ಗಜಲ್
ಬೆರೆತ ವಿಷದೊಂದಿಗೆ ಸುರಿವ ಕಣ್ಣೀರಿಗೂ ಕರಗದ ಕಾಡಿಗೆ ನನ್ನದು
ಬಂಧನಗಳ ಶೃಂಖಲೆಗಳನ್ನು ಹೊತ್ತರು ನಿಲ್ಲದ ಹೆಜ್ಜೆಗಳ ನಡಿಗೆ ನನ್ನದು
ಹುಟ್ಟಿನಿಂದಲೇ ಅಬಲೆ ಎಂಬ ಹಣೆಪಟ್ಟಿ ಪಡೆದು ಬೆಳೆಯುತ್ತಿರುವೆ
ಸಬಲೆಯಾಗಿ ನನ್ನ ನಾನು ಸಿದ್ಧಪಡಿಸಲಾದ ಮೈಮುಚ್ಚುವ ತೊಡುಗೆ ನನ್ನದು
ಮಗಳಾಗಿ ಸತಿಯಾಗಿ ಮಾತೆಯಾಗಿ ಜವಾಬ್ದಾರಿಗಳ ಹೊತ್ತು ನಡೆದಿರುವೆ
ಸಂಸ್ಕೃತಿ ಸಂಸ್ಕಾರಗಳ ಹೊತ್ತೊಯ್ಯುವ ಹೆಗಲ ಮೇಲಿನ ಗಡಿಗೆ ನನ್ನದು
ಕಾಲಡಿಯಲ್ಲಿ ಹೆದರಿಕೆಯ ಹಾವುಗಳ ಹರಿದಾಟ ಮನದ ಕತ್ತಲೆಯಲ್ಲಿ
ಅರಿವಿನ ಬೆಳಕು ಹರಡಿದಂತೆ ದಾರಿತೋರಿ ನಡೆಸುವ ಬಡಿಗೆ ನನ್ನದು
ಜೀವನವಿಡಿ ದುರಳ ದುಶ್ಯಾಸನರ ಎದುರಿಸಬೇಕಿದೆ *ರಾಜಿ*
ತಡವಿದವರನ್ನೆಲ್ಲ ಹಿಡಿದು ಸದೆಬಡೆಯುತ್ತ ನಡೆಯುವ ಗುಂಡಿಗೆ ನನ್ನದು
–ರಾಜನಂದಾ ಘಾರ್ಗಿ