೊದಲಾದುವು ಅವರ ಕವನ ಸಂಗ್ರಹಗಳು. ಕೊಡೆಗಳು, ಗೋಕರ್ಣದ ಗೌಡಶಾನಿ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ಮೊದಲಾದುವು ಅವರ ಜನಪ್ರಿಯ ನಾಟಕಗಳು. ಅವರ ಕೆಲವು ನಾಟಕಗಳಲ್ಲಿ ನಾನು ಅಭಿನಯಿಸಿದ್ದೂ ಉಂಟು. ಬೇಂದ್ರೆ-ನಾನು ಕಂಡಂತೆ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ, ಚಂಪಾದಕೀಯ, ಮೊದಲಾದುವು ಅವರ ಇತರ ಕೃತಿಗಳು.
ನವ್ಯ ಸಾಹಿತ್ಯ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರನ್ನು ʼ ಒಂದು ಜನಾಂಗದ ಕಣ್ಣು ತೆರೆಸಿದʼ ಕವಿ ಎಂದು ಕೊಂಡಾಡಲಾಗುತ್ತಿತ್ತು. ಆದರೆ ನಾವೆಲ್ಲರೂ ಸಂಕ್ರಮಣ ಪತ್ರಿಕೆಯ ಮೂಲಕ ಅನೇಕ ಲೇಖಕರನ್ನು ಬೆಳೆಸಿದ ಚಂಪಾ ಅವರನ್ನು ʼ ಅಡಿಗರು ಕಣ್ಣು ಮುಚ್ಚಿಸಿದರು, ಚಂಪಾ ಕಣ್ಣು ತೆರೆಸಿದರುʼ ಎಂದು ಹೇಳಿಕೊಂಡು ಕರ್ನಾಟಕಾದ್ಯಂತ ಓಡಾಡುತ್ತಿದ್ದೆವು. ನಮ್ಮೆಲ್ಲರ ಓದಿನ ಕೇಂದ್ರವಾಗಿದ್ದ ಸಂಕ್ರಮಣವನ್ನು ಚಂದ್ರಶೇಖರ ಪಾಟೀಲರು ಗಿರಡ್ಡಿ ಗೋವಿಂದರಾಜ, ಮತ್ತು ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಜೊತೆ ಸೇರಿ ಆರಂಭಿಸಿದರು. ಈ ಪತ್ರಿಕೆಯು ನವ್ಯದ ಉಚ್ಛ್ರಾಯ ಸ್ಥಿತಿಯಲ್ಲಿ ಪ್ರಾರಂಭವಾಗಿ, ಎಪ್ಪತ್ತರ ದಶಕದ ನಂತರ ದಲಿತ, ಬಂಡಾಯ ಸಾಹಿತ್ಯ ಚಳವಳಿಗೆ ಬೆಂಬಲ ನೀಡಿ ಹಲವಾರು ಯುವ ಬರಹಗಾರರಿಗೆ ವೇದಿಕೆಯನ್ನು ಒದಗಿಸಿತು. ಆ ಹೊತ್ತಿಗೆ ಗಿರಡ್ಡಿ, ಪಟ್ಟಣಶೆಟ್ಟರು ಸಂಕ್ರಮಣದಿಂದ ಕಳಚಿಕೊಂಡಿದ್ದರು.

ಚಂಪಾ ತಮ್ಮ ಹರಿತವಾದ ವ್ಯಂಗ್ಯಕ್ಕೆ ಹೆಸರಾದವರು.
‘ಕನ್ನಡ ಕಾವ್ಯದ ಭೂತ ಭವಿಷ್ಯವ ಬಣ್ಣಿಸಿ ಹೇಳೋ ಗಾಂಪಾ;
ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ’
ಅಂದು ತಮ್ಮನ್ನೇ ತಾವು ವಿನೋದ ಮಾಡಿಕೊಳ್ಳುತ್ತಿದ್ದರು.

ನಿನ್ನೆ ಬಸವಲಿಂಗಯ್ಯ, ಇವತ್ತು ಚಂಪಾ, ಯಾಕೋ ಸಾವು ಹತ್ತಿರದಲ್ಲೆಲ್ಲೋ ಓಡಾಡುವಂತೆ ಭಾಸವಾಗುತ್ತಿದೆ.


ಪುರುಷೋತ್ತಮ ಬಿಳಿಮಲೆ, ದೆಹಲಿ

Don`t copy text!