ಗಜಲ್

ಗಜಲ್

ಮೊಗ್ಗು ಬಿರಿಯದೆ ಧ್ಯಾನಿಸುತಿದೆ ದುಂಬಿಯ ಬರುವಿಗಾಗಿ
ಕನಸು ಮೂಡದೇ ಕನವರಿಸುತಿದೆ ಶಶಿಯ ಬರುವಿಗಾಗಿ

ಹುಚ್ಚು ಮನ ಬಯಸಿದೆ ಅವನ ಪ್ರೀತಿಯ ಮದಿರೆ ಹೀರಲು
ಮಧು ಕುಡಿಯದೆ ತನು ತೂರಾಡಿದೆ ಸಾಕಿಯ ಬರುವಿಗಾಗಿ

ಸಂಗಾತಿಗಾಗಿ ಹಂಬಲಿಸುತ್ತಿದೆ ಏಕಾಂಗಿ ಉಸಿರು
ಹೃದಯ ವಿರಹದಲಿ ಮೌನವಾಗಿದೆ ಇನಿಯ ಬರುವಿಗಾಗಿ

ಅಲೆಯುವ ಜಂಗಮ ಯೋಗಿ ಕಾಣಲು ಕಾತರಿಸಿದೆ ನಯನ
ಎದೆಯ ಗುಡಿ ಬಾಗಿಲು ತೆರೆಯುತಿದೆ ಜೋಗಿಯ ಬರುವಿಗಾಗಿ

ಒಡಲ ಒಲವ ಸಿಂಪಿ ಬಾಯಿ ಬಿಚ್ಚಿದೆ ಮುತ್ತಿನ ಹನಿಗಾಗಿ
ಚುಂಬನಕೆ ಕಡಲ ದಡ ಕಾಯುತಿದೆ ಅಲೆಯ ಬರುವಿಗಾಗಿ

ಅವನ ಮುನಿಸಿಗೆ ಅನುರಾಗದ ಬೆಳೆ ನೆಲಕಚ್ಚಿದೆ ಬಾಡಿ
ಬಿರಿದ ಎದೆ ಹೊಲವು ಪರಿತಪಿಸುತಿದೆ ಮಳೆಯ ಬರುವಿಗಾಗಿ

ಇರುಳಲಿ ಮಿಂಚುಹುಳು ಮೆರೆಯುತಿದೆ ತನ್ನದೇ ಬೆಳಕೆಂದು
ಪ್ರಕೃತಿ ತಾಮಸ ಕಳಚುತಿದೆ ರವಿ “ಪ್ರಭೆ”ಯ ಬರುವಿಗಾಗಿ

ಪ್ರಭಾವತಿ ಎಸ್ ದೇಸಾಯಿ
ವಿಜಯಪುರ

Don`t copy text!